ಭಾನುವಾರ, ಜನವರಿ 26, 2020
22 °C
ಬ್ಯಾಂಕಿನಲ್ಲಿ ಸಾಲ ಸೌಲಭ್ಯ ವಿಳಂಬ ಆರೋಪ

ಅಧಿಕಾರಿಗಳಿಗೆ ದಿಗ್ಬಂಧನ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಸಾಲ ಸೌಲಭ್ಯ ನೀಡುವ ಸಂದರ್ಭದಲ್ಲಿ ಅನಗತ್ಯವಾದ  ಸಬೂಬುಗಳನ್ನು ಹೇಳುತ್ತಾ, ರೈತರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ರೈತಸಂಘದ ಮುಖಂಡರು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಪಟ್ಟಣದ ಶಾಖೆಯಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.ರೈತರಿಗಾಗಿ ಸರ್ಕಾರಗಳು ರೂಪಿಸಿರುವ ವಿವಿಧ ಯೋಜನೆಗಳ ಮೂಲಕ ಬ್ಯಾಂಕ್‌ ಸಾಲ ನೀಡಬಹುದಾಗಿದ್ದು, ತಾಲ್ಲೂಕಿನ ಯಾವುದೇ ಗ್ರಾಮದ ರೈತರಿಗೆ ಸಾಲ ನೀಡಲು ಬ್ಯಾಂಕುಗಳಲ್ಲಿ ಅವಕಾಶವಿದೆ. ಆದರೆ, ಪಟ್ಟಣದ ಎಸ್‌ಬಿಎಂ ಅಧಿಕಾರಿಗಳು ಮೊದಲಿಗೆ ಮುಂದಿನ ವಾರ ಬನ್ನಿ, ಮುಂದಿನ ತಿಂಗಳು ಬನ್ನಿ ಎಂಬ ಸಬೂಬುಗಳನ್ನು ಹೇಳುತ್ತಾ ಬಂದರು.ನಂತರ ಇಲ್ಲದ ನಿಯಮಗಳನ್ನು ಹೇಳುತ್ತಾ, ಸಾಲ ಕೇಳಿಬಂದ ರೈತರನ್ನು ನಿಮ್ಮ ಗ್ರಾಮ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬೇರೆ ಶಾಖೆಗಳಲ್ಲಿ ವಿಚಾರಿಸಿ ಎಂದು ಹೇಳುತ್ತಿದ್ದಾರೆ. ಈ ಮೂಲಕವಾಗಿ ಸಾಲ ಪಡೆಯುವ ಎಲ್ಲ ಅರ್ಹತೆಗಳೂ ಇದ್ದರೂ ರೈತರನ್ನು ನಯವಾಗಿ ವಂಚಿಸುತ್ತಾ, ಅವರ ಸಾಲ ಪಡೆಯುವ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.  ರೈತ ಮುಖಂಡ ಎಲ್‌.ಬಿ. ಜಗದೀಶ್‌ ಮಾತನಾಡಿ, ನ್ಯಾಯಯುತವಾಗಿ ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯಗಳಿಗೆ ಸ್ವಾಭಿಮಾನ ಮರೆತು ಅಧಿಕಾರಿಗಳ ಮುಂದೆ ಅಂಗಲಾಚಬೇಕಾಗಿದೆ. ಬ್ಯಾಂಕಿನ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬರಬೇಕು. ಸಾಲ ನೀಡಿಕೆಗೆ ಸಂಬಂಧಿಸಿದಂತೆ ಇರುವ ನಿಯಮಾವಳಿಗಳನ್ನು ತಿಳಿಸಬೇಕು. ಅಲ್ಲಿಯವರೆಗೆ ದಿಗ್ಬಂಧನ ತೆರವುಗೊಳಿಸುವುದಿಲ್ಲ ಎಂದು ತಿಳಿಸಿದರು.ಪಟ್ಟಣ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್ ಅವರ ಮಧ್ಯಸ್ಥಿಕೆಯ ಫಲವಾಗಿ, ಸಾಲಕ್ಕೆ ಅರ್ಜಿಗಳನ್ನು ಸಲ್ಲಿಸಿರುವ ರೈತರಿಗೆ ಸೋಮವಾರ ಸಾಲ ನೀಡುವ ಭರವಸೆಯನ್ನು ಶಾಖಾ ವ್ಯವಸ್ಥಾಪಕ ಮಂಜುನಾಥ್ ನೀಡಿದ ನಂತರ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮರುವನಹಳ್ಳಿ ಶಂಕರ್‌, ಮುದ್ದುಕುಮಾರ್‌, ಹಕ್ಕಿಮಂಚನಹಳ್ಳಿ ಹೊನ್ನೇಗೌಡ, ಮಡುವಿನಕೋಡಿ ಪ್ರಕಾಶ್‌, ಗಂಗಾಧರ್‌, ಅಪ್ಪಾಜಿ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)