ಮಂಗಳವಾರ, ಮೇ 17, 2022
27 °C

ಅಧಿಕಾರಿಗಳ ದಲಿತ ವಿರೋಧಿ ನೀತಿಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ತಾಲ್ಲೂಕು ಸಮಾಜ ಕಲ್ಯಾಣ ಇಲಾಖಾ ವತಿಯಿಂದ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಸಲಾಗುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣೆ ಮತ್ತು ಕುಂದುಕೊರತೆ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಅನುಸರಿಸುತ್ತಿರುವ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪುತ್ತೂರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ  ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಹಿಂದಿನ ಹಿತರಕ್ಷಣಾ ಸಭೆಯಲ್ಲಿ ನಡೆದ ನಿರ್ಣಯಗಳ ವರದಿಯ ಪ್ರತಿಯನ್ನು ಹರಿದು ಹಾಕಿ ಪ್ರತಿಭಟನಾಕಾರರು ಆಕ್ರೋಶ  ವ್ಯಕ್ತಪಡಿಸಿದರು.  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಆರ್ ಅಂಬೇಡ್ಕರ್ ವಾದ) ಮತ್ತು ಮೊಗೇರ ಸಂಘದ ಪುತ್ತೂರು ಶಾಖೆಗಳ ನೇತೃತ್ವದಲ್ಲಿ ಪ್ರತಿಭಟನಾ ನಡೆಯಿತು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಕೂಸಪ್ಪ ಈ ಸಂದರ್ಭದಲ್ಲಿ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ನಿರ್ಣಯಿಸಲಾಗಿರುವ ಯಾವುದೇ ನಿರ್ಣಯಗಳು ಅನುಷ್ಠಾನವಾಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ಪುತ್ತೂರು ಬಂಟರ ಸಂಘದ ವತಿಯಿಂದ ಪ್ರಕಟಿಸಲಾದ ‘ಮಂಟಮೆ’ ಪುಸ್ತಕದಲ್ಲಿ ದಲಿತ ಸಮುದಾಯವನ್ನು ಅವಮಾನಿಸುವ ಲೇಖನ ಪ್ರಕಟಗೊಂಡಿದ್ದು, ತಪ್ಪಿತಸ್ಥ ಲೇಖಕರ ವಿರುದ್ದ ಪರಿಶಿಷ್ಟರ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿದರೂ ನ್ಯಾಯ ದೊರಕಿಲ್ಲ. ಈ ವಿಚಾರದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆ ಬೆಂಬಲದಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ’ ಎಂದು ಆರೋಪಿಸಿದರು.ತಾಲ್ಲೂಕಿನಲ್ಲಿ ಡಿ.ಸಿ. ಮನ್ನಾ ಭೂಮಿ ಎಷ್ಟಿದೆ ಹಾಗೂ ಅರಣ್ಯ ಇಲಾಖೆ ಮತ್ತು ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಸ್ವಾಧೀನ ಭೂಮಿ ಎಷ್ಟು ಎಕರೆ ಇದೆ ಎನ್ನುವ ಬಗ್ಗೆ ತಹಸೀಲ್ದಾರ್ ಅವರಿಗೆ ಮಾಹಿತಿಯಿಲ್ಲ ಎಂದು ದೂರಿದರು. ಕುದ್ಮಾರು ಗ್ರಾಮದ 3.96 ಎಕರೆ ಡಿ.ಸಿ. ಮನ್ನಾ ಜಾಗದಲ್ಲಿ ವಾಸ್ತವ್ಯವಿದ್ದ ನಾಲ್ಕು ದಲಿತ ಕುಟುಂಬವನ್ನು ಗೇರು ಅಭಿವೃದ್ದಿ  ನಿಗಮದವರು ಬೀದಿಪಾಲು ಮಾಡಿದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಣಿಯೂರು ಗ್ರಾಮ ಪಂಚಾಯಿತಿಯಲ್ಲಿ  2005-06ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ದಿ ನಿಧಿ ಶೇ.25ರ ಹಣ ದುರುಪಯೋಗ ಮಾಡಲಾಗಿದೆ. ಈ ಬಗ್ಗೆ ಹಿತರಕ್ಷಣಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದರೂ ಈತನಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಕುರಿತು ದೂರು ನೀಡಲಾಗಿದ್ದರೂ ಈ ಬಗ್ಗೆ ತನಿಖೆ ನಡೆಸದೆ ತಹಸೀಲ್ದಾರ್,  ದಲಿತರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಆರೋಪಿಸಿದರು.ಬಸ್ ನಿಲ್ದಾಣದ ಬಳಿಯಿರುವ ಅರಣ್ಯ ಇಲಾಖೆ ಕಚೇರಿ ಬಳಿ ಅಂಬೇಡ್ಕರ್ ಭವನ ಮತ್ತು ಪ್ರತಿಮೆ ನಿರ್ಮಾಣ ಹಾಗೂ ಸವಣೂರಿನಲ್ಲಿ ಅಂಬೇಡ್ಕರ್ ಭವನವನ್ನು ಪಂಚಾಯಿತಿ ಸ್ವಾಧೀನಕ್ಕೆ ನೀಡಬೇಕು. ಕೆಯ್ಯೂರಿನಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನಕ್ಕೆ ಮಂಜೂರಾದ ಅನುದಾನ ಶೀಘ್ರ ಬಿಡುಗಡೆ ಸೇರಿದಂತೆ ಸಭೆಯಲ್ಲಿ ಆಗ್ರಹಿಸಿದ ದಲಿತರ ಹಲವು ಪ್ರಮುಖ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಯನ್ನು ಒತ್ತಾಯಿಸಿದರು.ಇದೇ ವೇಳೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳ ವರದಿಯನ್ನು ಕೂಸಪ್ಪ ಅವರು ಹರಿದು ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯನ್ನು ಮುಂದಿನ ದಿನಗಳಲ್ಲಿ   ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು.ದಲಿತ ಮುಖಂಡರಾದ ಎಂ. ಶಿವಪ್ಪ ಅಟ್ಟೊಳೆ, ಮುಕೇಶ್ ಕೆ., ಸಂಕಪ್ಪ, ಎನ್.ಪೊಡಿಯ, ಸೇಸಪ್ಪ ನೆಕ್ಕಿಲು, ಗುರುವಪ್ಪ ಕಲ್ಲುಗುಡ್ಡೆ, ಎನ್.ಪೊಡಿಯ, ಕೃಷ್ಣಪ್ಪ ಸುಣ್ಣಾಜೆ ಮತ್ತಿತರರು ಉಪಸ್ಥಿತರಿದ್ದರು.ಪ್ರತಿಭಟನಾಕಾರರು ಸಭೆಯ ಬಳಿಕ ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.