ಶನಿವಾರ, ಏಪ್ರಿಲ್ 10, 2021
32 °C

ಅಧಿಕಾರ ತ್ಯಾಗಕ್ಕೆ ಸಜ್ಜಾಗಿರುವ ಡಿವಿಎಸ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿಯಾಗಿ 11 ತಿಂಗಳು ಪೂರೈಸಿರುವ ಡಿ.ವಿ.ಸದಾನಂದ ಗೌಡ ಅವರು ಅಧಿಕಾರ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಸ್ಥಾನ ತ್ಯಜಿಸುವುದು ಬೇಡ ಎಂದು ಬೆಂಬಲಿಗ ಸಚಿವರು ಮತ್ತು ಶಾಸಕರು ಹೇರಿದ ಒತ್ತಡಕ್ಕೆ ಮಣಿಯದೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳಲು ನಿರ್ಧರಿಸಿದ್ದಾರೆ.ನಾಯಕತ್ವ ಬದಲಾವಣೆ ಕುರಿತು ಪಕ್ಷದ ವರಿಷ್ಠರು ಇದುವರೆಗೂ ಅಧಿಕೃತವಾಗಿ ಮುಖ್ಯಮಂತ್ರಿ ಜತೆ ಮಾತನಾಡಿಲ್ಲ. ಆದರೂ ವರಿಷ್ಠರ ಒಲವು-ನಿಲುವುಗಳ ಸುಳಿವು ಅರಿತು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ಅವರು ಸಜ್ಜಾಗತೊಡಗಿದ್ದಾರೆ ಎಂದು ಗೌಡರ ಆಪ್ತ ಮೂಲಗಳು ತಿಳಿಸಿವೆ.ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯನ್ನೇ ತಮ್ಮ ಅಧ್ಯಕ್ಷತೆಯ ಕೊನೆಯ ಸಭೆ ಎಂದು ಅವರು ಭಾವಿಸಿದಂತಿದೆ. ಸಭೆ ನಂತರ ಗೃಹ ಕಚೇರಿ `ಕೃಷ್ಣಾ~ದಲ್ಲಿ ತಮ್ಮ ಬಣದ 11 ಸಚಿವರು ಸೇರಿದಂತೆ ಹಲವು ಶಾಸಕರ ಜತೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. `ಗೌಡರ ಮಾತಿನ ಧಾಟಿ ನೋಡಿದರೆ ಕುರ್ಚಿ ಬಿಟ್ಟುಕೊಡಲು ಅಣಿಯಾಗುತ್ತಿರುವಂತೆ ಭಾಸವಾಯಿತು~ ಎಂದು ಸಚಿವರೊಬ್ಬರು ಹೇಳಿದರು. `ಪಕ್ಷ ನನ್ನ ನಾಯಕತ್ವ ಬದಲಿಸುವ ತೀರ್ಮಾನ ತೆಗೆದುಕೊಂಡರೆ ಅದನ್ನು ಪಾಲಿಸುತ್ತೇನೆ. ಬೇರೆಯವರ ಹಾಗೆ ನಾನು ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುವುದಿಲ್ಲ~ ಎಂದು ಆಪ್ತರ ಜತೆ ಹೇಳಿಕೊಂಡಿದ್ದಾರೆ.ಕೆಲವರು, `ಅಧಿಕಾರ ತ್ಯಜಿಸುವುದು ಬೇಡ. ಶಕ್ತಿ ಪ್ರದರ್ಶನಕ್ಕೆ ಸಜ್ಜಾಗೋಣ~ ಎಂದು ಹೇಳಿದ್ದಾರೆ. ಅದಕ್ಕೆ ಅವರು ಒಪ್ಪಿಲ್ಲ. ಬದಲಾವಣೆ ಅನಿವಾರ್ಯ ಎಂದಾದರೆ `ನಮ್ಮ ಬಣಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು.ಸಂಪುಟದಲ್ಲಿ ಅರ್ಧದಷ್ಟು ಸ್ಥಾನಗಳನ್ನು ನಮ್ಮ ಕಡೆಯವರಿಗೆ ನೀಡಬೇಕು. ಯಡಿಯೂರಪ್ಪ ಬಣಕ್ಕೆ ಸೇರಿದ ಸಚಿವರ ಕೈಯಲ್ಲಿ ಪ್ರಮುಖ ಖಾತೆಗಳಿವೆ. ಅವುಗಳನ್ನು ಉಭಯ ಬಣಗಳಿಗೂ ಸಮಾನವಾಗಿ ಹಂಚಬೇಕು~ ಎಂದು ಕೆಲವು ಸಚಿವರು ಬೇಡಿಕೆ ರೂಪದಲ್ಲಿ ಸಲಹೆ ಮಾಡಿದ್ದಾರೆ.ಆಪ್ತರ ಅನಿಸಿಕೆಗಳನ್ನು ಸಮಾಧಾನದಿಂದ ಕೇಳಿಸಿಕೊಂಡ ಮುಖ್ಯಮಂತ್ರಿಯವರು, `ಪಕ್ಷದ ಸೂಚನೆಯಂತೆ ನಡೆದುಕೊಳ್ಳೋಣ. ಒತ್ತಡ ತಂತ್ರ, ಜಾತಿ ರಾಜಕಾರಣ ಮಾಡುವುದು ಬೇಡ~ ಎಂದು ಕಿವಿಮಾತು ಹೇಳಿದರು  ಎನ್ನಲಾಗಿದೆ.ಹಿತ ಕಾಯುವೆ: `ನನ್ನ ಬೆಂಬಲಕ್ಕೆ ನಿಂತ ಸಚಿವರು ಮತ್ತು ಶಾಸಕರ ಹಿತ ಕಾಯುತ್ತೇನೆ. ಈ ವಿಷಯದಲ್ಲಿ ಅನುಮಾನ ಬೇಡ. ಎಂದು ಹೇಳಿದ್ದಾರೆ. ಗೌಡರ ಅಭಿಪ್ರಾಯ ಹೊರಬಿದ್ದ ಬಳಿಕ, ಆಪ್ತ ಸಚಿವರು ಮತ್ತು ಶಾಸಕರು  ಬಂಡಾಯದ ಯೋಚನೆ ಕೈಬಿಟ್ಟಿದ್ದಾರೆ. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರೂ `ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ~ ಎಂದು ರಾಗ ಬದಲಿಸಿದ್ದಾರೆ.ಡಿಸಿಎಂ ಸುಳಿವು:
ಗೃಹ ಸಚಿವ ಆರ್.ಅಶೋಕ ಯಲಹಂಕದಲ್ಲಿ ಸುದ್ದಿಗಾರರ ಜತೆ ಮಾತನಾಡಿ, `ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸುಳಿವು ದೊರೆತಿದೆ. ಆದರೆ ಯಾರನ್ನು ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆ. ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸಲು ನಾನು ಸಿದ್ಧ~ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.