ಬೆಂಗಳೂರು: ಬಿ–ರಿಜಿಸ್ಟರ್ನಲ್ಲಿ ಸೇರ್ಪಡೆಯಾಗಿ ತೆರಿಗೆ ಪಾವತಿಸುತ್ತಿರುವ ಸ್ಥಿರಾಸ್ತಿಗಳ ನೋಂದಣಿಗೆ ರಾಜ್ಯ ಸರ್ಕಾರ ಅನುಮತಿ ನೀಡಲು ನಿರ್ಧರಿಸಿದ್ದರಿಂದ, ತಮ್ಮ ಆಸ್ತಿಗೆ ‘ಅಧಿಕೃತ ಖಾತಾ’ ದಾಖಲೆ ಪಡೆಯುವ ಆತುರದಲ್ಲಿರುವ ನಗರದ ಲಕ್ಷಾಂತರ ಜನರಲ್ಲಿ ಈಗ ಉತ್ಸಾಹದ ಅಲೆ ಎದ್ದಿದೆ.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಾಗಲೇ 2.5 ಲಕ್ಷ ಆಸ್ತಿಗಳು ಬಿ–ರಿಜಿಸ್ಟರ್ನಲ್ಲಿ ನೋಂದಣಿಯಾಗಿದ್ದು, ಅಂತಹ 1.5 ಲಕ್ಷ ಆಸ್ತಿಗಳು ಇನ್ನೂ ನೋಂದಣಿ ಆಗುವ ಅಂದಾಜಿದೆ. ವಿವಿಧ ವಲಯಗಳಲ್ಲಿ ನೋಂದಣಿ ಕಾರ್ಯ ನಡೆದಿದೆ’ ಎಂದು ಹೇಳುತ್ತಾರೆ ಬಿಬಿಎಂಪಿ ಉಪ ಆಯುಕ್ತ (ಕಂದಾಯ) ಐ.ರಮಾಕಾಂತ್.

ಬೊಮ್ಮನಹಳ್ಳಿ, ದಾಸರಹಳ್ಳಿ, ಕೃಷ್ಣರಾಜಪುರ, ರಾಜರಾಜೇಶ್ವರಿ ನಗರ, ಮಹದೇವಪುರ, ಬ್ಯಾಟರಾಯನಪುರ ಮತ್ತು ಯಲಹಂಕ ನಗರಸಭೆ ಮತ್ತು ಕೆಂಗೇರಿ ಪುರಸಭೆಗಳಲ್ಲದೆ 110 ಹಳ್ಳಿಗಳು ಬೆಂಗ ಳೂರಿನಲ್ಲಿ ಒಂದಾಗಿ 2007ರಲ್ಲಿ ಬಿಬಿಎಂಪಿ ಉದಯವಾಯಿತು.
ಈ ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಸೂಕ್ತ ದಾಖಲೆಗಳಿಲ್ಲದ ಆಸ್ತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸಹ ತನ್ನ ರಿಜಿಸ್ಟರ್ನಲ್ಲಿ ಖಾತೆ ತೆರೆಯಲು ಸಿದ್ಧವಿರಲಿಲ್ಲ.

ಭೂ ಅಭಿವೃದ್ಧಿ ಪ್ರಾಧಿಕಾರಗಳ ಅನುಮತಿ ಇಲ್ಲದೆ ನಿರ್ಮಾಣವಾದ ಬಡಾವಣೆಗಳು, ಕಂದಾಯ ಭೂಮಿ ಹಾಗೂ ಭೂಪರಿವರ್ತನೆಯಾಗದ ಪ್ರದೇಶದಲ್ಲಿ ನಿರ್ಮಿಸಿದ ಕಟ್ಟಡಗಳ ಮಾಹಿತಿಯನ್ನು ಬಿ–ರಿಜಿಸ್ಟರ್ ತೆರೆದು, ಅದರಲ್ಲಿ ದಾಖಲಿಸಲು 2009ರಲ್ಲಿ ನಿರ್ಧರಿಸಲಾಯಿತು. ತೆರಿಗೆ ಸಂಗ್ರಹದ ಉದ್ದೇಶದಿಂದಷ್ಟೇ ಈ ವ್ಯವಸ್ಥೆಯನ್ನು ಮಾಡಲಾಯಿತು.

ಬಿಬಿಎಂಪಿಗೆ ಸೇರ್ಪಡೆಯಾಗುವ ಮುನ್ನ ನಗರಸಭೆಗಳಲ್ಲಿ ಬಂಡವಾಳ ಮೌಲ್ಯದ (ಕ್ಯಾಪಿಟಲ್ ವ್ಯಾಲ್ಯೂ) ಆಧಾರದ ಮೇಲೆ ಮತ್ತು ಹಳ್ಳಿಗಳಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾನೂನಿನ ಅಡಿಯಲ್ಲಿ ತೆರಿಗೆ ಸಂಗ್ರಹ ಮಾಡಲಾಗುತ್ತಿತ್ತು. ಆಗಿನ ಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಬಾಡಿಗೆ ಮೌಲ್ಯಕ್ಕೆ (ರೆಂಟ್ ವ್ಯಾಲ್ಯೂ) ಅನುಗುಣವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡುತ್ತಿತ್ತು.

ಬಿಬಿಎಂಪಿಗೆ ಸೇರಿದ ಎಲ್ಲ ಪ್ರದೇಶದಲ್ಲಿ ಆಸ್ತಿ ತೆರಿಗೆಯನ್ನು ಒಂದೇ ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ ಕರ್ನಾಟಕ ಮುನ್ಸಿಪಲ್ ಕಾನೂನಿಗೆ ‘108 ಸಿ’ ನಿಯಮವನ್ನು ಹೊಸದಾಗಿ ಸೇರ್ಪಡೆ ಮಾಡಲಾಯಿತು.

‘ಲಕ್ಷಾಂತರ ಅನಧಿಕೃತ ಕಟ್ಟಡಗಳ ಮಾಲೀಕರು ಬಿಬಿಎಂಪಿಯಿಂದ ಎಲ್ಲ ಸೌಲಭ್ಯಗಳನ್ನು ಪಡೆದರೂ ಯಾವುದೇ ರೀತಿಯಲ್ಲಿ ತೆರಿಗೆ ತುಂಬುತ್ತಿರಲಿಲ್ಲ. ಅವರನ್ನು ತೆರಿಗೆ ವ್ಯಾಪ್ತಿಗೆ ತರುವ ಏಕೈಕ ಉದ್ದೇಶದಿಂದ ಬಿ–ರಿಜಿಸ್ಟರ್ ಆರಂಭಿಸಲಾಯಿತು. ಬಿ–ರಿಜಿಸ್ಟರ್ನ ಆಸ್ತಿಗಳಿಂದ ತೆರಿಗೆ ಪಡೆದ ಮಾತ್ರಕ್ಕೆ ಆ ಆಸ್ತಿಗಳ ಮಾಲೀಕತ್ವವನ್ನು ಪುರಸ್ಕರಿಸಿದಂತೆ ಅಲ್ಲ’ ಎಂದು ರಮಾಕಾಂತ್ ವಿವರಿಸುತ್ತಾರೆ.

ಯಾರಿಗೆ ಪ್ರಯೋಜನ?: ಕಂದಾಯ ಭೂಮಿಯಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಲು ಕಾದಿರುವ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದ ಈ ನಿರ್ಧಾರದಿಂದ ಸಂತಸವಾಗಿದೆ. ತಮ್ಮ ಆಸ್ತಿಗೆ ‘ಅಧಿಕೃತ’ ಸ್ಥಾನಮಾನ ಸಿಗುವ ಜತೆಗೆ ಖಾತಾ ದೊರೆಯಲಿದೆ. ಮನೆ ಕಟ್ಟಲು ಬ್ಯಾಂಕ್ನಿಂದ ಸಾಲವೂ ಸಿಗಲಿದೆ ಎಂಬ ಭರವಸೆಯಲ್ಲಿ ಅವರಿದ್ದಾರೆ.

ನಗರದ ಹೊರವಲಯದಲ್ಲಿ ಇರುವ ಬಿಬಿಎಂಪಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆ ಹಾಗೂ ನಿವೇಶನ ಕೊಳ್ಳಲು ಮತ್ತು ಮಾರಲು ಹಾತೊರೆಯುತ್ತಿರುವ ಜನರಿಗೆ ವ್ಯವಹಾರ ಕುದುರಿಸಲು ಈ ನೋಂದಣಿ ಪ್ರಕ್ರಿಯೆಯಿಂದ ದಾರಿ ಸುಗಮವಾಗಿದೆ. ರಿಯಲ್ ಎಸ್ಟೇಟ್ನಲ್ಲಿ ತೊಡಗಿರುವ ಉದ್ಯಮಿಗಳು ಈ ಹಿಂದೆ ಕಡಿಮೆ ದರದಲ್ಲಿ ಖರೀದಿಸಿದ್ದ ಭೂಮಿ ನೋಂದಣಿಯಾಗುವುದು ಖಾತರಿ ಆಗಿದ್ದರಿಂದ ನಿವೇಶನ ಮತ್ತು ಫ್ಲ್ಯಾಟ್ಗಳ ಬೆಲೆಯನ್ನು ಹೆಚ್ಚಿಸಲು ತವಕಿಸುತ್ತಿದ್ದಾರೆ.

ರಾಜ್ಯ ಸರ್ಕಾರಕ್ಕೆ ಈ ಆಸ್ತಿಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ದೊಡ್ಡ ಪ್ರಮಾಣದ ತೆರಿಗೆ ಹಣ ಹರಿದು ಬರಲಿದೆ. ಹಾಗೆ ನೋಡಿದರೆ, ಸರ್ಕಾರದ ಈ ನಿರ್ಧಾರದಲ್ಲಿ ಮುದ್ರಾಂಕ ಇಲಾಖೆಯ ಪಾತ್ರವೂ ಗಣನೀಯವಾಗಿದೆ. ವರಮಾನದಲ್ಲಿ ಇಳಿಕೆಯಾಗಿದ್ದು, ‘ಬಿ–ರಿಜಿಸ್ಟರ್’ ಕುರಿತ ಗೊಂದಲವನ್ನು ಬಗೆಹರಿಸಬೇಕು ಎಂಬ ಕೋರಿಕೆಯನ್ನು ಸಲ್ಲಿಸಿತ್ತು. ಸಂಪುಟ ಸಭೆ ಅದರ ಬೇಡಿಕೆಯನ್ನು ಮಾನ್ಯಮಾಡಿದೆ.

ಲಕ್ಷಾಂತರ ಆಸ್ತಿಗಳನ್ನು ‘ಅಧಿಕೃತ’ಗೊಳಿಸುವ ಈ ಪ್ರಕ್ರಿಯೆಯಲ್ಲಿ ಬಿಬಿಎಂಪಿಗೆ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಶುಲ್ಕ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ಚದರ ಅಡಿಗೆ ₨ 250ರಿಂದ ₨ 300ರಷ್ಟು ಶುಲ್ಕ ಸಂಗ್ರಹ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಿ–ರಿಜಿಸ್ಟರ್ನಲ್ಲಿದ್ದ ಸಾವಿರಾರು ಆಸ್ತಿಗಳನ್ನು ಕಂದಾಯ ಅಧಿಕಾರಿಗಳು ಈಗಾಗಲೇ ಖಾತಾ ನೋಂದಣಿ ಮಾಡಿಕೊಟ್ಟಿದ್ದು, ಬಿಬಿಎಂಪಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಮಾಜಿ ಮೇಯರ್ ಎಸ್.ಕೆ. ನಟರಾಜ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಬಿ.ಎನ್.ಮಂಜುನಾಥ್ ರೆಡ್ಡಿ, ಸದಸ್ಯರಾದ ಬಿ.ವಿ. ಗಣೇಶ್, ಬಿ.ಆರ್. ನಂಜುಂಡಪ್ಪ ಮತ್ತಿತರರು ಆಕ್ರೋಶ ವ್ಯಕ್ತಪಡಿಸುತ್ತಾರೆ.‘ಹೊಸ ವಲಯಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸಬೇಕು’ ಎಂದೂ ಅವರು ಆಗ್ರಹಿಸುತ್ತಾರೆ.

ಏನಿದು ಖಾತಾ?
‘ಖಾತಾ’ ಎಂದರೆ ಶಬ್ದಶಃ ಅರ್ಥ ಖಾತೆಯೇ. ಅದೊಂದು ಕಾನೂನು ಬದ್ಧವಾದ ದಾಖಲೆ. ಆಸ್ತಿಯ ಮಾಲೀಕರು, ಅದರ ವಿಸ್ತೀರ್ಣ, ಸ್ಥಳ, ಆಸ್ತಿ ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ಅದು ಒಳಗೊಂಡಿರುತ್ತದೆ. ಬ್ಯಾಂಕ್ನಿಂದ ಸಾಲ ಪಡೆಯಲು, ಲೈಸನ್ಸ್ಗೆ ಅರ್ಜಿ ಹಾಕಲು, ವಿದ್ಯುತ್, ನೀರಿನ ಸಂಪರ್ಕ ಪಡೆಯಲು, ಆಸ್ತಿಯನ್ನು ಮಾರಾಟ ಮಾಡಲು... ಹೀಗೆ ವಿವಿಧ ಉದ್ದೇಶಗಳಿಗೆ ‘ಖಾತಾ’ ತುಂಬಾ ಅಗತ್ಯವಾದ ದಾಖಲೆಯಾಗಿದೆ.

ಆಸ್ತಿಯ ಮಾಲೀಕರ ವಿವರವೂ ‘ಖಾತಾ’ದಲ್ಲಿ ಇರುತ್ತದೆ. ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಬಿಬಿಎಂಪಿಯೇ ನೋಂದಾಯಿಸಿಕೊಂಡು ‘ಖಾತಾ’ ದಾಖಲೆಯನ್ನು ನೀಡುತ್ತದೆ. ತೆರಿಗೆ ತುಂಬಲೂ ಈ ದಾಖಲೆ ಅಗತ್ಯವಾಗಿ ಬೇಕಾಗುತ್ತದೆ.

ಬಿ–ಖಾತಾ
ಭೂಮಿಯ ಉಪಯೋಗ ಬದಲಾಗದ ಇಲ್ಲವೆ ಕಂದಾಯ ಭೂಮಿಯಲ್ಲಿ ಕಟ್ಟಡ ನಿರ್ಮಿಸಿದವರ ಆಸ್ತಿಗಳನ್ನು ಬಿಬಿಎಂಪಿ ಖಾತೆಯಲ್ಲಿ ನೋಂದಣಿ ಮಾಡಿಕೊಳ್ಳುವುದಿಲ್ಲ. ಆದರೆ, ತೆರಿಗೆ ವಸೂಲಿ ಮಾಡುವ ಸಲುವಾಗಿ ಬಿ–ರಿಜಿಸ್ಟರ್ನಲ್ಲಿ ಆಸ್ತಿಗಳ ವಿವರ ದಾಖಲಿಸಲಾಗುತ್ತದೆ. ಸಾರ್ವಜನಿಕರು ಇದನ್ನು ಬಿ–ಖಾತಾ ಎಂದೇ ಕರೆಯುತ್ತಾರೆ. ತೆರಿಗೆ ಸಂಗ್ರಹ ಉದ್ದೇಶಕ್ಕಾಗಿ ಮಾಡಿಕೊಂಡ ವ್ಯವಸ್ಥೆ ಇದಾಗಿದ್ದು, ಬಿ–ರಿಜಿಸ್ಟರ್ನಲ್ಲಿ ಇರುವ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಕಟ್ಟಡದ ಯೋಜನೆಗೂ ಮಂಜೂರಾತಿ ಸಿಗುವುದಿಲ್ಲ. ಬ್ಯಾಂಕ್ನಿಂದ ಸಾಲ ದೊರೆಯುವುದಿಲ್ಲ.ಬಿ–ರಿಜಿಸ್ಟರ್ನಲ್ಲಿ ನೋಂದಣಿಯಾದ ಆಸ್ತಿಗಳನ್ನು ಖಾತಾದಲ್ಲಿ ನಮೂದಿಸಲು ಸರ್ಕಾರದ ಅಧಿಕೃತ ಮಾರ್ಗಸೂಚಿಗಾಗಿ ಕಾಯಲಾಗುತ್ತಿದೆ.

ಕ್ರಯ ಒಪ್ಪಂದ
ಬಿಬಿಎಂಪಿ ‘ಖಾತಾ’ ನೋಂದಣಿಗೂ ಕ್ರಯ ಒಪ್ಪಂದ ಪತ್ರಕ್ಕೂ ವ್ಯತ್ಯಾಸವಿದೆ. ಆಸ್ತಿಯನ್ನು ಕೊಳ್ಳುವವರು ಮತ್ತು ಮಾರುವವರ ಮಧ್ಯೆ ಕ್ರಯ ಒಪ್ಪಂದ ಏರ್ಪಟ್ಟಿರುತ್ತದೆ. ಮಾಲೀಕತ್ವವನ್ನು ಸಾಬೀತು ಮಾಡಲು ಆ ದಾಖಲೆಯೇ ಮುಖ್ಯ. ‘ಖಾತಾ’ ನೋಂದಣಿಯು ತೆರಿಗೆ ಸಂಗ್ರಹಕ್ಕೆ ಮಾಡಲಾದ ವ್ಯವಸ್ಥೆಯಷ್ಟೇ. ಆದರೆ, ಆಸ್ತಿಗೆ ಸಂಬಂಧಿಸಿದ ಪ್ರತಿ ವ್ಯವಹಾರಕ್ಕೂ ಅದು ಬೇಕೇಬೇಕು.

ಎ–ಖಾತಾ
ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಕಾನೂನು ಬದ್ಧವಾಗಿದ್ದರೆ ಬಿಬಿಎಂಪಿ ‘ಖಾತಾ’ ದಾಖಲೆಯಲ್ಲಿ ಅದನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ಎ–ಖಾತಾ ಇದ್ದರೆ ಆ ಆಸ್ತಿಯಿಂದ ಎಲ್ಲ ಕಾನೂನುಬದ್ಧ ಸೌಲಭ್ಯಗಳನ್ನು ಪಡೆಯಲು ಅದರ ಮಾಲೀಕರು ಅರ್ಹರಿರುತ್ತಾರೆ.

ಬಿಡಿಎ ಇಲ್ಲವೆ ಕರ್ನಾಟಕ ಗೃಹ ಮಂಡಳಿಯಿಂದ ಹಂಚಿಕೆಯಾದ ಆಸ್ತಿಯಾಗಿದ್ದರೆ ಕ್ರಯ ಒಪ್ಪಂದದ ಪ್ರತಿ, ತೆರಿಗೆ ಪಾವತಿ ದಾಖಲೆ, ಸ್ವಾಧೀನ ಪಡೆದ ಪ್ರಮಾಣ ಪತ್ರ, ಆಸ್ತಿ ಮಾಹಿತಿಯನ್ನು ಒಳಗೊಂಡ ನಕ್ಷೆ –ಇಷ್ಟನ್ನು ಒದಗಿಸಿದರೆ ಎ–ಖಾತಾದಲ್ಲಿ ಆಸ್ತಿ ವಿವರ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಕಂದಾಯ ಬಡಾವಣೆ, ಗ್ರಾಮಠಾಣಾ, ಅಪಾರ್ಟ್ಮೆಂಟ್ ಗಳ ಆಸ್ತಿಯಾಗಿದ್ದರೆ ಕ್ರಯ ಒಪ್ಪಂದದ ಪ್ರತಿ, ಹಿಂದಿನ ಕ್ರಯದ ಪೂರ್ಣ ವಿವರ, ತೆರಿಗೆ ಪಾವತಿ ದಾಖಲೆ, ಅಭಿವೃದ್ಧಿ ಶುಲ್ಕ ಪಾವತಿ ವಿವರ, ಖಾತಾ ದಾಖಲೆ, ಆಸ್ತಿ ಮಾಹಿತಿಯನ್ನು ಒಳಗೊಂಡ ನಕ್ಷೆ –ಇಷ್ಟನ್ನು ಒದಗಿಸಿದರೆ ಎ–ಖಾತಾ ದೊರೆಯುತ್ತದೆ.

ಎಲ್ಲರಿಗೂ ಅನುಕೂಲ
ಬೆಂಗಳೂರಿನಲ್ಲಿ ‘ಬಿ–ರಿಜಿಸ್ಟರ್’ ನೋಂದಣಿ ಹೊಂದಿರುವ ಲಕ್ಷಾಂತರ ಆಸ್ತಿಗಳಿವೆ. ಅವುಗಳನ್ನು ನೋಂದಣಿ ಮಾಡಲು ಅವಕಾಶ ನೀಡಿರುವುದರಿಂದ ಹೆಚ್ಚು ಜನರಿಗೆ ಅನುಕೂಲ ಆಗುತ್ತದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ₨ 1,000 ಕೋಟಿಯಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
–ಟಿ.ಬಿ. ಜಯಚಂದ್ರ, ಕಾನೂನು ಸಚಿವ

ದೊಡ್ಡ ವರಮಾನ
ಬಿ–ರಿಜಿಸ್ಟರ್ನಲ್ಲಿರುವ ಸುಮಾರು 4 ಲಕ್ಷ ಆಸ್ತಿಗಳ ನೋಂದಣಿಯಿಂದ ಬಿಬಿಎಂಪಿಗೆ ₨ 300 ಕೋಟಿಗೂ ಅಧಿಕ ಅಭಿವೃದ್ಧಿ ಶುಲ್ಕ ಸಿಗುವ ಅಂದಾಜಿದೆ
–ಐ.ರಮಾಕಾಂತ್, ಬಿಬಿಎಂಪಿ ಉಪ ಆಯುಕ್ತ (ಕಂದಾಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.