ಭಾನುವಾರ, ಮಾರ್ಚ್ 7, 2021
22 °C

ಅನಾವರಣಗೊಂಡ ಜನಸಾಮಾನ್ಯರ ತಂತ್ರಜ್ಞಾನ

ಸಿದ್ದರಾಜು Updated:

ಅಕ್ಷರ ಗಾತ್ರ : | |

ಅನಾವರಣಗೊಂಡ ಜನಸಾಮಾನ್ಯರ ತಂತ್ರಜ್ಞಾನ

ಚನ್ನರಾಯಪಟ್ಟಣ: ಆಧುನಿಕ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ರೈತಾಪಿ ವರ್ಗ, ಜನಸಾಮಾನ್ಯರಿಗೆ ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕ್‌ ವಿಭಾಗದ ವಿದ್ಯಾರ್ಥಿಗಳು ಏರ್ಪಡಿಸಿದ್ದ ‘ಯೋಜನಾ ಕಾರ್ಯ’ ಯಶಸ್ವಿಯಾಯಿತು.ಶೇಂಗಾಬಳ್ಳಿ ಕಟಾವು ಯಂತ್ರ, ಸೋಲಾರ್‌ ಮೂಲಕ ಚಲಿಸುವ ಯಂತ್ರ, ಸೋಲಾರ್‌ ವಾಟರ್‌ ಡಿಸ್ಟಿಲ್‌. ನೆಲ್ಲಿಕಾಯಿ ಪ್ರತ್ಯೇಕಿಸುವ ಯಂತ್ರ, ಚಪಾತಿ ತಯಾರಿಸುವಯಂತ್ರ, ಚಟ್ನಿ ತಯಾರಿಸುವ, ತರಕಾರಿ ತುರಿಯುವಯಂತ್ರ, ಚರಂಡಿ ಸ್ಚಚ್ಛಗೊಳಿಸುವಯಂತ್ರ, ಹತ್ತಿ ಕಟಾವುಯಂತ್ರ, ಭತ್ತ ಪರಿಷ್ಕರಣ ಯಂತ್ರ,  ಮಕ್ಕಳ ಆಟದಿಂದ ಉಂಟಾದ ಚಲನಶಕ್ತಿಯಿಂದ ನೀರೆತ್ತುವ ಸಾಧನ... ಹೀಗೆ ವೈವಿಧ್ಯಮಯ ಸಾಧನಗಳನ್ನು 18 ತಂಡಗಳು 18 ಮಾದರಿಯನ್ನು ತಯಾರಿಸಿದ್ದವು.ಯೋಜನಾ ಕಾರ್ಯದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಗಳ ಉಪಯೋಗವನ್ನು ತಿಳಿಸಿಕೊಟ್ಟರು. ಒಂದು ನಿಮಿಷದಲ್ಲಿ 26 ಚಪಾತಿ ತಯಾರಿಸುವ ಯಂತ್ರ, ಒಂದು ಗಂಟೆಯಲ್ಲಿ 15 ಕೆ.ಜಿ. ಚಟ್ನಿ ಪುಡಿ , ಒಂದುಗಂಟೆಯಲ್ಲಿ 120 ಕೆ.ಜಿ. ತರಕಾರಿ ತುರಿಯುವ ಯಂತ್ರದ ಪ್ರಯೋಜನವನ್ನು ಕಾಲೇಜಿನ ಹಾಸ್ಟೆಲ್‌ನಲ್ಲಿ ಹಾಗೂ ಡಿಸ್ಟಿಲ್‌ ವಾಟರ್‌ ಪ್ರಯೋಜನವನ್ನು ಕಾಲೇಜಿನ ಬ್ಯಾಟರಿಗಳಿಗೆ ಉಪಯೋಗಿಸಿ ಕೊಳ್ಳಲಾಗುವುದು ಎಂಬ ಇಂಗಿತವನ್ನು ಅಧ್ಯಾಪಕ ವರ್ಗ ವ್ಯಕ್ತಪಡಿಸಿತು. ಹೀಗೆ ಪ್ರತಿಯೊಂದು ಮಾದರಿಗಳು ಒಂದಲ್ಲ ಒಂದು ರೀತಿಯಲ್ಲಿ  ವೈಶಿಷ್ಠ್ಯತೆಯನ್ನು ಪಡೆದು, ಜನರಿಗೆ ಉಪಯೋಗವಾಗುವಂತಿದ್ದವು.ವಿದ್ಯಾರ್ಥಿಗಳು ಮಾದರಿಗಳ ಬಗ್ಗೆ ಮತ್ತು ಇದರ ಪ್ರಯೋಜನದ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಇದಕ್ಕೆ ಮಾರ್ಗದರ್ಶಕರಾಗಿದ್ದ ಉಪನ್ಯಾಸಕರು ಸಾಥ್‌ ನೀಡಿದರು. ಕಿರಿಯ ವಿದ್ಯಾರ್ಥಿಗಳು ಪ್ರತಿಯೊಂದು ಮಾದರಿಯನ್ನು ಕುತೂಹಲದಿಂದ ವೀಕ್ಷಿಸಿದರು. ಕೃಷಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ತಯಾರಿಸಿರುವ ಮಾದರಿಗಳನ್ನು ಪ್ರದರ್ಶನಕ್ಕೆ ಮಾತ್ರವಲ್ಲದೇ ಭವಿಷ್ಯದಲ್ಲಿ ಸಹಕಾರಿಯಾಗಿವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.‘ಕಡಿಮೆ ಖರ್ಚನಲ್ಲಿ ಜನೋಪಯೋಗಿ ಯಂತ್ರವನ್ನು ಕಂಡುಹಿಡಿಯುವುದು, ಇಂಧನ ಉಳಿತಾಯ ಮಾಡುವ ವಿಧಾನ ತಿಳಿಸಿಕೊಡುವುದು ಯೋಜನಾ ಕಾರ್ಯದ ಉದ್ದೇಶ. ಯೋಜನಾ ಕಾರ್ಯಗಳು ಪರೀಕ್ಷೆಯ ಒಂದು ಭಾಗ. ಎಂಜಿನಿಯರಿಂಗ್‌ ಪದವಿ ಪಡೆಯಬೇಕಾದರೆ ಯೋಜನಾ ಕಾರ್ಯ ಕಡ್ಡಾಯ. ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುತ್ತದೆ. ತಲಾ ಒಂದು ತಂಡದಲ್ಲಿ ನಾಲ್ವರು ವಿದ್ಯಾರ್ಥಿಗಳು. ಮಾರ್ಗದರ್ಶನ ನೀಡಲು ಒಬ ಉಪನ್ಯಾಸಕರನ್ನು ನೇಮಿಸಲಾಗಿದೆ. ಕಿರಿಯ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ನಲ್ಲಿ ಮಾದರಿ ತಯಾರಿಸಬೇಕಿದೆ. ಹಾಗಾಗಿ, ಅವರಿಗೆ ಇದು ಆದರ್ಶವಾಗಿದೆ. ಕೇವಲ ಮೆಕ್ಯಾನಿಕ್‌ ವಿಭಾಗ ಮಾತ್ರವಲ್ಲದೇ ಎಂಜಿನಿಯರಿಂಗ್‌ ವಿಭಾಗದ ಎಲ್ಲಾ ಕೋರ್ಸ್‌ಗಳಲ್ಲಿ ಯೋಜನಾ ಕಾರ್ಯವಿದೆ’ ಎನ್ನುತ್ತಾರೆ ಕಾಲೇಜಿನ ಡೀನ್‌ ಪ್ರೊ.ಜಿ.ಎಂ. ರಾವನವರ್‌ ಹಾಗೂ ಮೆಕ್ಯಾನಿಕ್‌ ವಿಭಾಗದ ಮುಖ್ಯಸ್ಥ ಗೋವರ್ಧನ್‌ಗೌಡ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.