ಸೋಮವಾರ, ಮೇ 23, 2022
21 °C

ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭವಿಷ್ಯ ಇದೆಯೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಅ ನುದಾನಿತ ಶಿಕ್ಷಣ ಸಂಸ್ಥೆಗಳು ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿವೆ. ಈ ಮಾತು  ಓದಿ ಯಾರಾದರೂ ಗಾಬರಿಯಾಗಬಹುದು. ಅಪಾಯದ ಗಂಟೆ ಬಾರಿಸುವ ಈ ಶೀರ್ಷಿಕೆ ನೀಡಿರುವುದು ಏನೋ ಒಂದು ಉನ್ಮಾದದ ಸ್ಥಿತಿ, ‘ಸೆನ್ಸೇಶನ್’ ನಿರ್ಮಾಣ ಮಾಡಲಿಕ್ಕಲ್ಲ. ಅನುದಾನಿತ ಶಿಕ್ಷಣ ಸಂಸ್ಥೆಗಳ ಆಗುಹೋಗುಗಳನ್ನು ಸನಿಹದಿಂದ ಬಲ್ಲವರಿಗೆ ಇದು ಖಂಡಿತಕ್ಕೂ ಉತ್ಪ್ರೇಕ್ಷೆ ಎಂದನ್ನಿಸದು.ಕೇಂದ್ರ ಸರ್ಕಾರ ಇಂದು ಶಿಕ್ಷಣದಲ್ಲಿ ‘ಸಾರ್ವಜನಿಕ-ಖಾಸಗಿಭಾಗಿತ್ವ’ದ (ಪಬ್ಲಿಕ್-ಪ್ರೈವೇಟ್ ಪಾರ್ಟಿಸಿಪೇಷನ್) ಬಗ್ಗೆ ದೊಡ್ಡ ಗಂಟಲಲ್ಲಿ ಮಾತನಾಡುತ್ತಿದೆ. ಕೆಲವೊಂದು ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ಮುಂದಾಗುತ್ತಿದೆ. ಕೆಲವು ಕ್ಷೇತ್ರಗಳಿಂದ ತಾನು ಹಿಂದಕ್ಕೆ ಸರಿಯುತ್ತಿದೆ. ಅನುದಾನಿತ ವ್ಯವಸ್ಥೆ ಸಾರ್ವಜನಿಕ ಖಾಸಗಿಭಾಗಿತ್ವದ ಅತ್ಯಂತ ಉದಾರವಾದಿ ಮುಖವಾಗಿದ್ದು ಕಳೆದ 100-150 ವರ್ಷಗಳಲ್ಲಿ ತುಂಬ ಚೆನ್ನಾಗಿ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ಎರಡು ಮೂರು ದಶಕಗಳಲ್ಲಿ ಈ ವ್ಯವಸ್ಥೆಯ ಮೇಲೆ ಸರ್ಕಾರ ದೊಡ್ಡ ರೀತಿಯಲ್ಲಿ ಗದಾಪ್ರಹಾರ ಮಾಡುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಅನುದಾನಿತ ಶಿಕ್ಷಣ ಸಂಸ್ಥೆಗಳವರು ತಮ್ಮ ಜಡತ್ವವನ್ನು ಕೊಡವಿಕೊಂಡು ದೊಡ್ಡಮಟ್ಟದಲ್ಲಿ ಹೋರಾಟ ಮಾಡದಿದ್ದರೆ ಪ್ರಾಯಶಃ ಇನ್ನೊಂದು ದಶಕದಲ್ಲಿ ಈ ವ್ಯವಸ್ಥೆ ಖಂಡಿತಕ್ಕೂ ಪಳೆಯುಳಿಕೆಯಾಗಿ ಬಿಡುತ್ತದೆ.ಹಳೆಯ ಮೈಸೂರು ಪ್ರಾಂತ್ಯದಲ್ಲಿ ಹಾಗೂ ಕರ್ನಾಟಕದ ಇನ್ನಿತರ ಭಾಗಗಳಲ್ಲಿ ಸರ್ಕಾರಿ ಸಂಸ್ಥೆಗಳ ಪ್ರಾಬಲ್ಯ ಅಧಿಕ. ಆದರೆ ಕರಾವಳಿ ಕರ್ನಾಟಕದ ಸಾಹಸಿ ಜನತೆ ಸರ್ಕಾರದ ಶೈಕ್ಷಣಿಕ ಪ್ರಯತ್ನಗಳಿಗಾಗಿ ಕಾಯದೆ, ತಂತಮ್ಮ ಊರುಗಳ ಉದ್ಧಾರವನ್ನು ತಾವೇ ಮಾಡಬೇಕೆಂಬ ನೆಲೆಯಲ್ಲಿ ಹಳ್ಳಿಹಳ್ಳಿಗಳಲ್ಲಿ ಖಾಸಗಿಯಾಗಿ ಶಾಲೆಗಳನ್ನು ತೆರೆದು ಸರ್ಕಾರದ ಅನುದಾನ ಪಡೆದುಕೊಂಡು ಬೆಳೆಸಿದರು. ಡಾ.ಮಾಧವ ಪೈ ಅವರು ಈ ವ್ಯವಸ್ಥೆಯ ಲಾಭ ಪಡೆದುಕೊಂಡು ಪ್ರೌಢಶಾಲೆಗಳನ್ನು ಪದವಿ ಕಾಲೇಜುಗಳನ್ನು ಆರಂಭಿಸಿದರು. ಮುಂದೆ ಸರ್ಕಾರಿ ಅನುದಾನಕ್ಕೆ ಕೈಚಾಚದೆ ವಿದ್ಯಾರ್ಥಿಗಳು ನೀಡುವ ‘ದಾನಶುಲ್ಕ’ವನ್ನು ಆಧರಿಸಿ ವೈದ್ಯಕೀಯ, ತಾಂತ್ರಿಕ, ಕಾನೂನು, ಶಿಕ್ಷಣ ಇತ್ಯಾದಿ ವೃತ್ತಿಪರ ವಿದ್ಯಾಲಯಗಳನ್ನು ಕಟ್ಟಿ ಬೆಳೆಸಿದರು. ಇವರಿಂದ ಸ್ಫೂರ್ತಿ ಪಡೆದ ಅನೇಕರು ಕರಾವಳಿ ಜಿಲ್ಲೆಗಳ ಶೈಕ್ಷಣಿಕ ಚಿತ್ರವನ್ನೇ ಬದಲಿಸಿದರು. ಖಾಸಗಿ ಪ್ರಯತ್ನವಿಲ್ಲದಿರುತ್ತಿದ್ದರೆ ಕರಾವಳಿ ಜಿಲ್ಲೆಗಳು ಇಂದಿಗೂ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಾಗಿಯೇ ಇರುತ್ತಿದ್ದವು ಎಂಬುದು ಐತಿಹಾಸಿಕ ಸತ್ಯ.ಸರ್ಕಾರದಿಂದ ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳು ವಿಪರೀತ ಬಂಡವಾಳ ಹೂಡುವ ಪ್ರಮೇಯ ಒದಗದೆ, ಗುಣಮಟ್ಟದ ಶಿಕ್ಷಣವನ್ನು ಸೀಮಿತ ವೆಚ್ಚದಲ್ಲಿ ಸಮಾಜಕ್ಕೆ ಒದಗಿಸುವುದು ಸಾಧ್ಯವಾಗಿದೆ. ಸರ್ಕಾರದಿಂದ ವೇತನಾನುದಾನ ಒದಗುವುದರಿಂದ ಶಿಕ್ಷಕರು ಕೂಡ ಸೇವಾಭದ್ರತೆಯ ಬಗ್ಗೆ ಚಿಂತಿಸದೆ ನಿಸ್ಪೃಹತೆಯಿಂದ ದುಡಿಯುವುದು ಸಾಧ್ಯವಾಗಿದೆ. ಖಾಸಗಿ ಆಡಳಿತ ಮಂಡಳಿಗಳವರಿಗೆ ವಾರ್ಷಿಕ ಒಂದೆರಡು ಲಕ್ಷ ರೂಪಾಯಿ ಕೈಬಿಟ್ಟು ಹೋದರೂ ಸಾಮಾಜಿಕ ಸೇವೆ ಸಲ್ಲಿಸಿದ ತೃಪ್ತಿ ಮೂಡುತ್ತಿತ್ತು.

 

‘ಶಾಶ್ವತ ಅನುದಾನರಹಿತ’!

ಆದರೀಗ? ಚಿತ್ರ ತಲೆಕೆಳಗಾಗಿದೆ! ಅನುದಾನಿತ ಶಾಲೆ ಕಾಲೇಜುಗಳನ್ನು ತೆರೆಯುವ ಪರಿಸ್ಥಿತಿಯೇ ಇಲ್ಲ. ‘ಶಾಶ್ವತ ಅನುದಾನರಹಿತ’ ಎಂದು ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರವೇ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಖಾಸಗಿಯವರಿಗೆ ಅನುಮತಿ ನೀಡುತ್ತದೆ! ಇಂಥ ಸ್ಥಿತಿಯಲ್ಲಿ ಕನ್ನಡನಾಡು ನುಡಿಯ ಮೇಲಿನ ಅಭಿಮಾನದಿಂದ ಯಾರು ತಾನೆ ಕನ್ನಡ ಮಾಧ್ಯಮ ಶಾಲೆ ತೆರೆಯಲು ಮುಂದೆ ಬರುತ್ತಾರೆ? ಆದುದರಿಂದಲೆ ಕಂಡ ಕಂಡಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಗೂಡಂಗಡಿಗಳು ತರಹೇವಾರಿ ಹೆಸರಿನಲ್ಲಿ ತಲೆಯೆತ್ತಿವೆ! ತೊಂಬತ್ತರ ಆಸುಪಾಸಿನಲ್ಲಿ ಆರಂಭಗೊಂಡ ಕನ್ನಡ ಮಾಧ್ಯಮ ಶಾಲೆಗಳಿಗೆ ಈಗ ಸರ್ಕಾರ ಕೊಂಚ ಕೊಂಚವಾಗಿ ಅನುದಾನ ನೀಡಲು ತೊಡಗಿದೆ. ಈ ಅನುದಾನ ಗಿಟ್ಟಿಸಿಕೊಳ್ಳಲು ಶಾಲಾ ಆಡಳಿತ ಮಂಡಳಿಗಳು ಹಾಗೂ ಸಿಬ್ಬಂದಿ ವರ್ಗದವರು ನಡೆಸುವ ‘ಪೂಜೆ’, ಕೊಡುವ ‘ದಕ್ಷಿಣೆ’ ಯಾವ ಕಡತಗಳಲ್ಲೂ ದಾಖಲಾಗುವುದಿಲ್ಲ! ಹಾಗಂತ ಇದು ಲೋಕಕ್ಕೇ ತಿಳಿದ ಸತ್ಯ!ಒಂದು ಕಾಲಕ್ಕೆ ಸರ್ಕಾರ ನಡೆಸಿಕೊಂಡು ಬರುತ್ತಿದ್ದ ಶಿಕ್ಷಣ ಸಂಸ್ಥೆಗಳ ಸ್ಥಿತಿ ತೀರ ಶೋಚನೀಯವಾಗಿತ್ತು. ಈಗ ತುಂಬ ಸುಧಾರಿಸಿದೆ ಎಂದು ಈ ಮಾತಿನ ಅರ್ಥವಲ್ಲ. ಆದರೆ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಹಣ ‘ಸರ್ವಶಿಕ್ಷಾ ಅಭಿಯಾನ’ದ ಮೂಲಕ ಹರಿದು ಬಂದದ್ದರಿಂದ ಪರಿಸ್ಥಿತಿ ಸುಧಾರಿಸಿದೆ. ಶಿಕ್ಷಕರ ನೇಮಕಾತಿ ಆಗಿದೆ, ಆಗುತ್ತಲಿದೆ. ಸೌಲಭ್ಯಗಳ ಸಂಖ್ಯೆ ಹೆಚ್ಚಿದೆ. ಅನುದಾನಿತ ಶಾಲೆಗಳಿಗೆ ಲಭ್ಯವಿಲ್ಲದ ವಿವಿಧ ಪ್ರೋತ್ಸಾಹಧನ ಯೋಜನೆಗಳನ್ನು ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲಾಗಿದೆ. ಸರ್ಕಾರಿ ಶಿಕ್ಷಕರಲ್ಲಿ ಆತ್ಮಾಭಿಮಾನವನ್ನು ತುಂಬಲಾಗಿದೆ.ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಏನೂ ಕಡಿಮೆಯಿಲ್ಲ ಎಂಬ ಭಾವನೆ ಕೆಲವು ಪ್ರದೇಶಗಳಲ್ಲಾದರೂ ಮೂಡಿದೆ. ಸರ್ಕಾರಿ ಶಾಲೆಗಳನ್ನುಬಲಪಡಿಸುವ ಪ್ರಯತ್ನ ಸ್ವಾಗತಾರ್ಹವಾಗಿದ್ದರೂ ಒಂದು ಬಗೆಯ ಸ್ಪರ್ಧಾತ್ಮಕತೆಯನ್ನು ತುಂಬಲಾಯಿತು. ಖಾಸಗಿ ಅನುದಾನಿತ, ಸರ್ಕಾರಿ ಶಾಲೆಗಳು ಎಂಬ ಅಹಿತಕರ ಸ್ಪರ್ಧೆಯನ್ನು  ಸರ್ಕಾರವೇ ಆರಂಭಿಸಿ ಅನುದಾನಿತ ಶಾಲೆಗಳ ಮಾರಣಹೋಮಕ್ಕೆ ಚಾಲನೆ ನೀಡಲಾಯಿತು. ಈ ಹೋಮದ ಅಧ್ವರ್ಯು ಬೇರಾರೂ ಅಲ್ಲ  ಸರ್ಕಾರವೇ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ; ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂಬ ಕಾರಣ ಮುಂದು ಮಾಡಿಕೊಂಡು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಶಿಕ್ಷಕ ವೃಂದದ ನೇಮಕಾತಿ ಸ್ಥಗಿತಗೊಳಿಸಿ ಹೆಚ್ಚು ಕಡಿಮೆ ಎರಡು ದಶಕಗಳಾಗುತ್ತಾ ಬಂದಿದೆ. ಬೋಧಕೇತರ ಸಿಬ್ಬಂದಿಯ ನೇಮಕಾತಿಯೂ ಹೀಗೆಯೇ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಬಹಳಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೋಧಕೇತರ ಸಿಬ್ಬಂದಿ ಇಲ್ಲ. ನಿವೃತ್ತ ಉದ್ಯೋಗಿಗಳ ಬದಲಿಗೆ ಹೊಸ ನೇಮಕಾತಿಗೆ  ಸರ್ಕಾರ ಅನುಮತಿ-ಅನುದಾನ ನೀಡುವುದಿಲ್ಲ. ಹೆಚ್ಚುವರಿ ಶಿಕ್ಷಕರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾವಣೆ ಮಾಡಲಾಗುತ್ತದೆ ಹೊರತು ನೇಮಕಾತಿಯಿಲ್ಲ. ಈ ಬಗ್ಗೆ ಯುಜಿಸಿ, ನ್ಯಾಕ್, ಉನ್ನತ ಶಿಕ್ಷಣ ಸಚಿವಾಲಯ ಇತ್ಯಾದಿಯಾಗಿ ಯಾರಿಗೂ ಕಾಳಜಿಯಿಲ್ಲ. ಹಾಗಂತ ವರ್ಷಕ್ಕೊಮ್ಮೆ ಇಲಾಖೆ ಖಾಲಿ ಹುದ್ದೆಗಳೆಷ್ಟು ಎಂಬ ಅಂಕಿ ಅಂಶಗಳನ್ನು ತಪ್ಪದೆ ಪಡೆದುಕೊಳ್ಳುತ್ತದೆ. ಯಾವ ಪುರುಷಾರ್ಥಕ್ಕಾಗಿ? ಸರ್ಕಾರ ಏನೇ ಮಾಡಲಿ ಆಡಳಿತ ಮಂಡಳಿಯವರಿಗೆ ಸ್ಥಳೀಯವಾದ ಒಂದು ಬಾಧ್ಯತೆ ಇದ್ದೇ ಇರುತ್ತದಲ್ಲವೆ! ಅವರು ತಾನೆ ಶಿಕ್ಷಣ ಸಂಸ್ಥೆ ಆರಂಭಿಸಿದವರು! ಅವರು ತಾನೆ ಜನರನ್ನು ಎದುರಿಸಬೇಕಾದವರು! ಹೀಗಾಗಿ ತಮ್ಮ ಆರ್ಥಿಕ ಮಿತಿಗೆ ಒಳಪಟ್ಟು ಒಂದಿಷ್ಟು ಮಂದಿಯನ್ನು ನೇಮಕ ಮಾಡಿಕೊಳ್ಳುತ್ತಾರೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಗೆ ಎರಡು ಮೂರು ಸಾವಿರ, ಪ್ರೌಢಶಾಲೆಗಳಲ್ಲಿ ಐದು ಸಾವಿರ ಹಾಗೂ ಕಾಲೇಜು ಹಂತದಲ್ಲಿ ಉಪನ್ಯಾಸಕರಿಗೆ ಹತ್ತು ಸಾವಿರ ರೂಪಾಯಿ ವೇತನ ನೀಡುತ್ತಾರೆ. ಸೇವಾ ಭದ್ರತೆ, ಪಿಂಚಣಿ, ಭಡ್ತಿ ಇತ್ಯಾದಿ ಕೇಳಬೇಡಿ!ಹಕ್ಕು ಸ್ಥಾಪನೆ ಮಾಡಲು ಹೋದರೆ ಕಿತ್ತು ಬಿಸಾಡುತ್ತಾರೆ! ಹೊಟ್ಟೆ ಹೊರೆಯುವುದಕ್ಕಾಗಿ ಶಿಕ್ಷಕರು ಹಾಗೂ ಇತರರು ಬಾಯಿಮುಚ್ಚಿಕೊಂಡು ತೋಚಿದಷ್ಟು ಕೆಲಸ ಮಾಡುತ್ತಾರೆ. ಗುಣಮಟ್ಟ, ನಿರ್ವಹಣೆ, ದಕ್ಷತೆ, ಬದ್ಧತೆ ಇತ್ಯಾದಿ ಮಂತ್ರಗಳನ್ನು ಇವರ ಮುಂದೆ ಬಡಬಡಿಸಿದರೆ ತಲೆದೂಗುತ್ತಾರೆ. ಆದರೆ ಒಳಗಿಂದೊಳಗೆ ವ್ಯಂಗ್ಯದ ನಗು ಬೀರುತ್ತಾರೆ. ಶಿಕ್ಷಣ ಸಂಸ್ಥೆಗಳಲ್ಲಿ ವ್ಯವಸ್ಥಿತವಾದ ಶೋಷಣೆ, ಜೀತಪದ್ಧತಿ ಹಾಗೂ ತಾರತಮ್ಯಕ್ಕೆ ನೇರವಾಗಿ  ಸರ್ಕಾರಗಳೇ ಹೊಣೆ.ಕಾಲೇಜುಗಳಿಗೆ ಸಂಲಗ್ನತೆ ನೀಡುವ ವಿಶ್ವವಿದ್ಯಾನಿಲಯಗಳು ಸಿಬ್ಬಂದಿಗೆ ನಿಗದಿತ ವೇತನ ಶ್ರೇಣಿ ಕೊಡದಿದ್ದರೆ ಸಂಲಗ್ನತೆ ಹಿಂತೆಗೆಯುವ ಗಂಭೀರ ಕ್ರಮಕೈಗೊಂಡಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು. ಆಗ ಆಡಳಿತ ಮಂಡಳಿಗಳು  ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತು.ಶಿಕ್ಷಕ ಸಂಘಟನೆಗಳು ತಮ್ಮ ಸದಸ್ಯರ ವೇತನ ಶ್ರೇಣಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿವೆಯೇ ಹೊರತು ಹೊಸದಾಗಿ ಹುಟ್ಟಿಕೊಂಡ ವರ್ಗಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಉಗ್ರ ಹೋರಾಟಗಳನ್ನು ನಡೆಸಲಿಲ್ಲ. ಹೀಗಾಗಿ ಆಡಳಿತ ಮಂಡಳಿಗಳವರಿಗೂ ಶೋಷಣೆ ನಡೆಸಲು ಚಾಪೆ ಹಾಸಿಕೊಟ್ಟಂತಾಗಿದೆ.ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ....

ಇದೆಲ್ಲದರ ಪರಿಣಾಮ ಏನಾಗಿದೆಯೆಂದರೆ ಒಂದೊಂದು ಕಾಲೇಜಿನಲ್ಲಿ ಅನುದಾನಿತ ವೇತನ ವರ್ಗ ಅಲ್ಪಸಂಖ್ಯಾತವಾಗಿದ್ದು ಬಹುಮಂದಿ ಆಡಳಿತ ಮಂಡಳಿಯಿಂದ ವೇತನ ಪಡೆಯುವವರು. ಸರ್ಕಾರ ವೇತನಾನುದಾನ ನೀಡುವ ದೆಸೆಯಿಂದಾಗಿ ಸಂಸ್ಥೆಗಳ ಮೇಲೆ ಇನ್ನಿಲ್ಲದ ಬಿಗಿ ನಿಯಂತ್ರಣವನ್ನು ಹೇರುತ್ತದೆ. ದಾಖಲಾತಿ, ನೇಮಕ, ಆರ್ಥಿಕ ವ್ಯವಹಾರ, ಶುಲ್ಕ ವಿಲೇವಾರಿ ಹೀಗೆ ಪ್ರತಿಯೊಂದರಲ್ಲೂ  ಸರ್ಕಾರದ ಅಂಕುಶಕ್ಕೆ ತಲೆಬಾಗಲೇ ಬೇಕಾದ ಸ್ಥಿತಿ. ಹೀಗಾಗಿ ಒಂದೆರಡು ಆಡಳಿತ ಮಂಡಳಿಯವರು  ಸರ್ಕಾರಕ್ಕೆ ಸಡ್ಡು ಹೊಡೆದು “ನಿಮ್ಮ ಜುಜುಬಿ ಅನುದಾನ ಬೇಕಿಲ್ಲ. ನಮ್ಮ ಸಂಸ್ಥೆಯನ್ನು ಅನುದಾನರಹಿತ ಎಂದು ಘೋಷಿಸಿ. ನಮ್ಮ ವ್ಯವಹಾರ ನಾವೇ ನೋಡಿಕೊಳ್ಳುತ್ತೇವೆ” ಎಂದು ಹೇಳಿ ಉದ್ಯೋಗಿಗಳ ಬಾಳನ್ನು ಗೋಳು ಮಾಡಿವೆ.  ಸರ್ಕಾರಕ್ಕೂ ಶಿಕ್ಷಣ ಸಚಿವರಿಗೂ ಬೇಕಾದದ್ದು ಇದೇ. “ಅನುದಾನ ಬೇಡ ಎನ್ನುವವರಿಗೆ ಕೊಡುವುದೇಕೆ? ವೇತನಾನುದಾನ ನಂಬಿದ ಉದ್ಯೋಗಿಗಳು ಮಣ್ಣು ತಿನ್ನಲಿ” ಎಂಬ ಅಮಾನುಷ ಧೋರಣೆ. ಸರ್ಕಾರಿ ಅನುದಾನ ಪಡೆಯುತ್ತಿರುವ ಸಂಸ್ಥೆಯೊಂದು ಅನುದಾನ ಬೇಡವೆನ್ನುವುದು ಕೆಲವರಿಗೆ ವಿಚಿತ್ರವಾಗಿ ಕಾಣುತ್ತದೆ. ಆದರೆ ನೇಮಕಾತಿಗೆ ಅವಕಾಶ ಕೊಡದೆ ಆಡಳಿತ ಮಂಡಳಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸಿ ಸತಾಯಿಸುವ ಸರ್ಕಾರಕ್ಕೆ ಹೀಗೆ ಬುದ್ಧಿ ಕಲಿಸಬೇಕು ಎಂದು ಆಡಳಿತ ಮಂಡಳಿಗೆ ಅನ್ನಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ!ಕರ್ನಾಟಕದ ಅನುದಾನಿತ ಶಿಕ್ಷಣ ಸಂಸ್ಥೆಗಳು ಇಂದು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ, ಡೀಮ್ಡ್ ಹಾಗೂ ಸ್ವಾಯತ್ತ ಸಂಸ್ಥೆಗಳಿಂದ ಮತ್ತು ಮುಂದೆ ಬರಬಹುದಾದ ವಿದೇಶಿ ಶಿಕ್ಷಣ ಸಂಸ್ಥೆಗಳಿಂದ ಭಾರಿ ಪ್ರತಿರೋಧವನ್ನು ಎದುರಿಸಬೇಕಾಗಿದೆ. ಸರ್ಕಾರದ ನಿಷ್ಕಾಳಜಿಯ ಅಥವಾ ಒಳಗಿಂದೊಳಗೆ ತೊರೆಯುವ   ಪ್ರವೃತ್ತಿಯಿಂದಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ನಿಜಕ್ಕೂ ‘ಶ್ವಾಸ ಬಿಡುವ’ ಸ್ಥಿತಿಯಲ್ಲಿವೆ. ತೀವ್ರ ಸ್ವರೂಪದ ಸಂಘಟಿತ ಹೋರಾಟ ನಡೆಸಿದರೆ ಈ ಉದಾತ್ತ ಸಂಸ್ಥೆಗಳು ಹಾಗೂ ಹೀಗೂ ಉಳಿದಾವು; ಇಲ್ಲವಾದರೆ ಸಾಯುವುದು ಖಂಡಿತ. ಹೋಗಲಿ ಬಿಡಿ! ಉಳ್ಳವರಾದ ನಮಗೆ ಪ್ರತಿಷ್ಠಿತ ಸಂಸ್ಥೆಗಳಿವೆ; ಬಡವರಿಗೆ ಸರಕಾರಿ ಸಂಸ್ಥೆಗಳಿವೆ. ಯಾರಿಗೆ ಏನಾಗಬೇಕಾಗಿದೆ ಅನ್ನುವಿರಾ?!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.