ಭಾನುವಾರ, ಜೂನ್ 13, 2021
23 °C

ಅನುಭವಿ ಕಲಾವಿದರ ನಿರ್ಲಕ್ಷ್ಯ

ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

`ಹೊಸಬರನ್ನು ಪ್ರೋತ್ಸಾಹಿಸುವ ಭರದಲ್ಲಿ ಅನುಭವಿ ಕಲಾವಿದರನ್ನು ಬದಿಗೆ ತಳ್ಳಲಾಗುತ್ತಿದೆ~. ಇದು ವಿದ್ಯಾ ವೆಂಕಟರಾಮ್ ಆರೋಪ.`ಮಳೆಬಿಲ್ಲು~ ಧಾರಾವಾಹಿಯಲ್ಲಿ ಗಟ್ಟಿ ವ್ಯಕ್ತಿತ್ವದ ಹುಡುಗಿಯಾಗಿ ನಟಿಸಿದ್ದ ವಿದ್ಯಾ, `ಲಕುಮಿ~ ಧಾರಾವಾಹಿಯಲ್ಲಿ ಅಮ್ಮನಾಗಿ ನಟಿಸಿಯೂ ಸೈ ಎನಿಸಿಕೊಂಡರು. ಆದರೆ ಇಷ್ಟು ಬೇಗ ಅಮ್ಮನ ಪಾತ್ರ! ಎಂದು ಉದ್ಗರಿಸಿದವರಿಗೆ ಕಡಿಮೆ ಇಲ್ಲ.ಎಂಥ ಪಾತ್ರವನ್ನಾದರೂ ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟ ವಿದ್ಯಾ ಇದೀಗ `ಸೊಸೆ~ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದಾರೆ. `ತುಂಬಾ ಬೇಗ ಅಮ್ಮನ ಪಾತ್ರ ಸಿಕ್ಕಿದ್ದು ಬೇಸರವಾಯಿತು. ಆರಂಭದಲ್ಲಿ ಪಾತ್ರದ ವಿವರಣೆ ಬೇರೆಯೇ ಇತ್ತು.ಒಪ್ಪಿಕೊಂಡ ಮೇಲೆ ಅದು ಅಮ್ಮನ ಪಾತ್ರ ಎಂಬ ಅರಿವಾಯಿತು. ಒಮ್ಮೆ ಬದ್ಧವಾದ ನಂತರ ಏನೂ ಮಾಡಲು ಆಗುವುದಿಲ್ಲ~ ಎಂದು ನುಡಿಯುವ ವಿದ್ಯಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ ಅನುಭವವುಳ್ಳವರು. ಸದ್ಯಕ್ಕೆ ಆ ಸಂಸ್ಥೆಯಿಂದ ಹೊರಬಂದು ನಟನೆ ಮತ್ತು ನೃತ್ಯದ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದಾಗಿ ಹೇಳುತ್ತಾರೆ.`ಭರತನಾಟ್ಯದಲ್ಲಿ ವಿದ್ವತ್ ಆಗಿದೆ. ಆದರೆ ಯಾರ ಬಳಿಯೂ ಹೋಗಿ ನೃತ್ಯದ ಕಾರ್ಯಕ್ರಮಗಳನ್ನು ಕೇಳಲು ಮನಸ್ಸಿಲ್ಲ. ಅದನ್ನು ನನ್ನ ದೌರ್ಬಲ್ಯ ಎಂದೇ ಹೇಳಬೇಕು~ ಎನ್ನುವ ಅವರಿಗೆ ತಾಯಿಯೇ ಗುರು.ನಾಟಕರಂಗದಲ್ಲಿ ಹೆಸರು ಮಾಡಿದ ವೆಂಕಟರಾಮ್ ಮಗಳಾದ ಕಾರಣ ಅಭಿನಯವನ್ನು ಕರಗತ ಮಾಡಿಕೊಂಡು ಬೆಳೆದ ವಿದ್ಯಾ ನಂತರ ನಟನೆಯಲ್ಲಿ ಡಿಪ್ಲೊಮ ಕೂಡ ಮಾಡಿದವರು. ಅವರ ಎನ್‌ಎಸ್‌ಟಿ ಪದವೀಧರ ತಂದೆ ಮಕ್ಕಳ ನಾಟಕಕ್ಷೇತ್ರದಲ್ಲಿ ಕೆಲಸ ಮಾಡಲು ವಿಶ್ವಥಾ ತಂಡ ಕಟ್ಟಿದರು. ಅದರಲ್ಲಿಯೂ ತೊಡಗಿಸಿಕೊಂಡಿರುವ ವಿದ್ಯಾ ಪ್ರಸ್ತುತ ಅದನ್ನು ಬೆಳೆಸುವಲ್ಲಿ ನಿರತರಾಗಿದ್ದಾರೆ. `ಮಕ್ಕಳಿಗಾಗಿ ಅಭಿನಯದ ಕಾರ್ಯಾಗಾರಗಳನ್ನು ಏರ್ಪಡಿಸುತ್ತಿರುವೆ. ರಂಗಭೂಮಿಯಿಂದ ದೂರ ಉಳಿಯುವ ಮಾತೇ ಇಲ್ಲ~ ಎನ್ನುತ್ತಾರೆ.ಇಂದಿಗೂ ಬೆನಕ ಮತ್ತು ಕ್ರಿಯೇಟಿವ್ ಥಿಯೇಟರ್ ತಂಡಗಳಲ್ಲಿ ನಿರಂತರವಾಗಿ ಅಭಿನಯಿಸುವ ವಿದ್ಯಾಗೆ ಹಿಂದುಳಿದ ಮಹಿಳೆಯರಿಗೆ ಮಾದರಿಯಾಗುವಂಥ ಪಾತ್ರಗಳಲ್ಲಿ ನಟಿಸಲು ಇಷ್ಟ. ಜೊತೆಗೆ ಕಲಾವಿದೆಯಾಗಿ ತಣಿಯಲು ನೆಗೆಟಿವ್ ಪಾತ್ರವೂ ಇಷ್ಟ.`ನಿರ್ಮಾಪಕಿಯಾಗಿ ಕಲಿತ ಅನುಭವಗಳು ಸಾಕಷ್ಟು. ಟಿಆರ್‌ಪಿ ಜೊತೆ ಜಂಜಾಟ ಸಾಕಾಗುತ್ತೆ. ಒಳ್ಳೆಯ ಧಾರಾವಾಹಿ ಕೊಟ್ಟರೂ ಟಿಆರ್‌ಪಿ ಇಲ್ಲದಿದ್ದರೆ ಚಾನಲ್‌ನವರು ಕೇಳುವುದಿಲ್ಲ. `ಪಾರಿಜಾತ~ ಎಂಬ ಧಾರಾವಾಹಿಯಲ್ಲಿ ಕ್ಲೈಮ್ಯಾಕ್ಸ್ ನಿಂದ ಕತೆ ಹೇಳುವ ಪ್ರಯೋಗ ಮಾಡಿದೆವು.  ಆದರೆ ಟಿಆರ್‌ಪಿ ಇಲ್ಲ ಎಂಬ ಕಾರಣಕ್ಕೆ ನಿಲ್ಲಿಸಿಬಿಟ್ಟರು.ಹಾಗೆಯೇ `ಅನುವಾದ~, `ಅಂತರ~, `ಸುಪನಾತಿ ಸುಬ್ಬಿ~, `ಸಹಗಮನ~ ಹೀಗೆ ನಾವು ಮಾಡಿದ ಧಾರಾವಾಹಿಗಳಿಗೆಲ್ಲಾ ಟಿಆರ್‌ಪಿ ಭೂತ ಕಾಡಿತು. ಅದರಿಂದ ನಟನೆಗೆ ಹೆಚ್ಚು ಒತ್ತು ಕೊಡಲು ನಿರ್ಧರಿಸಿದೆ~ ಎಂದು ನೊಂದುಕೊಳ್ಳುತ್ತಾರೆ ವಿದ್ಯಾ.ನಾಗಾಭರಣ ನಿರ್ದೇಶನದ `ಗೆಳತಿ~ ಧಾರಾವಾಹಿಯ ಮುಸ್ಲಿಂ ಹುಡುಗಿಯ ಪಾತ್ರದ ಮೂಲಕ ಕಿರುತೆರೆ ಪ್ರವೇಶಿಸಿದ ವಿದ್ಯಾ, `ಮಳೆ ಬಿಲ್ಲು~, `ಬಿದಿಗೆ ಚಂದ್ರಮ~, `ಸಿಲ್ಲಿ ಲಲ್ಲಿ~, `ಮುಕ್ತ~, `ಪಾಪಾ ಪಾಂಡು~ ಧಾರಾವಾಹಿಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.