ಮಂಗಳವಾರ, ಮೇ 17, 2022
23 °C

ಅನ್ಯ ಕ್ರೀಡೆ ಅಬ್ಬರದಲ್ಲಿ ಕಬಡ್ಡಿ ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಂದೂರು: ಭಾರತದ ಗ್ರಾಮಾಂತರದ ಹೆಮ್ಮೆಯ ಕ್ರೀಡೆ ಕಬಡ್ಡಿ ಈಗ ರಾಷ್ಟ್ರದ ಎಲ್ಲೆಯನ್ನು ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲ್ಪಡುತ್ತಿದೆ. ದುಬಾರಿ ವೆಚ್ಚದ ಕ್ರೀಡಾಂಗಣ, ಉಪಕರಣಗಳ ಅಗತ್ಯವಿಲ್ಲದ, ದೇಹದಾರ್ಡ್ಯ ಮತ್ತು ಕೌಶಲಗಳಷ್ಟೇ ಆಧರಿಸಿರುವ ಈ ಕ್ರೀಡೆ ಅನ್ಯ ಕ್ರೀಡೆಗಳ ಅಬ್ಬರದಲ್ಲಿ ಮರೆಯಾಗಿರುವುದು ದುರ್ದೈವದ ಸಂಗತಿ. ಅಂತಹ ಒಂದು ಕಾಲಘಟ್ಟದಲ್ಲಿ ಅದರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆಸುವ ಭಾಗ್ಯ ಬೈಂದೂರಿಗೆ ಒಲಿದು ಬಂದಿದೆ. ಆ ಮೂಲಕ ಈ ದೇಸಿ ಕ್ರೀಡೆ ಈ ಪರಿಸರದಲ್ಲಿ ಮರುಹುಟ್ಟು ಪಡೆದು ತನ್ನ ಗತ ವೈಭವವನ್ನು ಮತ್ತೆ ಕಾಣುವಂತಾಗಲಿ ಎಂದು ಶಾಸಕ ಕೆ. ಲಕ್ಷ್ಮಿನಾರಾಯಣ ಹೇಳಿದರು.ಮಾರ್ಚ್ ಮೊದಲ ವಾರ ಇಲ್ಲಿ ನಡೆಯುವ ರಾಷ್ಟ್ರೀಯ ಸೂಪರ್‌ಲೀಗ್ ಕಬಡ್ಡಿ ಚಾಂಪಿಯನ್‌ಶಿಪ್ ಸ್ಪರ್ಧೆಗೆ ಇಲ್ಲಿನ ಗಾಂಧಿಮೈದಾನದಲ್ಲಿ ನಿರ್ಮಿಸಬೇಕಾಗಿರುವ ನಾಲ್ಕು ಪ್ರತ್ಯೇಕ ಅಂಕಣಗಳ ಕಾಮಗಾರಿಗೆ ಸೋಮವಾರ ಗುದ್ದಲಿಪೂಜೆ ನಡೆಸಿ ಅವರು ಮಾತನಾಡಿದರು. ದೇಶದ ಐದು ವಲಯಗಳಿಗೆ ಸೇರಿದ ವಿವಿಧ ರಾಜ್ಯಗಳಿಂದ ತಲಾ ಹದಿನಾರು ಪುರುಷ ಮತ್ತು ಮಹಿಳಾ ತಂಡಗಳು ನಾಲ್ಕು ದಿನ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.ಕರ್ನಾಟಕಕ್ಕೆ ಬಂದ ಈ ಅವಕಾಶವನ್ನು ತೀವ್ರ ಪೈಪೋಟಿ ಎದುರಿಸಿ ಉಡುಪಿ ಜಿಲ್ಲೆಯ ಉತ್ತರ ತುದಿಯ ಗ್ರಾಮವಾದ ಬೈಂದೂರಿಗೆ ತರಲಾಗಿದೆ. ಈಗ ಇದನ್ನು ಯಶಸ್ವಿಗೊಳಿಸುವ ಅಗಾಧವಾದ ಸವಾಲು ನಮ್ಮ ಮುಂದಿದೆ. ಸ್ಥಳೀಯ ಮಟ್ಟದಲ್ಲಿ ಇದರ ಸಂಘಟನೆಯ ಹೊಣೆಯನ್ನು ಜಿಲ್ಲಾ ಕಬಡ್ಡಿ ಸಂಸ್ಥೆ ಮತ್ತು ಬೈಂದೂರಿನ ಪೃಥ್ವಿ ಕ್ರೀಡಾ ಮತ್ತು ಯೂತ್ ಕ್ಲಬ್ ಜಂಟಿಯಾಗಿ ಹೊತ್ತಿವೆ. ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಹಲವು ಪ್ರಮುಖರು ಕೈಜೋಡಿಸಲಿದ್ದಾರೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ, ಸ್ಪರ್ಧಾಕೂಟದ ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಸುವರ್ಣ, ಗಿರೀಶ ಬೈಂದೂರು, ಪೃಥ್ವಿ ಕ್ರೀಡಾಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್, ಕಾರ್ಯದರ್ಶಿ ಸತ್ಯನಾರಾಯಣ, ಸ್ಥಾಪಕಾಧ್ಯಕ್ಷ ಸುಬ್ರಹ್ಮಣ್ಯ ದೊಂಬೆ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸದಾಶಿವ ಪಡುವರಿ, ಭಾಸ್ಕರ ದೇವಾಡಿಗ, ಬೈಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ, ಧುರೀಣ ನವೀನಚಂದ್ರ ಉಪ್ಪುಂದ, ಸುರೇಶ ಬಟವಾಡಿ, ಶಿಕ್ಷಕ ಗಣಪತಿ ಹೋಬಳಿದಾರ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.