ಗುರುವಾರ , ಮೇ 19, 2022
23 °C

ಅಪಘಾತಕ್ಕೆ ಆಹ್ವಾನ ನೀಡುವಂತಿರುವ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಇಲ್ಲಿನ ತ್ರಿಪುರಾಂತ ಕೆರೆ ಹತ್ತಿರದ ನಾಲೆಗೆ ಎತ್ತರದಲ್ಲೊಂದು ಕೆಳಗೊಂದು ಸೇತುವೆ ನಿರ್ಮಿಸಲಾಗಿದೆ. ನೋಡಲು ಮಹಾನಗರದ ಓವರಬ್ರಿಡ್ಜನಂತೆ ಅಂಕುಡೊಂಕಾಗಿದ್ದು ಚೆಂದಾಗಿ ಕಾಣುತ್ತದೆ. ಆದರೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.ಇಲ್ಲಿರುವ ಮೊದಲಿನ ಸೇತುವೆ ಹಳೆಯದಾಗಿದ್ದರಿಂದ 2 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಆದರೆ ಈ ಸೇತುವೆ ಬಹಳಷ್ಟು ಎತ್ತರದಲ್ಲಿ ಇರುವುದರಿಂದ ಸಮಸ್ಯೆಯಾಗಿದೆ. ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆಯೂ ಎತ್ತರಗೊಂಡಿದ್ದರಿಂದ ಎದುರಿಗೆ ವಾಹನಗಳು ಬಂದರೆ ಹೋಗಲು ಜಾಗ ಇಲ್ಲದಂತಾಗುತ್ತಿದೆ. ಚಾಲಕನ ಎಚ್ಚರತಪ್ಪಿದರೆ ವಾಹನಗಳು ಕೆಳಗೆ ಉರುಳುತ್ತಿವೆ.ಈ ಕಾರಣ ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆ ಅಗಲಗೊಳಿಸಬೇಕು ಎಂದು ಕೆಲವರು ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಹಳೆಯ ಸೇತುವೆಯ ಸ್ಥಳದಲ್ಲಿ ಹೊಸ ಸೇತುವೆಯಂತೆ ಎತ್ತರದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸಂಬಂಧಿತರು ಭರವಸೆ ಕೊಟ್ಟಿದ್ದರು. ಆದರೆ 8 ವರ್ಷಗಳಾದರೂ ಆ ಕೆಲಸ ಆಗಿಲ್ಲ.ವಿಪರ್ಯಾಸವೆಂದರೆ ಈಚೆಗೆ ಇಲ್ಲಿನ ರಸ್ತೆ ಸುಧಾರಣೆಗೆ ಹಣ ಮಂಜೂರಾದರೂ ಹಳೆಯ ಸೇತುವೆಯನ್ನು ಎತ್ತರಿಸದೆ ಹಾಗೆಯೇ ಕಾಮಗಾರಿ ನಡೆಸಲಾಗಿದೆ. ಇದಲ್ಲದೆ ಎತ್ತರದ ರಸ್ತೆಯ ಬದಿಯಲ್ಲಿ ತಡೆಗೋಡೆ ಸಹ ನಿರ್ಮಾಣ ಮಾಡಲಾಗಿಲ್ಲ. ಈ ಕಾರಣ ಕಳೆದ ಎರಡು ತಿಂಗಳಲ್ಲಿ ಬಸ್ ಮತ್ತು ಲಾರಿ ಒಳಗೊಂಡು ಮೂರು ವಾಹನಗಳು ಉರುಳಿ ಬಿದ್ದು ಜನರಿಗೆ ಗಾಯಗಳಾಗಿವೆ. ಆದ್ದರಿಂದ ಶೀಘ್ರವೇ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.