ಗುರುವಾರ , ಜೂನ್ 24, 2021
29 °C

ಅಪಘಾತವಾದಾಗ ಬಂದ ಆಪದ್ಬಾಂಧವ

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಆಗಿನ್ನೂ ನಾನು ನಾಲ್ಕನೇ ಕ್ಲಾಸು. ನಾಲ್ಕು ಗಂಟೆಗೇ ಶಾಲೆ ಮುಗಿದರೂ ಅದೇಕೋ  ಅಮ್ಮ ಆ ದಿನ ಕರೆದುಕೊಂಡು ಹೋಗಲು ಬರಲೇ ಇಲ್ಲ. ಅಮ್ಮನಿಗಾಗಿ ದಾರಿ ಕಾದು ಬೇಜಾರಾಗಿ ಮೊಟ್ಟ ಮೊದಲ ಬಾರಿಗೆ ಗೆಳತಿ ಜೊತೆ ಮನೆ ದಾರಿ ಹಿಡಿದಿದ್ದೆ.ಶಾಲೆಯಿಂದ ಹೊರಟು ಸ್ವಲ್ಪ ಹೊತ್ತಾಗಿತ್ತು ಅಷ್ಟೆ. ಇನ್ನೇನು ರಸ್ತೆ ದಾಟಬೇಕೆನ್ನುವಷ್ಟರಲ್ಲಿ  ಅದೆಲ್ಲಿತ್ತೊ ಬೈಕ್ ಇದ್ದಕ್ಕಿದ್ದಂತೆ ನನ್ನ ಮೇಲೆ ನುಗ್ಗಿತ್ತು.ಬೈಕ್ ಮೇಲೆ ಬಿದ್ದಿದ್ದೇ ಚಕ್ರಕ್ಕೆ ನನ್ನ ಕಾಲು ಸಿಕ್ಕಿ ಕೊಂಡಿತ್ತು. ಬೈಕ್ ಸವಾರ ಕೂಡ ಬಿದ್ದಿದ್ದಾಗಿತ್ತು. ಜೊತೆಗಿದ್ದ ಗೆಳತಿ ಹೆದರಿ ಓಟ ಕಿತ್ತಿದ್ದಳು. ಸವಾರ ಬೈಕ್ ಎತ್ತಿದ ಮೇಲೆ ನಾನೂ ಎದ್ದು ನಡೆಯಲು ಪ್ರಯತ್ನಿಸಿದ್ದೆ. ಆದರೆ ಎರಡು ಹೆಜ್ಜೆ ಇಟ್ಟಿರಲಿಲ್ಲ, ಕಾಲಿನಿಂದ ರಕ್ತ ಚಿಮ್ಮಲು ಆರಂಭಿಸಿತು.ಬೈಕ್ ಸವಾರನೂ ತಬ್ಬಿಬ್ಬಾದ. ರಸ್ತೆಯಲ್ಲಿ ರಕ್ತ ಚೆಲ್ಲಿಕೊಳ್ಳುತ್ತಾ ಅಳುತ್ತಾ,  ಗಾಬರಿಗೊಂಡಿದ್ದ ನನ್ನನ್ನು ಯಾರೊ ಎತ್ತಿಕೊಂಡರು. ಏನೂ ಎತ್ತ ಎಂದೂ ಯೋಚಿಸದೆ ಬೈಕ್ ಸವಾರನಿಗೆ ಹಿಂದೆ ಬರುವಂತೆ ಹೇಳಿ ತಕ್ಷಣವೇ ಆಟೊ ಚಾಲಕ ನನ್ನನ್ನು ಎತ್ತಿಕೊಂಡು ಆಟೊದಲ್ಲಿ ಕೂರಿಸಿ ಇನ್ನೊಬ್ಬ ವ್ಯಕ್ತಿಯನ್ನು ಕರೆದುಕೊಂಡು ಆಸ್ಪತ್ರೆಯೆಡೆಗೆ ಸಾಗಿಸಲು ಮುಂದಾದರು. ಆಟೊ ಚಾಲಕನ ಅಂಗಿಯೆಲ್ಲಾ ರಕ್ತಸಿಕ್ತವಾಗಿ ಹೋಗಿತ್ತು.ಮೂಳೆ ಕಾಣುತ್ತಿದ್ದ ನನ್ನ ಕಾಲನ್ನು ನೋಡಿ ಇನ್ನಷ್ಟು ಗಾಬರಿಯಿಂದ ಅಳತೊಡಗಿದ್ದೆ. ನನ್ನನ್ನು ಸಮಾಧಾನಗೊಳಿಸಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಮನೆಯ ದಾರಿ ತೋರಿಸುವಂತೆ ಮುದ್ದು ಮಾಡಿ ಮನೆ ತಲುಪಿಸಲು ಮುಂದಾದರು. ಮನೆಯಲ್ಲಿ ಅದಾಗಲೇ ನನ್ನ ಹುಡುಕಾಟ ನಡೆಯುತ್ತಿತ್ತು.ವಠಾರದ ತುಂಬೆಲ್ಲಾ ನನ್ನದೇ ಸುದ್ದಿ. ನನ್ನ ಅಳುದನಿಯ ಮಾತುಗಳಿಂದಲೇ ಮನೆಯ ವಿಳಾಸ ತಿಳಿದು ವಠಾರದ ಮುಂದೆ ಆಟೊ ನಿಂತಿತ್ತಷ್ಟೆ. ಎಲ್ಲರ ಕಣ್ಣೂ ಇತ್ತ ಹೊರಳಿತ್ತು. ಆಟೊ ಡ್ರೈವರ್ ನನ್ನನ್ನು ಎತ್ತಿಕೊಂಡು ಬರುತ್ತಿದ್ದ ದೃಶ್ಯ ನೋಡಿದ್ದೇ ಆಟೊ ಚಾಲಕನ ಮೇಲೆ ಕೋಪ ತೋರಿಸಲು ಆರಂಭಿಸಿದ್ದರು.ಅಕ್ಕಪಕ್ಕದವರೆಲ್ಲಾ ಆಟೊ ಚಾಲಕನೇ ಈ ಅಪಘಾತ ಮಾಡಿರಬೇಕೆಂದು ತಿಳಿದು ಬೈಯ್ದಾಡಲು ಶುರುವಿಟ್ಟುಕೊಂಡಿದ್ದರು. ಅಮ್ಮ ಭಯಗೊಂಡು ಅಳಲು ಆರಂಭಿಸಿದ್ದರು.

 

ಆದರೆ ಬೈಯ್ದಾಟಗಳಿಗೆ ಉತ್ತರ ಕೊಡದೆ ಮನೆಯಲ್ಲಿದ್ದ ಅಮ್ಮನಿಗೂ ಸಮಾಧಾನ ಹೇಳಿ ಮತ್ತೆ ಆಸ್ಪತ್ರೆಗೆ ತನ್ನದೇ ಆಟೊದಲ್ಲಿ ಕರೆದುಕೊಂಡು ಹೋದರು. ಸುಮಾರು ರಾತ್ರಿ 8 ಗಂಟೆಯಾದರೂ ಆಸ್ಪತ್ರೆ ಕೆಲಸ ಮುಗಿಯಲೇ ಇಲ್ಲ.ನಮ್ಮ ಮನೆಯವರೆಲ್ಲಾ ಬಂದರೂ ಆಟೊ ಡ್ರೈವರ್ ಹೊರಟಿರಲಿಲ್ಲ.  ಗಾಬರಿಯಲ್ಲಿದ್ದ ನಮ್ಮ ಮನೆಯವರೂ ಕೂಡ ಅವರನ್ನು ವಿಚಾರಿಸಲು ಮರೆತಿದ್ದರು. ಕಾಲಿಗೆ ಹೊಲಿಗೆ ಹಾಕುತ್ತಿದ್ದಾಗ ಚೀರಾಡುತ್ತಿದ್ದ ನನ್ನ ಧ್ವನಿಯನ್ನು ಕೇಳಿ ಒಮ್ಮೆ ಒಳಗೆ ಬಂದು ಹೋದರು ಅಷ್ಟೆ.ನಂತರ ಬೈಕ್‌ಸವಾರನಿಂದ ಆಸ್ಪತ್ರೆ ಬಿಲ್ ಕಟ್ಟಿಸಿ ಅಲ್ಲಿಂದ ಹೊರಟು ಬಿಟ್ಟಿದ್ದರು. ತಳಮಳಗೊಂಡಿದ್ದ ಮನೆಯವರಿಗಾಗಲೀ, ನೋವಲ್ಲಿ ನರಳುತ್ತಿದ್ದ ನನಗಾಗಲೀ ಇಷ್ಟೆಲ್ಲಾ ಸಹಾಯ ಮಾಡಿದ ಆಟೊ ಡ್ರೈವರ್ ನೆನಪಿಗೆ ಬರಲೇ ಇಲ್ಲ. ಗಾಯ ಪೂರ್ಣ ಮಾಗಲು ಒಂದು ತಿಂಗಳೇ ಹಿಡಿದಿತ್ತು.ಯಾರೋ ದಾರಿಯಲ್ಲಿ ಸಿಕ್ಕಾಗ ಇದೆಲ್ಲಾ ಹೇಗೆ ನಡೆಯಿತು ಎಂದು ಕೇಳಿದಾಗಷ್ಟೆ ಆಟೊ ಡ್ರೈವರ್ ನೆನಪಿಗೆ ಮರುಕಳಿಸಿದ್ದು. ಅಂದಿನಿಂದ ಅದೆಷ್ಟೋ ಬಾರಿ ಅಂದುಕೊಂಡಿದ್ದೇನೆ. ಇಷ್ಟೆಲ್ಲಾ ಕಾಳಜಿ ಮಾಡಿದ ಆಟೊ ಡ್ರೈವರ್‌ಗೆ ಒಂದು ಥ್ಯಾಂಕ್ಸ್ ಕೂಡ ಹೇಳಲಾಗಲಿಲ್ಲವಲ್ಲಾ ಎಂದು. ಅವರ ಮುಖ ಪರಿಚಯ ಕೂಡ ಇಲ್ಲ.ಈಗಿನಂತೆ ಆಗ ಮೊಬೈಲ್‌ಗಳಿರಲಿಲ್ಲ.  ಅದೆಲ್ಲಕ್ಕಿಂತ ಹೆಚ್ಚಾಗಿ ಇಷ್ಟೆಲ್ಲಾ ಯೋಚಿಸುವಷ್ಟು ಬುದ್ಧಿ ಕೂಡ ನನಗಿರಲಿಲ್ಲ. ಈ ಎಲ್ಲಾ ನೆಪಗಳ ಆಚೆಗೂ ಅವರನ್ನು ಒಮ್ಮೆಯಾದರೂ ಮಾತಾಡಿಸಬೇಕಿತ್ತು ಎನ್ನುವ ಅಳುಕು ಮಾತ್ರ ಇಂದಿಗೂ ಕಾಡುತ್ತಿರುವುದಂತೂ ಸುಳ್ಳಲ್ಲ. ಮೊನ್ನೆ ಮೊನ್ನೆಯಷ್ಟೇ ದಾರಿಯಲ್ಲಿ ಯಾವುದೋ ಬೈಕ್ ಆಕ್ಸಿಡೆಂಟ್ ಆಗಿದ್ದಾಗ ಎಲ್ಲರೂ ಬರಿ ನೋಡುತ್ತಾ ನಿಂತಿದ್ದ ಸಮಯದಲ್ಲಿ ಆಟೊ ಡ್ರೈವರ್ ಒಬ್ಬ ಸಹಾಯಕ್ಕೆ ಮುಂದಾದ ದೃಶ್ಯ ನೋಡಿ ಈ ನೆನಪುಗಳೆಲ್ಲಾ ಮನಸ್ಸಿನಲ್ಲಿ ಹಾದು ಹೋಯಿತು.  

 -

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.