ಸೋಮವಾರ, ಏಪ್ರಿಲ್ 19, 2021
30 °C

ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ವಿಧಾನಸಭೆಗೆ 60ವರ್ಷ ತುಂಬಿದ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯಿಂದ ನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಒಳಾವರಣದಲ್ಲಿ ಏರ್ಪಡಿಸಿರುವ 2 ದಿನಗಳ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ರಾಜ್ಯ ಸರ್ಕಾರದ ಪ್ರಮುಖ ಮಜಲು ಹಾಗೂ ಘಟನಾವಳಿ ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, `ವಿಧಾನಸಭೆ ಅಧಿವೇಶನದಿಂದ ಹಿಡಿದು 2012ರವರೆಗೂ ದಾಖಲಾಗಿರುವ ಹಲವು ಪ್ರಮುಖ ಅಪರೂಪದ ಸಂದರ್ಭದ ಚಿತ್ರಗಳು ಪ್ರದರ್ಶನದಲ್ಲಿವೆ. ಇದು ಎಲ್ಲರೂ ನೋಡಲೇ ಬೇಕಾದ ಮಾಹಿತಿ ಒದಗಿಸುವ ಆಕರ್ಷಕ ಪ್ರದರ್ಶನವಾಗಿದೆ' ಎಂದು ನುಡಿದರು.ನ. 27ರವರೆಗೆ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಬೆಳಿಗ್ಗೆ 10:30ರಿಂದ ಸಂಜೆ 5:30ಗಂಟೆವರೆಗೆ ವೀಕ್ಷಿಸಬಹುದು.

ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಪ್ರಧಾನಿ ನೆಹರು ಶಂಕುಸ್ಥಾಪನೆ ನೆರವೇರಿಸಿದ್ದು, 1973ರಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು `ಕರ್ನಾಟಕ' ಎಂದು ರಾಜ್ಯಕ್ಕೆ ಮರುನಾಮಕರಣ ಮಾಡಿದ ವೇಳೆ, ವಿಧಾನಸೌಧದ ಮೆಟ್ಟಿಲಿನಲ್ಲಿ ರಾಜ್ಯದ ನಕ್ಷೆ ಅನಾವರಣ ಮಾಡಿದ ಸಂದರ್ಭದ ಚಿತ್ರಗಳು ಪ್ರದರ್ಶನದಲ್ಲಿವೆ.ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬೆಂಗಳೂರು ಭೇಟಿ, ಅಖಿಲ ಭಾರತ ಸ್ವೀಕರ್‌ಗಳ ಸಮ್ಮೇಳನ, ಚೀನಾ ಪ್ರಧಾನಿ ಚೌ ಎನ್ ಲೈ, ವಿಯೆಟ್ನಾಂ ಅಧ್ಯಕ್ಷರು, ಸಾಫ್ಟ್‌ವೇರ್ ಕ್ಷೇತ್ರದ ದಿಗ್ಗಜ ಬಿಲ್‌ಗೇಟ್ಸ್ ಭೇಟಿ, ಬೆಂಗಳೂರಿನಲ್ಲಿ  ನಡೆದ ಸಾರ್ಕ್ ಸಮ್ಮೇಳನದ ಚಿತ್ರಗಳನ್ನು ಪ್ರದರ್ಶನದಲ್ಲಿ ವೀಕ್ಷಿಸಬಹುದು.ವಿಧಾನಸೌಧದ ರೂವಾರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಎಲ್ಲ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸ್ವೀಕರ್‌ಗಳ ಭಾವಚಿತ್ರಗಳಿವೆ. ಸುವರ್ಣ ಸೌಧ ನಿರ್ಮಾಣದ ವಿವಿಧ ಹಂತದಿಂದ ಹಿಡಿದು ಉದ್ಘಾಟನಾ ಕಾರ್ಯಕ್ರಮ ಒಳಗೊಂಡ ಚಿತ್ರಗಳನ್ನು ಸಹ ಪ್ರದರ್ಶನದಲ್ಲಿ ಕಾಣಬಹುದು.ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನ ಸೇರಿದಂತೆ ಹಲವು ಅಪರೂಪದ ಘಟನೆಗಳಿಗೆ ಛಾಯಾಚಿತ್ರಗಳು ಸಾಕ್ಷಿಯಾಗಿವೆ. ವಿಧಾನಸಭೆಯ ವಜ್ರಮಹೋತ್ಸವದ ವೇಳೆ ವಿಧಾನಸೌಧದಲ್ಲಿ ಮೊದಲ ಬಾರಿಗೆ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಇದಕ್ಕೆ ನಾಗರಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ 2ನೇ ಪ್ರದರ್ಶನ ಆಯೋಜಿಸಲಾಗಿತ್ತು.ಇತ್ತೀಚೆಗೆ ಬೆಳಗಾವಿಯಲ್ಲಿ ಸುವರ್ಣ ಸೌಧದ ಉದ್ಘಾಟನೆ ಹಾಗೂ ಮೈಸೂರು ದಸರಾದಲ್ಲೂ ಪ್ರದರ್ಶನ ಏರ್ಪಡಿಸಲಾಗಿತ್ತು. ಇದೇ ಸರಣಿಯ ಅಂಗವಾಗಿ ಗಡಿ ಜಿಲ್ಲೆಯ ನಾಗರಿಕರ ವೀಕ್ಷಣೆಗೆ ಪ್ರದರ್ಶನ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ ಎನ್.ಎಸ್. ಮಹೇಶ್, ವಾರ್ತಾ ಸಹಾಯಕ       ಎ. ರಮೇಶ್, ಸುರೇಶ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.