ಮಂಗಳವಾರ, ಏಪ್ರಿಲ್ 20, 2021
27 °C

ಅಪರೂಪದ ಮಿಡತೆ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ:  ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದ ಸಮೀಪ ಹತ್ತಿ ತೋಟದಲ್ಲಿ ಅಪರೂಪದ ಮಿಡತೆಯೊಂದು ಪತ್ತೆಯಾಗಿದೆ. ಟಗರಿನ ತಲೆ ಹೋಲುವ ಈ ಮಿಡತೆ ತನ್ನ ರೂಪ ಹಾಗೂ ಚಟುವಟಿಕೆಯಿಂದ ನೋಡುಗರನ್ನು ಚಕಿತಗೊಳಿಸುತ್ತದೆ ಈಚೆಗೆ ಗ್ರಾಮದಲ್ಲಿ ರೈತರು ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಪರೂಪದ ಮಿಡತೆ ಕಂಡುಬಂದಿದೆ.  ಈ ಮಿಡತೆ ಗಾತ್ರದಲ್ಲಿ ಇತರ ಮಿಡತೆಗಳಿಗಿಂತ ದೊಡ್ಡದಾಗಿದ್ದು, ಬಲಿಷ್ಠವಾದ ಹಿಂಗಾಲು. ಅವುಗಳಿಗೆ ಗರಗಸದಂತೆ ಚೂಪಾದ ಮುಳ್ಳು, ಕಾಲಿನ ತೊಡೆಯ ಭಾಗದಲ್ಲಿ ಮೂರು ಪಾರ್ಶ್ವಗಳಲ್ಲೂ ಮುಳ್ಳುಗಳಿರುವುದು ಇನ್ನೊಂದು ವಿಶೇಷ. ಟಗರಿನ ಆಕಾರದ ತಲೆಯಲ್ಲಿ ದೊಡ್ಡ ಗಾತ್ರದ ಕಣ್ಣುಗಳು ಹಾಗೂ ಕೊಂಬಿನಾಕಾರದ ಸ್ಪರ್ಶಕಗಳಿವೆ. ಬೆನ್ನಿನ ಮೇಲೆ ಆಕರ್ಷಕವಾದ ರಕ್ಷಾ ಕವಚ. ಆದರೆ ಹಾರಾಟಕ್ಕೆ ರೆಕ್ಕೆಗಳಿಲ್ಲ. ಕಾಲಿನಿಂದ ಜಿಗಿಯುತ್ತ ಮುಂದೆ ಸಾಗುವ ಇದು ಅಪಾಯ ಬಂದಾಗ ಇನ್ನಷ್ಟು ಬಲವಾಗಿ ದೂರಕ್ಕೆ ಜಿಗಿದು ಪಾರಾಗುತ್ತದೆ.  ಜೀವ ವೈವಿಧ್ಯಕ್ಕೆ ಹೆಸರಾದ ಈ ಪ್ರದೇಶದಲ್ಲಿ ವಿಶೇಷವಾದ ಪ್ರಾಣಿ ಪಕ್ಷಿಗಳು ಆಗಾಗ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಅಪರೂಪದ ಚಿಟ್ಟೆ ಹಾಗೂ ಕೀಟಗಗಳು ಕಂಡುಬರುತ್ತಿವೆ ಎಂದು ಸಾಹಿತಿ ಸ.ರಘುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.ಈ ಮಿಡತೆಗಳು ನಮಗೆ ಹೊಸವಲ್ಲ. ಹತ್ತಾರು ಬಗೆಯ ಮಿಡತೆಗಳು ಹೊಲ ಗದ್ದೆ, ಬಯಲಿನಲ್ಲಿ ಕಂಡುಬರುತ್ತವೆ. ಆದರೆ ಈಗಿನ ಮಿಡತೆ ಹಿಂದೆಂದೂ ಕಂಡಿಲ್ಲ ಎಂದು ಗ್ರಾಮದ ರೈತರು ಹೇಳುತ್ತಾರೆ.  ಮಿಡತೆಗಳು ಬೆಳೆಗಳನ್ನು ತಿಂದು ಹಾಳು ಮಾಡುವುದು ಸಾಮಾನ್ಯ. ಮಿಡತೆ ಕಾಟ ತಡೆಯಲೆಂದೇ ಔಷಧಿ ಸಿಂಪಡಿಸುವುದುಂಟು. ಬೆಳೆಗಳಿಗೆ ಮಾರಕವಾದ ಮಿಡತೆಗಳೂ ಸಹ ತಮ್ಮ ವಿಶೇಷ ದೇಹ ರಚನೆ ಮತ್ತು ಬಣ್ಣ ವೈವಿಧ್ಯತೆಯಿಂದ ಗಮನ ಸೆಳೆಯುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.