ಮಂಗಳವಾರ, ಮೇ 11, 2021
25 °C

ಅಪಹೃತ ಎಂಜಿನಿಯರ್ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಹಣಕ್ಕಾಗಿ ಅಪಹರಿಸಿದ ಎಂಜಿನಿಯರ್‌ರೊಬ್ಬರನ್ನು ಪೊಲೀಸರು ರಕ್ಷಿಸಿ, ಮೂವರನ್ನು ಬಂಧಿಸಿದ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.ಕೆಲಸದ ನಿಮಿತ್ತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಜಮಖಂಡಿಯ ಘಟಪ್ರಭಾ ಎಡದಂಡೆ ಕಾಲುವೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ವೆಂಕಟ ಬೆಳವಲ ಅವರನ್ನು ಕಳೆದ 4ರಂದು ಅಪಹರಿಸಲಾಗಿತ್ತು.ವೆಂಕಟ ಅವರು ಜಮಖಂಡಿಯಿಂದ ಗುಲ್ಬರ್ಗಾಕ್ಕೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಅರಕೇರಿಯ ವಿಜಯಕುಮಾರ ಕಟ್ಟಿ ಎಂಬಾತ ವೆಂಕಟ ಅವರನ್ನು ಸಹಾಯದ ನೆಪದಲ್ಲಿ ಮಾತನಾಡಿಸಿ, ಬಸ್‌ನಲ್ಲೇಕೆ ಹೋಗುತ್ತೀರಿ, ಕಾರಿನಲ್ಲಿ ಹೋಗೋಣ ಬನ್ನಿ ಎಂದಾಗ, ಇದಕ್ಕೆ ಒಪ್ಪಿದ ವೆಂಕಟ ಅವರು ಬಸ್‌ನಿಂದಳಿದು ಕಾರ್ ಹತ್ತಿದ್ದಾರೆ.ಗುಲ್ಬರ್ಗ ತಲುಪಿದ ನಂತರ ವಿಜಯಕುಮಾರ 5 ಲಕ್ಷ ರೂ. ನೀಡಿದರೆ ಬಿಡುವುದಾಗಿ ಜೀವದ ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿಗೊಂಡ ವೆಂಕಟ ತನ್ನ ಮಿತ್ರ ಯಾಸೀನ್ ನದಾಫ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಯಾಸೀನ್ ಅವರು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ವಿಶೇಷ ತಂಡ ರಚಿಸಿದ ಸಿಂದಗಿಯ ಪೊಲೀಸರು ಎಂಜಿನಿಯರ್‌ನನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಡ್ರಾಮಿಯ ದವಲಪ್ಪ ಅಯ್ಯಪ್ಪ ಬಾವಲೂರು, ಗುಲ್ಬರ್ಗ ಜಿಲ್ಲೆ ಜೇವರಗಿ ತಾಲ್ಲೂಕಿನ ವಡಗೇರಾ ಗ್ರಾಮದ ಚಂದ್ರಕಾಂತ ದೇವೇಂದ್ರಪ್ಪ ಆಂದೋಲ ಮತ್ತು ಚಾಲಕ ವಿಶ್ವಾರಾಧ್ಯ ನೂರಂದಪ್ಪಗೌಡ ಮಾಲಿಪಾಟೀಲ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ಆರೋಪಿಗಳಿಗೆ ಸಹಾಯ ಮಾಡಿದ ಆಪಾದನೆ ಮೇರೆಗೆ ವಿಜಯಕುಮಾರ ಕಟ್ಟಿ, ಯಡ್ರಾಮಿಯ ಸೋಮರಾಯ ಹೊಸಮನಿ ಹಾಗೂ ಮಹಾಂತೇಶ ಚಲವಾದಿ ಎಂಬುವವರ ವಿರುದ್ಧ ದೂರ ದಾಖಲಿಸಿಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಶ್ರಮಿಸಿದ ಸಿಬ್ಬಂದಿಗೆ ಬಹುಮಾನ ನೀಡುವುದಾಗಿ ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ್ ತಿಳಿಸಿದ್ದಾರೆ.ಅತ್ಯಾಚಾರ: ಬಂಧನ

ವಿಜಾಪುರ: ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ಅಪ್ರಾಪ್ತ  ಬಾಲಕಿಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ಗುರುವಾರ ನಡೆದಿದೆ.ಮಮದಾಪುರದ ಅರ್ಜುನ ಭೀಮಪ್ಪ ಕೊಟ್ಯಾಳ (30) ಅತ್ಯಾಚಾರ ವೆಸಗಿದ ಆರೋಪಿ.

ಅಡವಿ ಸಂಗಾಪುರ ಗ್ರಾಮದ ಬಾಲಕಿಯು ತನ್ನ ತಂದೆ ತಾಯಿ ಜೊತೆಗೆ ಸಂತೆ ವ್ಯಾಪಾರಕ್ಕಾಗಿ ಬಂದಿದ್ದಳು. ಆರೋಪಿಯು ಬಾಲಕಿಯನ್ನು ಅಪಹರಿಸಿ ಕಾಲೇಜು ಆವರಣದಲ್ಲಿ ಅತ್ಯಾಚಾರ ವೆಸಗಿದ್ದಾನೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ.ಬಬಲೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.