ಭಾನುವಾರ, ಮೇ 22, 2022
24 °C
ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ

ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣ ಗೊಂಡಿದ್ದು, ಕೂಡಲೇ ಪೂರ್ಣ ಗೊಳಿಸಬೇಕು ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗಳಿಗೆ ತಾಕೀತು ಮಾಡಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.`ನಾಲ್ಕು ವರ್ಷದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ 15.8 ಕೋಟಿ ಅನುದಾನ ಮಂಜೂರಾಗಿದೆ. ಒಟ್ಟು 534 ಕಾಮಗಾರಿಗಳಿಗೆ ಶಿಫಾರಸು ಮಾಡಲಾಗಿದ್ದು, ಅವುಗಳಲ್ಲಿ 356 ಕಾಮಗಾರಿಗಳು ಪೂರ್ಣಗೊಂಡಿವೆ. 127 ಕಾಮಗಾರಿಗಳು ಪ್ರಗತಿಯಲ್ಲಿವೆ. 51ಕಾಮಗಾರಿಗಳಿಗೆ ಅನುಮೋದನೆ ಸಿಗಬೇಕಿದೆ ಎಂದು ವಿವರಿಸಿದರು.ಇಲ್ಲಿಯವರೆಗೆ ರೂ 13 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, 2009-10ನೇ ಸಾಲಿನಲ್ಲಿ ಆರಂಭಗೊಂಡಿದ್ದ  ಹರಿಹರ- ಇಂಗಳಗೊಂದಿ ಬಸ್ ತಂಗುದಾಣ, ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಮತ್ತು ಕೈದಾಳೆ ಗ್ರಾಮದಲ್ಲಿನ ಸಮುದಾಯ ಭವನ, ಜಗಳೂರು ತಾಲ್ಲೂಕಿನ ಅಸಗೋಡಿನ ಗ್ರಂಥಾಲಯ ಕಟ್ಟಡ ಕಾಮಗಾರಿಗಳು ಅಪೂರ್ಣ ಗೊಂಡಿವೆ. ಇದಕ್ಕೆ ಏನು ಕಾರಣ? ವಿಳಂಬ ಏಕೆ? ಎಂದು ನಿರ್ಮಿತಿ ಕೇಂದ್ರ ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ದಾವಣಗೆರೆ ನಗರದಲ್ಲೂ ಸ್ವಚ್ಛತೆ ಮರೀಚಿಕೆಯಾಗಿದೆ. ಬಸ್‌ನಿಲ್ದಾಣದಲ್ಲಿ ಫ್ಲೆಕ್ಸ್ ಮತ್ತು ಪೋಸ್ಟರ್ ಹಾವಳಿ ಹೆಚ್ಚಿದ್ದು, ಕೂಡಲೇ, ಅವುಗಳನ್ನು ತೆರವುಗೊಳಿಸುವ ಮೂಲಕ ನಗರದ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಪಾಲಿಕೆ ಆಯುಕ್ತ ಎಸ್.ಎಂ. ಶೆಟ್ಟಣ್ಣನವರ್‌ಗೆ ಸೂಚಿಸಿದರು.ಇದೇ ವೇಳೆ ಅಧಿಕಾರಿಗಳು ತೋರಿಸಿದ `ವಿಶ್ವಭಾರತಿ ಶಾಲಾ ಕಟ್ಟಡ, ಶಿರಗಾನಹಳ್ಳಿ- ಬಲ್ಲೂರು- ಕಕ್ಕರಗೊಳ್ಳ ಬಸ್‌ನಿಲ್ದಾಣ' ಪೂರ್ಣಗೊಂಡಿರುವ ಕಾಮಗಾರಿ ಚಿತ್ರಗಳು ಒಂದೇ ತೆರನಾಗಿದ್ದು, ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಜುಲೈ 17ರಂದು ಜಿಲ್ಲಾಧಿಕಾರಿ ಪಟ್ಟಣಶೆಟ್ಟಿ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಲು ತೀರ್ಮಾನಿಸಿದರು.ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಎಸ್.ಎಂ. ರುದ್ರಪ್ಪ, ನಿರ್ಮಿತಿ ಕೇಂದ್ರ ಜಿಲ್ಲಾ ಯೋಜನಾ ಧಿಕಾರಿ ರಾಜಪ್ಪ ಹಾಜರಿದ್ದರು.ಸಚಿವರ ಟೀಕೆಗೆ ತಿರುಗೇಟು

ಒಂಬತ್ತು ವರ್ಷಗಳಿಂದ ಸಂಸತ್ ಸದಸ್ಯನಾಗಿ ದುಡಿದ ಅನುಭವ ನನಗಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನು ಕೇಂದ್ರದ ಮಂತ್ರಿಗಳಿಗೆ ಬರೆದಿರುವ ಪತ್ರಗಳಿಗೆ ಮಾನ್ಯತೆ ಮತ್ತು ಗೌರವ ಸಿಕ್ಕಿದೆ. ಸಚಿವ ಶಾಮನೂರು ಶಿವಶಂಕರಪ್ಪ ಹೇಳಿರುವಂತೆ ಅವು ಕಸದಬುಟ್ಟಿ ಸೇರಿಲ್ಲ. ಅಷ್ಟಕ್ಕೂ ನಾನು ವೈಯಕ್ತಿಕ ಕೆಲಸಗಳಿಗೆ ಪತ್ರ ಬರೆದಿಲ್ಲ; ಕ್ಷೇತ್ರದ ಅಭಿವೃದ್ಧಿಗಾಗಿ ಬರೆದಿದ್ದೇನೆ ಎಂದು ಜಿ.ಎಂ. ಸಿದ್ದೇಶ್ವರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರಿಗೆ ತಿರುಗೇಟು ನೀಡಿದರು.ಚಿತ್ರದುರ್ಗ-ಹಾವೇರಿ ಸಂಪರ್ಕ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಮಾರ್ಗ ಅಭಿವೃದ್ಧಿ ಕಾಮಗಾರಿ ಮಂಜೂರಾತಿ ಹಂತದಲ್ಲಿದೆ. ದಾವಣಗೆರೆ-ಚಿತ್ರದುರ್ಗ-ಶಿವಮೊಗ್ಗ ಹಾಗೂ ಹರಿಹರ- ಶಿವಮೊಗ್ಗ ರೈಲು ಮಾರ್ಗಗಳ ಸಮೀಕ್ಷಾ ನಡೆಸಲಾಗಿದೆ. ಹರಿಹರ- ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭಿಲಾಗಿದ್ದು, ಭೂ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ರೈತರು ಮೊರೆ ಹೋಗಿದ್ದಾರೆ. ತೀರ್ಪು ಶೀಘ್ರ ಪ್ರಕಟವಾಗಲಿದೆ. ಹರಿಹರ-ಕೊಟ್ಟೂರು ರೈಲು ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ರಾಷ್ಟ್ರೀಯ ಕೂಲಿಗಾಗಿ ಕಾಳು ಯೋಜನೆ ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ ಪ್ರತಿವರ್ಷ ರೂ 230 ಕೋಟಿ ಅನುದಾನ ಮಂಜೂರಾತಿ ಆಗುವಂತೆ ಶ್ರಮಿಸಿದ್ದೇನೆ. ನಗರದಲ್ಲಿ ಎಫ್‌ಎಂ ರೇಡಿಯೋ ತಲೆಯೆತ್ತಲು ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಎರಡು ಎಕರೆ ನಿವೇಶನ ನಿಗದಿಯಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಪತ್ರಗಳೇ ಹೊತ್ತು ತಂದಿವೆ ಎಂದರು.`ನಿಂದನೆಯೇ ನನಗೆ ಆರ್ಶೀವಾದ'

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನೀವು ಸೋಲುವಿರಿ ಎಂದು ಸಚಿವ ಶಾಮನೂರು ಶಿವಶಂಕರಪ್ಪ ಭವಿಷ್ಯ ನುಡಿದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಶಿವಶಂಕರಪ್ಪ ಅವರು ನನಗೆ ತಂದೆ ಸಮಾನ. ಅವರ ನಿಂದನೆಗಳು ನನಗೆ ಆಶೀರ್ವಾದ ಇದ್ದಂತೆ. ನನ್ನ ತಂದೆ ಮಲ್ಲಿಕಾರ್ಜುನಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲೂ ಅವರು ಸೋಲುತ್ತಾರೆ ಎಂದೇ ಶಿವಶಂಕರಪ್ಪ ಹೇಳಿದ್ದರು. ಆದರೆ, ಆ ಚುನಾವಣೆಯಲ್ಲಿ ನನ್ನ ತಂದೆ ಗೆದ್ದರು. ಜನರ ಜೀವನಾಡಿಯಂತೆ ನಾನು ಕಾರ್ಯನಿರ್ವಹಿಸಿದ್ದೇನೆ. ಸೋಲು-ಗೆಲುವನ್ನು ಜನರು ತೀರ್ಮಾನಿಸುತ್ತಾರೆ' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.