ಶುಕ್ರವಾರ, ಏಪ್ರಿಲ್ 16, 2021
31 °C

ಅಬ್ಬಬ್ಬಾ!ಭಾರದ ಭಾರಿ ಬೆಳೆ

ಲಕ್ಷ್ಮಣ ಟಿ. ನಾಯ್ಕ Updated:

ಅಕ್ಷರ ಗಾತ್ರ : | |

ಸೋರೆಕಾಯಿ ಕಡಿಮೆ ಎಂದರೂ 6 ಕೆ.ಜಿ ತೂಗುತ್ತದೆ. ಅದರ ಪಕ್ಕದಲ್ಲಿಯೇ ಇರುವ ಕುಂಬಳಕಾಯಿ, ಸಿಹಿಗುಂಬಳ, ಬಿಳಿಗುಂಬಳದ ತೂಕವೂ ಸೋರೆಕಾಯಿಯ ಆಸುಪಾಸು. ಎಲೆಕೋಸು ಹಾಗೂ ಹೂಕೋಸು ನೋಡಲಷ್ಟೇ ಸುಂದರ ಅಲ್ಲ.ತಿನ್ನಲೂ ರುಚಿ. ಅಲ್ಲಿರುವ ಕಪ್ಪು ಹಾಗೂ ಹಸಿರು ಬಸಳೆ ಸೊಪ್ಪಿನ ಗಿಡ 10 ಅಡಿಗಿಂತಲೂ ಉದ್ದ ಬೆಳೆದು ಬೆರಗು ಮೂಡಿಸುತ್ತಿದೆ. ಅಲ್ಲಿ 35ಕ್ಕೂ ಹೆಚ್ಚು ಬಗೆಯ ತರಕಾರಿ ಹಾಗೂ ಬೆಳೆಗಳು ಬೆಳೆದುನಿಂತಿವೆ. ಎಲ್ಲವೂ ತಾಜಾ. ತಾಜಾ.

ಅರೆ, ಇದೇನಿದು. ತರಕಾರಿ ಬೆಳೆದಿರುವುದರಲ್ಲಿ ಅಚ್ಚರಿ ಏನಿದೆ ಎಂದು ಎನಿಸಿತೆ?ಇದು ಬೆಳೆದದ್ದು ಯಾವುದೇ ತೋಟದಲ್ಲಲ್ಲ. ಬದಲಿಗೆ ಸಣ್ಣ ಸಣ್ಣ ಕುಂಡಗಳಲ್ಲಿ! ಕೇಂದ್ರ ಸರ್ಕಾರದ ಸಂಸ್ಥೆಯಾದ ಬೆಮೆಲ್ ಬೆಳೆದ ತರಕಾರಿಗಳಿವು. ಇಂತಹ ಒಂದು ಅಸಾಮಾನ್ಯ ಸಾಧನೆಗೆ ಮೈಸೂರಿನ ವಿಶ್ವವಿಖ್ಯಾತ ದಸರಾ ಹಬ್ಬದಲ್ಲಿ ಈ ವರ್ಷವೂ ಬೆಮೆಲ್ ಪ್ರಥಮ ಹಾಗೂ `ಸಮಗ್ರ ಪ್ರಶಸ್ತಿ~ಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅಂದ ಹಾಗೆ ಈ ಪ್ರಶಸ್ತಿ ಪಡೆಯುತ್ತಿರುವುದು ಸತತ 26ನೆಯ ಬಾರಿ!ರಾಜ್ಯ ತೋಟಗಾರಿಕೆ ಇಲಾಖೆ ದಸರಾ ನಿಮಿತ್ತ ಪ್ರತಿವರ್ಷ ನಡೆಸುವ ಫಲಪುಷ್ಪ ಪ್ರದರ್ಶನದಲ್ಲಿ ಬೆಮೆಲ್ ಸಂಸ್ಥೆಯು ತರಕಾರಿ ಹಾಗೂ ಹೂವುಗಳನ್ನು 10 ದಿನಗಳ ಕಾಲ ಪ್ರದರ್ಶನಕ್ಕಿಟ್ಟಿತ್ತು ಹಾಗೂ ರೈತರಿಗೆ ಮಾಹಿತಿ ನೀಡಿದೆ. ಇಲ್ಲಿ ಫಲ-ಪುಷ್ಪಗಳು ಕೇವಲ ಪ್ರದರ್ಶನವಾಗಿ ಉಳಿದಿಲ್ಲ. ರೈತರಿಗೆ ಅರಿವು ಮೂಡಿಸುವಲ್ಲಿ ಸಫಲವಾಗಿದೆಯಲ್ಲದೇ, ಕುಂಡಗಳಲ್ಲೂ ಉತ್ತಮ ತರಕಾರಿ ಬೆಳೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ ಬೆಮೆಲ್.ಬೆಳೆಗಳ ಬಗ್ಗೆ ಒಂದಿಷ್ಟು ಮಾಹಿತಿ

ಕುಂಡಗಳಲ್ಲಿ ಯಾವ ತರಕಾರಿಗಳಿವೆ?, ಹೇಗೆ ಬೆಳೆಯಲಾಗಿದೆ ಎಂಬತ್ತ ದೃಷ್ಟಿ ಬೀರೋಣ. ಒಂದು ಅಡಿ ಸುತ್ತಳತೆಯ ಸಣ್ಣ ಕುಂಡದಲ್ಲಿ ಸೋರೆಕಾಯಿ ಬಳ್ಳಿ ಇದೆ. ಅದು 8 ಅಡಿ ಉದ್ದ ಬೆಳೆದು ಆಧಾರವಾಗಿ ನೀಡಲಾಗಿರುವ ಕಬ್ಬಿಣದ ತಂತಿಗಳಲ್ಲಿ ಬಳ್ಳಿಯು 3 ಮೀಟರ್ ಹರಡಿಕೊಂಡಿದೆ. ಅಲ್ಲಿಯೇ ಆರು ಕಾಯಿ ಬಿಟ್ಟಿದೆ.

 

ಅದರ ಪಕ್ಕದಲ್ಲಿಯೇ ಇರುವ ಸಿಹಿಗುಂಬಳದ ಬಳ್ಳಿಯಲ್ಲೂ ನಾಲ್ಕು ಕಾಯಿಗಳು ದೊಡ್ಡದಿದ್ದು, ಸಣ್ಣವು ಮೂರು ಇವೆ. ಬಿಳಿಗುಂಬಳ ಹಾಗೂ ಬೂದಗುಂಬಳದ ಬಳ್ಳಿಯಲ್ಲೂ ಹತ್ತಾರು ಕಾಯಿ ಬಿಟ್ಟು ಅಚ್ಚರಿ ಮೂಡಿಸುತ್ತಿವೆ. ಅದರ ಪಕ್ಕದಲ್ಲಿಯೇ ಇರುವ ಬಳಸೆ ಸೊಪ್ಪು ಕುಂಡದಲ್ಲಿ ಹೀಗೂ ಬೆಳೆಯುತ್ತದೆ ಎನ್ನುವುದೇ ಆಶ್ಚರ್ಯಕರ ಅಂಶ.ಆರು ಬಸಳೆ ಗಿಡಗಳಲ್ಲಿ ನಾಲ್ಕು ಕಪ್ಪು ಬಣ್ಣದವು. ಇನ್ನುಳಿದವು ಹಸಿರು ಬಸಳೆ. ನೆಲದಲ್ಲಿ ಬೆಳೆಯುವ ಬಸಳೆಗೆ ಹೆಚ್ಚು ನೀರು ಬೇಕು. ಆದರೆ, ಕುಂಡದಲ್ಲಿರುವ ಕಡಿಮೆ ಮಣ್ಣು ಹಾಗೂ ನೀರಿನಲ್ಲಿ ಆ ಪರಿ ಬೆಳೆದಿದೆ.ಇನ್ನು ಹೂಕೋಸು, ಎಲೆಕೋಸು, ಮೆಣಸು, ಅದರಲ್ಲಿ ದೊಣ್ಣೆ ಮೆಣಸು, ಕ್ಯಾಪ್ಸಿಕಂ, ಅಗಸೆ, ಟೊಮೆಟೊ, ಹರಿವೆ ದಂಟು (ಬಿಳಿ-ಕೆಂಪು), ಚಪ್ಪರದ ಅವರೆ, ಬದನೆ, ಬೆಂಡೆಕಾಯಿ, ಹೈಬ್ರಿಡ್ ತಳಿ ಬೆಂಡೆ, ಕ್ಯಾರೆಟ್, ನೆಲಗೆಣಸು ಹಾಗೂ ಮರಗೆಣಸು, ಹಾಗಲ, ಹೀರೆಕಾಯಿ ಸಾಸಿವೆ, ಶೇಂಗಾ ಬೆಳೆಗಳ ಹೂರಣವೇ ಇದೆ. ಈ ಎಲ್ಲ ಬೆಳೆ ಹಾಗೂ ತರಕಾರಿಗಳು ಸಣ್ಣ ಕುಂಡದಲ್ಲಿಯೇ ಬೆಳೆದು ಶಕ್ತಿ ಪ್ರದರ್ಶನ ಮಾಡಿರುವುದು ವಿಶೇಷವೇ ಸರಿ.ಈ ತರಕಾರಿ ಬೆಳೆಯಲು ಬೆಮೆಲ್ ಸಂಸ್ಥೆ ಬಳಸಿದ್ದು ಸಾವಯವ ಗೊಬ್ಬರ. ಅರ್ಧಭಾಗಕ್ಕೆ ಸಾವಯವ ಗೊಬ್ಬರ, ಅದರ ನಂತರ ಮಣ್ಣು ಹಾಕಿ ಗಿಡ ಇಲ್ಲವೇ ಬೀಜ ಹಾಕಬೇಕು. ಅದರ ಮೇಲೆ ಕುದುರೆ ಗೊಬ್ಬರ ಮತ್ತು ಮಣ್ಣು ಹಾಕಿದೆ ಬೆಮೆಲ್. ಕೆಲವು ಗಿಡಗಳು ಏಳು ಇಲ್ಲವೇ 21 ದಿನಕ್ಕೆ ಮೊಳಕೆ ಒಡೆದು ಏಳುತ್ತವೆ.

 

ನಂತರ ಅದಕ್ಕೆ ಆಧಾರವಾಗಿ ಮರದ ಕೊಂಬೆ ನೆಡಬೇಕು. ಬಳ್ಳಿಗಳಿಗೆ ನೆಟ್ಟರೆ ಸಾಕು. ಕೋಸು, ಶೇಂಗಾ ಹಾಗೂ ಬೆಂಡೆ ಗಿಡಗಳಿಗೆ ಅದರ ಅವಶ್ಯಕತೆ ಇಲ್ಲವೇ ಇಲ್ಲ. ಹೆಚ್ಚಾಗಿ ಆಧಾರವಾಗಿ ನೀಡಬೇಕಾಗಿದ್ದು ಬಳ್ಳಿಯಲ್ಲಿ ಬೆಳೆಯುವ ಹಾಗಲ, ಸೋರೆ, ಕುಂಬಳ ಇತರೆ ಗಿಡಗಳಿಗೆ ಮಾತ್ರ.ನೆಲದಲ್ಲಿ ತರಕಾರಿ ಬೆಳೆಯುವುದಾದರೆ ವಾರಕ್ಕೆ ಎರಡು ಬಾರಿ ನೀರು ಹಾಕಿದರೆ ಸಾಕು. ಆದರೆ, ಕುಂಡದಲ್ಲಿ ಬೆಳೆಯಬೇಕಾದರೆ ದಿನಕ್ಕೆ ಮೂರು ಬಾರಿ ಇಲ್ಲವೇ ಎರಡು ಬಾರಿ ನೀರು ಹಾಕುವುದು ಕಡ್ಡಾಯ. ಕುಂಡದಲ್ಲಿನ ಮಣ್ಣು ಇಲ್ಲವೇ ಗೊಬ್ಬರದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅದಕ್ಕಾಗಿ ಎರಡು ಹಿಡಿ ಮರಳನ್ನು ಬಳಸಬೇಕು.ಜತೆಗೆ 17-17 ಗೊಬ್ಬರ, ಸುಫಲಾ, ಚುಕ್ಕೆ ರೋಗಕ್ಕೆ ವಾರಕ್ಕೊಮ್ಮೆ ಮೆಟಾಸಿಟಿ ಸಿಂಪಡಣೆ ಕಡ್ಡಾಯ. ಇವುಗಳ ಜತೆ ಮುರಳೆಪೌಡರ್, ನೀಮಾ ಎಂಬ ಆಯಿಲ್ ಸಿಂಪಡಣೆ ಉತ್ತಮ. ಬೆಮೆಲ್ ಕುದುರೆ ಗೊಬ್ಬರ ಬಳಸಿದೆ. ಆದರೆ, ಇದು ಕಡ್ಡಾಯವಲ್ಲ. ಸಾವಯವ ಗೊಬ್ಬರದಿಂದಲೇ ಕುಂಡದಲ್ಲಿ ಉತ್ತಮ ಇಳುವರಿ ತೆಗೆಯಬಹುದು ಎಂಬುದು ತೋಟಗಾರಿಕೆ ವಿಭಾಗ ನಿರ್ವಹಣೆ ಮಾಡುತ್ತಿರುವ ಮಾದೇವ್ ಅವರ ವಿವರಣೆ.ಕುಂಡದಲ್ಲಿ ಬೆಳೆದಿರುವ ಎಲ್ಲ ತರಕಾರಿಗಳೂ ಮೂರು ತಿಂಗಳಲ್ಲಿ ಫಸಲು ನೀಡಿವೆ. ಒಂದು ಗಿಡ ಕಡಿಮೆ ಎಂದರೂ ನಾಲ್ಕು ತಿಂಗಳುಗಳ ಕಾಲ ಬೆಳೆ ನೀಡಬಲ್ಲದು. ಮನೆಯ ತಾರಸಿಯಲ್ಲಿ ಸೋರೆ, ಹಾಗಲ, ಬಸಳೆ, ಮೂರು ಬೆಂಡೆ ಗಿಡ ಹಾಕಿದರೆ ಮೂರು ತಿಂಗಳುಗಳ ಕಾಲ ಮಾರುಕಟ್ಟೆಗೆ ಹೋಗುವುದನ್ನು ಪಟ್ಟಣಿಗರು ತಪ್ಪಿಸಬಹುದು.`ದಸರಾಕ್ಕೆ ಬಂದಿದ್ದ ಲಕ್ಷಾಂತರ ಮಂದಿ ಬೆಮೆಲ್ ಮಾದರಿ ವೀಕ್ಷಿಸಿ ಇಷ್ಟಪಟ್ಟಿದ್ದಾರಲ್ಲದೇ, ಎಲ್ಲರೂ ಮಾಹಿತಿ ತಿಳಿದು ಮರಳಿದ್ದಾರೆ. ನಮ್ಮ ತೋಟಗಾರಿಕಾ ವಿಭಾಗದಲ್ಲಿ ಇನ್ನೂ ಸಾಕಷ್ಟು ಮಾದರಿ ತರಕಾರಿ ಹಾಗೂ ಬೆಳೆ ಬೆಳೆದಿದ್ದೇವೆ. ರೈತರು ಬಂದು ವೀಕ್ಷಿಸಬಹುದು. ಬೀಜ ಪಡೆಯಬಹುದು. ನಮ್ಮ ಶ್ರಮ ಸಾರ್ಥಕವಾಗಿದೆ~ ಎನ್ನುತ್ತಾರೆ ಬೆಮೆಲ್‌ನ ತೋಟಗಾರಿಕಾ ವಿಭಾಗದ ಹಿರಿಯ ಮೇಲ್ವಿಚಾರಕ ಕೀರ್ತಿನಾರಾಯಣ.ಬೆಮೆಲ್ ಸಂಸ್ಥೆ ಮೈಸೂರು ದಸರಾದಲ್ಲಿ ಮಾತ್ರ ಫಲ-ಪುಷ್ಪ ಪ್ರದರ್ಶನ ಮಾಡಿ ಪ್ರಶಸ್ತಿ ಗಳಿಸಿಲ್ಲ. ಬೆಂಗಳೂರು, ಮಂಡ್ಯ ಹಾಗೂ ವಿವಿಧೆಡೆ ನಡೆಯವ ಕೃಷಿ ಮೇಳದಲ್ಲಿಯೂ ಪ್ರಶಸ್ತಿ ಗಳಿಸಿದೆ. ಅದಕ್ಕಿಂತ ಹೆಚ್ಚಾಗಿ ರೈತರ ಹಾಗೂ ಪಟ್ಟಣದ ತಾರಸಿ ಕೃಷಿಕರಿಗೆ ಹೊಸ ಮಾದರಿ ನೀಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.