ಭಾನುವಾರ, ಜೂನ್ 20, 2021
20 °C

ಅಭಿನಯ–ಅಭಿವ್ಯಕ್ತಿ ರಂಗ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಯಾವ ರೀತಿ ಬೆಳೆದು ಮಹತ್ವ ಪಡೆದುಕೊಂಡಿತೋ ಅದೇ ರೀತಿ ಉತ್ತರ ಕರ್ನಾಟಕದಲ್ಲಿ ದೊಡ್ಡಾಟ ಹಾಗೂ ಬಯಲಾಟಗಳು ದೊಡ್ಡ ಪ್ರಮಾಣದಲ್ಲಿ ಬೆಳೆದು ಮಹತ್ವ ಪಡೆಯಲಿಲ್ಲ. ಏಕೆಂದರೆ ಇವುಗಳಲ್ಲಿ ಹೊಸ ಪ್ರಯೋಗಗಳೇ ನಡೆಯಲಿಲ್ಲ’ ಎಂದು ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.ಇಲ್ಲಿನ ರಂಗಾಯಣದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಯ–ಅಭಿವ್ಯಕ್ತಿ ರಂಗಾಭಿನಯ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ‘ಪ್ರಾಚೀನ ಕಾಲದಿಂದಲೂ ಸಣ್ಣಕಥೆ ಮತ್ತು ನಾಟಕ ಪ್ರಕ್ರಿಯೆಗಳು ನಡೆದುಕೊಂಡು ಬರದೇ ಹೋಗಿದ್ದರೆ ನಾಟಕ ಪರಂಪರೆ ಎಂದೋ ನಿಂತು ಹೋಗುತ್ತಿತ್ತು. ಹಳ್ಳಿಗಳಲ್ಲಿ ಸಣ್ಣಾಟ, ದೊಡ್ಡಾಟ ಮತ್ತು ಬಯಲಾಟಗಳು ಹಳ್ಳಿಗರ ಬದುಕಿನ ಒಂದು ಭಾಗವಾಗಿದ್ದವು. ಆದರೆ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಕರಾವಳಿ ಪ್ರದೇಶಗಳಲ್ಲಿ ಯಕ್ಷಗಾನ ಬೆಳೆದಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಈ ಬಯಲಾಟ ಮತ್ತು ದೊಡ್ಡಾಟಗಳು ಬೆಳೆಯಲಿಲ್ಲ. ಹೊಸ ಹೊಸ ಪ್ರಯೋಗಗಳು ಬಯಲಾಟ ಮತ್ತು ದೊಡ್ಡಾಟಗಳಲ್ಲಿ ನಡೆಯಲೇ ಇಲ್ಲ’ ಎಂದರು.‘ಇತ್ತೀಚೆಗೆ ಹವ್ಯಾಸಿ ರಂಗಭೂಮಿ ಮೂಲಕ ಭಿನ್ನವಾದ ರೂಪದಲ್ಲಿ ನಾಟಕಗಳು ಬೆಳೆದು ಬರು­ತ್ತಿವೆ. ಮಹಾರಾಷ್ಟ್ರದ ಪ್ರಾಯೋಗಿಕ ರಂಗಭೂಮಿ­ಯನ್ನು ನೋಡಿದರೆ, ನಮ್ಮ ರಂಗಭೂಮಿ ಅಷ್ಟೊಂದು ಮಹತ್ವದ ರೀತಿಯಲ್ಲಿ ಬೆಳೆದಿಲ್ಲ. ಇಂದು ನಾಟಕಗಳು ಭಿನ್ನ ರೀತಿಯಲ್ಲಿ ಪ್ರಯೋಗವಾಗುತ್ತಿದ್ದು, ಇದರ ಜೊತೆಗೆ ಸಣ್ಣಕಥೆ ಎಂಬುದು ಹೊಸದಾಗಿ ಸೇರ್ಪಡೆಗೊಂಡಿದೆ. ಈ ಸಣ್ಣಕಥೆ ನಮಗೆ ಪಶ್ಚಿಮದಿಂದ ಪರಿಚಯವಾದ ಒಂದು ಸಾಹಿತ್ಯ ಪ್ರಕಾರವಾಗಿದೆ. ಇತ್ತೀಚಿನ ಪತ್ರಿಕೆಗಳೂ ಸಣ್ಣಕಥೆಗಳಿಗೆ ಮಹತ್ವ ಕೊಟ್ಟು ಪ್ರಕಟ ಮಾಡುತ್ತಿವೆ. ಸಾಹಿತ್ಯ ಪ್ರಕಾರದಲ್ಲಿ ಕಾದಂಬರಿಗಿಂತ ಸಣ್ಣಕಥೆಗೆ ಅದರದೇ ಆದ ಒಂದು ಸ್ವರೂಪವಿದೆ’ ಎಂದು ತಿಳಿಸಿದರು.ಶಿಬಿರದ ನಿರ್ದೇಶಕ ಡಾ.ಪ್ರಕಾಶ ಗರೂಡ ಇದ್ದರು. ಶಿಬಿರದಲ್ಲಿ ಕೊಪ್ಪಳ, ರಾಯಚೂರು, ಗಂಗಾವತಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಭಾಗಗಳಿಂದ ಸಮಾರು 30 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.