ಬುಧವಾರ, ಆಗಸ್ಟ್ 12, 2020
27 °C

ಅಭಿಮಾನಿಗಳ ಹೃದಯ ಗೆದ್ದ ಮರ‌್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿಮಾನಿಗಳ ಹೃದಯ ಗೆದ್ದ ಮರ‌್ರೆ

ಲಂಡನ್ (ರಾಯಿಟರ್ಸ್‌): ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಸೋಲು ಅನುಭವಿಸಿದರೂ ಆ್ಯಂಡಿ ಮರ‌್ರೆ ಇಂಗ್ಲೆಂಡ್‌ನ ಟೆನಿಸ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಮರ‌್ರೆ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಕೈಯಲ್ಲಿ ಸೋಲು ಅನುಭವಿಸಿದ್ದರು. ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವಲ್ಲಿ ಎಡವಿದ ಮರ‌್ರೆ ಪಂದ್ಯದ ಬಳಿಕ ಕಣ್ಣೀರು ಸುರಿಸಿದ್ದರು.`ರನ್ನರ್ ಅಪ್~ ಟ್ರೋಫಿ ಸ್ವೀಕರಿಸಿ ಮಾತನಾಡುವ ಸಂದರ್ಭದಲ್ಲಿ ಅವರಿಗೆ ದುಃಖ ತಡೆಯಲಾಗಲಿಲ್ಲ. ಮರ‌್ರೆ ಅಳುವುದನ್ನು ನೋಡಿ ಗ್ಯಾಲರಿಯಲ್ಲಿದ್ದ ಅವರ ಗೆಳತಿ ಕಿಮ್ ಸೀರ್ಸ್‌ ಕೂಡಾ ಅಳುತ್ತಿದ್ದರು. ಮಾತ್ರವಲ್ಲ ಅಲ್ಲಿ ನೆರೆದ ಹಲವು ಪ್ರೇಕ್ಷಕರ ಕಣ್ಣುಗಳೂ ತೇವಗೊಂಡವು. ಪ್ರಶಸ್ತಿ ಜಯಿಸಿದ ಫೆಡರರ್ ಕೂಡಾ ಈ ದೃಶ್ಯವನ್ನು ನೋಡಿ ಕೆಲಹೊತ್ತು ಭಾವುಕರಾಗಿದ್ದರು.ಭಾನುವಾರ ನಡೆದ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ಕ್ರೀಡಾಭಿಮಾನಿಗಳು ಹೆಚ್ಚಿನ ಮಹತ್ವ ನೀಡಿದ್ದರು. ಏಕೆಂದರೆ ಕಳೆದ 76 ವರ್ಷಗಳಲ್ಲಿ ಇಂಗ್ಲೆಂಡ್‌ನ ಯಾವುದೇ ಆಟಗಾರ ಇಲ್ಲಿ ಪ್ರಶಸ್ತಿ ಜಯಿಸಿಲ್ಲ. ಮರ‌್ರೆ ಐತಿಹಾಸಿಕ ಸಾಧನೆ ಮಾಡುವರು ಎಂದು ಹೆಚ್ಚಿನವರು ಭಾವಿಸಿದ್ದರು. ಆದರೆ ಫೆಡರರ್ ಅದಕ್ಕೆ ಅವಕಾಶ ನೀಡಲಿಲ್ಲ.`ಪ್ರಶಸ್ತಿ ಗೆಲ್ಲಲು ಇದು ನನಗೆ ಅತ್ಯುತ್ತಮ ಅವಕಾಶ ಎಂದು ಭಾವಿಸಿದ್ದೆ. ಏಕೆಂದರೆ ಫೆಡರರ್‌ಗೆ 30 ವರ್ಷ ವಯಸ್ಸು ದಾಟಿದೆ. ಆದರೆ ಅವರು ವಯಸ್ಸಿಗೂ ಮೀರಿದ ಪ್ರದರ್ಶನ ನೀಡಿದರು. ಪ್ರಶಸ್ತಿ ಗೆಲ್ಲಲು ಫೆಡರರ್ ಅರ್ಹರಾಗಿದ್ದಾರೆ~ ಎಂದು ಮರ‌್ರೆ ನುಡಿದಿದ್ದಾರೆ.ಫೈನಲ್‌ನಲ್ಲಿ ಸೋಲು ಅನುಭವಿಸಿದರೂ ಮರ‌್ರೆ ಅವರಿಗೆ ಇಂಗ್ಲೆಂಡ್‌ನ ಎಲ್ಲೆಡೆ `ಹೀರೊ~ ಪಟ್ಟ ಲಭಿಸಿದೆ. ಫೈನಲ್ ಪಂದ್ಯ ವೀಕ್ಷಿಸಲು15 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸೇರಿದ್ದರು. ರಾಯಲ್ ಬಾಕ್ಸ್‌ನಲ್ಲಿರುವ ಗಣ್ಯರು ಹಾಗೂ ಪ್ರೇಕ್ಷಕರನ್ನುದ್ದೇಶಿಸಿ ಮರ‌್ರೆ, `ನಿಮ್ಮನ್ನು ನೋಡಲು ಸಾಧ್ಯವಾಗುತ್ತಿಲ್ಲ. ನನಗೆ ಅಳು ಬರುತ್ತಿದೆ. ಎಲ್ಲರಿಗೂ ಕೃತಜ್ಞತೆಗಳು~ ಎಂದರು.ಇಲ್ಲಿ ಏಳನೇ ಪ್ರಶಸ್ತಿ ಗೆದ್ದು ಪೀಟ್ ಸ್ಯಾಂಪ್ರಾಸ್ ದಾಖಲೆ ಸರಿಗಟ್ಟಿದ ಫೆಡರರ್ ಎದುರಾಳಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. `ಮರ‌್ರೆ ಖಂಡಿತವಾಗಿಯೂ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವರು. ಕೇವಲ ಒಂದಲ್ಲ, ಹಲವು ಪ್ರಶಸ್ತಿಗಳನ್ನು ಗೆಲ್ಲುವ ಸಾಮರ್ಥ್ಯ ಅವರಿಗಿದೆ. ಅವರು ಕಠಿಣ ಪ್ರಯತ್ನ ನಡೆಸುತ್ತಿದ್ದಾರೆ~ ಎಂದು ಸ್ವಿಸ್ ಆಟಗಾರ ರೋಜರ್ ನುಡಿದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.