ಮಂಗಳವಾರ, ಏಪ್ರಿಲ್ 20, 2021
24 °C

ಅಭಿವೃದ್ಧಿಗಾಗಿ ಮತ ನೀಡಿ-ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಆರು ಬಾರಿ ಸಂಸದರಾಗಿ ಆಯ್ಕೆಯಾದರೂ ಜಿಲ್ಲೆಯ ಸಮಸ್ಯೆ ಪರಿಹರಿಸುವಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ವಿಫಲರಾಗಿದ್ದಾರೆ. ಕೇವಲ ಕೆಲವೇ ತಿಂಗಳಲ್ಲಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ನೂರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇಂಥ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತದಾರರು ಬಿಜೆಪಿಗೇ ಮತ ಕೊಡಬೇಕು’

-ಜಿಲ್ಲೆಯ ಬಂಗಾರಪೇಟೆಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಪರವಾಗಿ ಏರ್ಪಡಿಸಿದ್ದ ಪ್ರಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಾತನಾಡಿದ ಮುಖಂಡರೆಲ್ಲರ ಒಕ್ಕೊರಲ ನುಡಿ ಇದು.ಸಂಸದ ಅನಂತಕುಮಾರ್, ವೆಂಕಯ್ಯನಾಯ್ಡು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುನಿಯಪ್ಪ ಅವರ ‘ಹೊಂದಾಣಿಕೆ ರಾಜಕಾರಣ’ವನ್ನು ಕಟು ಶಬ್ದಗಳಲ್ಲಿ ಖಂಡಿಸಿದರು. ಕುಡಿಯುವ ನೀರಿನ ಸಮಸ್ಯೆ ಮುನಿಯಪ್ಪ ಅವರಿಗೆ ಇನ್ನೂ ಕಂಡಿಲ್ಲವೇಕೆ? ಸುಂಕ ರಹಿತ ರೇಷ್ಮೆ ಆಮದು ವಿಚಾರದಲ್ಲಿಯೂ ಮುನಿಯಪ್ಪ ಕಿವುಡಾಗಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.ನಂತರ ಅನಂತಕುಮಾರ್, ಮುನಿಯಪ್ಪ ಚೈನಾದ ಸಂಸದರೋ, ಭಾರತದ ಸಂಸದರೋ ಎಂಬ ಪ್ರಶ್ನೆಯೊಂದಿಗೆ ಮಾತಿಗಿಳಿದರು. ಮುನಿಯಪ್ಪನವರದು ಅಡ್ಜಸ್ಟ್‌ಮೆಂಟ್ (ಹೊಂದಾಣಿಕೆ) ರಾಜಕಾರಣ. ದೇವೇಗೌಡರೊಡನೆ ಒಳ ಒಪ್ಪಂದ ಮಾಡಿಕೊಳ್ಳುವುದು ಸಹಜ ಎಂಬಂತಾಗಿದೆ. ಬಿಜೆಪಿಯಲ್ಲಿ ಅಂಥ ಒಪ್ಪಂದಗಳಿಲ್ಲ. ಇದ್ದರೂ ಅದು ಮತದಾರರೊಂದಿಗೆ ಮಾತ್ರ ಎಂದರು.ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ಹಾಲು ಉತ್ಪಾದಕರಿಗೆ ಅನುಕೂಲವಾಗುವಂಥ ಕೆಲಸವನ್ನು ಮುನಿಯಪ್ಪ ಮಾಡಿಲ್ಲ. ಅವರು ಭಸ್ಮಾಸುರರಂತೆ. ಪಕ್ಷದೊಳಗೆ ಯಾವ ಮುಖಂಡರನ್ನೂ ಬೆಳೆಯಲು ಬಿಡುವುದಿಲ್ಲ. ಅಂಥ ಭಸ್ಮಾಸುರ-ಹೊಂದಾಣಿಕೆ ರಾಜಕಾರಣಕ್ಕೆ ಕೊನೆ ಹಾಡಿ ಎಂದು ಮನವಿ ಮಾಡಿದರು. ಕ್ಷೇತ್ರದ ಅಭಿವೃದ್ಧಿ ಬೇಕು ಎಂದರೆ ಬಿಜೆಪಿಗೆ ಮತ ಕೊಡಿ. ಕ್ಷೇತ್ರವನ್ನು ದುಃಸ್ಥಿತಿಗೆ ತಂದ ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತುಹಾಕಿ. ಚುನಾವಣೆಯಾದ ಕೂಡಲೇ ಕ್ಷೇತ್ರಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು. ನಟ ಸಾಯಿಕುಮಾರ್, ರಾಜ್ಯಸಭೆ ಸದಸ್ಯೆ ಹೇಮಮಾಲಿನಿ, ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿದರು.ನಿಂತರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತನಾಡುತ್ತಿದ್ದ ಸಮಯದಲ್ಲಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರ ಪಕ್ಕದಲ್ಲಿ ನಿಂತಿದ್ದರು. ಸಚಿವರಾದ ಜಗದೀಶ ಶೆಟ್ಟರ್, ಆರ್.ಅಶೋಕ್, ಶೋಭಾ ಕರಂದ್ಲಾಜೆ, ಶಾಸಕರಾದ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಡಿ.ಎಸ್.ವೀರಯ್ಯ, ಅರವಿಂದ ಲಿಂಬಾವಳಿ, ನಂದೀಶ ರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯ, ವೈ.ಸುರೇಂದ್ರಗೌಡ, ರಾಮರಾಜು, ಬೆಗ್ಲಿ ಸಿರಾಜ್, ಸುಕನ್ಯಾ, ರಾಜೇಶ್ವರಿ, ಪ್ರಮೀಳಾ, ವೇದಿಕೆಯಲ್ಲಿದ್ದರು. ಯಲ್ದೂರು ಪ್ರಭು, ಓಂ.ಶಕ್ತಿ ಚಲಪತಿ, ಕೆ.ಜಯಶಂಕರ್, ಸಂಜಯ್ ಜಾಧವ್ ಪಾಲ್ಗೊಂಡಿದ್ದರ್ವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.