ಗುರುವಾರ , ಮೇ 26, 2022
22 °C

ಅಭಿವೃದ್ಧಿಯೇ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ನಕ್ಸಲೀಯರ ವಿರುದ್ಧ ಕಾರ್ಯಾಚರಣೆಯ ಸಂದರ್ಭದಲ್ಲಿ ಇನ್ನೊಬ್ಬ ಪೊಲೀಸ್ ಯೋಧನ ಬಲಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರೊಂದಿಗೆ ನಡೆದ ಮೊದಲ ಮುಖಾಮುಖಿಯಲ್ಲಿಯೇ ನಕ್ಸಲೀಯರು ಪಶ್ಚಿಮಘಟ್ಟದಲ್ಲಿ ಸಶಕ್ತವಾಗಿರುವುದು ಬಯಲಿಗೆ ಬಂದಿದೆ. ನಕ್ಸಲರಿಗೆ ಎದುರಾಗಿ ಕಾರ್ಯಾಚರಣೆಯಲ್ಲಿದ್ದ ಮೃತ ಯೋಧನ ಬೆನ್ನ ಹಿಂದೆ ಗುಂಡು ತೂರಿ ಬಂದ ಹಿನ್ನೆಲೆಯಲ್ಲಿ ಇದು ನಕ್ಸಲರಿಂದ ಆದ ದಾಳಿಯೋ, ಕಾರ್ಯಾಚರಣೆಯಲ್ಲಿದ್ದ ಪೊಲೀಸರಿಂದ ಆಕಸ್ಮಿಕವಾಗಿ ತೂರಿದ ಗುಂಡಿನ ಪರಿಣಾಮವೋ ಎಂಬುದು ಖಚಿತವಾಗಿಲ್ಲ. ಘಟನೆ ನಡೆದ ಸ್ಥಳವನ್ನು ಉನ್ನತ ತನಿಖಾಧಿಕಾರಿಗಳು ಸರಿಯಾಗಿ ಪರಿಶೀಲಿಸಿದರೆ ಸತ್ಯಾಂಶ ಹೊರಬಂದೀತು. ಮೃತ ಯೋಧನಿಗೆ ನೀಡಲಾಗಿದ್ದ ಬಂದೂಕು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಲಿಲ್ಲ ಎಂಬ ಆಘಾತಕಾರಿ ಸಂಗತಿಯೂ ಈ ಸಂದರ್ಭದಲ್ಲಿಯೇ ಕೇಳಿಬಂದಿದೆ. ಈ ಅಂಶಗಳು ನಕ್ಸಲ್ ವಿರೋಧಿ ಹೋರಾಟದಲ್ಲಿ ಸರ್ಕಾರ ಹೆಚ್ಚಿನ ಸಿದ್ಧತೆಯಿಂದ ತೊಡಗಿಲ್ಲ ಎಂಬುದನ್ನು ಧ್ವನಿಸುತ್ತವೆ. ಆಧುನಿಕ ಶಸ್ತ್ರಗಳಿಂದ ಸಜ್ಜುಗೊಂಡ ನಕ್ಸಲರನ್ನು ಎದುರಿಸಲು ಯೋಧರಿಗೆ ಗುಂಡುನಿರೋಧಕ ಜಾಕೆಟ್ ಮತ್ತು ಅತ್ಯಾಧುನಿಕ ಶಸ್ತ್ರಗಳನ್ನು ಒದಗಿಸದಿರುವುದು ಇಲಾಖೆಯ ವೈಫಲ್ಯ. ಆದ್ದರಿಂದ ಈ ಹತ್ಯೆಗೆ ಇಲಾಖೆಯೂ ನೈತಿಕವಾಗಿ ಹೊಣೆಯಾಗಿದೆ. ಈ ಪ್ರಮಾದಕ್ಕೆ ಕಾರಣರಾದವರನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ರಾಜ್ಯದ ಮಲೆನಾಡು ಜಿಲ್ಲೆಗಳ ದಟ್ಟ ಅರಣ್ಯ ಪ್ರದೇಶಗಳಲ್ಲಿ ನಕ್ಸಲೀಯರು ನೆಲೆ  ಕಂಡುಕೊಳ್ಳಲು ಪ್ರಯತ್ನ ಆರಂಭಿಸಿದ ಮೇಲೆ ಪೊಲೀಸರೊಂದಿಗೆ ಹಲವು ಸಲ ಘರ್ಷಣೆಗಳಾಗಿವೆ. ಎಲ್ಲ ಸಂದರ್ಭಗಳಲ್ಲಿ ಸರ್ಕಾರ ವೀರಾವೇಶದ ಮಾತನ್ನು ಆಡಿದೆ. ಅವು ಯಾವುವೂ ಕಾರ್ಯರೂಪಕ್ಕೆ ಬಂದಿಲ್ಲ.

ದೇಶದ ಇತರ ರಾಜ್ಯಗಳಲ್ಲಿ ಇರುವಂತೆ ಭೂ ಸುಧಾರಣೆ ವೈಫಲ್ಯ, ಸಂಪತ್ತಿನ ಅಸಮಾನ ಹಂಚಿಕೆಯಂಥ ಸಮಸ್ಯೆಗಳು ರಾಜ್ಯದಲ್ಲಿ ನಕ್ಸಲೀಯರ ಸಮಸ್ಯೆ ತಲೆದೋರುವುದಕ್ಕೆ ಕಾರಣವಲ್ಲ. ದಕ್ಷಿಣ ಭಾರತದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ನಕ್ಸಲೀಯರಿಗೆ ಪಶ್ಚಿಮಘಟ್ಟ ಪ್ರದೇಶದ ರಾಷ್ಟ್ರೀಯ ಉದ್ಯಾನಗಳು ಆಕರ್ಷಕವಾಗಿ ಕಂಡಿರುವುದು ಹಲವು ವರ್ಷಗಳಲ್ಲಿ ಕಂಡುಬಂದಿರುವ ಬೆಳವಣಿಗೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ದಟ್ಟ ಕಾಡಿನಲ್ಲಿ ನೆಲೆಸಿರುವ ಆದಿವಾಸಿ ಸಮುದಾಯಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸಂಪರ್ಕ, ಶಾಲೆ, ಆಸ್ಪತ್ರೆಯಂಥ ಮೂಲ ಅಗತ್ಯಗಳನ್ನು ಒದಗಿಸುವ ಪ್ರಾಥಮಿಕ ಕರ್ತವ್ಯವನ್ನು ಸರ್ಕಾರ ನಿರ್ವಹಿಸದಿದ್ದರೆ ಈ ಸಮುದಾಯ ಆಡಳಿತ ವ್ಯವಸ್ಥೆಯ ವಿರುದ್ಧ ವಿಶ್ವಾಸ ಕಳೆದುಕೊಳ್ಳುವುದು ಸಹಜ. ಆದಿವಾಸಿಗಳಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಕಿರುಕುಳ ಮತ್ತು ನಾಗರಿಕ ಸೌಲಭ್ಯಗಳ ನಿರಾಕರಣೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸ್ಥಳೀಯರ ವಿಶ್ವಾಸ ಗಳಿಸುವ ನಕ್ಸಲೀಯರ ಪ್ರಯತ್ನವನ್ನು ಸರ್ಕಾರ ಅಭಿವೃದ್ಧಿ ಕಾರ್ಯಗಳ ಮೂಲಕವೇ ಎದುರಿಸುವುದು ಅನಿವಾರ್ಯ. ಅಂಥ ಕೆಲಸ ಇದುವರೆಗೂ ಪ್ರಾಮಾಣಿಕವಾಗಿ ನಡೆದಿಲ್ಲ. ಅರಣ್ಯವಾಸಿ ಆದಿವಾಸಿಗಳು, ಕಾಡಂಚಿನ ಶ್ರಮಜೀವಿಗಳಿಗೆ ಸರ್ಕಾರ ಮತ್ತು ಸ್ಥಳೀಯ ಬಲಿಷ್ಠರಿಂದ ಆಗುತ್ತಿರುವ ಅನ್ಯಾಯ ನಿವಾರಣೆಗೆ ಸಶಸ್ತ್ರ ಹೋರಾಟ ಅಗತ್ಯವೆಂದು ತಪ್ಪಾಗಿ ನಂಬಿರುವ ಸ್ಥಳೀಯ ನಕ್ಸಲೀಯ ಯುವಕ ಯುವತಿಯರು ಹಿಂಸೆಯ ಹಾದಿಯನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಬೇಕು. ಪ್ರಜಾಸತ್ತೆಯ ವ್ಯವಸ್ಥೆಯಲ್ಲಿ  ಹಿಂಸೆಗೆ ಆಸ್ಪದವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.