ಭಾನುವಾರ, ಮೇ 9, 2021
25 °C

ಅಭಿವೃದ್ಧಿ: ಆತ್ಮವಿಮರ್ಶೆಗೆ ಸಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪಂಚಾಯತ್‌ರಾಜ್ ವ್ಯವಸ್ಥೆಯು ಕಾಯ್ದೆ ಪುಸ್ತಕದಲ್ಲಿ ಇರುವಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆಯೇ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೆ ಇದು ಸಕಾಲ ಎಂದು ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಹೇಳಿದರು.ಅವರು ಮಂಗಳವಾರ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರಿಯ ಪಂಚಾಯತ್‌ರಾಜ್ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ದುರ್ಬಲ ವರ್ಗದವರ ಆರ್ಥಿಕ ಚೈತನ್ಯ ಕಾರ್ಯಕ್ರಮಗಳ ಅನುಷ್ಠಾನದಿಂದ ಮೊದಲ್ಗೊಂಡು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿ ಇಲಾಖೆಯ ಗುರಿಯಾಗಿರುವುದರಿಂದ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡುವ ಜವಾಬ್ದಾರಿ ಇಂದಿನ ಜನಪ್ರತಿನಿಧಿಗಳ ಮೇಲಿದೆ ಎಂದರು.ಪಂಚಾಯತ್‌ರಾಜ್ ವ್ಯವಸ್ಥೆಯ ಜನಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಸಮುದಾಯದ ಹಿತಕ್ಕಾಗಿ ಕೆಲಸ ಮಾಡಿದಾಗ ಕಾಯ್ದೆ ಇನ್ನಷ್ಟು ಬಲಗೊಳ್ಳುತ್ತದೆ ಎಂದ ಅವರು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜನತೆಯ ಪಾಲ್ಗೊಳ್ಳುವಿಕೆ ಅಗತ್ಯ ಎಂದರು. ಪಂಚಾಯತ್‌ರಾಜ್  ವ್ಯವಸ್ಥೆಯ ಯಶಸ್ಸು ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕುವುದರಲ್ಲಿ ಅಡಗಿದೆ ಎಂದರು.ಮುಖ್ಯ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀಪತಿ ಕಲ್ಲೂರಾಯ, ಭಾರತದ ಅಭಿವೃದ್ಧಿಗೆ ಪಂಚಾಯತ್‌ರಾಜ್ ಇಲಾಖೆಯ ಕೊಡುಗೆ ಅನನ್ಯ ಎಂದರು.

ಸರ್ಕಾರದಿಂದ ಲಭ್ಯವಾದ ಅನುದಾನವನ್ನು ಹೇಗಾದರೂ ಖರ್ಚು ಮಾಡಬೇಕೆಂಬ ಇರಾದೆ ದ.ಕ. ಜಿ.ಪಂ.ಗೆ ಇಲ್ಲ.ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ದೇಶದ ಗಮನ ಸೆಳೆದು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಜಿ.ಪಂ.ನ ಕಾರ್ಯವೈಖರಿ ಇತರ ಪಂಚಾಯಿತಿಗಳಿಗೆ ಮಾದರಿ ಎಂದರು.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಕೆ.ಎನ್. ವಿಜಯಪ್ರಕಾಶ್ ಮಾತನಾಡಿ, ದ.ಕ. ಜಿಲ್ಲಾ ಪಂಚಾಯಿತಿ ಕೆಲವು ಸಂಕಲ್ಪಗಳನ್ನು  ಹೊಂದಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ನೆರವಿನೊಂದಿಗೆ ಮುಂದಿನ ವರ್ಷದ ಏಪ್ರಿಲ್ 24ರೊಳಗೆ ಕೆಲವು ಸಂಕಲ್ಪಗಳನ್ನಾದರೂ ಈಡೇರಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಸಲಾಗುವುದು ಎಂದರು.ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಯಶವಂತಿ ಆಳ್ವ ಮತ್ತು ಮಮತಾ ಗಟ್ಟಿ, ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಜೀರ್, ಉಪ ಕಾರ್ಯದರ್ಶಿ ಕೆ. ಶಿವರಾಮೇ ಗೌಡ ಇತರರು ಇದ್ದರು.

 

ಗೌರವದ ಸಂಭ್ರಮ

ಪಂಚಾಯತ್‌ರಾಜ್ ಸಂಸ್ಥೆಗಳ ಸಬಲೀಕರಣ ಮತ್ತು ಉತ್ತರದಾಯಿತ್ವವನ್ನು ಪ್ರೋತ್ಸಾಹಿಸುವ ಯೋಜನೆಯಡಿ ರಾಜ್ಯಕ್ಕೆ ಕಳೆದ ಸಾಲಿನಲ್ಲಿ ಎರಡನೇ ಬಹುಮಾನ ಬಂದಿದೆ. ನೈರ್ಮಲ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಗೆ ಪ್ರಶಸ್ತಿ ಬಂದಿದೆ.ಲಾಯಿಲಾ ಗ್ರಾಮ ಪಂಚಾಯಿತಿಗೆ ಗೌರವ ಗ್ರಾಮ ಪಂಚಾಯಿತಿ ಪ್ರಶಸ್ತಿ ಸಂದಿದೆ. ಉಡುಪಿ ಜಿಲ್ಲೆಯ ಮಡಾಮಕ್ಕಿ ಗ್ರಾಮ ಪಂಚಾಯಿತಿಗೂ ಪುರಸ್ಕಾರ ಸಂದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಪಂಚಾಯತ್‌ರಾಜ್ ದಿವಸಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.