ಮಂಗಳವಾರ, ಮೇ 11, 2021
25 °C

`ಅಭಿವೃದ್ಧಿ ಹೆಸರಲ್ಲಿ ಅನುದಾನ ದುರ್ಬಳಕೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ನೇಮಿರಾಜ್‌ನಾಯ್ಕ ಶಾಸಕರಾಗಿದ್ದ ಹಿಂದಿನ 5ವರ್ಷಗಳ ಆವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗಿದೆ. ಆದರೆ, ಅವರ ಕಾಲದಲ್ಲಿ ಕ್ಷೇತ್ರದ ಅಭಿವೃದ್ಧಿ ಕಡತಗಳಿಗೆ ಮಾತ್ರ ಸೀಮಿತವಾಗಿತ್ತು. ಆವರ ಕಾಲದ ಹುಸಿ ಅಭಿವೃದ್ಧಿಯ ದಾಖಲೆಗಳೊಂದಿಗೆ ನೇಮಿರಾಜ್‌ನಾಯ್ಕ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಸವಾಲೆಸೆದರು.ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಭಾನುವಾರ ವಕೀಲ ಅಕ್ಕಿ ಮಂಜುನಾಥ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.ಅಭಿವೃದ್ಧಿಯ ನೆಪದಲ್ಲಿ ಸಾರ್ವಜನಿಕರಿಂದ ತೆರಿಗೆಯ ರೂಪದಲ್ಲಿ ಸಂಗ್ರಹವಾಗಿರುವ ಹಣ ದುರ್ಬಳಕೆಯಾಗಿದೆ. ರಸ್ತೆ, ವಸತಿ ಮತ್ತು ನೀರಾವರಿ ಪುನಃಶ್ಚೇತನ ಕಾಮಗಾರಿಗಳಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಕ್ಷೇತ್ರದ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿದ ಫಲವಾಗಿ ನೇಮಿರಾಜ್‌ನಾಯ್ಕ ಕ್ಷೇತ್ರದ ಜನತೆಯಿಂದ ತಿರಸ್ಕೃತರಾಗಿದ್ದಾರೆ ಎಂದು ಟೀಕಿಸಿದರು.ರಾಜ್ಯದ ಮುಖ್ಯಮಂತ್ರಿಯಾಗಿರುವ ಹಿಂದುಳಿದ ವರ್ಗಗಳ ಜನತೆಯ ಅಭಿವೃದ್ಧಿಯ ಕಾಳಜಿ ಹೊಂದಿರುವ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ ಅವರ ಜೊತೆಗಿನ ನನ್ನ ಉತ್ತಮ ಸ್ನೇಹ ಬಾಂಧವ್ಯ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಿದರು.್ಙ 4.60 ಕೋಟಿ ಅನುದಾನದಲ್ಲಿ ಬ್ಯಾಸಿಗದೇರಿ- ತಂಬ್ರಹಳ್ಳಿ, ಕನ್ನಿಹಳ್ಳಿ- ಕೋಗಳಿ ಮತ್ತು ತಂಬ್ರಹಳ್ಳಿ- ಕೊಂಡೇನಹಳ್ಳಿ ರಸ್ತೆ ಅಭಿವೃದ್ಧಿಗೊಳಿಸುವ ಜೊತೆಗೆ ತಂಬ್ರಹಳ್ಳಿ ಉತ್ತರ ಭಾಗ 2ನೇ ಹಂತದ ಏತ ನೀರಾವರಿ ಯೋಜನೆ ಸಹಿತ ಒಟ್ಟು 5 ಏತ ನೀರಾವರಿ ಯೋಜನೆಗಳ ಪುನಃಶ್ಚೇತನ ಕಾಮಗಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.ದಾನಿ ಅಕ್ಕಿ ಕೊಟ್ರಪ್ಪ ಮಾತನಾಡಿದರು. ಬಂಡೆ ರಂಗನಾಥ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಗ್ರಾ.ಪಂ.ವತಿಯಿಂದ ಸನ್ಮಾನ ಸ್ವೀಕರಿಸಿದ ಶಾಸಕ ಭೀಮಾನಾಯ್ಕ, 90 ಫಲಾನುಭವಿಗಳಿಗೆ ಮೀನು ಹಿಡಿಯುವ ಬಲೆ ಮತ್ತು ರಕ್ಷಣಾ ಕವಚಗಳನ್ನು ವಿತರಿಸಿದರು.ಜಿ.ಪಂ. ಉಪಾಧ್ಯಕ್ಷೆ ಮಮತಾ ಸುರೇಶ್, ಸದಸ್ಯ ರೋಗಾಣಿ ಹುಲುಗಪ್ಪ, ಮಾಜಿ ಸದಸ್ಯ ಅಕ್ಕಿ ತೋಟೇಶ್, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾ.ಪಂ. ಮಾಜಿ ಅಧ್ಯಕ್ಷ ಹನಮಂತಪ್ಪ, ಸದಸ್ಯ ಉಪ್ಪಾರ ಬಾಲು, ಮುಖಂಡರಾದ ಎಚ್.ಎಂ. ಚೋಳರಾಜ್, ಚಿಂತ್ರಪಳ್ಳಿ ದೇವೇಂದ್ರಪ್ಪ, ಎಂ.ಜಿ. ಯಮುನಪ್ಪ, ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ಗಂಗಮ್ಮ, ಖಾದರ್‌ಭಾಷಾ, ನಿಂಗಮ್ಮ ಉಪಸ್ಥಿತರಿದ್ದರು.ಶಿಕ್ಷಕ ಎಂ.ಎಸ್. ಕಲ್ಗುಡಿ, ಎಚ್.ಬಿ. ಗಂಗಾಧರಗೌಡ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷ ಬಣಕಾರ ಕೊಟ್ರೇಶ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.