ಭಾನುವಾರ, ಮಾರ್ಚ್ 7, 2021
28 °C
ಕಲಾಪ

ಅಭಿವ್ಯಕ್ತಿ ಕೇಂದ್ರಿತ ಚಿತ್ರಕಲಾವಿದ ಇಳಂಗೊ

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಅಭಿವ್ಯಕ್ತಿ ಕೇಂದ್ರಿತ ಚಿತ್ರಕಲಾವಿದ ಇಳಂಗೊ

ಬಳಪ ಹಿಡಿದು ಹಲಗೆಯ ಮೇಲೆ ಗೀಚುವ ವಯಸ್ಸಿನಿಂದಲೇ ಗೆರೆಗಳ ಬಗ್ಗೆ ಪ್ರೀತಿ ಬೆಳೆಸಿಕೊಂಡವರು ಎ.ವಿ.ಇಳಂಗೊ. ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ ಚಿತ್ತಾರ ರೂಪ ನೀಡಬೇಕು ಎಂದು ಅವರ ಮನಸ್ಸು ಹಾತೊರೆದಾಗೆಲ್ಲಾ ಏಕಲವ್ಯನಂತೆ ಚಿತ್ರ ಮೂಡಿಸಲು ಅಣಿಯಾಗಿಬಿಡುತ್ತಿದ್ದರು. ಮನಸು ಬಯಸುವ ಕಲಾದಾರಿಯಲ್ಲಿ ನಡೆದ ಇಳಂಗೊ ಪೇಂಟರ್‌ ಹಾಗೂ ಶಿಲ್ಪಿಯಾಗಿ ಗುರುತಿಸಿಕೊಂಡ ಕಲಾವಿದ.

ತಮಿಳುನಾಡಿನ ಗೋಬಿಚೆಟ್ಟಿಪಾಳ್ಯದಲ್ಲಿ ಜನಿಸಿದ ಇಳಂಗೊ ನಗರದ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಪಿಯುಸಿ, ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶೈಕ್ಷಣಿಕವಾಗಿ ಗಣಿತಶಾಸ್ತ್ರವನ್ನು ಆಯ್ದುಕೊಂಡಿದ್ದ ಅವರು ಬದುಕಿನ ಲೆಕ್ಕಾಚಾರದಲ್ಲಿ ಕಲೆಯನ್ನೇ ವೃತ್ತಿಯಾಗಿ ಆಯ್ದುಕೊಂಡರು.ಕಳೆದ ನಲವತ್ತು ವರ್ಷಗಳಿಂದ ಕಲಾಸೇವೆಗೆ ಸಮರ್ಪಿಸಿಕೊಂಡಿರುವ ಇಳಂಗೊ ಗುರುವಿಲ್ಲದೆಯೂ ಗುರುವಾದವರು. ಮದ್ರಾಸ್‌ನಲ್ಲಿ ‘ಇಳಂಗೊ ಆರ್ಟ್‌ ಸ್ಪೇಸ್‌’ ಎನ್ನುವ ಪೇಂಟಿಂಗ್‌ ಸ್ಟುಡಿಯೊ ಹೊಂದಿರುವ ಅವರು ಅನೇಕರಿಗೆ ಕಲಾದಾರಿಯ ವಿವಿಧ ಪ್ರಕಾರಗಳನ್ನು ಕಲಿಸಿಕೊಡುತ್ತಾರೆ. ಕಲಾವಿದರಾದ ಹೆಬ್ಬಾರ್‌, ಶ್ರೀನಿವಾಸುಲು, ಎಂ.ಎಫ್‌.ಹುಸೇನ್‌, ಮುಂತಾದವರಿಂದ ಸ್ಫೂರ್ತಿ ಪಡೆದ ಅವರು ಆಯಿಲ್‌ ಪೇಂಟಿಂಗ್‌, ಆಕ್ರಿಲಿಕ್‌, ಚಾರ್ಕೋಲ್‌, ಶಿಲ್ಪ ನಿರ್ಮಾಣ ಹೀಗೆ ವಿವಿಧ ಕಲಾಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದಾರೆ. ಆದರೂ ಗೆರೆಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಇಳಂಗೊ ಲಿರಿಕಲ್‌ ಅಬ್‌ಸ್ಟ್ರಾಕ್ಟ್‌ ಆರ್ಟ್‌ ಇಷ್ಟದ ಕಲಾಪ್ರಕಾರ ಎನ್ನುತ್ತಾರೆ.ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಕ್ಷೇತ್ರದಲ್ಲಿರುವ ಇಳಂಗೊ ದೇಶವಿದೇಶಗಳಲ್ಲಿ ನೂರಾರು ಚಿತ್ರಕಲಾ ಪ್ರದರ್ಶನವನ್ನು ಮಾಡಿದ್ದಾರೆ. ಅಮೆರಿಕ, ಫ್ರಾನ್ಸ್‌, ಸಿಂಗಪುರ, ಮಲೇಷ್ಯಾ, ಲಂಡನ್‌, ದುಬೈ, ಅಬುದಾಬಿ ಹೀಗೆ ವಿವಿಧ ದೇಶಗಳಲ್ಲಿ ಇವರ ಕಲೆಗೆ ಮೆಚ್ಚುಗೆ ದೊರೆತಿದೆ. ಇತ್ತೀಚೆಗಷ್ಟೇ ಅವರು ‘ಕಮಿಂಗ್‌ ಹೋಮ್‌ ಟು ಅರ್ತ್‌ ಸ್ಪೇಸ್‌, ಲೈನ್‌, ಫಾರ್ಮ್‌’ ಎನ್ನುವ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ.ಕಲೆಯನ್ನೇ ಮೆಚ್ಚಿ ಅದೇ ದಾರಿಗೆ ನಡೆದ ಇಳಂಗೊ ಅವರಿಗೆ ಪ್ರೋತ್ಸಾಹದ ಬೆನ್ನೆಲುಬಾಗಿ ನಿಂತಿದ್ದು ಅವರ ಹೆಂಡತಿ ಚಂದ್ರಾ. ಫ್ರೆಂಚ್‌ ಭಾಷಾ ಪ್ರೊಫೆಸರ್‌ ಆಗಿದ್ದ ಅವರು ಮನೆಯ ಜವಾಬ್ದಾರಿ ಹೊತ್ತು, ಪತಿ ಕಲಾ ಕ್ಷೇತ್ರದಲ್ಲೇ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಹಕರಿಸಿದರು. ಕಳೆದ ಐದು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಮಡದಿಯ ನೆನಪಿನಲ್ಲಿ ಚಂದ್ರಾ ಇಳಂಗೊ ವಿಷ್ಯುವಲ್ ಆರ್ಟ್‌ ಫೌಂಡೇಷನ್‌ ಪ್ರಾರಂಭಿಸಿದ್ದು, ಅವರ ಹೆಸರಿನಲ್ಲಿ ಪ್ರತಿವರ್ಷ ದಕ್ಷಿಣ ಭಾರತ ಕಲೋತ್ಸವ ನಡೆಯುತ್ತದೆ. ಯುವ ಜನರಿಗೆ ಉತ್ತಮ ವೇದಿಕೆ ಕಲ್ಪಿಸುವ ಈ ಕಲಾ ಉತ್ಸವದಲ್ಲಿ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.

*

ನಗರದಲ್ಲಿ ಇಳಂಗೊ ಚಿತ್ರ ಪ್ರದರ್ಶನ

ಗೆರೆಗಳನ್ನೇ ಮುಖ್ಯವಾಗಿರಿಸಿಕೊಂಡು ವಿವಿಧ ಬಗೆಯ ಚಿತ್ರಗಳನ್ನು ರಚಿಸಿ ಬಣ್ಣಗಳ ಮೆರುಗು ನೀಡುವ ಇಳಂಗೊ ಅವರ ಚಿತ್ರಕಲಾ ಪ್ರದರ್ಶನ ನಗರದ ಯು.ಬಿ.ಸಿಟಿಯಲ್ಲಿ ಈಗಾಗಲೇ ಪ್ರಾರಂಭವಾಗಿದ್ದು ಜನವರಿ 30ರವರೆಗೆ ನಡೆಯಲಿದೆ. ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ನಡೆಯಲಿದೆ.

‘ಇಂಕ್‌ ಆನ್‌ ಪೇಪರ್‌ ವಿತ್‌ ಚೈನಿಸ್‌ ಬ್ರಶ್‌’ ಕಲಾ ಪ್ರಕಾರದ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಇಳಂಗೊ ಅವರ ರಚನೆಯ ಪ್ರತಿ ಚಿತ್ರವೂ ವಿಭಿನ್ನವಾಗಿದ್ದು ಮನಸೆಳೆಯುವಂತಿವೆ. ಮನಸ್ಸಿನ ಭಾವನೆಗಳನ್ನು ಕುಂಚದ ಮೂಲಕ ಇಳಿಸುವ ಅವರ ಚಿತ್ರಗಳಲ್ಲಿ ಬಣ್ಣದ ಭರಾಟೆಯಿಲ್ಲ. ಆದರೆ ಮೊದಲ ನೋಟಕ್ಕೆ ಹಲವು ಅರ್ಥಗಳನ್ನು ಉಕ್ಕಿಸುವ ಆಕರ್ಷಣೆಯಿದೆ.ವಿಶ್ರಾಂತಿ ಪಡೆಯುತ್ತಿರುವ ಮಹಿಳೆ, ಮುರಳಿಗಾನದಲ್ಲಿ ತಲ್ಲೀನನಾದ ಮೇಘಶ್ಯಾಮ, ಒಡಿಸ್ಸಿ ನೃತ್ಯ ಕಲಾವಿದರು, ಜಾನಪದ ನೃತ್ಯದಲ್ಲಿ ತೊಡಗಿಕೊಂಡ ಹಳ್ಳಿ ಮಹಿಳೆಯರು, ರಾಸಲೀಲೆ, ಬುಲ್‌ ಸಿರೀಸ್‌ ಹೀಗೆ ವಿವಿಧ ಚಿತ್ತಾರಗಳನ್ನು ಮೂಡಿಸಿರುವ ಅವರ ಕಲಾಕೃತಿಗಳಲ್ಲಿ ತಿದ್ದಿ ತೀಡಿದ ಹಾವಭಾವಗಳಿಲ್ಲ. ಆದರೂ ಅರ್ಥ ಹೊಮ್ಮಿಸುವಲ್ಲಿ ಆ ಚಿತ್ರಗಳು ಯಶ ಕಂಡಿವೆ. ಕಪ್ಪು–ಬಿಳಿ, ಕೆಂಪು, ನೀಲಿ, ಹಳದಿ ಬಣ್ಣಗಳನ್ನು ಚಿತ್ರಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ.‘ರೇಖೆಗಳೇ ನನ್ನ ಚಿತ್ರಕಲೆಯ ಶಕ್ತಿ. ಭಾವನೆಗಳನ್ನು ಕೂಡ ನಾನು ರೇಖೆಗಳ ಮೂಲಕ ತಿದ್ದಲು ಬಯಸುತ್ತೇನೆ. ದೇವಸ್ಥಾನವೇ ಇರಲಿ, ಬೇಲೂರು ಹಳೆಬೀಡಿನ ಚಿತ್ರ ವೈವಿಧ್ಯವೇ ಇರಲಿ ನನ್ನ ಕಣ್ಣಿಗೆ ಕಾಣುವುದು ಇಷ್ಟವಾಗುವುದು ಅಲ್ಲಿರುವ ರೇಖೆಗಳು. ಭಾರತೀಯ ಕಲಾಪ್ರಕಾರಗಳಲ್ಲೂ ಹೆಚ್ಚಾಗಿ ರೇಖೆಯಾಧಾರಿತ ಚಿತ್ರಗಳಿವೆ. ಬದುಕಿನ ಆಗು ಹೋಗುಗಳು, ಅನುಭವಗಳನ್ನೇ ನಾನು ಚಿತ್ರಗಳಲ್ಲಿ ಮೂಡಿಸುತ್ತೇನೆ’ ಎನ್ನುತ್ತಾರೆ ಇಳಂಗೊ.ಜಾನಪದ ನೃತ್ಯ, ಬುಲ್‌ ಸಿರೀಸ್‌, ವುಮನ್‌ ಸಿರೀಸ್‌, ಒಡಿಸ್ಸಿ ನೃತ್ಯಾಧಾರಿತ ವಿಷಯವನ್ನಿಟ್ಟುಕೊಂಡೇ ಇಳಂಗೊ ಹೆಚ್ಚಿನ ಚಿತ್ರಗಳನ್ನು ರಚಿಸುತ್ತಾರೆ. ‘ನನ್ನ ಚಿತ್ರಗಳು ಕೆಲವೇ ಕೆಲವು ವಿಷಯಗಳನ್ನು ಮಾತ್ರ ಆಧರಿಸಿರುತ್ತದೆ. ಆದರೆ ಅದನ್ನು ಬಿಂಬಿಸುವ ರೀತಿ ಬದಲಾಗುತ್ತಾ ಸಾಗುತ್ತದೆ. ಮನುಷ್ಯ ಬದುಕಿನ ವಿವಿಧ ಘಟ್ಟಗಳಲ್ಲಿ ಬದಲಾದ ಭಾವನೆಗಳನ್ನು ಹೊಂದುತ್ತಾ ಹೋಗುತ್ತಾನೆ. ಒಮ್ಮೆ ಸಂತೋಷ, ಇನ್ನೊಮ್ಮೆ ಸಿಟ್ಟು, ಮತ್ತೊಮ್ಮೆ ಸೋಲು. ಹೀಗೆ ಬದಲಾದ ಗತಿಯನ್ನು ಚಿತ್ರಗಳಲ್ಲಿ ಹಿಡಿದಿಡುವ ಪ್ರಯತ್ನ ನನ್ನದು’ ಎಂದು ಅವರು ವಿವರಿಸುತ್ತಾರೆ.ಕಲಾವಿದ ರಚಿಸಿದ ಚಿತ್ರ ಇನ್ನೊಬ್ಬರ ಮನಸ್ಸಿನಲ್ಲಿ ಅರ್ಥವಾಗಿ ಹೊಮ್ಮಬೇಕು ಎಂದು ಆಶಿಸಿ ಚಿತ್ರ ನಿರ್ಮಾಣಕ್ಕೆ ಮುಂದಾಗುವ ಇಳಂಗೊ ಭಾರತೀಯ ಕಲೆ, ಸಂಸ್ಕೃತಿಯನ್ನೂ ಎತ್ತಿ ಹಿಡಿಯುವ ಅಭಿರುಚಿ ತೋರುತ್ತಾರೆ. ಭಾವ, ಸೌಂದರ್ಯಪ್ರಜ್ಞೆ, ಬಣ್ಣಗಳನ್ನು ಬಳಸಿ ಕಲಾತ್ಮಕ ವಿನ್ಯಾಸ ರಚಿಸುವುದೇ ಪೇಂಟಿಂಗ್‌ ಎನ್ನುವ ಇಳಂಗೊ ಸಮಾಜ ಸಂಸ್ಕೃತಿ, ಸಮಯ, ಅವಕಾಶಗಳನ್ನು ಆಧರಿಸಿಯೇ ದಿನನಿತ್ಯ ಬದಲಾಗುತ್ತಿರುತ್ತದೆ.ಹಾಗೆಯೇ ಮನಸ್ಸಿನಲ್ಲಿರುವ ವಿಷಯಕ್ಕೆ ಪೇಂಟ್‌ ಮೂಲಕ ರೂಪ ಕೊಟ್ಟು ಬದುಕಿನ ಕಥೆ ಹೇಳುವ ಚಿತ್ರವಾಗಿಸುತ್ತಾರೆ ಇಳಂಗೊ. ‘ಅನುಭವ, ಬದುಕಿದ ರೀತಿ, ಗಳಿಸಿದ ಜ್ಞಾನದಿಂದ ಕ್ರೀಯಾಶೀಲತೆ ಮೂಡುತ್ತದೆ. ಅದೇ ಕ್ರಿಯಾಶೀಲತೆ ಕಲಾವಿದನ ಕುಂಚದಿಂದ ವಿವಿಧ ಚಿತ್ರವಾಗಿ ಹೊರಹೊಮ್ಮುತ್ತದೆ’ ಎನ್ನುತ್ತಾರೆ ಅವರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.