ಗುರುವಾರ , ಮಾರ್ಚ್ 4, 2021
19 °C
ಕ್ರಿಕೆಟ್‌: ಮಿಂಚಿದ ವೇಗಿ ಈಶ್ವರ್‌ ಪಾಂಡೆ

ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ

ವಂಗಾರೆ, ನ್ಯೂಜಿಲೆಂಡ್‌ (ಪಿಟಿಐ): ಈಶ್ವರ್‌ ಪಾಂಡೆ (42ಕ್ಕೆ3) ಅವರ ಉತ್ತಮ ಬೌಲಿಂಗ್‌ ದಾಳಿ ನೆರವಿನಿಂದ ಭಾರತ ತಂಡದವರು ಭಾನುವಾರ ಇಲ್ಲಿ ಆರಂಭವಾದ ಎರಡು ದಿನಗಳ ಅಭ್ಯಾಸ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಇಲೆ ವೆನ್ ಎದುರು ಮೇಲುಗೈ ಸಾಧಿಸಿದ್ದಾರೆ.ಕೋಬ್ಹಮ್‌ ಓವಲ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 262 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್‌ ಆರಂಭಿಸಿರುವ ಪ್ರವಾಸಿ ತಂಡದವರು ಮೊದಲ ದಿನದಾಟದ ಅಂತ್ಯಕ್ಕೆ 14 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 41 ರನ್‌ ಗಳಿಸಿದ್ದಾರೆ.ಉತ್ತಮ ಆರಂಭ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಮುಂದಾ ದ ನ್ಯೂಜಿಲೆಂಡ್‌ ಇಲೆವೆನ್‌ಗೆ ಉತ್ತಮ ಆರಂಭ ಲಭಿಸಿತು. ಆರಂಭಿಕ ಬ್ಯಾಟ್ಸ್‌ಮ ನ್‌ಗಳಾದ ಜಾರ್ಜ್‌ ವರ್ಕರ್‌ ಹಾಗೂ ರಾಬರ್ಟ್‌ ಒ’ಡೊನೆಲ್‌ ಮೊದಲ ವಿಕೆಟ್‌ಗೆ 81 ರನ್‌ ಸೇರಿಸಿದರು. ಇವರಿಬ್ಬರು ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 124 ಎಸೆತ ಎದುರಿಸಿದ ಒ’ಡೊನೆಲ್‌ 13 ಬೌಂಡರಿಗಳ ಸಮೇತ 80 ರನ್‌ ಗಳಿಸಿದರು. ಆದರೆ ಈ ತಂಡದ ಮಧ್ಯಮ ಕ್ರಮಾಂಕದ ಮೇಲೆ ಪ್ರವಾಸಿ ವೇಗಿಗಳು ಪಾರಮ್ಯ ಮೆರೆದರು.ಒಂದು ಹಂತದಲ್ಲಿ 2 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿದ್ದ ಆತಿಥೇಯರು ಒಮ್ಮೆಲೇ ಕುಸಿತ ಕಂಡರು. ಜೊನೊ ಹಿಕಿ (45; 7 ಬೌಂಡರಿ) ಮಾತ್ರ ಪ್ರತಿರೋಧ ತೋರಿದರು. ಅವರು  ಒ’ಡೊನೆಲ್‌ ಜೊತೆ ಮೂರನೇ ವಿಕೆಟ್‌ಗೆ 57 ರನ್‌ ಸೇರಿಸಿದರು. ಇಶಾಂತ್‌ ಶರ್ಮ, ಜಹೀರ್‌ ಖಾನ್‌ ತಲಾ ಎರಡು ವಿಕೆಟ್‌ ಪಡೆದರು. ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಕೂಡ ಎರಡು ವಿಕೆಟ್‌ ಕಬಳಿಸಿದರು.ಭಾರತ ತಂಡಕ್ಕೂ ಉತ್ತಮ ಆರಂಭ ಲಭಿಸಿದೆ. ಮುರಳಿ ವಿಜಯ್‌ ಹಾಗೂ ಶಿಖರ್‌ ಧವನ್‌ ಮೊದಲ ವಿಕೆಟ್‌ಗೆ 41 ರನ್‌ ಸೇರಿಸಿದ್ದಾರೆ. ದೋನಿ ಆಡದ ಕಾರಣ ರೋಹಿತ್‌ ಶರ್ಮ ತಂಡ ಮುನ್ನ ಡೆಸುತ್ತಿದ್ದಾರೆ. ಕೊಹ್ಲಿ, ರವೀಂದ್ರ ಜಡೇಜ ವಿಶ್ರಾಂತಿ ಪಡೆದಿದ್ದಾರೆ. ಭುವನೇಶ್ವರ್‌ ಕುಮಾರ್‌, ಮೊಹ ಮ್ಮದ್‌ ಶಮಿ  ಬೌಲಿಂಗ್‌ ಮಾಡುತ್ತಿಲ್ಲ. ಆದರೆ ಅವರು ಫೀಲ್ಡಿಂಗ್‌ ವೇಳೆ ಅಂಗಳ ದಲ್ಲಿ ಕಾಣಿಸಿಕೊಂಡರು. ಆಕ್ಲೆಂಡ್‌ನಲ್ಲಿ ಗುರುವಾರ ಆರಂಭವಾಗಲಿರುವ ಮೊದಲ ಟೆಸ್ಟ್‌ಗೆ ಸಿದ್ಧರಾಗಲು  ಭಾರತ ತಂಡದರು ಈ ಪಂದ್ಯ ಆಡುತ್ತಿದ್ದಾರೆ. ಏಕದಿನ ಸರಣಿಯಲ್ಲಿ 0–4ರಲ್ಲಿ ಸೋಲು ಕಂಡಿರುವ ಭಾರತಕ್ಕೆ ಟೆಸ್ಟ್‌ ಸರಣಿ ಮಹತ್ವದ್ದಾಗಿದೆ.ದಿನದಾಟದ ಬಳಿಕ ಪ್ರತಿಕ್ರಿಯಿಸಿದ ಈಶ್ವರ್ ಪಾಂಡೆ, ‘ಈ ಪಂದ್ಯ ನನ್ನ ಪಾಲಿಗೆ ಮಹತ್ವದ್ದು. ಟೆಸ್ಟ್‌ ಪಂದ್ಯದಲ್ಲೂ ಆಡಲು ಅವಕಾಶ ಲಭಿಸಲಿದೆ ಎಂಬ ವಿಶ್ವಾಸ ನನ್ನದು. ಅದು ನನ್ನ ಕನಸು ಕೂಡ’ ಎಂದರು. ‘ತಂಡದಲ್ಲಿ ಅತ್ಯುತ್ತಮ ಬೌಲರ್‌ಗಳಿದ್ದಾರೆ. ಹಾಗಾಗಿ ನನಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅದು ತಂಡದ ನಿರ್ಧಾರ. ಆದರೆ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದೆ. ಹಲವು ಅಂಶಗಳು ಕಲಿತಿದ್ದೇನೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.