ಶನಿವಾರ, ಜೂನ್ 19, 2021
28 °C

ಅಮೆರಿಕ ಆಗುವ ಆರ್ಭಟದಲ್ಲಿ ಬಡ ಭಾರತೀಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನಮ್ಮ ಅಪ್ಪಟ ಅಮೆರಿಕದ ಮಹಿಳೆ. ಅಪ್ಪ ಹದಿನಾರಾಣೆ ಭಾರತೀಯ. ನನ್ನ ಬಾಲ್ಯವೆಲ್ಲಾ ಗ್ರಾಮೀಣ ಭಾರತದಲ್ಲಿ. ನನ್ನಂಥವನ ಪಾಲಿಗೆ ಅಮೆರಿಕ ಮತ್ತು ಭಾರತ ಎರಡೂ ಮಾತೃಭೂಮಿಗಳೇ. ಆದಾಗ್ಯೂ ಎರಡೂ ದೇಶಗಳು ಒಂದಕ್ಕೊಂದು ಗಾವುದ ದೂರದ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ ಹಾಗೂ ಪರಂಪರೆಗಳನ್ನು ಮೈಗೂಡಿಸಿಕೊಂಡಿವೆ ಎಂಬುದನ್ನು ಯಾವತ್ತೂ ಮರೆತಿಲ್ಲ.ನಾನು ಹೈಸ್ಕೂಲ್ ಶಿಕ್ಷಣಕ್ಕೆ ಕಾಲಿಟ್ಟಿದ್ದು 1991ರಲ್ಲಿ. ಆಗಷ್ಟೇ ಜಗತ್ತಿನ ಆಗುಹೋಗುಗಳಿಗೆ ಪ್ರಜ್ಞಾಪೂರ್ವಕವಾಗಿ ತೆರೆದುಕೊಳ್ಳುತ್ತಿದ್ದೆ. ಅಷ್ಟೊತ್ತಿಗಾಗಲೇ ಭಾರತದಲ್ಲಿ ಮುಕ್ತ ಅರ್ಥ ವ್ಯವಸ್ಥೆಯ ಗಾಳಿ ಬೀಸಿತ್ತು. ಸಣ್ಣಪುಟ್ಟ ನಗರಗಳ್ಲ್ಲಲೂ ಬದಲಾವಣೆಯ ಉಲ್ಲಾಸ. ಮುಂದಿನ ಎರಡೇ ವರ್ಷಗಳಲ್ಲಿ ದೇಶದಾದ್ಯಂತ ಪಲ್ಲಟಗಳ ಪರ್ವ ತಲೆ ಎತ್ತಿತ್ತು.ಜೋಪಡಿಗಳು ಕಾಂಕ್ರೀಟ್ ತಾರಸಿಯ ಮನೆಗಳಾದವು. ಸಾಂಪ್ರದಾಯಿಕ ಬೆಳೆಗಳು ಸಾವಧಾನವಾಗಿ ಮರೆಗೆ ಸರಿದವು. ಉದಾರೀಕರಣದ ತೆಕ್ಕೆಯಲ್ಲಿದ್ದ ಯುವ ಜನತೆ, ಗ್ರಾಹಕ ಶೈಲಿ ಮತ್ತು ತೋರಿಕೆಯ ಮಾಟಗಳಲ್ಲಿ ಮುಲುಕಾಡುವುದಕ್ಕೆ ತುದಿಗಾಲಲ್ಲಿ ತವಕಿಸುತ್ತಿದ್ದರು.50 ವರ್ಷಗಳ ಹಿಂದೆ ಆರ್.ಕೆ.ನಾರಾಯಣ್ ಅಮೆರಿಕದಲ್ಲಿ ಅಡ್ಡಾಡಿ ಬಂದ ನಂತರ ಎರಡೂ ದೇಶಗಳ ನಡುವಿನ ವ್ಯತ್ಯಾಸವನ್ನು ತಮ್ಮ ಬರಹಗಳಲ್ಲಿ ಸೂಕ್ಷ್ಮವಾಗಿ ಹಿಡಿದಿಟ್ಟಿದ್ದರು. ಅಮೆರಿಕದ ಭೌತಿಕ ಸಂಪತ್ತು-ಸಮೃದ್ಧಿ, ಭಾರತದ ಸಂಯಮಶೀಲ ತತ್ವಗಳ ಮುಂದೆ ಎಷ್ಟು ತದ್ವಿರುದ್ಧವಾಗಿದೆ ಎಂಬುದನ್ನು ಸೊಗಸಾಗಿ ಹೇಳುವ ಮೂಲಕ; ಅಮೆರಿಕ ಅಮೆರಿಕವೇ.. ಭಾರತ ಭಾರತವೇ... ಎಂಬ ಅನಿಸಿಕೆಯನ್ನು ಚೆಂದಾಗಿ ಬಿಡಿಸಿಟ್ಟಿದ್ದರು.ಇದನ್ನು ಓದಿದ ನಾನು `ಹೌದಲ್ಲಾ..~ ಎಂದು 2003ರಲ್ಲಿ ಭಾರತಕ್ಕೆ ಬಂದೆ. ಆದರೆ, ಇಲ್ಲಿಗೆ ಬಂದಾಗ ಪುಸ್ತಕಗಳಲ್ಲಿ ಓದಿದ್ದ ಆರ್.ಕೆ.ನಾರಾಯಣ ಅವರ ಭಾರತ  ಕಳೆದುಹೋಗಿತ್ತು. ಕಣ್ಣಿಗೆ ರಾಚುವ ಸಮನ್ವಯ ಸಿದ್ಧಾಂತವೊಂದು ಬೆಸುಗೆ ಹಾಕಿಕೊಂಡು ಜೋಗುಳ ಹಾಡುತ್ತಿತ್ತು. ಈ ಪೃಥ್ವಿಯ ಮೇಲಿನ ಬೃಹತ್ ಪ್ರಜಾಪ್ರಭುತ್ವ ದೇಶವೆನಿಸಿದ ಭಾರತ ತನಗರಿವಿಲ್ಲದೆಯೇ ಅಮೆರಿಕ ಆಗ ಹೊರಟಿತ್ತು.ಇಂತಹುದೊಂದು ತೆಳು ಪರಿವರ್ತನೆಯಲ್ಲಿ ತಾರ್ಕಿಕ ಮತ್ತು ಅತಾರ್ಕಿಕ ಪ್ರಣಾಳಿಕೆಗಳೆರಡೂ ತಳಕು ಹಾಕಿಕೊಂಡಿದ್ದು ನಿಚ್ಚಳವಾಗಿತ್ತು. ಅಮೆರಿಕದ ಬ್ರ್ಯಾಂಡೆಡ್ ವಸ್ತುಗಳು ಭಾರತದ ಒಡಲಲ್ಲಿ ಮಾರುಕಟ್ಟೆಗೆ ಜಾಗ ಮಾಡಿಕೊಂಡಿದ್ದವು.

ಭಾರತ ಸಮಾಜವಾದಿ ಹಿನ್ನೆಲೆಯ ಅರ್ಥವ್ಯವಸ್ಥೆ ಹೊಂದಿದ್ದರೆ ಅಮೆರಿಕದ್ದು ಪಕ್ಕಾ ಬಂಡವಾಳಶಾಹಿ ಚೌಕಟ್ಟು.

ಆದರೇನು? ಇಲ್ಲಿನ ಜನ ಹೊಸ ಟ್ರೆಂಡ್‌ಗಳಿಗೆ ಪ್ರಯಾಸಪೂರ್ವಕವಾಗಿ ಒಗ್ಗಿಕೊಳ್ಳತೊಡಗಿದ್ದರು. ಇಂಗ್ಲಿಷ್ ನುಡಿಕಟ್ಟು, ಉಚ್ಚಾರ, ವೇಷಭೂಷಣ ಎಲ್ಲವೂ ಅಮೆರಿಕೀ ಛಾಯೆಯಲ್ಲಿ ಒಪ್ಪವಾಗಿ ಹೋಗಿದ್ದವು. ಜನರು ಅಮೆರಿಕವನ್ನು ಹಾಸಿ ಹೊದೆಯುತ್ತಿದಾರೆ ಎಂಬ ಸತ್ಯಕ್ಕೆ ತರ್ಕದ ಅವಶ್ಯಕತೆಯೇ ಕಾಣಲಾರದ ಸ್ಥಿತಿ.ಅಂತೆಯೇ ದೇಶದ ಚೈತನ್ಯಕ್ಕೆ ಹೊಸ `ರಾಮರಸ~ವೊಂದು ಸಿದ್ಧವಾಗಿತ್ತು.

ನಾನು ಅನುಭವಿಸಿ ಬೆಳೆದ ಭಾರತದಲ್ಲಿ ಅಂದಿನ ಕಾಲಕ್ಕೆ ಅವಕಾಶಗಳು ಮುಷ್ಟಿ ಮಾತ್ರವೇ ಇದ್ದವು. ಆದರೆ ಅವೆಲ್ಲಾ ಈಗ ತಮ್ಮ ಮಿತಿಗಳ ಚಿಪ್ಪೊಡೆದು ಬಂಡವಾಳಶಾಹಿಯ ಹೊದಿಕೆಯಲ್ಲಿ ಭೂಮ್ಯಾಕಾಶಕ್ಕೆ ಹಬ್ಬಿ ನಿಂತಿದ್ದವು.ಜಡಭಾರತದಲ್ಲಿ ಅದೃಷ್ಟಗಳು ರಾತ್ರಿ ಹಗಲೆನ್ನದೆ ಠಳಾಯಿಸಲಾರಂಭಿಸಿದ್ದವು. ಅಂಗಡಿಗಳಲ್ಲಿ `ಭಾರತ ಬೆಳೆಯುತ್ತಿದೆ~ `ಭಾರತದ ಪುನರುತ್ಥಾನ~ ಎಂಬ ಶೀರ್ಷಿಕೆಯ ಪುಸ್ತಕಗಳು ಎಲ್ಲರನ್ನೂ ಸೆಳೆಯುತ್ತಿದ್ದವು.ವಿಶ್ವದಲ್ಲೇ ಅತ್ಯಂತ ಆಶಾವಾದಿ ಜನರೆಂಬ ಹೆಗ್ಗಳಿಕೆ ಹೊಂದಿದ ಭಾರತೀಯರು ಅಮೆರಿಕದ ಎರಕದಲ್ಲಿ ತಮ್ಮೆಲ್ಲ ಬೇಕುಬೇಡಗಳನ್ನು ಹೊಯ್ಯಲಾರಂಭಿಸಿದ್ದರು. ಇವನ್ನೆಲ್ಲಾ ನಾನು ತಣ್ಣನೆಯ ಸ್ಥಿತಿಯಲ್ಲೇ ಅವಲೋಕಿಸಲು ಆರಂಭಿಸಿದೆ.

ಈ ಮಣ್ಣಿನ ಮಕ್ಕಳ ಶ್ರಮ ಮತ್ತು ಅನ್ವೇಷಣಾ ಮನಸ್ಸುಗಳು ಯಾವ ಪರಿಯಲ್ಲಿ ಮುಕ್ತ ಮಾರುಕಟ್ಟೆ, ಮಾರುಕಟ್ಟೆಯ ಬಂಡವಾಳ, ಜಾಗತೀಕರಣ, ಬಹುರಾಷ್ಟ್ರೀಯ ಕಂಪೆನಿಗಳಿಗೆ ತಹತಹಿಸುತ್ತಿವೆ ಎಂಬುದನ್ನು ಬೆರಗಿನಿಂದ ಅಭ್ಯಸಿಸಿದೆ. ಅಮೆರಿಕದ ಮೌಲ್ಯಗಳು ಭಾರತದ ನೆಲದಲ್ಲಿ ಎಂತಹ ಬೀಜಗಳಾಗಿ ಪರಿವರ್ತನೆಯಾಗಿವೆ ಎಂಬುದನ್ನು ಖಚಿತವಾಗಿ ಲೆಕ್ಕ ಇಟ್ಟೆ.ಇದಕ್ಕೆ ಸ್ಪಷ್ಟ ಪುರಾವೆಯಾಗಿ ಇರಾಕ್ ಯುದ್ಧದ ಸಂದರ್ಭದಲ್ಲಿ ಭಾರತೀಯರು ಅಮೆರಿಕದ ಸಾಹಸವನ್ನು `ಸೈ~ ಎಂದರು. ತಾವೆಷ್ಟು ಅಮೆರಿಕದ ಪರ ಇದ್ದೇವೆ ಎಂಬುದನ್ನು ಎದೆಬಿರಿದು ತೋರಿದರು.ಅಮೆರಿಕದ ಐಸಿರಿಯ ಬದುಕು ಏನೆಲ್ಲಾ ಸಂಕೀರ್ಣಗಳ ಮೂಟೆ ಎಂಬುದನ್ನು ಅರಿತಿದ್ದವನು ನಾನು. ಆದರೆ ಈ ಭಾರತೀಯರೊ, ಅವನ್ನೆಲ್ಲಾ ತಮ್ಮ ಎದೆಗೊತ್ತಿಕೊಂಡು ತಾವೇ ಅವರಾಗುವ ತುಡಿತಕ್ಕೆ ಬಿದ್ದಿದ್ದರು.

 

ದಿಗಿಲು ಹುಟ್ಟಿಸುವಷ್ಟು ಢಾಳಾಗಿ ಅಮೆರಿಕದ ಅಪ್ಪುಗೆಗೆ ಮಾರು ಹೋಗಿದ್ದರು. ಬಡಭಾರತದ ಹಳ್ಳಿಗಳು ಅದಾಗಲೇ ಸಪುಷ್ಟವಾಗಿದ್ದವು. ಟಾರು ರಸ್ತೆ, ದೀಪ, ಫೋನು, ಬೈಕುಗಳು ಈ ಜನರ ದಿಕ್ಕು ದೆಸೆಗಳನ್ನೇ ತಳಕು ಮಳಕು ಮಾಡಿಬಿಟ್ಟಿದ್ದವು. ಪಂಚಾಯ್ತಿಗಳಲ್ಲಿ ಹಿರಿಯರ ಪಾರಂಪರಿಕ ಅಧಿಕಾರ ಮೊಟಕಾಗಿತ್ತು.

 

ಆಗಾಗ್ಗೆ ಅಶಾಂತಿ ಹಾಗೂ ಕಾನೂನು ಮೀರಿದ ವರ್ತನೆಗಳು ಈ ನೆಲದ ಮೌನವನ್ನು ಮುರಿದು ನಿಂತಿದ್ದವು. ಪುಂಡ, ಪೋಕರಿಗಳ ಹೊಡೆದಾಟಗಳು ಮಾಮೂಲಾಗಿದ್ದವು.

ಇತ್ತೀಚೆಗೆ ನಾನು ಭಾರತದ ಹಳ್ಳಿಯ ಮಹಿಳೆಯೊಬ್ಬರ ಜೊತೆ ಲೋಕಾಭಿರಾಮವಾಗಿ ಹರಟುತ್ತಿದ್ದೆ.ಆಕೆಯ ವಯಸ್ಸು 50ರ ಆಸುಪಾಸು. ಮೇಲ್ನೋಟಕ್ಕೇ ಕಾಣುವಂತೆ ಅವಳದೊಂದು ಸರಳ, ಸಂತೃಪ್ತ ಜೀವನ. ಗುಡಿಸಿಲಿನಲ್ಲಿ ಹುಟ್ಟಿ ಬೆಳೆದವಳು ಅವಳು. ಈಗ ಆಕೆಗೆ ಆರ್‌ಸಿಸಿ ಮನೆ ಇದೆ. ಮಗನ ಬಳಿ ಬೈಕಿದೆ.ಮೊಬೈಲ್ ಫೋನಿದೆ. ಅವಳ ಸೊಸೆ ಕಾಲೇಜಿಗೂ ಹೋಗುತ್ತಿದ್ದಾಳೆ. ಆದರೂ ಆಕೆ ಮಾತಿನ ಮಧ್ಯೆ ಇವ್ಯಾವೂ ತನ್ನನ್ನು ಸಂತೃಪ್ತವಾಗಿಟ್ಟಿಲ್ಲ ಎಂಬ ಕೊರಗನ್ನು ಸಣ್ಣಗೇ ಹೊರ ಚೆಲ್ಲಿದಳು. ಕೆಲವೇ ಕೆಲವು ದಿನಗಳ ಹಿಂದೆ ಹಳ್ಳಿಯಲ್ಲಿ ನಡೆದ ಕೊಲೆಯೊಂದು ಆಕೆಯಲ್ಲಿ ತಲ್ಲಣಗಳನ್ನು ಹುಟ್ಟಿ ಹಾಕಿತ್ತು.ಒಂದರ ಮೇಲೊಂದರಂತೆ ನಡೆಯುತ್ತಿದ್ದ ಹಿಂಸಾಕೃತ್ಯಗಳು ಅವಳ ಎದೆ ಢವಗುಟ್ಟುವಂತೆ ಮಾಡಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಂಬಿಗಳು ನಡೆಯಬಹುದಾದ ಸಾಧ್ಯತೆಗಳಿವೆ ಎಂಬ ಭೀತಿಯನ್ನು ಆಕೆ ನನ್ನೆದುರು ಅರುಹಿದಳು. ಇನ್ನು ಈ ಮನೆ, ಹಳ್ಳಿಯನ್ನು ಬಿಟ್ಟು ಹೋಗುವುದೇ ವಾಸಿ ಎಂಬಂತಹ ದೃಢ ನಿರ್ಧಾರವನ್ನು ವ್ಯಕ್ತಪಡಿಸಿದಳು.ಈ ಬೆಳವಣಿಗೆಗೆಲ್ಲಾ ಕಾರಣ ದುಡ್ಡೇ ಎಂಬುದನ್ನು ಆಕೆ ಸ್ಪಷ್ಟವಾಗಿ ವಿಶ್ಲೇಷಿಸಿದಳು. `ಆವತ್ತು ನಾವೆಲ್ಲಾ ಬಡತನದಲ್ಲಿ ರೊಟ್ಟಿಯೊ, ಚಟ್ನಿಯೊ ಎಂಬಂತಿದ್ದೆವು. ಇದ್ದುದರಲ್ಲೇ ಉಂಡುಟ್ಟು ಸುಖವಾಗಿದ್ದೆವು. ಈಗ ಒಮ್ಮೆಲೇ ಆಧುನಿಕತೆಯ ಕ್ರೌರ್ಯ, ಅಮೆರಿಕೀ ಛಾಯೆ ನಮ್ಮನ್ನೆಲ್ಲಾ ಗುಡಿಸಿ ಗುಂಡಾರಕ್ಕೆ ಇಕ್ಕುತ್ತಿದೆ~ ಎಂದು ವಿಷಾದಿಸಿದಳು.`ಈ ಅಮೆರಿಕೀಕರಣ ಇಲ್ಲಿನ ಕೋಟಿಕೋಟಿ ಜನರ ಬಡತನ ನೀಗಿರಬಹುದು. ಪ್ರತಿಯೊಬ್ಬರಿಗೂ ಅವರವರ ಸ್ವಾತಂತ್ರ್ಯ, ಅನುಭೋಗ, ದೌಲತ್ತುಗಳನ್ನು ದೊರಕಿಸಿಕೊಟ್ಟಿರಬಹುದು. ಆದರೇನು? ರಾಷ್ಟ್ರೀಯತೆಯನ್ನೇ ಅಳಿಸಿ ಹಾಕಿರುವ ಈ ಭ್ರಮೆ ನಮ್ಮೆಲ್ಲರ ನೆಮ್ಮದಿ ಕಸಿದುಕೊಂಡಿದೆಯೆಲ್ಲಾ? ಎಂದು ಕಣ್ಣೀರಿಟ್ಟಳು.ಆಕೆಯ ಮಾತುಗಳನ್ನೆಲ್ಲಾ ಕೇಳಿದ ಮೇಲೆ ನನಗೆ ಏನುತ್ತರ ಕೊಡಬೇಕೆಂಬುದೇ ತಿಳಿಯಲಿಲ್ಲ. ಒಂದರೆಕ್ಷಣ ಮೌನಕ್ಕೆ ಜಾರಿದೆ. ಈ ಬೇಸಿಗೆ ಮುಗಿಯುವುದರೊಳಗೆ ಭಾರತಕ್ಕೆ ಕಾಲಿಡಲಿರುವ `ಅಮೆಜಾನ್~ ಮತ್ತು `ಸ್ಟಾರ್‌ಬಕ್ಸ್~ ಕಂಪೆನಿಗಳನ್ನು ಕಣ್ಮುಂದೆ ತಂದುಕೊಂಡೆ. ಜಾಗತೀಕರಣಕ್ಕೆ ಅಂತಿಮ ಮುದ್ರೆ ಒತ್ತುವಂತಿರುವ ಈ ಕಂಪೆನಿಗಳು ಮುಂದೆ ಭಾರತದ ಬದುಕನ್ನು ಇನ್ನೆಷ್ಟು ಬದಲಿಸಬಹುದು ಎಂಬುದನ್ನು ಸುಮ್ಮನೇ ಯೋಚಿಸುತ್ತಾ ಕುಳಿತೆ...(ನ್ಯೂಯಾರ್ಕ್ ಟೈಮ್ಸ ಸಿಂಡಿಕೇಟ್)

ಲೇಖಕರು ಶೀಘ್ರವೇ ಮಾರುಕಟ್ಟೆಗೆ ಬರಲಿರುವ ಇಂಡಿಯಾ ಬಿಕಮಿಂಗ್: ಎ ಪೋರ್ಟ್ರೇಟ್ ಆಫ್ ಲೈಫ್ ಇನ್ ಮಾಡರ್ನ್ ಇಂಡಿಯಾ~ ಪುಸ್ತಕದ ಲೇಖಕ
.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.