ಮಂಗಳವಾರ, ಮೇ 11, 2021
24 °C

ಅಮೆರಿಕ ಓಪನ್ ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಫೆಡರರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ ಓಪನ್ ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಫೆಡರರ್

ನ್ಯೂಯಾರ್ಕ್ (ಪಿಟಿಐ): ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇವರಿಬ್ಬರೂ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ನೊವಾಕ್ 7-6, 6-4, 6-2ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಎದುರು ಗೆದ್ದರು.ಮೂರನೇ ಶ್ರೇಯಾಂಕದ ಫೆಡರರ್ 6-1, 6-2, 6-0ರಲ್ಲಿ ಅರ್ಜೆಂಟೀನಾದ ಜುವಾನ್ ಮೊನಾಕೊ ಎದುರು ಗೆಲುವು ಸಾಧಿಸಿದರು. ಮೂರನೇ ಸೆಟ್‌ಗಳಲ್ಲಿ ರೋಜರ್ ಯಾವುದೇ ರೀತಿಯ ಪ್ರತಿರೋಧ ಎದುರಾಗಲಿಲ್ಲ.ಪುರುಷರ ವಿಭಾಗದ ನಾಲ್ಕನೇ ಸುತ್ತಿನ ಇತರೆ ಪಂದ್ಯಗಳಲ್ಲಿ ಫ್ರಾನ್ಸ್‌ನ ಜೊ-ವಿಲ್‌ಫ್ರೆಡ್ ಸೊಂಗಾ 6-4, 6-7, 3-6, 6-4, 6-2ರಲ್ಲಿ ಅಮೆರಿಕದ ಮಾರ್ಡಿ ಫಿಷ್ ಎದುರೂ, ಸರ್ಬಿಯಾದ ಜಂಕೊ ತಿಪ್ಸಾರೆವಿಕ್ 7-5, 6-7, 7-5, 6-2ರಲ್ಲಿ ಸ್ಪೇನ್‌ನ ಜುವಾನ್ ಕಾರ್ಲೊಸ್ ಫೆರೆರಾ ಎದುರು ಜಯ ಗಳಿಸಿದರು.ಕ್ವಾರ್ಟರ್‌ಗೆ ಕ್ಯಾರೊಲಿನ್, ಸೆರೆನಾ: ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್ನಿಯಾಕಿ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅಗ್ರ ಶ್ರೇಯಾಂಕದ ಕ್ಯಾರೊಲಿನ್ 6-7, 7-5, 6-1ರಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆತ್ಸೊವಾ ಎದುರೂ, ಸೆರೆನಾ 6-3, 6-4ರಲ್ಲಿ ಸರ್ಬಿಯಾದ ಅನಾ ಇವಾನೊವಿಕ್ ವಿರುದ್ಧವೂ ಗೆಲುವು ಸಾಧಿಸಿದರು.ಮಹಿಳೆಯರ ವಿಭಾಗದ ನಾಲ್ಕನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ರಷ್ಯಾದ ಅನಾಸ್ತೇಸಿಯಾ ಪವಿಲಿಯಕ್‌ಚೆಂಕೊ 5-7, 6-3, 6-4ರಲ್ಲಿ ಇಟಲಿಯ ಫ್ರಾನ್ಸೆಸ್ಕಾ ಶವಿಯೊನ್ ಮೇಲೂ, ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಕ್ 6-1, 6-4ರಲ್ಲಿ ಸ್ಪೇನ್‌ನ ಕಾರ್ಲಾ ಸಾರೆಜ್ ನಾವರೊ ಎದುರೂ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.