ಭಾನುವಾರ, ಜನವರಿ 26, 2020
25 °C

ಅಮೆರಿಕ ಯೋಧರ ಬಲ ಒಂದು ಲಕ್ಷ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಸರ್ಕಾರವು ಮುಂದಿನ 10 ವರ್ಷಗಳ ಅವಧಿಗೆ ರಕ್ಷಣಾ ಇಲಾಖೆ ಬಜೆಟ್ಟನ್ನು 487 ಶತಕೋಟಿ ಡಾಲರ್ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಪೆಂಟಗನ್ ಸೇನಾ ಯೋಧರ ಬಲವನ್ನು 2017ರ ವೇಳೆಗೆ ಒಂದು ಲಕ್ಷದಷ್ಟು ಕಡಿಮೆ ಮಾಡಲು ನಿರ್ಧರಿಸಿದೆ.ಪೆಂಟಗಾನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧದ ಬಜೆಟ್ ಪ್ರಕಟಿಸಿದ, ರಕ್ಷಣಾ ಇಲಾಖೆ ಕಾರ್ಯದರ್ಶಿ ಲಿಯೊನ್ ಪನೆಟ್ಟಾ, ಸೇನಾಬಲದಲ್ಲಿ ಕಡಿತ ಉಂಟಾದರೂ ದಕ್ಷತೆ, ಸಿದ್ಧತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ರಾಷ್ಟ್ರದ ಸೇನೆ ಸದಾ ಮುಂಚೂಣಿಯಲ್ಲಿರಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಸದ್ಯ 5.62 ಲಕ್ಷ ಇರುವ ಭೂಸೇನೆ ಯೋಧರ ಬಲವನ್ನು 4.90 ಲಕ್ಷಕ್ಕೆ ಹಾಗೂ 2.02 ಲಕ್ಷದಷ್ಟಿರುವ ನೌಕಾ ಯೋಧರ ಬಲವನ್ನು 1.82 ಲಕ್ಷಕ್ಕೆ ಕುಗ್ಗಿಸಲಾಗುವುದು. ಈ ಬದಲಾವಣೆ ಏಕಾಏಕಿ ಜಾರಿಗೆ ಬರುವುದಿಲ್ಲ. ಹಂತ ಹಂತವಾಗಿ ಮುಂದಿನ ಐದು ವರ್ಷಗಳಲ್ಲಿ ಜಾರಿಗೆ ಬರಲಿದೆ ಎಂದು ಅವರು ವಿವರಿಸಿದ್ದಾರೆ.ಸೇನಾ ಪಡೆಗಳಲ್ಲಿ ಯೋಧರ ಬಲ ತಗ್ಗಿಸಿದರೂ ಒಟ್ಟಾರೆ ಯೋಧರ ಸಂಖ್ಯೆ ಅವಳಿ ಗೋಪುರಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಮುನ್ನ ಇದ್ದ ಯೋಧರ ಸಂಖ್ಯೆಗಿಂತ ಅಧಿಕವಾಗಿಯೇ ಇರುತ್ತದೆ. ಎರಡೂ ಪಡೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇದ್ದು, ಮೂಲನಿಯಮಗಳ ಪ್ರಕಾರವೇ ಕಡಿತ ಮಾಡಲಾಗುವುದು. ಇದರಿಂದ ಮುಂದಿನ ಐದು ವರ್ಷಗಳಲ್ಲಿ 60 ಶತಕೋಟಿ ಡಾಲರ್ ಉಳಿತಾಯವಾಗುವ ಅಂದಾಜಿದೆ ಎಂದಿದ್ದಾರೆ. ವಾಯುಪಡೆಗೆ ಹಳೆಯ ತಲೆಮಾರಿನ ವಿಮಾನಗಳ ಬದಲಿಗೆ ಹೊಸ ದಾಳಿ ವಿಮಾನಗಳ ಬಲ ತುಂಬಲಾಗುವುದು ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)