ಸೋಮವಾರ, ಜೂನ್ 21, 2021
21 °C

ಅರಣ್ಯ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯಾಳ: ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಬಿ.ಮಲ್ಲೇಶಿ ಅವರು ಅರಣ್ಯ ರಕ್ಷಣೆ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಲು ಲೋಕಾಯುಕ್ತ ಹಾಗೂ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ರಾಜು ಧೂಳಿ ಹೇಳಿದರು.ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಅವರು, ಮಲ್ಲೇಶಿ ಅವರು ಅರಣ್ಯದಲ್ಲಿರುವ ಅತೀ ಅಮೂಲ್ಯ ಸಾಗ, ಬೀಟೆ, ಸಿಸಂ ಮರಗಳಿಂದ ತಯಾರಿಸಿದ ಪಿಠೋಪಕರಣಗಳನ್ನು ಬೇರೆ ನಗರಗಳಿಗೆ ಸರಬರಾಜು ಮಾಡುತ್ತಿದ್ದಾರೆ.

 

ಸರ್ಕಾರಿ ಪಟ್ಟಾ ಜಮೀನಿನಲ್ಲಿದ್ದು, ಸರ್ಕಾರಕ್ಕೆ ಸೇರಿದ ಸಾಗ ಮರಗಳನ್ನು ಕಡಿದು ಮಾರಾಟ ಮಾಡಲು ಪರವಾನಿಗೆ ಕೊಟ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ. ತತ್ವಣಗಿ ಗ್ರಾಮದ ಸರ್ವೇ ನಂ 99 ಜಮೀನಿನಲ್ಲಿರುವ ಸರ್ಕಾರಿ ಸ್ವಾಮ್ಯದ ಮರಗಳನ್ನು ಕಡಿದು ಸಾಗಿಸಲು ಅನುಮತಿ ನೀಡಿದ್ದಾರೆ.ಅರಣ್ಯ ಇಲಾಖೆಯ ಮುಖ್ಯ ದ್ವಾರದ ಎದುರುಗಡೆ ಇರುವ ಅತೀ ಬೆಲೆ ಬಾಳುವ ಹೊನ್ನೆ ಮರವನ್ನು ಕಾಡು ಮರವೆಂದು ದಾಖಲಾತಿಯಲ್ಲಿ ತೋರಿಸಿ ಕಡಿಮೆ ದರಗಳಿಗೆ ತಮ್ಮ ಆಪ್ತರಿಗೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಅರಣ್ಯ ಇಲಾಖೆ ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.ದಾಂಡೇಲಿಯಲ್ಲಿ ಮೊಸಳೆ ಪಾರ್ಕ್ ನಿರ್ಮಾಣ ಮಾಡಲು  2 ಕೋಟಿ ರೂಪಾಯಿ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಜೂರು ಮಾಡಿದ್ದಾರೆ. ಇದೇ 3 ರಂದು ಹಳಿಯಾಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅಂದು ಮಧ್ಯಾಹ್ನ ಯಡೋಗಾ ಗ್ರಾಮದಲ್ಲಿ ನಿರ್ಮಿಸಿದ ಹೆಚ್ಚುವರಿ ಕಟ್ಟಡದ ಉದ್ಘಾಟನೆ, ಹಳಿಯಾಳದ ಕಿಲ್ಲಾ ಹತ್ತಿರ ವಿರುವ ನೂತನ ಪ್ರವಾಸಿ ಮಂದಿರ ಹಾಗೂ ನೂತನವಾಗಿ ನಿರ್ಮಿಸಿದ ಅಗ್ನಿ ಶ್ಯಾಮಕ ದಳದ ಕಟ್ಟಡ ಕಚೇರಿ ಉದ್ಘಾಟನೆ ಮಾಡಲಿದ್ದಾರೆ.

 

ಅದೇ ದಿನ ಅಂಜುಮನ್ ಸಂಸ್ಥೆಯಿಂದ ಉಸ್ತುವಾರಿ ಸಚಿವರಿಗೆ ಸನ್ಮಾನ ಸಮಾರಂಭವು ಸಹ ನಡೆಯಲಿದೆ ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಪ್ರಕಾಶ ಕಮ್ಮಾರ, ಪ್ರಕಾಶ ಗಿರಿ,ಅನಿಲ ಮುತ್ನಾಳ, ಸಂತೋಷ ಘಟಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.