ಬುಧವಾರ, ಜೂನ್ 23, 2021
28 °C

ಅರಣ್ಯ ವರಿಷ್ಠರ ಕರ್ತವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1972ರ ಭಾರತೀಯ ವನ್ಯಜೀವಿ ರಕ್ಷಣಾ ಕಾಯಿದೆಯ ಪ್ರಕಾರ ಅಭಯಾರಣ್ಯಗಳಲ್ಲಿ ವನ್ಯಪ್ರಾಣಿಗಳಿಗೆ ಅನುಕೂಲತೆಗಳ ಸೃಷ್ಟಿ ಮತ್ತು ಅವುಗಳ ರಕ್ಷಣೆಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಎಲ್ಲಾ ವಿಧವಾದ ಮಾನವ ಚಟುವಟಿಕೆಗಳನ್ನು ನಿಷೇಧಿಸಿ ಜೀವಿವೈವಿಧ್ಯತೆಯ ಅಭಿವೃದ್ಧಿಯ ಹೊಣೆಯನ್ನು ಪ್ರಕೃತಿಗೆ ಬಿಡಲಾಗಿದೆ. ಈ ಕಾಯಿದೆಯಡಿ ನಿರ್ವಹಿಸಬೇಕಾದ ಕೆಲಸಗಳನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಇದೆ. ಈ ಜವಾಬ್ದಾರಿಯನ್ನು ಅರಿತು ಮುಖ್ಯ ವನ್ಯಜೀವಿ ಪರಿಪಾಲಕರು ವನ್ಯಜೀವಿಗಳ ಬೀಡುಗಳನ್ನು ಪರಿಶೀಲಿಸುತ್ತಾ ಅವುಗಳಲ್ಲಿ ಬೆಂಕಿ ಆಕರ್ಷಿಸುವ ಒಣಗಿದ ಬಿದಿರು ಮೆಳೆಗಳು, ಅತಿಯಾಗಿ ಒಣಗಿದ ಮರ ಮುಟ್ಟುಗಳನ್ನು ನಿಯಮಾನುಸಾರ ತೆಗೆಸಲು ಕ್ರಮ ಕೈಗೊಳ್ಳಬೇಕು.

 

ದಟ್ಟವಾಗಿ ಎಲೆ ಉದುರಿಸುತ್ತಾ ಬೇಸಿಗೆ ಬೆಂಕಿ ಆಕರ್ಷಿಸುವ ತೇಗದ ಮರಗಳ ತೋಪುಗಳು ಮತ್ತು ದಟ್ಟ ಹುಲ್ಲುಗಾವಲುಗಳನ್ನು ಗುರುತಿಸಬೇಕು. ಅವುಗಳನ್ನು ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚೆ ಸುಡಿಸಿ, ಕಾಡಿಗೆ ಅಕಸ್ಮಿಕ ಬೆಂಕಿ ತಗುಲಿದರೂ ಅದನ್ನು ನಂದಿಸಲು ಸಾಧ್ಯವಾಗುವಂತೆ ಅಲ್ಲಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿಕೊಳ್ಳಬೇಕು.ಸಿಬ್ಬಂದಿ ಕೂಲಿ ಕಾರ್ಮಿಕರನ್ನು ನೇಮಿಸಿ, ವಾಹನ ಸೌಕರ್ಯ ಕೊಟ್ಟು ಅಭಯಾರಣ್ಯಗಳನ್ನು ರಕ್ಷಿಸುವುದರ ಜೊತೆಗೆ ಹುಲ್ಲು ಬೆಳೆಯಲು ಅವಕಾಶ ಕೊಡದಂತೆ ಮರಗಳ ತಲೆ ಕಡಿಸುವುದು, ಕಳೆಗಳನ್ನು ಕೀಳಿಸಿ ಹುಲ್ಲು ಬೆಳೆಯುವಂತೆ ಪರಿಸರವನ್ನು ನಿರ್ಮಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಕಳೆದ 40 ವರ್ಷಗಳಿಂದ ಅಭಯಾರಣ್ಯಗಳಲ್ಲಿ ಪ್ರಕೃತಿಯಲ್ಲಿ ಸಹಜವಾಗಿ ವಿಲೀನವಾಗಲು ಬಿಟ್ಟಿರುವ ಒಣಗಿದ ಬಿದಿರು ಮೆಳೆಗಳು, ಮರ ಮುಟ್ಟುಗಳನ್ನು ತೆಗೆಸದೆ ಇರುವುದರಿಂದ ಅವುಗಳ ಪ್ರಮಾಣ ದಟ್ಟವಾಗಿದ್ದು ಸ್ವಲ್ಪ ಬೆಂಕಿ ಬಿದ್ದರೂ ಹೊತ್ತಿ ಉರಿಯುವ ಸ್ಥಿತಿಯಲ್ಲಿರುತ್ತವೆ. ದಟ್ಟವಾಗಿ ಬೀಳುವ ತೇಗದ ತರಗೆಲೆಗಳ ರಾಶಿ ಪೆಟ್ರೋಲಿನಂತಿರುತ್ತದೆ.`ಅವುಗಳು ಪ್ರಕೃತಿಯಲ್ಲಿ ಲೀನವಾಗುತ್ತವೆ, ಅವುಗಳನ್ನು ತೆಗೆಸುವ, ಮುನ್ನೆಚ್ಚರಿಕೆ ಕ್ರಮವಾಗಿ ಸುಡುವ ಅವಶ್ಯಕತೆ ಇಲ್ಲ~ ಎಂದು ವಾದಿಸುತ್ತಾ ಕುಳಿತಿರುವ ಆಭಯಾರಣ್ಯಗಳ ಪರಿಪಾಲಕರ ಧೋರಣೆಯೇ ಇಂದಿನ ಭಯಾನಕ ಬೆಂಕಿಗೆ ಕಾರಣ.

 

ಇದರಿಂದಲೇ ಸಣ್ಣ, ವಯಸ್ಸಾದ ಪ್ರಾಣಿಗಳು, ಪಕ್ಷಿಗಳು, ಅವುಗಳ ಮೊಟ್ಟೆ, ಗೂಡು ಮತ್ತು ಸೂಕ್ಷ್ಮ ಕ್ರಿಮಿಕೀಟಗಳು ಹಾಗೂ ಸಸ್ಯರಾಶಿಯ ಬೀಜಗಳು, ಸಸಿಗಳೆಲ್ಲ ಕಾಳ್ಗಿಚ್ಚಿಗೆ ಸಿಕ್ಕಿ ನಾಶವಾಗಿವೆ.ಬಿದಿರು ಲಡ್ಡಾಗಿ ಮಣ್ಣಿನಲ್ಲಿ ಸೇರಿಹೋಗಲು 15 ವರ್ಷ, ಕಟ್ಟಿಗೆ ಗೆದ್ದಲು ತಿಂದು ಮಣ್ಣಾಗಲು 20ರಿಂದ 25 ವರ್ಷಗಳು ಬೇಕು. ಅಲ್ಲಿಯವರೆಗೆ ಯಾವ ಅಭಯಾರಣ್ಯವನ್ನೂ ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ರಕ್ಷಿಸಲು ಸಾಧ್ಯವೇ ಎಂಬುದನ್ನು ಈ ಪರಿಪಾಲಕರು ಯೋಚಿಸಬೇಕು. ಹಾಗೆಯೇ ಒಣಗಿದ ಬಿದಿರು, ಕಟ್ಟಿಗೆ ಬೆಂಕಿಗೆ ಆಹುತಿಯಾಗದೆ ಹೇಗೆ ನಿಸರ್ಗದಲ್ಲಿ ಸೇರಿ ಹೋಗುತ್ತದೆ ಎಂಬುದನ್ನು ಇವರು ಮನಗಾಣಬೇಕಾಗುತ್ತದೆ.ಈಗ ಬೆಂಕಿ ಅನಾಹುತಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ಸರ್ಕಾರ ನೇಮಿಸಿರುವ ಸಮಿತಿಯ ವರದಿಯಿಂದ ಮುಂದೆ ಅರಣ್ಯಗಳಿಗೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಎಂದಿಗೂ ಸಾಧ್ಯವಾಗುವುದಿಲ್ಲ. ಪ್ರಾಣಿಗಳ ರಕ್ಷಣೆಗೂ ಅನುಕೂಲವಾಗುವುದಿಲ್ಲ.

 

ಆ ರೀತಿ ವರದಿಗಳ ಆಧಾರದ ಮೇಲೆ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದ್ದರೆ 1992 ರಲ್ಲಿ ನಾಗರಹೊಳೆಯನ್ನು ಭಸ್ಮಮಾಡಿದ ಬೆಂಕಿ, ಈಗ ಮತ್ತೆ ಮರುಕಳಿಸುತ್ತಿರಲಿಲ್ಲ.

 

2003ರಲ್ಲಿ ಭದ್ರಾ ಅಭಯಾರಣ್ಯವನ್ನು ಭಸ್ಮಮಾಡಿದ ಬೆಂಕಿ ಈಗ ಕಾಣಿಸಿಕೊಳ್ಳುತ್ತಿರಲಿಲ್ಲ. ಶೆಟ್ಟಿಹಳ್ಳಿ, ಕುದುರೆ ಮುಖ, ಬಂಡೀಪುರ ಅಭಯಾರಣ್ಯಗಳಲ್ಲಿ  4-5 ವರ್ಷಗಳಿಗೊಮ್ಮೆ ವನ್ಯಜೀವಿಗಳ ಬೀಡನ್ನು ಸುಡುತ್ತಿರುವ ಬೆಂಕಿ ಈ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.ಆದುದರಿಂದ ಈಗ 40 ವರ್ಷಗಳಿಂದ ಅನುಸರಿಸುತ್ತಿರುವ ಅಭಯಾರಣ್ಯಗಳ ಬೆಂಕಿ ನಿಯಂತ್ರಣ ಚಟುವಟಿಕೆಗಳನ್ನು ಮರುಪರಿಶೀಲಿಸಬೇಕಾಗಿದೆ. ವಾಸ್ತವತೆಯ ಕಡೆ ಮನ ಹರಿಸಿ, ಪ್ರತಿ ವರ್ಷ ಹೆಚ್ಚುತ್ತಿರುವ ಒಣಬಿದಿರು, ಕಟ್ಟಿಗೆ ತೆಗಿಸಿ, ತೇಗದ ತರಗು, ದಟ್ಟ ಒಣ ಹುಲ್ಲುಗಾವಲುಗಳನ್ನು ಮುಂಚಿತವಾಗಿ ಸುಡಿಸಬೇಕು.

 

ಆಕಸ್ಮಿಕ ಬೆಂಕಿ ಶಮನಕ್ಕೆ ಆಧುನಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಿದರೆ ಅಭಯಾರಣ್ಯಗಳನ್ನು ಭಯಾನಕ ಬೆಂಕಿ ಹಾವಳಿಯಿಂದ ರಕ್ಷಿಸಬಹುದು. ಈ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದು ವನ್ಯಪ್ರಾಣಿಗಳಿಗಾಗುತ್ತಿರುವ ನಷ್ಟವನ್ನು ತಪ್ಪಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.