ಭಾನುವಾರ, ಜೂನ್ 13, 2021
25 °C

ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: `ಕನಕಪುರದಲ್ಲಿ ಅಕ್ರಮವಾಗಿ ಗ್ರಾನೈಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಹೋದ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿ (ಗಾರ್ಡ್) ಮೇಲೆ ಶಾಸಕ ಡಿ.ಕೆ.ಶಿವಕುಮಾರ್ ಪ್ರಚೋದಿತ ಗೂಂಡಾಗಳ ಗುಂಪು ಹಲ್ಲೆ ನಡೆಸಿದೆ~ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ದೂರಿದರು.`ಶುಕ್ರವಾರ ರಾತ್ರಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಕನಕಪುರದ ಬೇಕುಪ್ಪೆ ವೃತ್ತದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಅಡ್ಡಗಟ್ಟಿದ್ದಾರೆ. ಈ ವೇಳೆ ಎರಡು ಕಾರುಗಳಲ್ಲಿ ಬಂದ 10ರಿಂದ 15 ಜನ ಗೂಂಡಾಗಳು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತಾಖತ್ ಸಿಂಗ್ ರಾಣಾವತ್ ಅವರು ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ~ ಎಂದು ಅವರು ಶನಿವಾರ ಕಂದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಲಾರಿ ಮಾಲೀಕ ಮುತ್ತುರಾಜ್ ಎಂಬುವರ ಮೇಲೆ ದೂರು ನೀಡಲಾಗಿದೆ ಎಂದರು.`ಕನಕಪುರ ವ್ಯಾಪ್ತಿಯಲ್ಲಿ ನಿತ್ಯ ನೂರಾರು ಲಾರಿಗಳಲ್ಲಿ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಗ್ರಾನೈಟ್ ಶಿಲೆಗಳು ಸಾಗಾಟವಾಗುತ್ತಿವೆ. ಈ ಭಾಗದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಕೆಲ ದಿನಗಳಿಂದ ಅಧಿಕಾರಿಗಳ ತಂಡ ತನಿಖೆ ನಡೆಸಿದ್ದರಿಂದ ಅಕ್ರಮಕ್ಕೆ ಕಡಿವಾಣ ಬೀಳುತ್ತಿದೆ. ಇದರಿಂದ ಕಂಗಾಲಾಗಿರುವವರು ಈ ರೀತಿ ಗೂಂಡಾ ವರ್ತನೆ ತೋರುತ್ತಿದ್ದಾರೆ~ ಎಂದು ಆಪಾದಿಸಿದರು.ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ತಿಮ್ಮಪ್ಪ ಅವರನ್ನು ಸರ್ಕಾರ ಶನಿವಾರ ವರ್ಗಾವಣೆ ಮಾಡಿದೆ.

ಅವರನ್ನು ಅಮಾನತಿನಲ್ಲಿಟ್ಟು, ವಿಚಾರಣೆ ನಡೆಸಿ ನಂತರ ಅವರಿಗೆ ಸ್ಥಳ ನಿಯುಕ್ತಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ಸಚಿವರು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.