ಮಂಗಳವಾರ, ಏಪ್ರಿಲ್ 13, 2021
30 °C

ಅರಮನೆ ಮೈದಾನದಲ್ಲಿ ರ‌್ಯಾಲಿಗಳಿಗೆ ಬ್ರೇಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಮನೆ ಮೈದಾನದಲ್ಲಿ ರ‌್ಯಾಲಿಗಳಿಗೆ ಬ್ರೇಕ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದ ನಿರ್ವಹಣೆಗೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು, ಅಲ್ಲಿ ರಾಜಕೀಯ ಪಕ್ಷಗಳ ರ‌್ಯಾಲಿಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಗೃಹ ಇಲಾಖೆಗೆ ಸೂಚನೆ ನೀಡಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾನಾಯಕ ವಿ. ಸೋಮಣ್ಣ ಗುರುವಾರ ತಿಳಿಸಿದರು.ಅರಮನೆ ಮೈದಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 1998ರಲ್ಲಿ ನೀಡಿರುವ ಮಧ್ಯಂತರ ಆದೇಶದಲ್ಲಿ ಸೂಚಿಸಿರುವ ಮಾರ್ಗಸೂಚಿಯನ್ನು ಉಲ್ಲಂಘಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚನೆಗೆ ಸರ್ಕಾರ ಸಿದ್ಧವಿದೆ.ಆದರೆ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ, ಸಮಿತಿ ರಚಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸಲು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ನೇತೃತ್ವದಲ್ಲಿ 10 ದಿನಗಳಲ್ಲಿ ಸಭೆ ಕರೆದು ಚರ್ಚಿಸಲಾಗುವುದು ಎಂದು ಪರಿಷತ್ತಿನಲ್ಲಿ ಸೋಮಣ್ಣ ಹೇಳಿದರು.468 ಎಕರೆ ವಿಸ್ತೀರ್ಣ ಹೊಂದಿರುವ ಅರಮನೆ ಮೈದಾನದಲ್ಲಿ ವಾಣಿಜ್ಯ ಕಾರ್ಯಕ್ರಮಗಳಿಗೆ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಕಾರ್ಯಕ್ರಮ ಆಯೋಜಿಸುವವರು ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿ, ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಆರ್.ವಿ. ವೆಂಕಟೇಶ್ ಬುಧವಾರ ಮಾಡಿದ್ದ ಪ್ರಸ್ತಾವಕ್ಕೆ ಸೋಮಣ್ಣ ಗುರುವಾರ ಈ ಭರವಸೆ ನೀಡಿದರು.ಸೋಮಣ್ಣ ಅವರ ಉತ್ತರದಿಂದ ತೃಪ್ತರಾಗದ ವೆಂಕಟೇಶ್, ಖಾಸಗಿ ಕಾರ್ಯಕ್ರಮ ಸಂಘಟಿಸುವವರಿಗೆ ಸರ್ಕಾರ ನಿರ್ದಿಷ್ಟ ಷರತ್ತುಗಳನ್ನು ವಿಧಿಸುತ್ತಿಲ್ಲ ಎಂದು ಆರೋಪಿಸಿ, ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿಗಳಿಗೆ ಸಲ್ಲಿಸಿದ ಪ್ರಸಂಗವೂ ನಡೆಯಿತು. ಭಾವೋದ್ವೇಗಕ್ಕೆ ಒಳಗಾಗದಂತೆ ವೆಂಕಟೇಶ್ ಅವರಿಗೆ ಮನವಿ ಮಾಡಿದ ಸಭಾಪತಿಗಳು, ರಾಜೀನಾಮೆ ಪತ್ರವನ್ನು ಹಿಂದಿರುಗಿಸಿದರು. ವಾಣಿಜ್ಯ ಉದ್ದೇಶಗಳಿಂದ ಅಲ್ಲಿ ನಡೆಸುವ ಸಭೆ ಸಮಾರಂಭಗಳು, ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟು ಮಾಡುತ್ತಿವೆ ಎಂದು ವೆಂಕಟೇಶ್ ದೂರಿದರು.ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮತ್ತು ಜೆಡಿಎಸ್‌ನ ಎಂ.ಸಿ. ನಾಣಯ್ಯ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬ ಆರೋಪಗಳ ಕುರಿತು ಪರಿಶೀಲನೆ ನಡೆಸಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.ಅರಮನೆ ಮೈದಾನದಲ್ಲಿ ಯಾವುದೇ ಶಾಶ್ವತ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, `ಫನ್ ವರ್ಲ್ಡ್~ ಹಾಗೂ `ಸ್ಟಾರ್ ಸಿಟಿ~ ಕಳೆದ ಹಲವಾರು ವರ್ಷಗಳಿಂದ ಅಲ್ಲಿವೆ. ಅವೆರಡಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅನುಮತಿ ನೀಡಿದ್ದು ಹೇಗೆ ಎಂದು ನಾಣಯ್ಯ ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ಮಾರ್ಗಸೂಚಿ...

(ಅರಮನೆ ಮೈದಾನದ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್

ನೀಡಿರುವ ಮಾರ್ಗಸೂಚಿ ಹೀಗಿದೆ)

* ನಿರ್ದಿಷ್ಟ ಅವಧಿಯ ಗುತ್ತಿಗೆ ಅಥವಾ ಬಾಡಿಗೆಗೆ ಅರಮನೆ ಮೈದಾನದ 30 ಎಕರೆ ಪ್ರದೇಶವನ್ನು ಮಾತ್ರ ನೀಡಬಹುದು.

* ಕಾರ್ಯಕ್ರಮವನ್ನು ಆರಂಭಿಸುವ ಮೂವತ್ತು ದಿನ ಮೊದಲೇ ಸರ್ಕಾರದಿಂದ ಅನುಮತಿ ಪಡೆಯಬೇಕು.

*ಮೈದಾನದಲ್ಲಿರುವ ಯಾವುದೇ ಮರ ಕಡಿಯುವಂತಿಲ್ಲ.

* ಕಾರ್ಯಕ್ರಮ ಆಯೋಜಿಸುವವರು ನಿಬಂಧನೆಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು.

* ಕಾರ್ಯಕ್ರಮ ಮುಗಿದ ತಕ್ಷಣ, ತಾತ್ಕಾಲಿಕವಾಗಿ ನಿರ್ಮಿಸಿದ ಎಲ್ಲವನ್ನೂ ತೆಗೆದುಹಾಕಬೇಕು.

*ಅರಮನೆ ಮೈದಾನವನ್ನು ರಾಜಕೀಯ ರ‌್ಯಾಲಿಗಳಿಗೆ ನೀಡಬಾರದು.

* ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಈ ಜಾಗವನ್ನು ಬಾಡಿಗೆಗೆ ನೀಡಬಾರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.