ಭಾನುವಾರ, ಮೇ 22, 2022
21 °C

ಅರಳಿತು ಮಂದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತೂಕ ಮಾಡಲಿಕ್ಕೆ ಆಗದಷ್ಟು ಒಳ್ಳೆಯ ವಿಮರ್ಶೆ, ಪ್ರತಿಕ್ರಿಯೆ ಪತ್ರಿಕೆ-ಮಾಧ್ಯಮಗಳಿಂದ ಸಿಕ್ಕಿದೆ. ನಾವೆಲ್ಲ ಹೊಸಬರಾದರೂ ನಮ್ಮ ಕೆಲಸದ ಬಗ್ಗೆ ಚಿತ್ರರಂಗದ ಹಿರಿಯರು, ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ತುಂಬಾ ಖುಷಿಯಾಗಿದೆ....’‘ಒಲವೇ ಮಂದಾರ’ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಬೆಚ್ಚನೆ ಪ್ರತಿಕ್ರಿಯೆ ಬಗ್ಗೆ ಖುಷಿಯಿಂದ ಮಾತನಾಡುತ್ತಿದ್ದ ನಿರ್ಮಾಪಕ ಬಿ.ಗೋವಿಂದರಾಜ್ ಅವರ ಮಾತು, ಖುಷಿಯಿಂದ ವಿಷಾದದತ್ತ ಸಾಗಿತು-‘ಪಿವಿಆರ್‌ನವರು ಹೀಗೇಕೆ ಮಾಡ್ತಿದಾರೋ ಗೊತ್ತಾಗ್ತಿಲ್ಲ. ಒಬ್ಬರೇ ಇರಲಿ, ಇಬ್ಬರೇ ಇರಲಿ- ಹಿಂದಿ, ಇಂಗ್ಲಿಷ್ ಸಿನಿಮಾಗಳು ಓಡ್ತಾನೇ ಇರ್ತವೆ. ಆದರೆ ಒಳ್ಳೇ ಕಲೆಕ್ಷನ್ ಇದ್ರೂ ಕನ್ನಡ ಚಿತ್ರಗಳು ಮಾತ್ರ ಪಿವಿಆರ್‌ನಲ್ಲಿ ವಾರ ದಾಟೋದೇ ಇಲ್ಲ’. ಗೋವಿಂದರಾಜ್ ಮಾತಿನಲ್ಲಿ ವಿಷಾದವೂ ಇತ್ತು. ಆರೋಪವೂ ಇತ್ತು.‘ಒಳ್ಳೇ ಕಲೆಕ್ಷನ್ ಇದ್ರೂ ಕೂಡ ಹೇಳ್ದೇ ಕೇಳ್ದೇ ನಮ್ಮ ಸಿನಿಮಾ ತೆಗೆದು ಹಾಕಿದ್ದಾರೆ. ಕೊನೆಕೊನೆಗಂತೂ ಸುಮಾರು ಎಂಬತ್ತು ಪ್ರೇಕ್ಷಕರು ಥಿಯೇಟರ್‌ನಲ್ಲಿದ್ದರು. ಪಿವಿಆರ್‌ನ ಈ ಧೋರಣೆ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲೇಬೇಕು. ನಾವು ಹೊಸಬರು. ನಮಗಾದ ಅನ್ಯಾಯದ  ಬಗ್ಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಹಿರಿಯರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಕಾನೂನು ಸಾಧ್ಯತೆಗಳ ಚೌಕಟ್ಟನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಈ ಕಹಿಯ ಹೊರತಾಗಿಯೂ ಬೆಂಗಳೂರಿನ ಇಪ್ಪತ್ತು ಥಿಯೇಟರ್‌ಗಳು ಪ್ರಿಂಟ್ಸ್ ಕೇಳ್ತಿರೋದು ಸಂತೋಷಕ್ಕೆ ಕಾರಣವಾಗಿದೆ. ಈವರೆಗಿನ ಕಲೆಕ್ಷನ್ ಲೆಕ್ಕ ಹಾಕಿಲ್ಲ. ಅಂದರೆ ಲೆಕ್ಕ ಮಾಡೋವಷ್ಟು ಕಲೆಕ್ಷನ್ ಆಗಿಲ್ಲ ಅಂದ್ಕೊಳ್ಳಿ’ ಎಂದು ಗೋವಿಂದರಾಜು ಮುಗುಳ್ನಕ್ಕರು.ಚೊಚ್ಚಿಲ ಚಿತ್ರಕ್ಕೆ ಸಿಕ್ಕ ಉತ್ತೇಜನ ನಿರ್ದೇಶಕ ಜಯತೀರ್ಥ ಅವರನ್ನೂ ಪುಳಕಗೊಳಿಸಿತ್ತು. ‘ನಿರ್ಮಾಪಕರು ಸಂತೃಪ್ತರಾದರೆ ನಾವು ಬದುಕಿದಂತೆ. ಈ ಚಿತ್ರ ಬಿಡುಗಡೆಯಾಗುವ ಮೊದಲು ನಾವು ಹೊಸಬರು ಯಾರ್ಯಾರೋ ಆಗಿದ್ವಿ. ಈಗ ಸೆಲೆಬ್ರಿಟಿಗಳಂತಾಗಿದ್ದೀವಿ. ಎಲ್ಲ ಕಡೆಯಿಂದ ಫೋನ್ ಮಾಡ್ತಿದಾರೆ. ಸಿನಿಮಾ ಚೆನ್ನಾಗಿದೆ ಅಂತ ಹೇಳ್ತಿದಾರೆ’ ಎಂದು ಭಾವುಕರಾದರು. ‘ಚಿತ್ರದ ಪ್ರಚಾರ ಕಾರ್ಯಕ್ಕೆ ಬೇರೆ ನಿರ್ದೇಶಕರನ್ನು ಬಳಸಿಕೊಳ್ಳುವ ಯೋಚನೆ ಇದೆ’ ಎಂದೂ ಜಯತೀರ್ಥ ಹೇಳಿದರು.ಛಾಯಾಗ್ರಾಹಕ ರವಿಕುಮಾರ್- ‘ನಮ್ಮ ಮೊದಲ ಪ್ರಯತ್ನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂಡಸ್ಟ್ರಿಯವರು ಮುಂದಿನ ಹೆಜ್ಜೆಗೆ ಉತ್ಸಾಹ ತುಂಬ್ತಿದಾರೆ. ಮೊದಲ ಅವಕಾಶಕ್ಕೇ ಇಷ್ಟೊಂದು ಭರವಸೆ ಸಿಕ್ಕಿದ್ದು ನೋಡಿ ಉತ್ಸಾಹದ ಜೊತೆ ಭಯವೂ ಹುಟ್ಟಿದೆ’ ಎಂದರು. ಚಿತ್ರದ ತಾಂತ್ರಿಕ ವರ್ಗ ಮತ್ತು ಸಹಾಯಕರ ಸಹಕಾರ-ಕಾರ್ಯತತ್ಪರತೆಯನ್ನು ರವಿಕುಮಾರ್ ನೆನಪಿಸಿಕೊಂಡರು.ಮೊದಲ ಬಾರಿಗೆ ನಾಯಕನಾಗಿರುವ ಶ್ರೀಕಾಂತ್, ನಟಿ ವೀಣಾ ಸುಂದರ್, ಪ್ರಧಾನ ನಿರ್ಮಾಪಕ ಸಂಪತ್‌ಕುಮಾರ್ ಮಂದಾರ ನಿರ್ಮಾಣದ ಅನುಭವಗಳನ್ನು ಮೆಲುಕು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.