ಮಂಗಳವಾರ, ಮೇ 18, 2021
28 °C

ಅರವತ್ತರಲ್ಲಿ ಆಸೆ ಪಟ್ಟು ಮಾಡುವುದು ಏನೂ ಇಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇ 29 ಅಂಬರೀಷ್ ಅವರ 60ನೇ ಹುಟ್ಟುಹಬ್ಬ. ಅರವತ್ತರ ಸಂಭ್ರಮದೊಂದಿಗೆ, ಅಂಬರೀಷ್ ಬೆಳ್ಳಿತೆರೆ ಪ್ರವೇಶಕ್ಕೆ ನಲವತ್ತು ವರ್ಷಗಳಾದ ಸಡಗರವೂ ಒಟ್ಟುಗೂಡಿದೆ. ಈ ಯುಗಳ ಸಂಭ್ರಮವನ್ನು ಒಟ್ಟಿಗೆ ಆಚರಿಸಲು ಕನ್ನಡ ಚಿತ್ರರಂಗ ಮುಂದಾಗಿದೆ.ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೇ 29ರಂದು `ಅಂಬಿ ಸಂಭ್ರಮ~ ದೊಡ್ಡ ರೀತಿಯಲ್ಲಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಮೇ 27ರಿಂದಲೇ ಮೂರು ದಿನಗಳ ಕಾಲ ಕನ್ನಡ ಚಿತ್ರೋದ್ಯಮದ ಎಲ್ಲ ಚಟುವಟಿಕೆಗಳಿಗೆ ರಜೆ ನೀಡಲು ಚಲನಚಿತ್ರ ವಾಣಿಜ್ಯ ಮಂಡಲಿ ನಿರ್ಧರಿಸಿದೆ.ಎಲ್ಲ ಸಡಗರದ ಕೇಂದ್ರವಾದ ಅಂಬರೀಷ್ ಅವರನ್ನು ಸಂದರ್ಶಿಸಲು `ಸಿನಿಮಾ ರಂಜನೆ~ ಪ್ರಯತ್ನಿಸಿದಾಗ, ಅವರು ಕೊನೆಗೆ ಸಿಕ್ಕಿದ್ದು ಮೈಸೂರಿನಲ್ಲಿ, `ಡ್ರಾಮಾ~ ಚಿತ್ರೀಕರಣದ ಸಂದರ್ಭದಲ್ಲಿ. ಶೂಟಿಂಗ್ ನಡುವಿನ ವಿರಾಮದಲ್ಲಿ ಮಾತಿಗೆ ಕೂತ ಅವರನ್ನು ಹೊಸ ಕಲಾವಿದರನ್ನು ಕೇಳಿದಂತೆ ಹಲವು ಪ್ರಶ್ನೆಗಳನ್ನು ಕೇಳಿದೆವು.ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸುತ್ತಾ ಹೋದ ಅವರ ಮಾತುಗಳಲ್ಲಿ, ಪ್ರೀತಿ ಮತ್ತು ಅಭಿಮಾನ ಎನ್ನುವ ಭಾವನೆ ಮತ್ತೆ ಮತ್ತೆ ಮಾತಿನ ರೂಪದಲ್ಲಿ ವ್ಯಕ್ತವಾಗುತ್ತಿತ್ತು. ಅದು ಚಿತ್ರರಂಗ ಮತ್ತು ಜನತೆಯಿಂದ ಅವರು ಪಡೆದದ್ದೂ ಹೌದು, ಹಂಚಿಕೊಂಡಿರುವುದೂ ಹೌದು. ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ:

ನಿಮ್ಮ ಅರವತ್ತನೇ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಅಭಿನಂದನೆಗಳು. ವೃತ್ತಿಜೀವನದಲ್ಲಿ ನಾಲ್ಕು ದಶಕಗಳನ್ನು ಪೂರೈಸಿದ್ದೀರಿ. ಈ ಸಂಕ್ರಮಣದ ಸಂಭ್ರಮ ಏನನ್ನಿಸುತ್ತಿದೆ?

ನಾನು 40 ವರ್ಷದಿಂದ ಚಿತ್ರರಂಗದಲ್ಲಿ ಇದ್ದೀನಿ. ಅಷ್ಟು ವರ್ಷಗಳು ಅರ್ಥವಾಗದೇ ಇದ್ದದ್ದು ಈಗ ಅರ್ಥವಾಗುತ್ತಿದೆ! ಅಭಿಮಾನಿಗಳು, ಚಿತ್ರೋದ್ಯಮದವರ ಪ್ರೀತಿ ಮತ್ತು ಗೌರವಕ್ಕೆ ಮನಸೋತಿದ್ದೇನೆ. ಇದು ನಾನು ಸಂಪಾದಿಸಿರುವ ಆಸ್ತಿ. ಇಡೀ ಚಿತ್ರರಂಗ ಒಂದಾಗಿ ಸಮಾರಂಭ ಮಾಡುತ್ತಿರುವುದು ಖುಷಿ ತಂದಿದೆ.

ನಿಮ್ಮ ಹುಟ್ಟುಹಬ್ಬ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಭಾಗವಹಿಸುತ್ತಾರಂತೆ?

ಹೌದು, ಆದರೆ ಯಾರ‌್ಯಾರು ಬರುತ್ತಾರೆ ಎನ್ನುವುದು ಮೇ ಮೂರನೇ ವಾರದಲ್ಲಿ  ಪಕ್ಕಾ ಆಗುತ್ತೆ.

ನಾಲ್ಕು ದಶಕಗಳ ಸಿನಿಮಾ ಯಾನವನ್ನು ತಿರುಗಿ ನೋಡಿದರೆ ಏನನ್ನಿಸುತ್ತದೆ?

ಇಷ್ಟು ವರ್ಷ ಚಿತ್ರರಂಗದಲ್ಲಿ ಇದ್ದೀವಲ್ಲ ಅನಿಸುತ್ತೆ! ಇದಕ್ಕೆ ಜನರು ತೋರಿಸಿದ ಪ್ರೀತಿ ಮತ್ತು ಅಭಿಮಾನವೇ ಕಾರಣ.

ರಾಜ್‌ಕುಮಾರ್ 50 ವರ್ಷಗಳು, ವಿಷ್ಣುವರ್ಧನ್ ಮತ್ತು ನೀವು 40 ವರ್ಷಗಳು ಚಿತ್ರರಂಗದಲ್ಲಿ ಉಳಿದಿರಿ, ಇದು ಹೇಗೆ ಸಾಧ್ಯವಾಯ್ತು?

ಜನರು ಇಷ್ಟಪಟ್ಟರು; ಆದ್ದರಿಂದಲೇ ಸಾಧ್ಯವಾಯ್ತು.

ರಾಜ್‌ಕುಮಾರ್ ನಂತರ ನೀವು ಉದ್ಯಮದ ಹಿರಿಯರಾಗಿದ್ದೀರಿ. ಚಿತ್ರರಂಗವನ್ನು ಒಂದು ಕುಟುಂಬದಂತೆ ಮುನ್ನಡೆಸುವುದು ಕಷ್ಟವಲ್ಲವಾ?

ರಾಜ್‌ಕುಮಾರ್ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಏಕೆಂದರೆ ಅವರು ಇತಿಹಾಸವಾಗಿದ್ದಾರೆ.

ನಿಮ್ಮ ಆಪ್ತಮಿತ್ರ ವಿಷ್ಣುವರ್ಧನ್ ಹೆಸರಿನ ಪ್ರಶಸ್ತಿ ದೊರೆತಿದೆ...

ಅವನೇ ಹೋದಮೇಲೆ ಆ ಪ್ರಶಸ್ತಿ ತೆಗೆದುಕೊಂಡು ಏನ್ಮಾಡ್ಲಿ. ಅವನು ಅನಿರೀಕ್ಷಿತವಾಗಿ ಬೇಗ ಹೋಗಿಬಿಟ್ಟ. ಅವನು ಇರಬೇಕಿತ್ತು ಅನಿಸುತ್ತಿದೆ.

ನಿಮ್ಮನ್ನು ಕಂಡರೆ ಎಲ್ಲರಿಗೂ ಇಷ್ಟ. ನಿಮ್ಮ ಶಕ್ತಿಯ ಗುಟ್ಟೇನು?

ಯಾರಲ್ಲಿ ಒಳ್ಳೆಯತನ ಇರುತ್ತದೆಯೋ ಅದನ್ನು ತೆಗೆದುಕೊಳ್ಳುತ್ತೇನೆ.

ದೌರ್ಬಲ್ಯವೂ ಇರಬೇಕಲ್ಲವೇ?

`.........~ (ದೊಡ್ಡ ನಗು)

 

ನಿಮ್ಮ ಬದುಕಿನಲ್ಲಿ ಸುಮಲತಾ ಬರದೇ ಹೋಗಿದ್ದರೆ?


ಬಂದಾಗಲೂ ಚೆನ್ನಾಗಿದ್ದೀನಿ, ಬರದೇ ಹೋಗಿದ್ದರೂ ಚೆನ್ನಾಗಿರುತ್ತಿದ್ದೆ (ಮತ್ತೆ ನಗು).

ನಿಮಗೆ ಇಷ್ಟವಾದ ಚಿತ್ರ?

ರಂಗನಾಯಕಿ. ಆ ಚಿತ್ರದಲ್ಲಿನ ಪಾತ್ರವನ್ನು ಎಂದೆಂದಿಗೂ ಮರೆಯಲಾಗದು (ಕಣ್ಣುಗಳು ಅರಳಿದವು).

ನೀವು ಸಿನಿಮಾ ನಟರಾಗದೇ ಹೋಗಿದ್ದರೆ?

ಯಾವುದಾದರೂ ವ್ಯಾಪಾರ ಮಾಡುತ್ತಿದ್ದೆ.

ನಿಮ್ಮ ಮಗ ಅಭಿಷೇಕ್‌ಗೌಡ ಮುಖಕ್ಕೆ ಬಣ್ಣ ಹಚ್ಚುತ್ತಾರಾ?

ಅಭಿಷೇಕ್ ಡಿಗ್ರಿ ಓದುತ್ತಿದ್ದಾನೆ. ಸಿನಿಮಾದಲ್ಲಿ ನಟಿಸುವುದು ಬಿಡುವುದು ಅವನಿಗೆ ಬಿಟ್ಟದ್ದು.

ಕನ್ನಡ ಚಿತ್ರರಂಗದ ಬೆಳವಣಿಗೆ ಹೇಗಿದೆ?

ನಮ್ಮ ಚಿತ್ರರಂಗ ತಾಂತ್ರಿಕವಾಗಿ ಬೆಳವಣಿಗೆ ಹೊಂದಿದೆ. ಆದರೂ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಎದುರಿಸಬೇಕು. ಬೆಂಗಳೂರಿನ ಎಂ.ಜಿ. ರೋಡ್‌ನಲ್ಲಿ ಇಂದಿಗೂ ಕನ್ನಡ ಸಿನಿಮಾದ ಪೋಸ್ಟರ್ ನೋಡಲು ಆಗುತ್ತಿಲ್ಲ. ಇಂಥ ಸ್ಥಿತಿ ಬದಲಾಗಬೇಕು.

ಮತ್ತೆ ಶ್ರೀರಂಗಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೀರಾ?

ಚುನಾವಣೆ ಇನ್ನೂ ದೂರದಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಆ ಬಗ್ಗೆ ಯೋಚಿಸುತ್ತೇನೆ.

ರಾಜಕೀಯದಿಂದ ದೂರ ಉಳಿದಂತೆ ಕಾಣುತ್ತೀರಿ?

ರಾಜಕಾರಣದಲ್ಲಿ ವಾತಾವರಣ ತುಂಬಾ ಕೆಟ್ಟಿದೆ. ಸ್ವಾರ್ಥ, ದುರಾಸೆ ಹೆಚ್ಚಾಗಿದೆ. ಇದರಿಂದ ರಾಜ್ಯಕ್ಕೆ ಒಳ್ಳೆಯದಲ್ಲ. ಜನರಲ್ಲಿ ಶಿಕ್ಷಣ ಮತ್ತು ಅರಿವು ಹೆಚ್ಚಾಗಬೇಕು. ಇಲ್ಲದೇ ಹೋದರೆ ಎಲ್ಲ ಅಭ್ಯರ್ಥಿಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿ ಬಿಡುತ್ತಾರೆ, ಇದು ಸರಿಯಲ್ಲ. ಏಕೆಂದರೆ ಎಲ್ಲ ಅಭ್ಯರ್ಥಿಗಳು ಒಂದೇ ಆಗಿರುವುದಿಲ್ಲ. ಅನರ್ಹರನ್ನು ಆರಿಸುವುದು `ನೋ ಪಾರ್ಕಿಂಗ್~ ಜಾಗದಲ್ಲಿ ವಾಹನ ನಿಲ್ಲಿಸಿದಂತೆ ಆಗುತ್ತದೆ.

 

ನಿಮ್ಮ ಮುಂದಿನ ಸಿನಿಮಾ?

ದರ್ಶನ್ ಜೊತೆ ಬುಲ್‌ಬುಲ್.

ನೀವು ಮಾಡಲೇಬೇಕು ಎಂದು ಹಂಬಲಿಸುವ ಪಾತ್ರ?

ಯಾವುದೂ ಇಲ್ಲ. 60 ನೇ ವಯಸ್ಸಿನಲ್ಲಿ ಆಸೆಪಟ್ಟು ಮಾಡುವುದು ಏನೂ ಇಲ್ಲ.

ಚಿತ್ರಗಳು : ಎಚ್.ಜಿ. ಪ್ರಶಾಂತ್  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.