ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅರುಣ ನನ್ನ ಶಕ್ತಿ'

Last Updated 14 ಜೂನ್ 2013, 19:59 IST
ಅಕ್ಷರ ಗಾತ್ರ

ನಿಘಂಟು ತಜ್ಞ, ನಡೆದಾಡುವ ವಿಶ್ವಕೋಶ ಇತ್ಯಾದಿ ಹೆಗ್ಗಳಿಕೆಯ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ಮತ್ತೆ ಜವ್ವನ ಬಂದಂತಿದೆ. ಎರಡನೇ ಮಗ ಅರುಣ್ ಜಿ.ವಿ. ಅವರ ಮಗಳ ನಾಲ್ಕು ತಿಂಗಳ ಮಗು ಜಿ.ವಿ. ಸರ್‌ಗೆ ಮುತ್ತಾತನ ಪಟ್ಟ ಕೊಟ್ಟಿದ್ದಾಳೆ. ಅವರ ಹೊಸ ಚೈತನ್ಯಕ್ಕೆ ಆ ಕಂದನೇ ಕಾರಣ.

ಎಲ್ಲರೊಂದಿಗೆ ಸ್ನೇಹಭಾವದಿಂದ ಬೆರೆಯುವ ವೆಂಕಟಸುಬ್ಬಯ್ಯ ಅವರಿಗೆ ದಶಕಗಳಿಂದಲೂ ಹೆಗಲೆಣೆಯಾಗಿ ನಿಂತ ಮಗನ ಬಗ್ಗೆ ಎಲ್ಲಿಲ್ಲದ ಅಕ್ಕರೆ. `ಇದ್ದರೆ ಇಂತಹ ಮಗ ಇರಬೇಕು' ಎಂದು ಬಾಯಿಬಿಟ್ಟು ಹೇಳಿಕೊಳ್ಳುವಂತಹ ಧನ್ಯತಾಭಾವ.

ಅಪ್ಪಂದಿರ ದಿನದ ಹಿನ್ನೆಲೆಯಲ್ಲಿ ಅಪ್ಪನ ಬಾಯಲ್ಲಿ ಮಗನ ಬಗ್ಗೆ ಹೃದಯದ ಮಾತು...

ನನ್ನ ಪ್ರೈವೇಟ್ ಸೆಕ್ರೆಟರಿ ಅವನೇ. ನನಗೆ ಎಲ್ಲಾ ರೀತಿಯ ಶಕ್ತಿ ಅವನು. ನಾನು ಏನೇ ಕೆಲಸ ಮಾಡೋದಿದ್ರೂ ಅದನ್ನು ನಾನಲ್ಲ ಮಾಡೋದು, ಅವನು. ಹಾಗಾಗಿ ಅವನ ಬಗ್ಗೆ ಹೇಳೋದಿಕ್ಕೆ ತುಂಬಾ ಇದೆ.

ನನ್ನ ನಾಲ್ಕು ಮಕ್ಕಳ ಪೈಕಿ ಎರಡನೆಯವನು ಅರುಣ. ಅವನು ಬಹಳ ಜೀನಿಯಸ್. ಮೆಕಾನ್ ಕಂಪೆನಿಯಲ್ಲಿ ಪ್ರಧಾನ ವ್ಯವಸ್ಥಾಪಕನಾಗಿದ್ದು ನಿವೃತ್ತನಾಗಿದ್ದಾನೆ. ಅವನಿಗೂ ಸಾಹಿತ್ಯದಲ್ಲಿ ಆಸಕ್ತಿಯಿದೆ. ಬರವಣಿಗೆ ಅವನಿಗೆ ಸಿದ್ಧಿಸಿದೆ. ಕೆಲವು ಪುಸ್ತಕಗಳನ್ನೂ ಬರೆದಿದ್ದಾನೆ.

ನಾನು `ಇಗೋ ಕನ್ನಡ' ಮೊದಲ ಸಂಪುಟ ಸಿದ್ಧಪಡಿಸಬೇಕಾದರೆ 18 ವರ್ಷ ಅದಕ್ಕಾಗಿ ಕೆಲಸ ಮಾಡಿದೆ. ಪ್ರತಿಯೊಂದು ಟಿಪ್ಪಣಿಯಿಂದ ಹಿಡಿದು ನಿಘಂಟಿನ ಪೂರ್ವತಯಾರಿಯಲ್ಲಿ ಅವನು ಸಂಪೂರ್ಣ ತೊಡಗಿಸಿಕೊಂಡಿದ್ದ.

ಓದುವುದೆಂದರೆ ನನಗೆ ಯಾವತ್ತೂ ಇಷ್ಟವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ಬರೆಯಲು ಆಗುತ್ತಿಲ್ಲ. ಆಗ ಅರುಣನನ್ನು ಕರೆದು ಡಿಕ್ಟೇಟ್‌ಮಾಡುತ್ತೇನೆ. ಅವನು ಬರೆಯುತ್ತಾನೆ. ಮುಂಚಿನಿಂದಲೂ ನನ್ನೆಲ್ಲಾ ಬರವಣಿಗೆಗಳ ಮೊದಲ ಓದುಗ, ವಿಮರ್ಶಕ ಅರುಣನೇ. ಏನಾದರೂ ಸೇರಿಸಬೇಕೇ ಅಥವಾ ತೆಗೆಯಬೇಕೇ ಎಂಬುದನ್ನು ಕರಾರುವಾಕ್ ಹೇಳುತ್ತಾನೆ. ಅವನಿಗೆ ತೃಪ್ತಿಯಾಯಿತೆಂದರೆ ಓದುಗರಿಗೆ ತೃಪ್ತಿಯಾಗುತ್ತದೆ ಎಂಬ ವಿಶ್ವಾಸ ನನ್ನದು.

ಬೆಂಗಳೂರಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅವನು ನನ್ನನ್ನು ಸುಸ್ತಾಗದಂತೆ, ದಿನಾ ಅಗತ್ಯ ವಿಶ್ರಾಂತಿ ಪಡೆದುಕೊಳ್ಳುವಂತೆ ದೂರವಾಣಿ ಕರೆ ಮತ್ತು ಸಂದರ್ಶಕರನ್ನು ನಿಭಾಯಿಸಿದ ರೀತಿ ಎಂದಿಗೂ ಮರೆಯಲಾಗುವುದಿಲ್ಲ. ನಿಜಕ್ಕೂ ಅವನು ಗ್ರೇಟ್.

ಸಂಬಳವಿಲ್ಲದ ಕೆಲಸ ಆರಿಸಿಕೊಂಡ!
ನನ್ನ ಹೆಂಡತಿ ಲಕ್ಷ್ಮೀ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದ ಸಂದರ್ಭದಲ್ಲಿ ನನಗೆ ಅವನ ಉಪಸ್ಥಿತಿಯ ಅವಶ್ಯಕತೆ ನಿಜಕ್ಕೂ ಇತ್ತು. `ಮೆಕಾನ್'ನಲ್ಲಿ ಹೊರರಾಜ್ಯಗಳಲ್ಲಿ ಕೆಲಸ ಮಾಡಿಕೊಂಡಿದ್ದ ಅವನು ಬೆಂಗಳೂರಿಗೆ ವರ್ಗಾವಣೆ ಪಡೆದು ಬಂದದ್ದೂ ನನಗಾಗಿಯೇ.

ಈಗ ನಮ್ಮ ಮನೆಯಲ್ಲಿ ಎಲ್ಲವೂ ಅವನಿಂದಲೇ ನಡೆಯವುದು. ಅವನ ಹೆಂಡತಿ ಹೇಮಾ ಎನ್‌ಎಂಕೆಆರ್‌ವಿಯಲ್ಲಿ ಪ್ರಾಧ್ಯಾಪಕಿ. ಅವಳೂ ಅಷ್ಟೇ ಮಗಳಂತೆ ನಮ್ಮನ್ನು ನೋಡಿಕೊಳ್ಳುತ್ತಾಳೆ.
ಇದು ನಮ್ಮ ಪುಣ್ಯ.

ಅರುಣನಿಗೆ ಈಗ 61. ಆದರೆ ಅವನ ಉತ್ಸಾಹಕ್ಕೆ ಷೋಡಶ. ಅವನಿಗೆ ಈಗಲೂ ತಿಂಗಳಿಗೆ ಲಕ್ಷಗಟ್ಟಲೆ ಸಂಬಳದ ಆಫರ್‌ಗಳು ಬರುತ್ತಿವೆ. ಆದರೆ ಅವನಿಗೆ ಅದ್ಯಾವುದರ ಬಗ್ಗೆಯೂ ಆಸಕ್ತಿಯಿಲ್ಲ. ಮನೆಯಿಂದಲೇ ಏನಾದರೂ ಪ್ರಾಜೆಕ್ಟ್‌ಗಳನ್ನು ಮಾಡುತ್ತಾನೆ. ಅವನ ಆಯ್ಕೆ ಅಪ್ಪ, ಅಮ್ಮ ಮತ್ತು ಸಂಸಾರ.

`ಅಪ್ಪ ನನ್ನ ಹೆಮ್ಮೆ'
`ಮಕ್ಕಳಿಗೆ ಶಿಕ್ಷಣ ಕೊಡಬೇಕು. ಅದು ನಮ್ಮ ಕರ್ತವ್ಯ ಅಂತ ಯಾವಾಗಲೂ ಹೇಳ್ತಾ ಇರ‌್ತಾರೆ ತಂದೆ. ಅವರು ತಮ್ಮ ಕಷ್ಟದ ದಿನಗಳಲ್ಲೂ ನಮಗೆ ಉತ್ತಮ ಶಿಕ್ಷಣ ನೀಡಿ ಒಳ್ಳೆಯ ತಳಹದಿ ಹಾಕಿಕೊಟ್ಟರು. ಅವರದೇ ಸತ್ಸಂಗವೂ ಇತ್ತು.

ಅಪ್ಪ ಅಮ್ಮ ಇಬ್ಬರ ಸಂಸ್ಕಾರವೂ ನಮಗೆ ಮಕ್ಕಳಿಗೆ ಬಂದಿದೆ.ಅಪ್ಪ-ನಾವು ಕರೆಯುವಂತೆ `ಅಣ್ಣ' ನಮ್ಮ ಪಾಲಿನ ಶಕ್ತಿ. ಪಾಸಿಟಿವ್ ಎನರ್ಜಿ. ಸರ್ವಸ್ವ. ಅವರ ಮಗ ಎಂಬುದೇ ನನ್ನ ಪಾಲಿಗೆ ಹೆಮ್ಮೆ.

-ರೋಹಿಣಿ ಮುಂಡಾಜೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT