ಮಂಗಳವಾರ, ಜೂನ್ 22, 2021
23 °C

ಅರ್ಥಪೂರ್ಣ ಕಾಮನಾ ದಹನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ಕಾಮನಾ ದಹನ~ ಎಂದ ತಕ್ಷಣ, ರಸ್ತೆಯ ಮಧ್ಯದಲ್ಲೊಂದು ಗುಂಡಿ ಅಥವಾ ತೊಟ್ಟಿ. ಅದರಲ್ಲಿ ಎಲ್ಲಿಂದಲೋ ತಂದ ಕಟ್ಟಿಗೆ, ತೆಂಗಿನ ಗರಿ ಮತ್ತು ಒಣ ಕುಳ್ಳುಗಳನ್ನು ಹಾಕಿ ಸುಟ್ಟು ಘೋಷಣೆ ಕೂಗುವುದು ಸರ್ವೇ ಸಾಮಾನ್ಯ.ಆದರೆ, ಇದೆಲ್ಲದರ ಹೊರತಾಗಿ, ಕಾಮನ ದಹನವನ್ನು ಆದರ್ಶವಾಗಿ ಮತ್ತು ಆಧ್ಯಾತ್ಮಿಕವಾಗಿ ಹೇಗೆ ಮಾಡಬಹುದು ಎಂಬುದನ್ನು ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಗುರುವಾರ ಮಾಡಿ ತೋರಿಸಿದರು. `ಕಾಮನಾ ದಹನ~ ಎಂಬ ಅರ್ಥಪೂರ್ಣ ಹೆಸರಿನೊಂದಿಗೆ ಈ ವಿನೂತನ ಕಾರ್ಯಕ್ರಮ ನಡೆಯಿತು.ಶಾಲೆಯ ಎಂಟರಿಂದ ಹತ್ತನೆ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮಲ್ಲಿನ ದುರ್ಗುಣ, ದುರಭ್ಯಾಸಗಳನ್ನು, ತಮ್ಮ ಪ್ರಗತಿಗೆ ಅಡ್ಡಿಯಾಗುತ್ತಿರುವ ಅಂಶವನ್ನು ಒಂದು ಚೀಟಿಯಲ್ಲಿ ಬರೆದು ಅದನ್ನು ಉರಿಯುತ್ತಿರುವ ಹೋಮಕುಂಡದ ಬೆಂಕಿಗೆ ಹಾಕುವ ಮೂಲಕ ಈ ವಿನೂತನ ಆಚರಣೆ ನಡೆಸಿದರು.ಆರಂಭದಲ್ಲಿ ಶಾಲಾ ಶಿಕ್ಷಕಿ ಬಿ. ಶ್ರೀದೇವಿ ಅವರು, ಕಾಮದಹನದ ಆಚರಣೆಯ ಹಿನ್ನೆಲೆಯನ್ನು ಮತ್ತು ನಿಜವಾಗಿಯೂ ಸುಡಬೇಕಾದದ್ದು ಕಾಮಣ್ಣನನ್ನು ಅಲ್ಲ, ನಮ್ಮ ಕೆಟ್ಟ ಕಾಮನೆಗಳನ್ನು ಎಂಬುದನ್ನು ಪೌರಾಣಿಕ ಘಟನೆಗಳನ್ನು ಹೇಳುವುದರ ಮೂಲಕ ವಿವರಿಸಿದರು.ನಂತರ ಮೂರು ಬಾರಿ ಓಂಕಾರ ಹೇಳಿಸಲಾಯಿತು. ಮಕ್ಕಳಿಗೆ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ಎರಡು ನಿಮಿಷಗಳ ಕಾಲಾವಕಾಶ ನೀಡಲಾಯಿತು. ಅವರ ಪ್ರಗತಿಗೆ ಅಡ್ಡಿಯಾದ ಒಂದು ಕೆಟ್ಟ ಅಂಶವನ್ನು ಗುರುತಿಸಿ, ಅದನ್ನು ಒಂದು ಕಾಗದದಲ್ಲಿ ಬರೆಯುವಂತೆ ತಿಳಿಸಲಾಯಿತು. ಮಕ್ಕಳೆಲ್ಲರೂ ಬರೆದಾದ ನಂತರ, ಅಸತೋಮಾ ಸದ್ಗಮಯ... ಹೇಳುವುದರ ಮೂಲಕ ಕತ್ತಲಿನಿಂದ ಬೆಳಕಿನ ಕಡೆಗೆ ನಡೆಯುವ ಶಕ್ತಿಯನ್ನು ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್ ಹೋಮಕುಂಡಕ್ಕೆ ಕರ್ಪೂರ ಹಾಕುವುದರ ಮೂಲಕ, ಪವಿತ್ರಾಗ್ನಿಗೆ ಚಾಲನೆ ನೀಡಿದರು. ಮಕ್ಕಳು ತಾವು ಬರೆದ ಚೀಟಿಗಳನ್ನು ಆಯಾ ತರಗತಿ ಮುಖಂಡರು ಸಂಗ್ರಹಿಸಿ, ಅದನ್ನು ಹೋಮ ಕುಂಡದಲ್ಲಿ ಅಗ್ನಿಗೆ ಸಮರ್ಪಿಸಿದರು.ಇದಕ್ಕೂ ಮುನ್ನ ಅಗ್ನಿಕುಂಡದ ಪೂಜೆ ನೆರವೇರಿಸಲಾಯಿತು. ವೇದದ ವಿವಿಧ ಮಂತ್ರಗಳನ್ನು ಮತ್ತು ಬಿಡಬೇಡ ಸದ್ಗುಣವ ಬಾಳಿಗದು ಭೂಷಣವು, ಉಡುಗೆ ತೊಡುಗೆಗಳೆಲ್ಲ ದೇಹ ಶೃಂಗಾರವು ಎಂಬ ಮೌಲ್ಯಗೀತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿತ್ತು.ಕಾಮ ದಹನ ಎಂದರೆ ಕೇವಲ ಕಾಮನನ್ನು ಸುಡುವುದಷ್ಟೆ ಅಲ್ಲ. ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಆಸೆಗಳನ್ನು ಸುಡುವುದೇ ನಿಜವಾದ `ಕಾಮನಾ ದಹನ~. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ ನಿಟ್ಟಿನಲ್ಲಿ ಸಹಕಾರಿಯಾಗುವ ಇಂಥ ಹೊಸ ಸಂಪ್ರದಾಯದ `ಕಾಮನಾ ದಹನ~ವನ್ನು ಈ ವರ್ಷದಿಂದ ಶಾಲೆಯಲ್ಲಿ ಆರಂಭಿಸಲಾಗುತ್ತಿದೆ ಎಂದು ಮುಖ್ಯೋಪಾಧ್ಯಾಯರಾದ ಕೆ.ಎಸ್. ಪ್ರಭುಕುಮಾರ್ ತಿಳಿಸಿದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಬಿ.ಆರ್. ಶಾಂತಕುಮಾರಿ, ಉಪ ಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ ಉಪಸ್ಥಿತರಿದ್ದರು. ಶಿಕ್ಷಕ ಜಗನ್ನಾಥ ನಾಡಿಗೇರ್ ಕಾರ್ಯಕ್ರಮ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.