ಗುರುವಾರ , ಮೇ 19, 2022
20 °C

ಅರ್ಧ ಅಲೆಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಂಗಳ ಹಿಂದಷ್ಟೇ ಚಿತ್ರೀಕರಣ ಪ್ರಾರಂಭಿಸಿದ್ದ `ಅಲೆಮಾರಿ~ ಚಿತ್ರತಂಡ ಸುದ್ದಿಮಿತ್ರರಿಗೆ ಮತ್ತೆ ಎದುರಾಯಿತು. ಸತತ ಚಿತ್ರೀಕರಣ ನಡೆಸಿ ಅರ್ಧಭಾಗವನ್ನು ಆಗಲೇ ಮುಗಿಸಿದ್ದೇವೆ ಎಂಬ ವರದಿ ಒಪ್ಪಿಸುವ ಸಲುವಾಗಿ ಚಿತ್ರದ ಬಳಗ ಮಾತಿಗಿಳಿಯಿತು.ಅಶ್ವಿನಿ ಆಡಿಯೋದ ಬೇರೆ ಚಿತ್ರಗಳ ಧ್ವನಿಮುದ್ರಿಕೆಗಳಲ್ಲಿ ಕೇಳಿಸಿದ್ದ ಚಿತ್ರದ ಶೀರ್ಷಿಕೆ ಗೀತೆ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಈ ಹಾಡಿನ ಮೊಬೈಲ್ ರಿಂಗ್‌ಟೋನ್ ಅನ್ನು ದೀಪಾವಳಿಗೆ ಬಿಡುಗಡೆ ಮಾಡುವ ಇರಾದೆ ನಮ್ಮದು ಎಂದು ಚಿತ್ರತಂಡ ಸುದ್ದಿಗೋಷ್ಠಿಯ ಮುಖ್ಯ ಉದ್ದೇಶವನ್ನು ಬಿಚ್ಚಿಟ್ಟಿತು.`ಒಂದು ಹಾಡು ಸೇರಿದಂತೆ ಶೇಕಡಾ 60ರಷ್ಟು ಭಾಗ ಟಾಕಿ ಚಿತ್ರೀಕರಣ ಮುಗಿದಿದೆ. ಇನ್ನು ಐದು ಹಾಡು ಮತ್ತು ಉಳಿದ ಟಾಕಿ ಭಾಗದ ಚಿತ್ರೀಕರಣ ಶೀಘ್ರವೇ ಮುಗಿಯಲಿದೆ~ ಎಂದರು ನಿರ್ಮಾಪಕ ಬಿ.ಕೆ.ಶ್ರೀನಿವಾಸ್.

 

ಅಶ್ವಿನಿ ಆಡಿಯೋದ ಕೃಷ್ಣಪ್ರಸಾದ್- `ನಿರ್ದೇಶಕ ಸಂತು ಅವರನ್ನು ನಿರ್ಮಾಪಕರು ತಮ್ಮ ಬಳಿ ಬಂದಾಗ ಈತನೇನು ಸಿನಿಮಾ ಮಾಡುತ್ತಾನೆ ಎಂದು ನಿರ್ಲಕ್ಷಿಸಿದ್ದೆ.

 

ಆದರೆ ಉತ್ತಮ ನಿರ್ದೇಶಕನಾಗುವ ಭರವಸೆಯನ್ನು ಅವರೀಗಲೇ ಮೂಡಿಸಿದ್ದಾರೆ~ ಎಂದು ನಿರ್ಮಾಪಕ ಶ್ರೀನಿವಾಸ್‌ರ ಹೊಗಳಿಕೆಗೆ ನಿಂತರು.ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಸಂತುಗೆ ಇದುವರೆಗೆ ಸಾಗಿರುವ ಚಿತ್ರೀಕರಣ ನೆಮ್ಮದಿ ನೀಡಿದೆ.ಚಿತ್ರೀಕರಣದ ಉಳಿದ ಭಾಗವನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸುವ ಬಯಕೆ ಅವರದು. ಚಿತ್ರತಂಡದಲ್ಲಿ ನಾನೇ ಹೊಸಬ. ನುರಿತ ಕಲಾವಿದರು ಇರುವುದರಿಂದ ಸುಲಭವಾಗಿಯೇ ಚಿತ್ರೀಕರಣ ನಡೆಯುತ್ತಿದೆ.ಸದ್ಯ ಬೆಂಗಳೂರಿನಲ್ಲಿ ಮಾತ್ರ ಚಿತ್ರೀಕರಣ ನಡೆದಿದ್ದು, ಉಳಿದ ಪ್ರಮುಖ ಸನ್ನಿವೇಶಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಿದರು.ಬೇರೆ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ತೆರಳಿದ್ದರಿಂದ ನಾಯಕ ನಟ ಯೋಗೀಶ್ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. `ಜೋಶ್~, `ಮನಸಾಲಜಿ~ ಚಿತ್ರಗಳಲ್ಲಿ ನಾಯಕನಟರಾಗಿ ಕಾಣಿಸಿಕೊಂಡಿದ್ದ ರಾಕೇಶ್ ಅಡಿಗ `ಅಲೆಮಾರಿ~ಗಾಗಿ ಮಚ್ಚು ಹಿಡಿಯುವ ಖಳನಾಯಕನಾಗಿ ನಟಿಸಿದ್ದಾರೆ.

 

ಇದು ತಮಗೆ ಹೊಸ ಇಮೇಜ್ ತಂದು ಕೊಡುವ ಪಾತ್ರ ಎಂದರು ರಾಕೇಶ್. ನಾಯಕನಟನಾಗುವ ಹಂಬಲವಿದ್ದರೂ ವಿಲನ್ ಪಾತ್ರ ಮಾಡುವುದು ತಪ್ಪೇನಲ್ಲ. ಇದು ಹೊಸ ಅನುಭವ ನೀಡುತ್ತದೆ. ಪಾತ್ರಕ್ಕಾಗಿ ಸಾಕಷ್ಟು ಹೋಮ್‌ವರ್ಕ್ ಮಾಡುತ್ತಿದ್ದೇನೆ ಎಂದು ಹೇಳಿದರು.ಒಳ್ಳೆಯ ಚಿತ್ರತಂಡದ ಜೊತೆ ವಿಭಿನ್ನ ಮತ್ತು ಒಳ್ಳೆಯ ಪಾತ್ರ ಮಾಡುತ್ತಿರುವ ಖುಷಿಯನ್ನು ರಾಧಿಕಾ ಪಂಡಿತ್ ಹಂಚಿಕೊಂಡರು. `ಸಂತು ಭರವಸೆಯ ನಿರ್ದೇಶಕ~ ಎನ್ನುವುದು ಅವರ ಪ್ರಶಂಸೆ. ಸಂಪ್ರದಾಯಸ್ಥ ಕುಟುಂಬದ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿರುವ ರಾಧಿಕಾಗೆ ಇದು ಸಾಕಷ್ಟು ಮುದ ನೀಡಿದ ಪಾತ್ರವಂತೆ.ನವೆಂಬರ್‌ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಅಲೆಮಾರಿಯ ಅಲೆದಾಟದ ಕಥೆ ನೋಡಲು ಜನವರಿಯವರೆಗೆ ಕಾಯಬೇಕಷ್ಟೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.