ಭಾನುವಾರ, ಜುಲೈ 25, 2021
25 °C

ಅರ್ಧ ಗಂಟೆ ಕುಳಿತು ಹೋಗುವಿರಂತೆ ಬನ್ನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದು ದಿನ ವಾಸ್ತವ್ಯ ಹೂಡಬೇಕೆಂದು ಬಂಧುಗಳ ಮನೆಗೆ ಹೋದ ನೆಂಟನಿಗೆ ಮನೆಯೊಡತಿ ನೀಡಿದ ಪ್ರತಿಕ್ರಿಯೆ, `ಅಯ್ಯೋ ಎಷ್ಟು ದಿನಾ ಆಯ್ತು ನಿಮ್ಮನ್‌ ಭೇಟಿಯಾಗಿ. ಬಂದು ಬಹಳ ಸಂತೋಷ ಆಯ್ತು. ಮನೇಲಿ ಅರ್ಧ ಗಂಟೆ ಕುಳಿತಿದ್ದು ಹೋಗುವಿರಂತೆ ಬನ್ನಿ!~ವಿಶ್ವ ನಗೆ ದಿನಾಚರಣೆ ಅಂಗವಾಗಿ ನಗರದಲ್ಲಿ ವಿವಿಧ ನಗೆ ಕೂಟಗಳು ಭಾನುವಾರ ಏರ್ಪಡಿಸಿದ್ದ ಹಾಸ್ಯೋತ್ಸವದಲ್ಲಿ ಕಲಾವಿದ ಎಂ.ಕೃಷ್ಣೇಗೌಡರು ಈ ಪ್ರಸಂಗವನ್ನು ಹೇಳುವ ಮೂಲಕ ಇಂದಿನ ಕುಟುಂಬಗಳ ಮನಸ್ಥಿತಿಯನ್ನು ಬಣ್ಣಿಸಿದರು.`ಕರ್ನಾಟಕದಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿರುವ ಈ ಸಂದರ್ಭದಲ್ಲಿ, ಐಶ್ವರ್ಯ ರೈ ಗೌಡರೊಂದಿಗೆ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಗೋಲ್‌ಮಾಲ್‌ ಮಾಡ್ತಿದ್ದಾಗ ಕಾಂಗ್ರೆಸ್‌ ಕೂಡಾ ಗುಟ್ಟಾಗಿ ಸಪೋರ್ಟ್‌ ಮಾಡ್ತಪ್ಪ...~ ಎಂಬ ಐಶ್ವರ್ಯ ರೈ ಬಗ್ಗೆ ಸ್ವರಚಿತ ಲಾವಣಿಯನ್ನು ಹಾಡುವ ಮೂಲಕ ರಾಜಕೀಯ ವಿಡಂಬನೆಯನ್ನೂ ಮಾಡಿದರು.ಮದುವೆಗೆ ಕರೆಯಲು ಬಂದ ವರನೊಬ್ಬ ಪರಿಚಯಸ್ಥರನ್ನು ಉದ್ದೇಶಿಸಿ, `ನೋಡಿ ಅಂಕಲ್‌ ನೀವು ಮದ್ವೆಗೆ ಬರದೇ ಇದ್ರೆ ನಾನು ಮದ್ವೆನೇ ಆಗಲ್ಲ.~ ಹೀಗೆ ಹೇಳಿದ ಆ ವರನಿಗೆ ಮದುವೆ ದಿನ ಅಂಕಲ್‌ ನೆನಪೇ ಇರೋಲ್ಲ! ಇಂಥ ಹಲವಾರು ಹಲವು ಚಿನಕುರಳಿ ಪ್ರಸಂಗಗಳನ್ನು ಹೇಳಿದ ಅವರು, `ನಿಸರ್ಗದಲ್ಲಿ ಹಲವಾರು ಜೀವಿಗಳಿದ್ದರೂ ಮನುಷ್ಯನಿಗೆ ಮಾತ್ರ ನಗುವ ಗುಣ ಇದೆ. ಆದ್ದರಿಂದ ಎಲ್ಲರೂ ನಗುನಗುತ್ತಾ ಇರಬೇಕು~ ಎಂದರು.ಮಿಮಿಕ್ರಿ ದಯಾನಂದ್‌: ಕೆಲವರಿಗೆ ಜನರು ಹೇಗಿದ್ದರೂ ಸರಿ ಕಾಣುವುದಿಲ್ಲ. ಇದಕ್ಕೆ ದಯಾನಂದ್‌ ನೀಡಿದ ಸಮರ್ಥನೆ. ವ್ಯಕ್ತಿ ಕಪ್ಪಗಿದ್ರೆ, `ಅಯ್ಯೋ ಕಣ್ಣಿಗೆ ಕಾಣ್ತಾನೆ ಇಲ್ವಲ್ಲ. ಅಷ್ಟೊಂದ್‌ ಕಪ್ಪಗೆ ಇದ್ದಾನೆ~ ಅಂತಾರೆ. ಅದೇ ವ್ಯಕ್ತಿ ಬೆಳ್ಳಗಾದ್ರೆ, `ಏನಿದು ಒಳ್ಳೆ ಬಿಳುಚಿಕೊಂಡಿದ್ದಾನಲ್ಲ~ ಅಂತೀವಿ. ದಪ್ಪಗಿದ್ದವ ತೆಳ್ಳಗಾದ್ರೆ `ಅಯ್ಯೋ ಏನಿದು, ಏಡ್ಸ್‌ ಬಂತಾ ಇವನಿಗೆ~ ಅಂತೀವಿ. ತೆಳ್ಳಗಿದ್ದವ ದಪ್ಪಗಾದ್ರೆ, `ದಪ್ಪಗಾಗ್ದೆ ಇನ್ನೇನ್ಮಾಡ್ತಾನೆ. ಯಾರ್ದೋ ದುಡ್ಡು ಹೊಡೆದಿರಬೇಕು~ ಅಂತೀವಿ ಎಂದು ಇಂಥ ಹಲವು ನಗೆ ಬಾಂಬ್‌ಗಳನ್ನು ಸಿಡಿಸಿದರು.ಇದಕ್ಕೂ ಮುನ್ನ ಹಿರಿಯ ಹಾಸ್ಯ ಕಲಾವಿದ ಉಮೇಶ್‌, `ಅಯ್ಯೋ ಇವ್ರೂ ನನ್ನನ್ನ ಅಪಾರ್ಥ ಮಾಡ್ಕೊಂಡ್ರಲ್ಲ. ಇದನ್ನ ನನ್‌ ಹೆಂಡ್ತಿ ಮುಂದೆ ಹೇಳೋಣ ಅಂದ್ರೆ ಅವ್ಳ್‌ ಬೇರೆ ಊರಿಗೆ ಹೋಗಿದ್ದಾಳಲ್ಲ~ ಎಂದು ತಾವು ಅಭಿನಯಿಸಿದ ಚಿತ್ರದ ಸಂಭಾಷಣೆಯನ್ನು ಉದ್ಧರಿಸಿದರು. ವಾಸ್ತವವಾಗಿ ಅವರ ಪತ್ನಿ ಅಲ್ಲೇ ಇದ್ದರು!ಮೂಗಿಗಿಂತ ಮೂಗುತಿ...

ವಿಶ್ವ ನಗೆ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಹಾಸ್ಯ ಕಾರ್ಯಕ್ರಮದಲ್ಲಿ ಹಾಸ್ಯೋತ್ಸವಕ್ಕಿಂತ ಸನ್ಮಾನೋತ್ಸವವೇ ಮೇಲಾಯಿತು. ನಿಗದಿಯಂತೆ ನಾಲ್ಕು ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು.ಆದರೆ ಅತಿಥಿಗಳನ್ನು, ಪ್ರಾಯೋಜಕರನ್ನು ವೇದಿಕೆಗೆ ಕರೆದು ಸನ್ಮಾನ ಮಾಡುವಷ್ಟರಲ್ಲಿ ಸಮಯ 6.35 ತಲುಪಿತ್ತು. ಸುಮಾರು ಎರಡು ಗಂಟೆಗಳ ಕಾಲ ಈ ಪ್ರಹಸನ ನಡೆಯಿತು.ಅಲ್ಲಿಯವರೆಗೂ ವಿಧಾನಪರಿಷತ್‌ ಸದಸ್ಯ, ವಯೋವೃದ್ಧ ಎಂ.ವಿ.ರಾಜಶೇಖರನ್‌, ಹಿರಿಯ ಗಾಯಕಿ ಶ್ಯಾಮಲಾ ಜಿ.ಭಾವೆ ಸೇರಿದಂತೆ ಹಲವು ಹಿರಿಯರು ಸನ್ಮಾನಿಸಲು ನಿಂತುಕೊಂಡೇ ಇದ್ದರು. ಇಷ್ಟೆಲ್ಲದರ ಮಧ್ಯೆಯೇ, ತಾನು ಯಾವ ಯಾವ ಕವಿಗಳ ಕಾವ್ಯಗಳನ್ನು ಹೇಳಬಲ್ಲೆ ಎಂಬುದನ್ನು ಸಭಿಕರ ಗಮನಕ್ಕೆ ತರಲು ವೇದಿಕೆಯನ್ನು ಬಳಸಿಕೊಂಡ ನಿರೂಪಕರಿಂದಲೂ ಇನ್ನಷ್ಟು ಸಮಯ ಪೋಲಾಯಿತು.ತಮ್ಮ ಸರದಿ ಬಂದಾಗ ಇದನ್ನು ಪ್ರಸ್ತಾಪಿಸಿದ ಮಿಮಿಕ್ರಿ ದಯಾನಂದ್‌, ಆ ಮೂಲಕ ತಮ್ಮ ಭಾವನೆಯನ್ನೂ ಪ್ರೇಕ್ಷಕರ ಹೆಸರಲ್ಲಿ ಹೊರಗೆಡವಿದರು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.