ಭಾನುವಾರ, ಏಪ್ರಿಲ್ 18, 2021
23 °C

ಅಲೀಬಾಬಾನ ಹೊಸ ಸಾಹಸ

ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ಈ ಕಥೆಯನ್ನು ಓದಿ: “ಮರ್ಜೀನಾ ಮಂತ್ರಿಯ ಮಗಳು. ಅವಳನ್ನು ದರೋಡೆಕೋರರ ಮುಖಂಡ ಅಟ್ಟಿಸಿಕೊಂಡು ಬರುತ್ತಾನೆ. ಆ ವೇಳೆಗಾಗಲೇ ಮಂತ್ರಿಯನ್ನು ಕೊಂದು ಅವನ ಐಶ್ವರ್ಯವನ್ನು ದೋಚಿರುವ ದರೋಡೆಕೋರರ ಮುಖಂಡ, ಮರ್ಜೀನಾಳನ್ನೂ ಕೊಲ್ಲುವ ಸಂಚು ಹೂಡಿದ್ದಾನೆ. ಆದರೆ, ಅವನಿಂದ ತಪ್ಪಿಸಿಕೊಳ್ಳುವ ಆಕೆ, ಬಡವನೊಬ್ಬನ ಆಶ್ರಯ ಪಡೆಯುತ್ತಾಳೆ.ಕಾಡಿನಿಂದ ಸೌದೆ ತಂದು ಮಾರಾಟ ಮಾಡಿ ಕುಟುಂಬದ ಹೊಟ್ಟೆ ತುಂಬಿಸುವುದು ಆ ಬಡವನ ಕಾಯಕ. ಆತ, ಒಮ್ಮೆ ಕಾಡಿಗೆ ಹೋಗಿದ್ದಾಗ, ಕಾಡಿನಲ್ಲಿ ಕಳ್ಳರು `ಸಂಕೇತ~ವನ್ನು ಬಳಸಿ ಬಂಡೆಯನ್ನು ಸರಿಸಿ ಗುಹೆಗೆ ಹೋಗುವುದನ್ನು ಬಡವ ನೋಡುತ್ತಾನೆ. ಆತನೂ `ಸಂಕೇತ ಭಾಷೆ~ಯನ್ನು ಬಳಸಿ ಗುಹೆಗೆ ಹೋಗುತ್ತಾನೆ.ಅಲ್ಲಿ ಅಪಾರ ಸಂಪತ್ತು ಇರುತ್ತದೆ. ಅದನ್ನು ಕತ್ತೆ ಮೇಲೆ ಹೇರಿಕೊಂಡು ಬರುತ್ತಾನೆ. ಈ ವಿಷಯ ಬಡವನ ಅಣ್ಣ ಖಾಸಿಂಗೆ ತಿಳಿಯುತ್ತದೆ. ಆತನೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಳ್ಳುತ್ತಾನೆ. ಸಂಪತ್ತು ಕಳೆದುಕೊಂಡ 40 ಕಳ್ಳರು ಬಡ ವ್ಯಕ್ತಿಯನ್ನು ಹುಡುಕಿಕೊಂಡು ಬರುತ್ತಾರೆ. ಅವರನ್ನೆಲ್ಲ ಮರ್ಜೀನಾ ಜಾಣ್ಮೆಯಿಂದ ಕೊಲ್ಲುತ್ತಾಳೆ”.ಇದು `ಅಲೀಬಾಬಾ ಮತ್ತು ನಲವತ್ತು ಜನ ಕಳ್ಳರು~ ಕಥೆ ಅಲ್ಲವಾ? ಎಂದು ನಿಮಗನ್ನಿಸಿದರೆ, ನಿಮ್ಮ ಊಹೆ ಸರಿಯಾಗಿಯೇ ಇದೆ. ಇದು ಕವಿ ಚಂದ್ರಶೇಖರ ಕಂಬಾರರು ನಿರೂಪಿಸಿರುವ `ಅಲೀಬಾಬಾ ಮತ್ತು ನಲವತ್ತು ಜನ ಕಳ್ಳರು~ ಮಕ್ಕಳ ನಾಟಕದ ತಿರುಳು.`ಅಲೀಬಾಬಾ~ ನಾಟಕವನ್ನು ಮೈಸೂರಿನ `ನಟನ~ ಸಂಸ್ಥೆಯ ಮಕ್ಕಳು ಕಳೆದ ಹನ್ನೊಂದು ವರ್ಷಗಳಿಂದ ಆಡುತ್ತ್ದ್ದಿದು, ನೂರು ಪ್ರದರ್ಶನಗಳ ಹೊಸ್ತಿಲಲ್ಲಿದ್ದಾರೆ. ಈಗ, ಈ ಅಲೀಬಾಬನಿಗೆ ರಾಷ್ಟ್ರೀಯ ರಂಗ ಶಾಲೆ ದೆಹಲಿಯಲ್ಲಿ ಆಯೋಜಿಸಿರುವ `ಜಶನ್-ಎ-ಬಚಪನ್~ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಅವಕಾಶ.`ನಟನ~ ಮಕ್ಕಳು ಇದೇ ನ.26ರಂದು `ಅಲೀಬಾಬಾ~ನನ್ನು ದೆಹಲಿಯಲ್ಲಿ ಪ್ರದರ್ಶಿಸಲಿದ್ದಾರೆ. ಅಂದಹಾಗೆ, `ಜಶನ್-ಎ-ಬಚಪನ್~ ಒಂದು ಪ್ರತಿಷ್ಠಿತ ನಾಟಕೋತ್ಸವ. ದಕ್ಷಿಣ ಏಷ್ಯಾ ರಂಗ ತಂಡಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿವೆ.`ನಟನ~ ಮತ್ತು ಅಲೀಬಾಬಾನ ನಂಟು ತುಂಬಾ ಹಳೆಯದು. `ನಟನ~ದ ಮೊದಲ ತಂಡವೇ `ಅಲೀಬಾಬಾ~ನನ್ನು ಆರಿಸಿಕೊಂಡಿತ್ತು. ಆರಂಭದಲ್ಲಿ ಹಾಡು, ಕುಣಿತ, ತಮಾಷೆ, ಚುರುಕು ಸಂಭಾಷಣೆಗೆ ಸೀಮಿತಗೊಂಡಿದ್ದ ನಾಟಕ ಪ್ರದರ್ಶನದಿಂದ ಪ್ರದರ್ಶನಕ್ಕೆ ತಂಡದಿಂದ ತಂಡಕ್ಕೆ ಬದಲಾಗುತ್ತಾ, ರೂಪಕವಾಗುತ್ತಾ ಬೆಳೆದಿದೆ.ಈಗ ಪ್ರದರ್ಶನಗೊಳ್ಳುವ `ಅಲೀಬಾಬಾ~ದ ಒಂದು ದೃಶ್ಯ ಹೀಗಿದೆ: ಕಳ್ಳರು ತಾವು ದೋಚಿದ ಹಣ, ಐಶ್ವರ್ಯವನ್ನು ಕತ್ತೆ ಮೇಲೆ ಹೇರಿಕೊಂಡು ಬರುತ್ತಾರೆ. ಸಂಕೇತ ಭಾಷೆಯನ್ನು ಬಳಸಿ, ಗುಹೆಗೆ ಅಡ್ಡಲಾಗಿ ಇಟ್ಟಿರುವ ಬಂಡೆಯನ್ನು ಸರಿಸಿ, ಬೆಳ್ಳಿಬಂಗಾರ ಸುರಿಯುತ್ತಿರುತ್ತಾರೆ.ಈ ವೇಳೆ ಮೂರು ಪಾತ್ರಧಾರಿಗಳು ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಕೈಯಲ್ಲಿ `ಹಸ್ತ~, `ಕಮಲ~, `ತೆನೆ ಹೊತ್ತ ಮಹಿಳೆ~ಯ ಚಿಹ್ನೆಗಳನ್ನು ಹಿಡಿದುಕೊಂಡು ವೇದಿಕೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುತ್ತಾರೆ. ಇದನ್ನು ಕಂಡ ಪ್ರೇಕ್ಷಕರಿಂದ ಚಪ್ಪಾಳೆ ಸುರಿಮಳೆ. ಅಕ್ರಮ ಗಣಿಗಾರಿಕೆಯಿಂದ ಅಪಾರ ಸಂಪತ್ತು ಲೂಟಿ ಮಾಡಿರುವ ರಾಜಕಾರಣಿಯನ್ನೂ, ಹಲವಾರು ಹಗರಣಗಳಲ್ಲಿ ಸಿಲುಕಿಕೊಂಡಿರುವ ರಾಜಕೀಯ ನಾಯಕರನ್ನೂ ಈ ದೃಶ್ಯ ನೆನಪಿಸುತ್ತದೆ.ಕಳ್ಳರ ಮುಖಂಡ ನಮ್ಮ ರಾಜಕೀಯ ಪಕ್ಷಗಳ ನಾಯಕರಂತೆಯೂ, ಹಣ-ಐಶ್ವರ್ಯವನ್ನು ಗುಹೆಗೆ ಸುರಿಯುವುದು ರಾಜಕಾರಣಿಗಳು ಸ್ವಿಸ್ ಬ್ಯಾಂಕ್‌ನಲ್ಲಿ ಹಣವನ್ನು ಇಡುವಂತೆಯೂ ಪ್ರೇಕ್ಷಕರಿಗೆ ಭಾಸವಾಗುತ್ತದೆ. ಹೀಗೆ ಅಲೀಬಾಬಾ ಮನರಂಜನೆ ಕಥಾವಸ್ತುವಾಗಿ ಉಳಿಯದೆ, ವಾಸ್ತವಕ್ಕೆ ಕನ್ನಡಿ ಹಿಡಿಯುವ ಯತ್ನವನ್ನೂ ಮಾಡುತ್ತಿದೆ. `ನಾನು ನಾಟಕವನ್ನು ರೂಪಕವಾಗಿ ಕಟ್ಟುತ್ತೇನೆ~ ಎನ್ನುತ್ತಾರೆ ನಟನ ಸಂಸ್ಥಾಪಕ, ನಿರ್ದೇಶಕ ಮಂಡ್ಯ ರಮೇಶ್.ಅಲೀಬಾಬಾ (ಚೈತನ್ಯ ಹೆಗಡೆ), ಖಾಸಿಂ (ಆದಿತ್ಯ), ಬೇಗಂ (ಸಂಜನಾ ಪ್ರಸಾದ್/ವರ್ಷಿಣಿ/ಸ್ಪಂದನ ಪ್ರಸಾದ್), ಫಾತಿಮಾ (ಮಹಿಮಾ ಕೌಶಿಕ್/ಸಂಜನಾ), ಮರ್ಜೀನಾ (ಸಿರಿ ವಾನಳ್ಳಿ) ನಾಟಕ ತಂಡದ ಪ್ರಮುಖ ಕಲಾವಿದ ಪುಟಾಣಿಗಳು. ಸಂಗೀತ ರಾಜು ಅನಂತಸ್ವಾಮಿ ಅವರದು, ವಿನ್ಯಾಸ-ನಿರ್ದೇಶನ ಮಂಡ್ಯ ರಮೇಶ್ ಅವರದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.