ಭಾನುವಾರ, ಜನವರಿ 19, 2020
20 °C

ಅಲೆಮಾರಿ ಮಕ್ಕಳಿಗೆ ಕನಸಾದ ಶಿಕ್ಷಣ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಅಲೆಮಾರಿ ಮಕ್ಕಳಿಗೆ ಕನಸಾದ ಶಿಕ್ಷಣ

ಚಿಂತಾಮಣಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ಹಲವು ಯೋಜನೆಗಳನ್ನು ರೂಪಿಸಿದ್ದರೂ ಅಲೆಮಾರಿ ಕುಟುಂಬಗಳ ಮಕ್ಕಳಿಗೆ ಮಾತ್ರ ಶಿಕ್ಷಣ ಎಂಬುದು ಕನಸಾಗಿ ಉಳಿದಿದೆ. ಇದಕ್ಕೆ ಕಾರಣ ಜೀವನೋ­ಪಾಯಕ್ಕಾಗಿ ಊರೂರು ಅಲೆಯುತ್ತಿರುವುದು.ನಗರದ ಬೆಂಗಳೂರು ರಸ್ತೆ ಬದಿ, ಹೊರವಲಯದಲ್ಲಿ ಅಲೆಮಾರಿ ಕುಟುಂಬ­ಗಳು ಟೆಂಟ್‌ಗಳನ್ನು ಹಾಕಿ­ಕೊಂಡು ವಾಸಿಸುತ್ತಿದ್ದಾರೆ. ಬಹುತೇಕರು ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ­ಗಳಿಂದ ಬಂದವರು. ಕೆಲವರು ವಿವಿಧ ಗಿಡಮೂಲಿಕೆಗಳ ಔಷಧಿಗಳನ್ನು ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಮೊಬೈಲ್‌ ಕಂಪೆನಿಗಳ ಕೇಬಲ್‌ ಅನ್ನು ಅಳವಡಿಸಲು ಕಾಲುವೆ­ಗಳನ್ನು ತೋಡಲು ಬಂದಿರುವ ಕೂಲಿ ಕಾರ್ಮಿಕರು.ಯಾವ ಊರಿನಲ್ಲಿಯೂ ದೀರ್ಘ­ಕಾಲ ನೆಲೆಯೂರಲು ಸಾಧ್ಯವಾಗದಿರು­ವು­ದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕು­ತ್ತಾರೆ. ರಸ್ತೆ ಬದಿಯಲ್ಲೇ ಮಕ್ಕಳು ಇದ್ದರೂ ಯಾರೂ ಅವರ ಕಡೆಗೆ ಗಮನಹರಿಸುವವರು ಇಲ್ಲ.‘ಇಲ್ಲಿ ಮೂರು ತಿಂಗಳು, ಇನ್ನೊಂದ್ ಊರಲ್ಲಿ ಆರು ತಿಂಗಳು ಇದ್ದು ಹೊರ­ಡುತ್ತೇವೆ. ನಮ್ಮ ಮಕ್ಕಳಿಗೆ ಇನ್ನೆಲ್ಲಿ ? ಶಿಕ್ಷಣದ ಭಾಗ್ಯ’ ಎಂದು ಮಧ್ಯ­ಪ್ರದೇಶ­ದಿಂದ ಬಂದಿರುವ ರಾಜು ಹಿಂದಿ ಮಿಶ್ರಿತ ತೆಲುಗಿನಲ್ಲಿ ನಿರಾಸೆ ವ್ಯಕ್ತಪಡಿಸುತ್ತಾನೆ.ಸರ್ಕಾರದ ಯೋಜನೆಯಂತೆ ಟೆಂಟ್‌ ಶಾಲೆಗಳನ್ನು ತೆರೆದು ಅಲೆಮಾರಿ ಕುಟುಂಬ­ಗಳಿಗೆ ಶಿಕ್ಷಣವನ್ನು ನೀಡ­ಬಹುದು. ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದಿಂದಲೇ ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ನಗರದ ಮಲ್ಲಿಗೆ ಸಾಮಾಜಿಕ ಸಂಸ್ಥೆಯ ಅಧ್ಯಕ್ಷ ಎಂ.ಡಿ.ತಿಪ್ಪಣ್ಣ ಆತಂಕ ವ್ಯಕ್ತಪಡಿಸುತ್ತಾರೆ.ಶಿಕ್ಷಣ ಇಲಾಖೆಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅಲೆಮಾರಿ ಮಕ್ಕಳ ಸಮೀಕ್ಷೆ ನಡೆಸಿ ಟೆಂಟ್‌ಶಾಲೆಗಳ ಮೂಲಕ ಅವರಿಗೆ ಶಿಕ್ಷಣವನ್ನು ನೀಡಬೇಕು. ಮಕ್ಕಳ ಸಂಖ್ಯೆಗೆ ತಕ್ಕಂತೆ ಅಲೆಮಾರಿಗಳ ಕುಟುಂಬಗಳ ಬಳಿಗೆ ಶಿಕ್ಷಕರನ್ನು ನಿಯೋಜನೆ ಮಾಡುವುದರ ಮೂಲಕವಾದರೂ ಶಿಕ್ಷಣ ನೀಡಬೇಕು ಎನ್ನುವುದು ತಿಪ್ಪಣ್ಣ ಅವರ ಸಲಹೆ.

ಪ್ರತಿಕ್ರಿಯಿಸಿ (+)