ಶನಿವಾರ, ಏಪ್ರಿಲ್ 17, 2021
23 °C

ಅಲ್ಪಸಂಖ್ಯಾತರಿಗೆ ಬಿಜೆಪಿ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಬೆಂಗಳೂರಿನಲ್ಲಿ ಹಜ್ ಯಾತ್ರಿಗಳಿಗೆ 40 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಜ್ ಭವನ ನಿರ್ಮಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ಅಪಾರ ಕೊಡುಗೆ ನೀಡಿದೆ~ ಎಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಹೇಳಿದರು.ನಗರದ ದಿ. ದೇವರಾಜು ಅರಸು ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಶನಿವಾರ ನಡೆದ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಸಾಲ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂ. 450 ಕೋಟಿಗೂ ಅಧಿಕ ಮೊತ್ತದ ಅನುದಾನ ನೀಡುವ ಮೂಲಕ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಕೈಜೋಡಿಸಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ನೆಹರೂ ಓಲೇಕಾರ ಮಾತನಾಡಿ, ಬಿಜೆಪಿ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ವಿವಿಧ ಯೋಜನೆಗಳಲ್ಲಿ 1,74,767 ಫಲಾನುಭವಿಗಳು ನಿಗಮದಿಂದ 284.89 ಕೋಟಿ ರೂಪಾಯಿ ಅನುದಾನ ಪಡೆದಿದ್ದಾರೆ ಎಂದರು.ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪಾಲಕರು ಕರ್ತವ್ಯ ಎಂದ ಅವರು, ಅಲ್ಪಸಂಖ್ಯಾತರು ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕರೆ ನೀಡಿದರು.ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ರಾಜ್ಯ ಘಟಕದ ಅಧ್ಯಕ್ಷ ಎನ್. ಬಿ. ಅಬೂಬಕರ ಮಾತನಾಡಿ, ಮುಖ್ಯಮಂತ್ರಿಗಳಾದ ಬಿ. ಎಸ್.ಯಡಿಯೂರಪ್ಪ, ಡಿ. ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ನಿಗಮಕ್ಕೆ 2008-09ರಲ್ಲಿ ರೂ. 128.98 ಕೋಟಿ, 2009-10ರಲ್ಲಿ ರೂ. 173.73 ಕೋಟಿ, 2010-11ರಲ್ಲಿ ರೂ. 269.26 ಕೋಟಿ, 2011-12ರಲ್ಲಿ ರೂ. 326 ಹಾಗೂ 12-13ರ ಬಜೆಟ್‌ನಲ್ಲಿ ರೂ. 406 ಕೋಟಿ ಮೀಸಲಿರಿಸುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.ಸರ್ಕಾರ ಅರಿವು ಯೋಜನೆಯಡಿ 47,025 ವಿದ್ಯಾರ್ಥಿಗಳಿಗೆ ಶೇ. 2 ಬಡ್ಡಿ ದರದಲ್ಲಿ ಒಟ್ಟು 85.35 ಕೋಟಿ ರೂ.ಗಳನ್ನು ಸಾಲ ನೀಡಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಮೈಕ್ರೋ ಸಹಾಯಧನ ಯೋಜನೆಯಡಿ 3,872 ಸಂಘಗಳ 56,415 ಫಲಾನುಭವಿಗಳಿಗೆ ಶೇ.4ರ ಬಡ್ಡಿದರದಲ್ಲಿ ಮತ್ತು ಶೇ. 25 ಸಬ್ಸಿಡಿ ಯೋಜನೆಯಡಿ  51.87 ಕೋಟಿ ರೂ.ಗಳನ್ನು ವಿತರಿಸಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಮಂಜೂರಾದ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು.ಜಿ.ಪಂ. ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷ ಅಲ್ಲಾಬಕ್ಷ್ ತಿಮ್ಮಾಪುರ, ತಾ.ಪಂ. ಅಧ್ಯಕ್ಷೆ ಮೆಹರುನ್ನಿಸಾ ಜಿಗಳೂರ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎಚ್. ನೂರಮನ್ಸೂರ, ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಸಮಾರಂಭದಲ್ಲಿ ಹಾಜರಿದ್ದರು.

ಯಲ್ಲಪ್ಪ ಕಣ್ಣಪ್ಪನವರ ಸ್ವಾಗತಿಸಿ, ನಿರೂಪಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.