ಬುಧವಾರ, ಜನವರಿ 29, 2020
24 °C

ಅವಘಡ: 10 ತಿಂಗಳಲ್ಲಿ 75 ವಿದ್ಯಾರ್ಥಿಗಳ ಸಾವು!

ಪ್ರಜಾವಾಣಿ ವಾರ್ತೆ/ ಎಂ.ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ಶಾಲೆಗಳಲ್ಲಿ ಹಾಗೂ ಸುತ್ತಮುತ್ತ ಸಂಭವಿಸಿದ ಆಕಸ್ಮಿಕ ಅವಘಡಗಳಲ್ಲಿ ಕಳೆದ ಜನವರಿಯಿಂದ ಅಕ್ಟೋಬರ್‌­ವರೆಗೆ ರಾಜ್ಯದಾದ್ಯಂತ 75 ಮಕ್ಕಳು ಮೃತಪಟ್ಟಿದ್ದಾರೆ!ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಸಲ್ಲಿಕೆಯಾದ ಅಂಕಿ ಅಂಶಗಳ ಪ್ರಕಾರ ಈ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.ಶಾಲೆಯಲ್ಲಿ ಬಿಸಿ ಸಾಂಬಾರಿನ ಪಾತ್ರೆಯೊಳಗೆ ಬಿದ್ದು, ಹೆದರಿ ಆತ್ಮಹತ್ಯೆ, ಶಾಲಾ ವಾಹನ ಅಪಘಾತ, ವಿದ್ಯುತ್‌ ತಂತಿ ಸ್ಪರ್ಶ, ಹಾವು ಕಚ್ಚಿ, ಬಾವುಟ ಹಾರಿಸಲು ಹೋದಾಗ ಧ್ವಜ ಕಂಬದಿಂದ ಬಿದ್ದು, ನೀರಿನಲ್ಲಿ ಮುಳುಗಿ, ರಸ್ತೆ ಅಪಘಾತದಿಂದ ಸಾವು... ಹೀಗೆ ಅನೇಕ ಮಕ್ಕಳು ಸಾವನ್ನಪ್ಪಿದ  ವಿಚಾರವನ್ನು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತಿವೆ.  ಬೆಳಕಿಗೆ ಬಾರದ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚು ಇರಬಹುದು ಎಂದೂ ಹೇಳಲಾಗುತ್ತಿದೆ.ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳು (ತಾಂತ್ರಿಕ– ವೈದ್ಯಕೀಯ ಕೋರ್ಸ್‌ ಸೇರಿದಂತೆ)  ಮೃತರಾದಾಗ ಅವರ ಪೋಷಕರು/ ತಂದೆ ತಾಯಿಗೆ ರೂ 50 ಸಾವಿರ ನಗದು ಪರಿಹಾರ ನೀಡಲಾಗುವುದು. ವಿವಿಧ ಅಪ­ಘಾತ­ಗಳಿಂದ ಮೃತರಾದ ಶಿಕ್ಷಕರ ಅವಲಂಬಿತರಿಗೆ   ಅಡಿ ರೂ 50 ಸಾವಿರ ಪರಿಹಾರ ನೀಡಲಾಗುತ್ತಿದೆ.ಅವಘಡಗಳಿಂದ ಸಾವು ಸಂಭವಿಸಿದಾಗ ತಕ್ಷಣ ಡಿಡಿಪಿಐ, ಬಿಇಒ, ಇತರ  ಅಧಿಕಾರಿಗಳು  ನಿಧಿಯಿಂದ ಪರಿಹಾರ ಕೊಡಿಸಲು ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಕಚೇರಿಗೆ ಕಳುಹಿಸಬೇಕು. ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ನಮೂನೆಗಳನ್ನು www.­schooleducation.­kar.nic.in ಜಾಲತಾಣದಿಂದ ಪಡೆಯಬಹುದು.ಅಪಘಾತ ದೃಢೀಕರಿಸುವ ಪೊಲೀಸ್‌ ದೂರು (ಎಫ್‌ಐಆರ್‌), ಮರಣೋತ್ತರ ಪರೀಕ್ಷಾ ವರದಿ ಮತ್ತು ಸಕ್ಷಮ ಪ್ರಾಧಿಕಾರದಿಂದ ಮರಣ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.ಪ್ರಸ್ತಾವ ಅಗತ್ಯ ಮಾಹಿತಿ ಒಳಗೊಂಡಿ­ದ್ದಲ್ಲಿ, ಎರಡು ಕೆಲಸದ ದಿನಗಳ ಒಳಗಾಗಿ ಸಂಬಂಧಿಸಿದವರಿಗೆ ಪರಿಹಾರ ಧನವನ್ನು ಡಿಡಿ (ಡಿಮಾಂಡ್‌ ಡ್ರಾಫ್ಟ್‌) ಮೂಲಕ ಕಳುಹಿಸಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.ನೀರಿನಲ್ಲಿ ಮುಳುಗಿ ಮೃತಪಟ್ಟವರೇ ಹೆಚ್ಚು!

‘ಮೃತಪಟ್ಟ 75 ಮಕ್ಕಳಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾದವರು–26, ರಸ್ತೆ ಅಪಘಾತದಲ್ಲಿ ಮೃತಪಟ್ಟವರು–23, ಹಾವು, ನಾಯಿ, ಚೇಳು ಮೊದಲಾದವು ಕಚ್ಚಿ ಸತ್ತವರು  – 10, ಅತ್ಮಹತ್ಯೆ–1, ವಿದ್ಯುತ್‌ ತಂತಿಗೆ ಸಿಲುಕಿ ಮೃತಪಟವರು– 5, ಬಿಸಿ ಸಾಂಬಾರ್‌ನಲ್ಲಿ ಬಿದ್ದು ಸಾವಿಗೀಡಾದವರು ಮೂವರು ’ ಎಂದು ಕಚೇರಿಯ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ. ಶಿಕ್ಷಣ  ಇಲಾಖೆಯ  ಮೂಲಕ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದ ವರದಿಯ ಮಾಹಿತಿ ಇದು.

ಪ್ರಸ್ತಾವ ಸಲ್ಲಿಕೆಯಲ್ಲಿಯೇ ವಿಳಂಬ!

ಅಪಘಾತಗಳು ಸಂಭವಿಸಿದಾಗ ಪರಿಹಾರ ನೀಡುವಂತೆ ಪ್ರಸ್ತಾವ ಸಲ್ಲಿಕೆಯಲ್ಲಿ ತೀವ್ರ ವಿಳಂಬವಾ­ಗುತ್ತಿರುವುದು ಕಂಡುಬಂದಿದೆ.ಅಪೂರ್ಣ ಮಾಹಿತಿಯಿಂದಾಗಿ ನೊಂದವರಿಗೆ ಪರಿಹಾರ ಸಿಗುವುದು ವಿಳಂಬವಾಗುತ್ತಿದೆ. ಇದರಿಂದಾಗಿ ಯೋಜನೆಯ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ. ಅಧಿಕಾರಿಗಳು ಈ ಸೌಲಭ್ಯಕ್ಕೆ ಪ್ರಸ್ತಾವ ಸಲ್ಲಿಸುವಾಗ ಹೆಚ್ಚಿನ ಮಾನವೀಯತೆ, ಜಾಗೃತಿ ವಹಿಸಬೇಕು ಎಂದು ನಿಧಿಯ ಕಚೇರಿಯಲ್ಲಿ ಸೂಚನೆ ನೀಡಲಾಗಿದೆ

ಪ್ರತಿಕ್ರಿಯಿಸಿ (+)