ಬುಧವಾರ, ಜನವರಿ 22, 2020
18 °C
ನಿರ್ಲಕ್ಷ್ಯ ವಹಿಸಿದರೆ ಕ್ರಿಮಿನಲ್ ಮೊಕದ್ದಮೆ– ಜಿಲ್ಲಾಧಿಕಾರಿ ಎಚ್ಚರಿಕೆ

ಅವಧಿ ಮೀರಿದ ಹಾಲಿನ ಪುಡಿ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಶಾಲೆಗಳಿಗೆ ಬಳಕೆ ಅವಧಿ ಮೀರಿದ ಹಾಲಿನ ಪುಡಿಯನ್ನು ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಕ್ಷರ ದಾಸೋಹ ಯೋಜನೆಯ ಚಾಲನಾ ಮತ್ತು ಪರಾಮರ್ಶೆ ಸಭೆಯಲ್ಲಿ ಮಾಲೂರು ಮತ್ತು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಬ್ರಹ್ಮಣ್ಯ ಮತ್ತು ಕೃಷ್ಣಮೂರ್ತಿ ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಕಳೆದ ತಿಂಗಳು ಅವಧಿ ಮೀರಿದ ಹಾಲಿನಪುಡಿ ಮೂಟೆಯನ್ನು ಪೂರೈಸಲಾಗಿತ್ತು. ಅದನ್ನು ಒಕ್ಕೂಟಕ್ಕೆ ವಾಪಸ್‌ ಕಳುಹಿಸಿದೆವು. ಆದರೆ ಒಕ್ಕೂಟವು ಅದೇ ಮೂಟೆಗಳ ಮೇಲೆ ಬಳಕೆ ಅವಧಿ ಹೆಚ್ಚಿರುವ ಹೊಸ ದಿನಾಂಕವನ್ನು ನಮೂದಿಸಿ ಕಳಿಸಿತ್ತು ಎಂದು ದೂರಿದರು.ಕ್ಷೇತ್ರಶಿಕ್ಷಣಾಧಿಕಾರಿಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ ಒಕ್ಕೂಟದ ಡಾ.ನಾಗೇಶ್, ಹಾಲಿನ ಮೂಟೆಯ ಚೀಲಗಳನ್ನು ಮತ್ತು ಬಳಕೆ ಅವಧಿಯ ದಿನಾಂಕವನ್ನು ಬಹಳ ಹಿಂದೆಯೇ ಮುದ್ರಿಸ­ಲಾಗಿ­ರುತ್ತದೆ. ಪುಡಿ ಮಾತ್ರ ಬಳಕೆ ಅವಧಿ ಮೀರಿದ್ದೇನಲ್ಲ ಎಂದು ಸಮಜಾಯಿಷಿ ನೀಡಿದರು. ಇದರಿಂದ ಆಕ್ರೋಶಗೊಂಡ ಜಿಲ್ಲಾಧಿಕಾರಿ ಡಿ.ಕೆ.ರವಿ, ಚೀಲಗಳ ಮೇಲಿನ ಮಾಹಿತಿ ಯಾವಾಗ ಮುದ್ರಣಗೊಂಡಿದ್ದರೂ, ಬಳಕೆ ಅವಧಿಯ ಮಾಹಿ­ತಿಯು ಪ್ಯಾಕ್ ಆಗುವ ಸಂದರ್ಭದಲ್ಲಿ ಮುದ್ರಣ­ಗೊಳ್ಳುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಮಾತನಾಡಬಾರದು ಎಂದು ಎಚ್ಚರಿಸಿದರು.ಶಾಲೆಗಳಿಗೆ ಅವಧಿ ಪೂರೈಸಿದ ಹಾಲಿನ ಪುಡಿ ಸರಬರಾಜು ಮಾಡಿದ ಹಿನ್ನೆಲೆಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವೈದ್ಯ ಡಾ.ನಾಗೇಶ್ ಅವರನ್ನು ಜಿಲ್ಲಾಧಿಕಾರಿ ತೀವ್ರ ತರಾಟೆಗೆ ತೆಗೆದುಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದರು. ಹಾಲಿನ ಪುಡಿ ಪೂರೈಸಿದ್ದಕ್ಕೆ ಒಕ್ಕೂಟಕ್ಕೆ ಹಣ ಪಾವತಿ ಮಾಡುವುದಿಲ್ಲ. ಹೆಚ್ಚು ವಾದಿಸಿದರೆ ತನಿಖೆಗೆ ಆದೇಶಿಸಿ ಮನೆಗೆ ಕಳುಹಿಸುವುದಾಗಿ ಎಚ್ಚರಿಸಿದರು.ಮಕ್ಕಳು ಅತಿಸೂಕ್ಷ್ಮ ಜೀರ್ಣಶಕ್ತಿಯನ್ನು ಹೊಂದಿ­ರು­ತ್ತವೆ. ಬಳಕೆ ಅವಧಿ ಮೀರಿದ ಪುಡಿಯಿಂದ ತಯಾರಿಸಿದ ಹಾಲನ್ನು ಕುಡಿದು ಮಕ್ಕಳ ಆರೋಗ್ಯ­ದಲ್ಲಿ ಏರುಪೇರಾದರೆ ಜಿಲ್ಲಾಡಳಿತವೇ ಹೊಣೆ­ಯಾಗ­ಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದರು.ನುಚ್ಚಿನಂಥ ತೊಗರಿಬೇಳೆ: ಇದೇ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ರಾಜ್ಯ ಆಹಾರ ನಿಗಮದಿಂದ ನೀಡಲಾಗುವ ತೊಗರಿಬೇಳೆ ಉತ್ತಮ ಗುಣ­ಮಟ್ಟ­ದ್ದಾಗಿಲ್ಲ. ನುಚ್ಚಿನಂತೆ ಇರುತ್ತದೆ. ಕಳೆದ ತಿಂಗಳು ಬಂಗಾರಪೇಟೆಯಲ್ಲಿ ಅದನ್ನು ಸ್ಥಳದಲ್ಲೇ ವಾಪಸು ನೀಡಿದ ಬಳಿಕ ಬೇರೆ ಬೇಳೆಯನ್ನು ನಿಗಮ ನೀಡಿತ್ತು ಎಂದು ದೂರಿದರು.ಆಗ ನಿಗಮದ ಅಧಿಕಾರಿಗಳನ್ನೂ ತರಾಟೆಗೆ ತೆಗೆದು­ಕೊಂಡ ಜಿಲ್ಲಾಧಿಕಾರಿ, ಉತ್ತಮ ಗುಣ­ಮಟ್ಟದ ಆಹಾರ ಧಾನ್ಯವನ್ನು ನೀಡಲು ನಿಗಮಕ್ಕೇನು ಕಷ್ಟವೇ? ಎಂದು ಪ್ರಶ್ನಿಸಿದರು.ಶುದ್ಧ ನೀರು ಕೊಡಿ: ನಗರದ ಶಾಲೆಗಳಲ್ಲಿ ನೀರಿನ ಕೊರತೆ ಇರುವುದರಿಂದ ಕ್ಯಾನುಗಳಲ್ಲಿ ನೀರು ಪೂರೈಸಬೇಕು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಅನಿಲಕುಮಾರ್ ಕೋರಿ­ದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈಗ ಟ್ಯಾಂಕರುಗಳಲ್ಲಿ ಪೂರೈಸುತ್ತಿರುವವರಿಗೆ ಶುದ್ಧ ನೀರನ್ನೇ ಪೂರೈಸಲು ಸೂಚಿಸಿ. ಎಲ್ಲೆಡೆ ಕ್ಯಾನುಗಳನ್ನು ಕೊಡಲಾಗುವುದಿಲ್ಲ ಎಂದರು.ಲೆಕ್ಕ ಕೊಡಿ: ಜಿಲ್ಲೆಯಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್, ಎರಡು ಸಿಲಿಂಡರ್ ಸೌಕರ್ಯ ಇರುವ ಶಾಲೆಗಳು, ಸಿಲಿಂಡರ್ ಸೌಕರ್ಯವೇ ಇಲ್ಲದ ಶಾಲೆಗಳು ಎಷ್ಟಿವೆ? ನಗರ, ಪಟ್ಟಣದಿಂದ ಎಷ್ಟು ದೂರದ­ಲ್ಲಿವೆ. ಯಾವ ಶಾಲೆಗೆ ಎಷ್ಟು ಸಿಲಿಂಡರ್‌ ಬೇಕಾಗು­ತ್ತವೆ ಎಂಬ ಬಗ್ಗೆ ಸಮಗ್ರ ವರದಿ ನೀಡಿದರೆ ಅನು­ಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ­ರುವ ಎಲ್ಲ ವಿದ್ಯಾರ್ಥಿ ನಿಲಯಗಳು ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳಿಂದ ತುಂಬಿರಬೇಕು. ಬಾಲ­ಕಾರ್ಮಿಕರಿಗೂ ಆದ್ಯತೆ ಕೊಡಿ. ನಂತರ ಅರ್ಹ­ರಿಗೂ ಅವಕಾಶ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ತರಬೇತಿ, ಆರೋಗ್ಯ ತಪಾಸಣೆ: ಜಿಲ್ಲೆಯ ಎಲ್ಲ ವಿದ್ಯಾರ್ಥಿನಿಲಯಗಳಲ್ಲಿರುವ ಅಡುಗೆ ಸಿಬ್ಬಂದಿಗೆ ಸ್ವಚ್ಛತೆ ನಿರ್ವಹಣೆ ಬಗ್ಗೆ ತರಬೇತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಏಕಕಾಲಕ್ಕೆ ಹಮ್ಮಿ­ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಡಿ.15ರಂದು ಕೋಲಾರ, 16ರಂದು ಮುಳ­ಬಾಗಲು, 17ರಂದು ಬಂಗಾರಪೇಟೆ, 18ರಂದು ಶ್ರೀನಿವಾಸಪುರ ಮತ್ತು 19ರಂದು ಮಾಲೂರಿನಲ್ಲಿ ತರಬೇತಿ ಏರ್ಪಡಿಸಲು ಸೂಚಿಸಿದರು.

ಮಗು ಸಾವು: ಸಣ್ಣ ಘಟನೆ!

ಮಾಲೂರಿನ ಶಾಲೆಯೊಂದರ ಸಾಂಬಾರು ಪಾತ್ರೆಯಲ್ಲಿ ಬಿದ್ದ ಮಗು ಸಾವಿಗೀಡಾಗಿದ್ದು ಸಣ್ಣ ಘಟನೆ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಕಣ್ಣಯ್ಯ ನೀಡಿದ ಹೇಳಿಕೆ ಆಕ್ಷೇಪಕ್ಕೆ ಗುರಿಯಾದ ಘಟನೆಯೂ ಸಭೆಯಲ್ಲಿ ನಡೆಯಿತು.

ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಸುವ ವಿಷಯದ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿ ಹೇಳಿದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಂ.ಜುಲ್ಫಿಕಾರ್ ಉಲ್ಲಾ, ಮಗು ಸತ್ತಿದ್ದು ನಿಮ್ಮ ಪ್ರಕಾರ ಸಣ್ಣ ಘಟನೆಯೇ? ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)