ಸೋಮವಾರ, ಏಪ್ರಿಲ್ 19, 2021
32 °C

ಅವಧಿ ಮುಗಿದ ಔಷಧ; ಗೋಣಿಯಲ್ಲಿ ಬ್ಯಾಂಡೇಜ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಸುಸಜ್ಜಿತವಾಗಿದೆ. ಕರ್ತವ್ಯದ ಹೊತ್ತಿನಲ್ಲಿ ಅಂದರೆ ನಡು ಮಧ್ಯಾಹ್ನ ಅದಕ್ಕೆ ಬಾಗಿಲು ಹಾಕಲಾಗಿತ್ತು. ಬಾಗಿಲು ತೆಗೆಸಿ ಒಳಗೆ ಹೋದರೆ ಎಲ್ಲೆಡೆ ದೂಳು. ಕಪಾಟಿನಲ್ಲಿ ಜೋಡಿಸಿಟ್ಟ ಅವಧಿ ಮುಗಿದ ಔಷಧಗಳು, ಗೋಣಿಯಲ್ಲಿ ತುಂಬಿಸಿಟ್ಟಿದ್ದ ಬ್ಯಾಂಡೇಜ್ ಬಟ್ಟೆ ಸುತ್ತಿದವರಿಗೆ ಮತ್ತೆ ಗಾಯವಾಗುವುದು ನಿಶ್ಚಿತ. ಜಿಲ್ಲೆಯ ಇತರೆ ಆರೋಗ್ಯ ಕೇಂದ್ರಗಳೂ ಇದಕ್ಕಿಂತ ಉತ್ತಮ ಇರಲಾರದು ಎಂದೇ ತೋರುತ್ತದೆ~...ಹೀಗೆ ವ್ಯಂಗ್ಯವಾಗಿ ಹೇಳಿದವರು ಜಿ.ಪಂ. ಸಿಇಒ ಕೆ.ಎನ್.ವಿಜಯಪ್ರಕಾಶ್! ಗುರುವಾರ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಔಷಧ ಖರೀದಿಗೆ ಸಂಬಂಧಿಸಿದಂತೆ ಮಮತಾ ಗಟ್ಟಿ ಅವರು ಪ್ರಸ್ತಾಪಿಸಿದ ವಿಚಾರದ ಬಗ್ಗೆ ಚರ್ಚೆ ನಡೆದ ಸಂದರ್ಭದಲ್ಲಿ ಅವರು ತಾವು ಬುಧವಾರವಷ್ಟೇ ಕಂಡ ವಿದ್ಯಮಾನವನ್ನು ಸಭೆಗೆ ವಿವರಿಸಿದರು.ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾವು ಹಠಾತ್ ಭೇಟಿ ನೀಡಿ ಪರಿಶೀಲಿಸಿದ್ದನ್ನು ವಿವರಿಸಿದ ಅವರು, 11 ಸಿಬ್ಬಂದಿ ಇರಬೇಕಿದ್ದ ಆ ಆರೋಗ್ಯ ಕೇಂದ್ರವನ್ನೇ ಮುಚ್ಚಲಾಗಿತ್ತು. ಹಾಗಿದ್ದರೆ ತುರ್ತು ಚಿಕಿತ್ಸೆಗೆಂದು ಬರುವ ಬಡ ರೋಗಿಗಳ ಗತಿ ಏನು? ಎಂದು ಪ್ರಶ್ನಿಸಿದರು.ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀರಂಗಪ್ಪ ಅವರು ಸಮಜಾಯಿಷಿ ನೀಡಲು ಹೊರಟಾಗ ಅರ್ಧಕ್ಕೇ ತಡೆದ ಸಿಇಒ, `ನಿಮ್ಮ ವಿವರಣೆ ಈಗ ಅನಗತ್ಯ. ಅತ್ಯಂತ ಸುಸಜ್ಜಿತ ಕಟ್ಟಡ, ಅಗತ್ಯ ಸೌಲಭ್ಯ ಇರುವ ಕಡೆಯಲ್ಲೇ ಈ ರೀತಿಯ ವಿದ್ಯಮಾನ ಇದ್ದರೆ ಉಳಿದ ಕಡೆ ಹೇಗೆ ಇರಬಹುದು ಎಂಬುದನ್ನು ವಿವರಿಸಿ ಹೇಳಬೇಕಿಲ್ಲ~ ಎಂದರು.

ತಾವು ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಬಳಿಕ ಜಿಲ್ಲೆಯ ಮಟ್ಟಿಗೆ ಔಷಧಿ ಖರೀದಿಯನ್ನು ಜಿ.ಪಂ.ಗೇ ವಹಿಸಿಕೊಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.ಸಂತೋಷ್ ಕುಮಾರ್ ರೈ ಅವರು ಮೊಂಟೆಪದವು ಶಾಲಾ ಕಟ್ಟಡ ಮಂಜೂರಾಗಿರುವ ಬಗ್ಗೆ ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಮಮತಾ ಗಟ್ಟಿ ಅವರು ಮಧ್ಯಪ್ರವೇಶಿಸಿ ಮಾತನಾಡಿದ್ದನ್ನು ತರಾಟೆಗೆ ತೆಗೆದುಕೊಂಡ ಅವರು, ತಮ್ಮ ಕ್ಷೇತ್ರದ ಬಗ್ಗೆ ಮೂಗು ತೂರಿಸುವುದು ಬೇಡ ಎಂದರು. ಇದರಿಂದ ಸ್ವಲ್ಪ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು.ಮತ್ತೊಂದು ಸಂದರ್ಭದಲ್ಲಿ ಸಹ ಗರಂ ಆದ ಸಿಒಇ ವಿಜಯಪ್ರಕಾಶ್, `ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡಲೇಬೇಕು. ತಕ್ಷಣ ಸಾಧ್ಯವಿಲ್ಲದಿದ್ದರೆ ಮರುದಿನದೊಳಗೆ ಸದಸ್ಯರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅವರಿಗೆ ಉತ್ತರ ನೀಡಬೇಕು. ಲಿಖಿತ ಉತ್ತರವನ್ನು ಬಳಿಕ ಒದಗಿಸಬೇಕು~ ಎಂದು ತಾಕೀತು ಮಾಡಿದರು.ಉದ್ಯೋಗ ಖಾತರಿ: ಅನುದಾನ ಬಳಕೆಗೆ ಸೂಚನೆ

ಉದ್ಯೋಗ ಖಾತರಿಯಲ್ಲಿ ಯೋಜನೆಗಾಗಿ ಮಂಜೂರಾದ ಹಣದಲ್ಲಿ 15.10 ಕೋಟಿ ರೂಪಾಯಿ ಬಳಕೆಯಾಗಿಲ್ಲ ಎಂದು ಯೋಜನಾ ನಿರ್ದೇಶಕಿ ಸೀತಮ್ಮ ಅವರು ಸಭೆಗೆ ಮಾಹಿತಿ ನೀಡಿದಾಗ ಹಲವು ಸದಸ್ಯರು ವ್ಯವಸ್ಥೆಯಲ್ಲಿನ ಲೋಪಗಳತ್ತ ಬೊಟ್ಟು ಮಾಡಿದರು.`ತಾವು 35 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಿದರೂ ಇಒ ಅದನ್ನು 15 ಲಕ್ಷ ರೂಪಾಯಿಗೆ ತಗ್ಗಿಸಿದ್ದಾರೆ. ಹೀಗಾದರೆ ಹಣ ವಿನಿಯೋಗ ಆಗುವುದಾದರೂ ಹೇಗೆ?~ ಎಂದು ಮಮತಾ ಗಟ್ಟಿ ಪ್ರಶ್ನಿಸಿದರು.ಸರ್ಕಾರದ ನಿಯಮಗಳಿಗೆ ತೊಂದರೆ ಆಗದಂತೆ, ಜತೆಗೆ ಕೆಲವು ಕೆಲಸಗಳ ಸ್ಥಿತಿಗತಿ ನೋಡಿಕೊಂಡು ಸ್ವಲ್ಪ ಉದಾರವಾಗಿಯೇ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸಿಇಒ ಸೂಚಿಸಿದರು. ಇದೇ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಗೆ ಹಣ ಬಿಡುಗಡೆ ಮಾಡಿದ ಸರ್ಕಾರಗಳ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಏರುಧ್ವನಿಯ ಚರ್ಚೆಯೂ ನಡೆಯಿತು.`ಬಿಇಒ ಅಮಾನತು ಎಚ್ಚರಿಕೆ~

ಮೊಂಟೆಪದವು ಶಾಲೆಗೆ ಕಟ್ಟಡ ನಿರ್ಮಿಸಿಕೊಡುವ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಸುಧಾಕರ್ ಸಮರ್ಪಕ ಉತ್ತರ ನೀಡದೇ ಇದ್ದುದಕ್ಕೆ ಹಾಗೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಲಘುವಾಗಿ ವರ್ತಿಸುತ್ತಿದ್ದುದಕ್ಕೆ ಸಿಇಒ ಸಿಡಿಮಿಡಿಗೊಂಡರು. ಬಿಇಒಗೆ ಷೋಕಾಸ್ ನೋಟಿಸ್ ನೀಡುವಂತೆ ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಜೀರ್ ಅವರಿಗೆ ಸೂಚಿಸಿದರು.`ಸದಸ್ಯರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರವನ್ನೂ ನೀಡಿಲ್ಲ. ಸದಸ್ಯರು ಗಂಭೀರ ಚರ್ಚೆಯಲ್ಲಿ ತೊಡಗಿರುವಾಗ ನಗುತ್ತಾ ಇದ್ದೀರಿ. ನಿಮ್ಮನ್ನು ಸಸ್ಪೆಂಡ್ ಮಾಡಬೇಕಾಗುತ್ತದೆ~ ಎಂದು ಗುಡುಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.