ಶುಕ್ರವಾರ, ಜನವರಿ 17, 2020
21 °C

ಅವಳಿ ನಗರದಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಪ್ರಜಾವಾಣಿ ವಾರ್ತೆ/ ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಗದಗ: ಬೆಟಗೇರಿ, ಗದಗ ಅವಳಿ ನಗರದಲ್ಲಿ ಕ್ರಿಸ್‌ಮಸ್‌ ಸಂಭ್ರಮ ಮನೆ ಮಾಡಿದೆ. ಪಕ್ಕದಲ್ಲೇ ಇದ್ದ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಡುತ್ತಿದ್ದ ಕೆರೋಲ್‌ ಗಾಯನ ಇಂಪು ನೀಡುತ್ತಿತ್ತು.ಅವಳಿ ನಗರದಲ್ಲಿ ಕ್ರಿಸ್‌ಮಸ್‌ ಹಬ್ಬದ ತಯಾರಿ ಜೋರಾಗಿಯೇ ನಡೆದಿದೆ. ಕ್ರೈಸ್ತ ಬಾಂಧವರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ. ಅವಳಿ ನಗರದ 19 ಚರ್ಚ್‌ಗಳಲ್ಲೂ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಸಿಎಸ್‌ಐ ಚರ್ಚ್‌, ರೋಮನ್‌ ಕ್ಯಾಥೊಲಿಕ್‌ ಚರ್ಚ್‌, ಎಸ್‌ಪಿಜಿ ಚರ್ಚ್‌ ಪ್ರಮುಖವಾದವು. ಸ್ಟೇಷನ್‌ ರಸ್ತೆ ಮತ್ತು ಮಾರುಕಟ್ಟೆ ರಸ್ತೆಯ ಅಂಗಡಿಗಳಲ್ಲಿ ಕಾಗದದಲ್ಲಿ ತಯಾರಿಸಿದ ವಿವಿಧ ಬಣ್ಣಗಳ ನಕ್ಷತ್ರಗಳು ಗ್ರಾಹಕರನ್ನು ಸೆಳೆ­ಯುತ್ತಿವೆ. ಶುಭಾಶಯ ಪತ್ರಗಳು  ಆಹ್ವಾನಿ­ಸುತ್ತಿವೆ. ಕ್ರಿಸ್‌ಮಸ್‌ ಟ್ರೀಗಳಿಗೆ ಅಳವಡಿಸಿರುವ ದೀಪಗಳು ಮಿಂಚುತ್ತಿವೆ.

ಕ್ರೈಸ್ತ ಬಾಂಧವರು ಮನೆಯನ್ನು ಶುಚಿ­ಗೊಳಿ­ಸುವುದು, ಕೇಕ್‌ಗಳ ತಯಾರಿಕೆ, ಅಲಂಕಾರ ಮಾಡು­­ವುದು, ಬಲೂನು ಕಟ್ಟುವ ಕಾರ್ಯಗಳಲ್ಲಿ ತೊಡಗಿದ್ದಾರೆ.ಮಹಿಳೆಯರು ಕರ್ಚಿಕಾಯಿ, ಕೇಕ್‌, ರೋಸ್‌­ಕುಕ್‌, ಚಕ್ಕಲಿ ಸಿದ್ಧಪಡಿಸುತ್ತಿದ್ದರೆ, ಯುವಕರು ‘ಗೋದಳಿ’ ನಿರ್ಮಿಸುವುದರಲ್ಲಿ ತಲ್ಲೀನ­ರಾಗಿ­ದ್ದರು. ಚರ್ಚ್‌ಗಳಿಗೆ ಅಂತಿಮ ಹಂತದ ಸುಣ್ಣ, ಬಣ್ಣ ಬಳಿಯುವ ಕೆಲಸ ಜೋರಾಗಿ ನಡೆ­ಯುತ್ತಿದೆ. ಕೆಲ ಚರ್ಚ್‌ಗಳು ನವ ವಧುವಿನಂತೆ ಸಿಂಗಾರಗೊಂಡು ಕಂಗೊಳಿಸುತ್ತಿವೆ. ಕ್ರಿಸ್‌ಮಸ್‌ ಸಂದರ್ಭದಲ್ಲಿ ಬಗೆ ಬಗೆಯ ಕೇಕ್‌ಗಳ ರುಚಿ ಸವಿಯಬಹುದು. ನಗರದಲ್ಲಿ ಕ್ರಿಸ್‌ಮಸ್‌ಗಾಗಿಯೇ ವಿಶೇಷ ಕೇಕ್‌ ತಯಾರಿಸುವ ಕೆಲ ಬೇಕರಿಗಳಿವೆ. ಮಾರುಕಟ್ಟೆ ರಸ್ತೆ, ಸ್ಟೇಷನ್‌ ರೋಡ್‌, ಟಾಂಗಾ ಕೂಟ್‌, ಬಸವೇಶ್ವರ ಸರ್ಕಲ್‌, ಕೇಕ್‌ ಕಾರ್ನರ್‌ಗಳಲ್ಲಿ ರುಚಿ ರುಚಿಯಾದ ಕೇಕ್‌ ಮತ್ತು ಸಿಹಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ.ಯೇಸು ದನದ ಕೊಟ್ಟಿಗೆಯಲ್ಲಿ ಜನಿಸಿದ ಸಂಕೇತವಾಗಿ ಮನೆಯಲ್ಲಿ ಗೋದಲಿ ನಿರ್ಮಿಸುತ್ತಾರೆ. ಗೋದಳಿ ಪಕ್ಕದಲ್ಲಿ ಕ್ರಿಸ್‌ಮಸ್‌ ಟ್ರೀ ನೆಟ್ಟಿರುತ್ತಾರೆ.  ಕ್ರಿಸ್‌ಮಸ್‌ ಆಚರಣೆ ಸಂದರ್ಭದಲ್ಲಿ ನಕ್ಷತ್ರಗಳನ್ನು ಮನೆ ಮುಂದೆ ತೂಗು ಹಾಕಲಾಗುತ್ತದೆ. ದೇವರ ಬೆಳಕು ನಕ್ಷತ್ರ ಎನ್ನುವುದು ಕ್ರೈಸ್ತರ ನಂಬಿಕೆ.ದೀಪಾಲಂಕಾರ ವೈಭವ

ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಚರ್ಚ್‌ಗಳಲ್ಲಿ ಯೇಸುವಿನ ಜನ್ಮ ದಿನ ಆಚರಿಸಲಾಗುತ್ತದೆ. ಬೆಳಗಿನ ಜಾವ ಎರಡು ಗಂಟೆಯವರೆಗೂ ನೆರವೇರುತ್ತದೆ. ಬಳಿಕ ಕ್ರಿಸ್‌ಮಸ್‌ ಕೇಕ್‌ ಅನ್ನು ಎಲ್ಲರಿಗೂ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳ­ಲಾಗುತ್ತದೆ. ನಂತರ ಮನೆಗೆ ತೆರಳಿ ಹಬ್ಬದೂಟ ಮಾಡುತ್ತಾರೆ. ಬೆಳಿಗ್ಗೆ 5 ಗಂಟೆಗೆ ವಿಶೇಷ ಪೂಜೆ, ಪ್ರಾರ್ಥನೆ ನಡೆಯುತ್ತದೆ. ರಾತ್ರಿ ವೇಳೆ ಚರ್ಚ್‌ಗೆ ದೀಪಾಲಂಕಾರ ಮಾಡಲಾಗುತ್ತದೆ. ಮೇಣದ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸುತ್ತಾರೆ.ವುರ್ಥ್‌ ಮೆಮೊರಿಯಲ್‌ ಸಿಎಸ್‌ಐ ಚರ್ಚ್‌ನಲ್ಲಿ ಫಾದರ್‌ ಜೆ.ಕೆ.ದೊಡ್ಡಮನಿ, ಎಸ್‌ಪಿಜಿ ಚರ್ಚ್‌ನಲ್ಲಿ ಐ.ಪಿ.ಸುರಣಗಿ, ಮಸಾರಿಯ ಇಎಸ್‌ಐ ಚರ್ಚ್‌ನಲ್ಲಿ ರೆವರೆಂಡ್‌ ವಸಂತ್‌ ಕುಮಾರ್‌, ಸೆಂಟ್‌ ಇಗ್ನಿಷೀಯಸ್‌ ಚರ್ಚ್‌ನಲ್ಲಿ ರೆವರೆಂಡ್‌ ಲೂರ್ದ್ ಸ್ವಾಮಿ ಅವರು 25ರಂದು ಬೆಳಿಗ್ಗೆ ಜನತೆಗೆ ಸಂದೇಶ ನೀಡಲಿದ್ದಾರೆ.ತಿಂಗಳ ಮುಂಚೆ ತಯಾರಿ

ಕ್ರಿಸ್‌ಮಸ್‌ಗೆ ಒಂದು ತಿಂಗಳು ಮುಂಚಿತವಾಗಿಯೇ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತವೆ. ಪ್ರತಿದಿನ ಸಂಜೆ ಸಾಂತಾಕ್ಲಾಸ್‌ ವೇಶ ಧರಿಸಿ ಕ್ರೈಸ್ತ ಸಮುದಾಯದವರ ಮನೆಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರಿಸ್‌ಮಸ್‌ ಹಾಡುಗಳನ್ನು ಹಾಡಿ ಶುಭಾಶಯ ಕೋರಿ ಬರುವುದು ಉಂಟು.ಮಂಗಳವಾರ ರಾತ್ರಿ ನಾಟಕ, ಗಾಯನ ಸ್ಪರ್ಧೆ ನಡೆಯುತ್ತದೆ. ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಅಕ್ಕ ಪಕ್ಕದ ಮನೆಯವರಿಗೆ ಸಿಹಿ ನೀಡುತ್ತಾರೆ. ಕೆಲವರು ಬಡವರ, ಅಂಗವಿಕಲರಿಗೆ ಸಿಹಿ ಹಾಗೂ ವಸ್ತ್ರಗಳನ್ನು ನೀಡುವ ಮೂಲಕ ಹಬ್ಬ ಆಚರಿಸುತ್ತಾರೆ.

ಸಾಂತಾಕ್ಲಾಸ್‌ ಮನೆ ಮನೆಗೆ ಬಂದು ಚಾಕೋಲೇಟ್‌ ಗಿಫ್ಟ್‌ ನೀಡುತ್ತಾನೆ ಎಂಬ  ನಂಬಿಕೆ ಇದೆ. ಸಾಂತಾಕ್ಲಾಸ್‌ ಮೊದಲ ಹೆಸರು ‘ಸೇಂಟ್‌ ನಿಕೋಲಾಸ್‌’. ಹಬ್ಬದ ದಿನ ಚರ್ಚ್‌ ಬಳಿ ಸಾಂತಾಕ್ಲಾಸ್‌ ವೇಷಧಾರಿ ನಿಂತಿರುತ್ತಾನೆ. ಮಕ್ಕಳ ಜತೆ ಆಟವಾಡಿ ಚಾಕೋಲೇಟ್‌, ಕೇಕ್‌ ನೀಡಿ ಮಕ್ಕಳ್ನು ಸಂತೋಷ ಪಡಿಸುತ್ತಾರೆಶಾಂತಿ ನೆಲೆಸಲಿ

‘ಯೇಸು ಜನಿಸಿದ ದಿನ ಮಾನವನಿಗೆ ಪ್ರೀತಿ, ಸಮಾನತೆ, ಸಂತೋಷ ಸಿಕ್ಕಿತ್ತು. ಆ ಪ್ರೀತಿ, ಶಾಂತಿ ಮತ್ತು ಸಮಾನತೆ ಸಮಾಜದ ಎಲ್ಲ ವರ್ಗದ ಜನರಿಗೂ ತಲುಪಬೇಕು. ಯೇಸು ಎಲ್ಲರಿಗೂ ಶಾಂತಿ ಮತ್ತು ನೆಮ್ಮದಿ ಕರುಣಿಸಲಿ. ವಿಶ್ವದಲ್ಲಿ ಶಾಂತಿ ನೆಲೆಸಿ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲಾಗು­ವುದು’ ಎಂದು ಗದಗ ಸಿಟಿ ಅಸೆಂಬ್ಲಿ ಆಫ್‌ ಗಾಡ್‌ ಮುಖ್ಯಸ್ಥ ಜೋಸೆಫ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ಸಿಹಿ ತಿಂಡಿ ಸಿದ್ಧ

‘ಹತ್ತು ದಿನ ಮುಂಚಿತವಾಗಿಯೇ ಸಿಹಿ ತಿಂಡಿ  ಮಾಡಲು ಆರಂಭಿಸುತ್ತೇವೆ. ಮನೆಗೆ ಪೇಂಟ್‌ ಮಾಡುವುದು, ಶುಚಿಗೊಳಿಸುವ ಕೆಲಸ ನಡೆಯುತ್ತದೆ. ಅಕ್ಕಪಕ್ಕದವರು ಬಂದು ಸಿಹಿ ತಿನಿಸು ಸಿದ್ಧಪಡಿಸಲು ಸಹಾಯ ಮಾಡುತ್ತಾರೆ. ಹಬ್ಬದ ದಿನ ಎಲ್ಲರಿಗೂ ಕೇಕ್‌ ಮತ್ತು ಸಿಹಿ ತಿನಿಸು ನೀಡಿ ಸಂಭ್ರಮದಿಂದ ಆಚರಿಸುತ್ತೇವೆ’ ಎನ್ನುತ್ತಾರೆ ಬೆಟಗೇರಿಯ ಗೃಹಿಣಿ ಶಶಿಕಲಾ ಸ್ಯಾಮ್ಯುವೆಲ್‌.

ಪ್ರತಿಕ್ರಿಯಿಸಿ (+)