ಮಂಗಳವಾರ, ಏಪ್ರಿಲ್ 20, 2021
24 °C

ಅವಿಶ್ವಾಸ ನಿರ್ಣಯ: ಟಿಎಂಸಿ ಏಕಾಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಲು ಉದ್ದೇಶಿಸಿರುವ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಮಾಡಿಕೊಂಡ ಕೋರಿಕೆಯನ್ನು ಸಿಪಿಎಂ ಸಾರಾಸಗಟಾಗಿ ತಳ್ಳಿಹಾಕಿದೆ. ಇಂತಹ ಗೊತ್ತುವಳಿಯಿಂದ ಸರ್ಕಾರದ ತಪ್ಪು ನೀತಿಗಳಿಗೆ ರಕ್ಷಣೆ ದೊರಕುತ್ತದೆಯೇ ಹೊರತು, ಗೊತ್ತುವಳಿ ಉದ್ದೇಶ ಫಲಪ್ರದವಾಗುವುದಿಲ್ಲ ಎಂದು ಹೇಳಿದೆ.`ಇಂತಹ ಗೊತ್ತುವಳಿಯನ್ನು ಬೆಂಬಲಿಸದಂತೆ ಇತರ ವಿರೋಧ ಪಕ್ಷಗಳಿಗೆ ನಾವು ಮನವಿ ಮಾಡಿದ್ದೇವೆ. ಜೊತೆಗೆ ಸರ್ಕಾರದ ಲೋಪದೋಷವನ್ನು ಸಮಗ್ರವಾಗಿ ಸಂಸತ್ತಿನಲ್ಲಿ ಎತ್ತಿತೋರಿಸುವಂತಹ ಬದಲಿ ವಿಧಾನಗಳನ್ನು ಕಂಡುಕೊಳ್ಳುವ ಬಗ್ಗೆಯೂ ವಿರೋಧ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ~ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಸೀತಾರಾಂ ಯೆಚೂರಿ ಕೂಡ ಇದೇ ನಿಲುವು ವ್ಯಕ್ತಪಡಿಸಿದ್ದಾರೆ.

`ಟಿಎಂಸಿಯ ಅವಿಶ್ವಾಸ ನಿರ್ಣಯ ಬಿದ್ದು ಹೋದರೆ ಸರ್ಕಾರ ಅದನ್ನು ತನ್ನ ಜನ ವಿರೋಧಿ ನೀತಿ ಅನುಮೋದಿಸಿಕೊಳ್ಳಲು ಬಳಸಿಕೊಳ್ಳುತ್ತದೆ. ನಾವು ಯಾವುದೇ ಕಾರಣಕ್ಕೂ ಸರ್ಕಾರದ ಜನವಿರೋಧಿ ನೀತಿಯ ಬೆಂಬಲಕ್ಕೆ ನಿಲುವುದಿಲ್ಲ. ಆದ್ದರಿಂದ ಟಿಎಂಸಿ ಕೋರಿಕೆಯನ್ನು ಮನ್ನಿಸುವುದಿಲ್ಲ~ ಎಂದಿದ್ದಾರೆ.`ಈ ಅವಿಶ್ವಾಸ ನಿರ್ಣಯವು ನಿರ್ದಿಷ್ಟ ವಿಷಯಾಧಾರಿತವಾಗಿಲ್ಲ. ಆದರೆ, ಎಡರಂಗವು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್‌ಡಿಐ) ವಿರೋಧಿಸಿ ಮಂಡಿಸಲು ಇಚ್ಛಿಸಿರುವ ನಿರ್ಣಯದ ಮೇಲೂ ಮತದಾನಕ್ಕೆ ಅವಕಾಶವಿದೆ. ಇದರಿಂದ ಎಫ್‌ಡಿಐ ಕುರಿತ ನಿರ್ಧಾರಕ್ಕೆ ಹಿನ್ನಡೆಯಾಗುವಂತೆ ಮಾಡಿ ಸರ್ಕಾರವನ್ನು ಮುಖಭಂಗಕ್ಕೆ ಗುರಿಮಾಡಬಹುದು ಮತ್ತು ಸರ್ಕಾರವನ್ನು ಹಣಿಯಲು ಇದು ಉತ್ತಮ ಕಾರ್ಯತಂತ್ರವೂ ಆಗಿದೆ~ ಎಂದಿದ್ದಾರೆ.`ಎಫ್‌ಡಿಐ ವಿರೋಧಿಸಿ ಸಮಾಜವಾದಿ ಪಕ್ಷ ಸೇರಿದಂತೆ ಹಲವು ಪಕ್ಷಗಳು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿವೆ. ಈ ಪಕ್ಷಗಳು ಎಡರಂಗ ಮಂಡಿಸಲು ಉದ್ದೇಶಿಸಿರುವ ನಿರ್ಣಯಕ್ಕೆ ಬೆಂಬಲ ನೀಡುತ್ತವೆ ಎಂಬ ವಿಶ್ವಾಸ ನಮಗಿದೆ. ಆದರೆ, ಟಿಎಂಸಿಯ ಅವಿಶ್ವಾಸ ಗೊತ್ತುವಳಿಯ ಪರವಾಗಿ ಈ ಪಕ್ಷಗಳು ಇರುವುದಿಲ್ಲ~ ಎಂದು ತಿಳಿಸಿದ್ದಾರೆ.ಸಿಪಿಎಂ ಅಭಿಪ್ರಾಯವನ್ನೇ ಸಿಪಿಐ ಕೂಡ ಬೆಂಬಲಿಸಿದೆ. ಆದರೆ `ಅವಿಶ್ವಾಸ ಗೊತ್ತುವಳಿ ಮೇಲೆ ಮತದಾನ ನಡೆದರೆ ಸರ್ಕಾರದ ಪರವಾಗಿಯೂ ನಿಲ್ಲುವುದಿಲ್ಲ. ಗೊತ್ತುವಳಿಯನ್ನೂ ಅನುಮೋದಿಸುವುದಿಲ್ಲ. ಬದಲಿಗೆ ನಿಲುವಳಿ ಸೂಚನೆ ಮಂಡಿಸುತ್ತೇವೆ~ ಎಂದು ಸಿಪಿಐ ಮುಖಂಡ ಗುರುದಾಸ್ ದಾಸ್‌ಗುಪ್ತಾ ಹೇಳಿದ್ದಾರೆ.ಟಿಎಂಸಿ ತಿರುಗೇಟು

ಕೋಲ್ಕತ್ತ ವರದಿ:
ಅವಿಶ್ವಾಸ ಗೊತ್ತುವಳಿ ಬೆಂಬಲಿಸದಿರುವ ಎಡಪಕ್ಷಗಳನ್ನು ತೃಣಮೂಲ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, `ಬಹು ಬ್ರಾಂಡ್‌ಗಳ ಚಿಲ್ಲರೆ ವ್ಯಾಪಾರ ವಲಯದಲ್ಲಿ ಎಫ್‌ಡಿಐ ವಿರುದ್ಧ ಎಡಪಕ್ಷಗಳು ಮಾಡಿದ ಹೋರಾಟ ಬೂಟಾಟಿಕೆಯದ್ದು~ ಎಂದು ಹೀಯಾಳಿಸಿದೆ.`ಎಫ್‌ಡಿಐ ವಿಚಾರವಾಗಿ ದೊಡ್ಡದಾಗಿ ಆರ್ಭಟಿಸಿದ ಸಿಪಿಎಂನ ಬಣ್ಣ ಈಗ ಬಯಲಾಗಿದೆ~ ಎಂದು ಟಿಎಂಸಿ ಮುಖಂಡ, ಕೇಂದ್ರ ಮಾಜಿ ಸಚಿವ ಸೌಗತ ರಾಯ್ ಹೇಳಿದ್ದಾರೆ.`ಅವಿಶ್ವಾಸ ಗೊತ್ತುವಳಿ ಬೆಂಬಲಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ರನ್ನು ಕೋರಿಲ್ಲ.ಇದುವರೆಗೂ ಇಂತಹ ಬೆಳವಣಿಗೆ ನಡೆದಿಲ್ಲ. ಒಂದು ವೇಳೆ ನಡೆದರೆ ಅದರಿಂದ ಯಾವುದೇ ತೊಂದರೆಯೂ ಇಲ್ಲ. ಈ ವಿಚಾರದಲ್ಲಿ ನಾವು ಎಲ್ಲಾ ಪಕ್ಷಗಳ ಬೆಂಬಲ ಕೋರಿದ್ದೇವೆ~ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಮುಕುಲ್ ರಾಯ್ ಸ್ಪಷ್ಟಪಡಿಸಿದ್ದಾರೆ.ಮಮತಾ ಅವರು ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಭಾನುವಾರ ಹೇಳಿದ್ದರು.ಸಂಖ್ಯಾಬಲ ಇದೆ: ಕಾಂಗ್ರೆಸ್

ನವದೆಹಲಿ ವರದಿ:
ನ. 22ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಅಥವಾ ಎಫ್‌ಡಿಐ ವಿರೋಧಿಸುವ ನಿರ್ಣಯ ಮತದಾನದ ಹಂತಕ್ಕೆ ಬಂದರೆ ಸರ್ಕಾರ ಬಹುಮತ ಸಾಬೀತು ಪಡಿಸಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.`ಲೋಕಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ (272) ಸಂಖ್ಯೆಗಿಂತಲೂ ಹೆಚ್ಚು ಸಂಸದರು ಸರ್ಕಾರದ ಪರವಾಗಿದ್ದಾರೆ. ಸರ್ಕಾರ ವಿಶ್ವಾಸಮತವನ್ನೇನೂ ಯಾಚಿಸುವುದಿಲ್ಲ~ ಎಂದು ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.ಅಮೆರಿಕ ಜೊತೆ ನಾಗರಿಕ ಉದ್ದೇಶದ ಪರಮಾಣು ಒಪ್ಪಂದ ಏರ್ಪಡುವ ಸಂದರ್ಭದಲ್ಲಿ (2008) ಯುಪಿಎ-1 ಸರ್ಕಾರಕ್ಕೆ ಎಡಪಕ್ಷಗಳು ಬೆಂಬಲ ವಾಪಸು ಪಡೆದ ಕಾರಣ ಆಗಿನ ಸರ್ಕಾರ ವಿಶ್ವಾಸಮತ ಯಾಚಿಸಿತ್ತು.`ಅಸ್ಥಿರತೆ ಭೀತಿ ಇಲ್ಲ~

ಲಖನೌ ವರದಿ: 
`ಸರ್ಕಾರಕ್ಕೆ ಅಸ್ಥಿರತೆಯ ಭಯ ಇಲ್ಲ. ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳು ಸರ್ಕಾರದ ಬೆಂಬಲಕ್ಕೆ ಇದ್ದೇ ಇರುತ್ತವೆ~ ಎಂದು ಉಕ್ಕು ಸಚಿವ ಬೇನಿ ಪ್ರಸಾದ್ ವರ್ಮಾ ಸೋಮವಾರ ಹೇಳಿದ್ದಾರೆ.ಎಲ್ಲಿದೆ ಬಲ?

ಅವಿಶ್ವಾಸ ನಿರ್ಣಯ ಸದನದಲ್ಲಿ ಮಂಡಿಸಲು 54 ಸದಸ್ಯರ ಸಹಿ ಅಗತ್ಯ. ಆದರೆ ಲೋಕಸಭೆಯಲ್ಲಿ ಟಿಎಂಸಿ ಸಂಖ್ಯಾಬಲವೇ 19. ಇತರ ಪಕ್ಷಗಳು ಈ ವಿಷಯದಲ್ಲಿ ಟಿಎಂಸಿ ಬೆಂಬಲಕ್ಕೆ ಬರಲಾರವು.

  -ಸಂದೀಪ್ ದೀಕ್ಷಿತ್,  ಕಾಂಗ್ರೆಸ್ ವಕ್ತಾರದುಸ್ಸಾಹಸ

ಸಂಸತ್ತಿನ ಇತಿಹಾಸದಲ್ಲಿ ಕೇವಲ 19 ಸದಸ್ಯರಿರುವ ಪಕ್ಷವೊಂದು ಅವಿಶ್ವಾಸ ನಿರ್ಣಯ ಮಂಡಿಸುವ ದುಸ್ಸಾಹಸಕ್ಕೆ ಕೈಹಾಕಿಲ್ಲ.

 -ಮನೀಶ್ ತಿವಾರಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.