ಮಂಗಳವಾರ, ಮೇ 11, 2021
26 °C
ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸತ್ ಸದಸ್ಯ ಜನಾರ್ದನ ಸ್ವಾಮಿ ಗರಂ

ಅಸಮರ್ಪಕ ಮಾಹಿತಿ: ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ (ಎಂಎನ್‌ಆರ್‌ಇಜಿ) ಕಾಮಗಾರಿ ಪ್ರಗತಿ ಕುಂಠಿತಗೊಂಡಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಂಸತ್ ಸದಸ್ಯ ಜನಾರ್ದನ ಸ್ವಾಮಿ, ಸಭೆಗೆ ಸಮರ್ಪಕವಾದ ಅಂಕಿ ಅಂಶಗಳನ್ನು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.



ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ `ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಜಾಗೃತಿ ಸಭೆ'ಯಲ್ಲಿ, ಉದ್ಯೋಗ ಖಾತ್ರಿ ಯೋಜನಾ ಪ್ರಗತಿಯ ಅಂಕಿ ಅಂಶಗಳನ್ನು ಸಮರ್ಪಕವಾಗಿ ನೀಡದ ಹಿರಿಯೂರಿನ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಅವರು ಹರಿಹಾಯ್ದರು.

ಸಭೆ ಆರಂಭವಾಗುತ್ತಿದ್ದಂತೆಯೇ ಯೋಜನೆಯ ತಾಲ್ಲೂಕುವಾರು ಪ್ರಗತಿ ಪರಿಶೀಲನೆ ನಡೆಸಿದ ಸಂಸತ್ ಸದಸ್ಯರು, ಒಟ್ಟು ಜಿಲ್ಲೆಯ ಐದು ತಾಲ್ಲೂಕುಗಳ ಕಾರ್ಯನಿರ್ವಹಣಾ ಅಧಿಕಾರಿಗಳಿಂದ ಮಾಹಿತಿ ಪಡೆದರು.



ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆ ಶೇ 8ರಷ್ಟು ಪ್ರಗತಿ ಸಾಧಿಸಿದೆ. ಇದರಲ್ಲಿ ಹಿರಿಯೂರು ಮಾತ್ರ ಹಿಂದುಳಿದಿದೆ. ಈ ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡಿರುವ 3,066 ಕಾಮಗಾರಿಗಳಲ್ಲಿ ಕೇವಲ 5 ಕಾಮಗಾರಿಗಳಷ್ಟೇ ಪೂರ್ಣಗೊಂಡಿದ್ದು, ಶೇ 1ಕ್ಕಿಂತ ಕಡಿಮೆ ಪ್ರಗತಿಯಿದೆ. ಈ ಕುರಿತು ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.



ಇದಕ್ಕೆ ಉತ್ತರಿಸಿದ ಹಿರಿಯೂರು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ರಮೇಶ್,  ಉದ್ಯೋಗ ಖಾತರಿ ಯೋಜನೆಯಲ್ಲಿ ಭೌತಿಕವಾಗಿ ಕಾಮಗಾರಿಗಳು ಪೂರ್ಣಗೊಂಡಿವೆ. ಹಣಪಾವತಿ ಕೂಡ ಆಗಿದೆ. ಆದರೆ ಎಂಜಿನಿಯರಿಂಗ್ ವಿಭಾಗದವರು ಕಾಮಗಾರಿ ಪೂರ್ಣಗೊಂಡ ಅಂತಿಮ ವರದಿ ನೀಡಿಲ್ಲ. ಹಾಗಾಗಿ ಈ ವರದಿಯಲ್ಲಿ ಹೊಸ ಸಂಖ್ಯೆಗಳನ್ನು ಉಲ್ಲೇಖಿಸಲಾಗಿಲ್ಲ' ಎಂದರು.



ಈ ಉತ್ತರಕ್ಕೆ ಪೂರಕವಾಗಿ ಮಾಹಿತಿ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ನಾರಾಯಣ ಸ್ವಾಮಿ, `ಗಣಕಯಂತ್ರದಲ್ಲಿರುವ ತಂತ್ರಾಂಶ (ಸಾಫ್ಟ್‌ವೇರ್)ದಲ್ಲಿ ಮಾಹಿತಿಯನ್ನು ದಾಖಲಿಸುವಾಗ ಆಗಿರುವ ತೊಂದರೆಯಿಂದ ಸರಿಯಾದ ಪ್ರಗತಿಯ ಅಂಕಿ-ಅಂಶಗಳನ್ನು ದಾಖಲಿಸಲು ಸಾಧ್ಯವಾಗಿಲ್ಲ' ಎಂದರು. ಮುಂದಿನ ದಿನಗಳಲ್ಲಿ ಸಮರ್ಪಕವಾದ ಅಂಕಿ ಅಂಶಗಳೊಂದಿಗೆ  ಸಭೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.



ಸಮಿತಿ ಸದಸ್ಯರ ಆರೋಪ: `ಹಳ್ಳಿಗರಿಗೆ ಸ್ಥಳದಲ್ಲೇ ಉದ್ಯೋಗ ನೀಡುವ ಮೂಲಕ ಅವರಿಗೆ ಆರ್ಥಿಕವಾಗಿ ನೆರವಾಗಬೇಕು ಎಂಬುದು ಉದ್ಯೋಗ ಖಾತರಿ ಯೋಜನೆ ಉದ್ದೇಶ. ಆದರೆ ಈ ಅಧಿಕಾರಿಗಳು ಕೂಲಿ ನೀಡವಲ್ಲಿ ವಿಳಂಬ ಮಾಡುತ್ತಾರೆ' ಎಂದು ಆರೋಪಿಸಿದ ಜಾಗೃತಿ ಸಮಿತಿ ಸದಸ್ಯ ಪ್ರತಾಪ್ ರುದ್ರದೇವ್, 6 ತಿಂಗಳ ಹಿಂದೆ ಯೋಜನೆ ಕುರಿತು ಕೇಳಿದ ಪ್ರಶ್ನೆಗಳಿಗೆ ಇನ್ನೂ ಸಮರ್ಪಕವಾದ ಉತ್ತರ ಸಿಕ್ಕಿಲ್ಲ ಎಂದು ಸಭೆಗೆ ತಿಳಿಸಿದರು.



ಸಮಿತಿ ಸದಸ್ಯರು ಕೇಳಿದ ಒಂದು ಮಾಹಿತಿ ನೀಡಲು ನಿಮಗೆ ಆರು ತಿಂಗಳು ಸಮಯ ಬೇಕಾಯಿತೇ? ಎಂದು ಉಪ ಕಾರ್ಯದರ್ಶಿ ರುದ್ರಪ್ಪ ಅವರನ್ನು ಪ್ರಶ್ನಿಸಿದ ಸಂಸತ್ ಸದಸ್ಯರು ಕೂಡಲೇ ಅವರ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದರು.



ಸಚಿತ್ರ ಮಾಹಿತಿ ನೀಡಿ: ಜಿಲ್ಲೆಯ ಜಲಾನಯನ ಅಭಿವೃದ್ಧಿ ಯೋಜನೆ ಪ್ರಗತಿ ಕುರಿತು ಜಲಾನಯನ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. `ಇಂಥ ಮಾಹಿತಿಗಳನ್ನು ಕೇವಲ ಅಂಕಿ ಅಂಶಗಳ ರೂಪದಲ್ಲಿ ನೀಡಿದರೆ ಅರ್ಥವಾಗುವುದಿಲ್ಲ. ಬದಲಿಗೆ ನೀಲನಕ್ಷೆ, ರೇಖಾಚಿತ್ರ, ಛಾಯಾಚಿತ್ರಗಳ ಸಹಿತವಾಗಿ ಮಾಹಿತಿಯನ್ನು ಪ್ರಸ್ತುತಪಡಿಸಬೇಕು' ಎಂದು ಅಧಿಕಾರಿಗೆ ಸೂಚಿಸಿದರು.



ಕುಡಿಯುವ ನೀರಿನ ಸಮಸ್ಯೆ: ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳ ವಿಳಂಬ ಕುರಿತು ತಾಲ್ಲೂಕುವಾರು ಪರಿಶೀಲನೆ ನಡೆಸುವಂತೆ ಹಾಗೂ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.



ಮೊಳಕಾಲ್ಮುರು ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯದಿಂದ 16 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ವಿಫಲವಾಗಿರುವ ಬಗ್ಗೆ ತನಿಖೆ ನಡೆಸಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗೆ ಸೂಚನೆ ನೀಡಿದರು.



ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಕಿರಣ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎ. ನಾರಾಯಣಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾಶೀನಾಥ ಪವಾರ್, ಜಿ.ಪಂ ಸದಸ್ಯ ರಮೇಶ್, ಸಮಿತಿ ಸದಸ್ಯ ರುದ್ರ ಪ್ರತಾಪ್, ತಾ.ಪಂ ಅಧ್ಯಕ್ಷ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಜರಿದ್ದರು.



ಮುಖ್ಯಾಂಶಗಳು

ಉದ್ಯೋಗ ಖಾತ್ರಿ ಕಾಮಗಾರಿಯ ಅಂಕಿ ಅಂಶಗಳು ಸಾಫ್ಟ್‌ವೇರ್‌ನಲ್ಲಿ ಅಪಡೇಟ್ ಆಗುತ್ತವೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳವರೂ ನೋಡಬಹುದು. ಚಿತ್ರದುರ್ಗ ಜಿಲ್ಲೆಯಲ್ಲಿ ಕಳಪೆ ಸಾಧನೆಯಾಗಿದೆ ಎಂದು ಜನರು ಲೇವಡಿ ಮಾಡುತ್ತಾರೆ. ಮಾಹಿತಿಗಳನ್ನು ಸಾಫ್ಟ್‌ವೇರ್‌ಗೆ ಸೇರಿಸುವಾಗ ಎಚ್ಚರವಹಿಸಿ.

ರಘು ಮೂರ್ತಿ, ಶಾಸಕರು, ಚಳ್ಳಕೆರೆ



ಒಂದು ರೂಪಾಯಿಗೂ ಬೆಲೆಯಿದೆ, ರೂ10 ರೂಪಾಯಿಗೂ ಬೆಲೆ ಇದೆ. ಹಣಕಾಸಿನ ವಿಚಾರವನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸಬಾರದು.

ಜನಾರ್ದನ ಸ್ವಾಮಿ, ಸಂಸತ್ ಸದಸ್ಯರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.