ಶನಿವಾರ, ಮೇ 15, 2021
25 °C

ಅಸಮರ್ಪಕ ವಿದ್ಯುತ್ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ತಾಲ್ಲೂಕಿನ ನೀರಾವರಿ ಪಂಪಸೆಟ್‌ಗಳಿಗೆ ಮತ್ತು ವಿದ್ಯುತ್ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ರೈತ ಸಂಘದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತಾಲ್ಲೂಕಿನ ಕೆಲ ಹೋಬಳಿ ಗ್ರಾಮಗಳಲ್ಲಿ ನಿರಂತರ ಜ್ಯೋತಿ ಯೋಜನೆ ಕಾರ್ಯಗತಗೊಂಡರೂ ಅದರಿಂದ ಉಪಯೋಗವಾಗದೆ ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಯೋಜನೆ ಜಾರಿಗಾಗಿ ನಾಲ್ಕೈದು ತಿಂಗಳ ಹಿಂದೆ ಹಾಕಲಾದ ಕೆಲ ಕಂಬಗಳು ಮೊನ್ನೆಯ ಮಳೆಗೆ ಬಿದ್ದು ಹೋಗಿವೆ. ಸಾಕಷ್ಟು ಕಡೆ ಇನ್ಸುಲೆಟರ್‌ಗಳು ಸುಟ್ಟುಹೋಗಿವೆ.ಈ ಕಾರಣ ತಾಲ್ಲೂಕಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ ನಿರಂತರ ಜ್ಯೋತಿ ಯೋಜನೆ ಪೂರ್ಣವಾಗಿ ಆರಂಭವಾಗುವ ಮೊದಲೇ ನೆಲ ಕಚ್ಚಿದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ದೂರಿದ್ದಾರೆ.ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಧೊರಣೆಯೂ ಸಮಸ್ಯೆಗೆ ಮತ್ತೊಂದು ಕಾರಣ. ವಿದ್ಯುತ್ ವಿತರಣೆ ಕೇಂದ್ರಗಳ ಸೂಕ್ತ ನಿರ್ವಹಣೆ ಮಾಡದಿರುವುದು ಮತ್ತು ಸಮಸ್ಯೆಗೆ ತಕ್ಷಣ ಸ್ಪಂದಿಸದೇ ಇರುವುದು ಅಸಮರ್ಪಕ ವಿದ್ಯುತ್ ಪೂರೈಕೆಗೆ ಪ್ರಮುಖ ಕಾರಣವಾಗಿದೆ ಎಂದು ದೂರಲಾಗಿದೆ.ಕಳೆದ ಎರಡು ವಾರಗಳಿಂದ ಗ್ರಾಹಕರಿಗೆ ಮತ್ತು ಪಂಪಸೆಟ್ ಬಳಕೆದಾರರಿಗೆ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ಈ ಕಾರಣ ನೀರಾವರಿ ಇರುವ ಕಡೆಗಳಲ್ಲಿ ಬೆಳೆಗಳು ಹಾಳಾಗುತ್ತಿವೆ.ಕುಡಿಯುವ ನೀರು ಪೂರೈಕೆಗೂ ಸಮಸ್ಯೆಯಾಗಿದೆ. ಪಟ್ಟಣ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಯವರು ವಿದ್ಯುತ್ ಇಲ್ಲದೆ ನೀರು ಹೇಗೆ ಪೂರೈಸಬೇಕು ಎಂದು ಹೇಳುತ್ತಿದ್ದಾರೆ.ಧಗೆ ಮತ್ತು ಸೊಳ್ಳೆಗಳ ಕಾಟದಿಂದ ಜನರ ನಿದ್ದೆಗೂ ಸಂಚಾರ ತಂದಿದೆ ಎಂದು ರೈತ ಸಂಘದ ಮುಖಂಡರು ಈಚೆಗೆ ಜೆಸ್ಕಾಂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದಾಗ್ಯೂ ಸಮಸ್ಯೆ ಬಗೆಹರಿಯದಿರುವುದರಿಂದ ಇದೇ 17ರಂದು ಇಲ್ಲಿಯ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ಖೇರ್ಡಾದಲ್ಲೂ ಸಮಸ್ಯೆ: ಕಳೆದ ಎರಡು ವರ್ಷದ ಹಿಂದೆ ಖೇರ್ಡಾದಲ್ಲಿ 33ಕೆವಿ ಸಾಮರ್ಥ್ಯದ ವಿತರಣಾ ಕೇಂದ್ರ ಆರಂಭವಾದರೂ ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ ಎಂದು ರೈತ ಮುಖಂಡ ಉಮಾಕಾಂತ ಸ್ವಾಮಿ ದೂರಿದ್ದಾರೆ.ಮಳೆಗಾಲ ಆರಂಭವಾದ ನಂತರ ವಿತರಣಾ ಕೇಂದ್ರ ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಆರು ಜನ ಅರೆಕಾಲಿಕ ನೌಕರರನ್ನು ತೆಗೆದು ಹಾಕಿದ ನಿಂತರ ನೋಡುವವರು ಇಲ್ಲವಾಗಿದೆ.ಸಂಬಂಧಿತರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಎಲ್ಲ ಸಮಸ್ಯೆಗಳು ಮುಂದಿಟ್ಟುಕೊಂಡು ತಾಲ್ಲೂಕಿನ ರೈತರು ಇದೇ 17ರಂದು ದೊಡ್ಡ ಪ್ರಮಾಣದ ರ‌್ಯಾಲಿ ಮತ್ತು ಜೆಸ್ಕಾಂ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.