ಮಂಗಳವಾರ, ನವೆಂಬರ್ 29, 2022
21 °C

ಅಸ್ಸಾಂ ವಲಸಿಗರ ವಿಷಯವೇ ನಿರ್ಣಾಯಕ

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಅಸ್ಸಾಂ ವಲಸಿಗರ ವಿಷಯವೇ ನಿರ್ಣಾಯಕ

ನಾಲ್ಕು ದಶಕಗಳಿಂದ ಮೂಲನಿವಾಸಿಗಳು ಮತ್ತು ಬಾಂಗ್ಲಾ ವಲಸಿಗರ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಅಸ್ಸಾಮಿನಲ್ಲಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.1971ರ ಬಳಿಕ ನಡೆದಿರುವ ಪ್ರತಿ ಚುನಾವಣೆಯಲ್ಲೂ ವಲಸಿಗರ ಸಮಸ್ಯೆಗೆ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಸಿಕ್ಕಿದೆ. ವಲಸೆ ಸಮಸ್ಯೆ ವಿರುದ್ಧ ಹೋರಾಡಿದ್ದ ‘ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ’ (ಎಎಎಸ್‌ಯು)ದ ನಾಯಕರು ಸ್ಥಾಪಿಸಿದ ‘ಅಸ್ಸಾಂ ಗಣ ಪರಿಷತ್‌’ (ಎಜಿಪಿ) ಮೂರು ದಶಕದ ಹಿಂದೆ ರಾಜ್ಯದ ಪ್ರಬಲ ರಾಜಕೀಯ ಶಕ್ತಿಯಾಗಿ ಮೆರೆಯಿತು. 1985ರಲ್ಲಿ ಮೊದಲ ಸಲ ಅಧಿಕಾರಕ್ಕೆ ಬಂದಿದ್ದ ಎಜಿಪಿ, 96ರಲ್ಲಿ ಪುನಃ ಸರ್ಕಾರ ಮಾಡಿತ್ತು. ಕ್ರಮೇಣ ಅದು ದುರ್ಬಲಗೊಳ್ಳುತ್ತಿದೆ.ಎರಡು ಕಾರಣಕ್ಕೆ ಎಜಿಪಿ ಶಕ್ತಿ ಕುಂದುತ್ತಿದೆ. ಒಂದು, ಅದು ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಎರಡು, ಬಾಂಗ್ಲಾ ವಲಸಿಗರ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡಿದ್ದ ಅನೇಕ ಎಜಿಪಿ ನಾಯಕರು ಬಿಜೆಪಿ ಸೇರಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ ಸೋನೆವಾಲ್ ಅವರೂ ಎಜಿಪಿಯಿಂದಲೇ ಬಂದವರು.

ಬಾಂಗ್ಲಾ ಮುಸ್ಲಿಂ ವಲಸಿಗರ ಸಮಸ್ಯೆಯನ್ನೇ ಬಿಜೆಪಿ ಪ್ರಮುಖ ಚುನಾವಣೆ ವಿಷಯ ಮಾಡಿಕೊಂಡಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವ ಭರವಸೆ ಕೊಡುತ್ತಿದೆ. ಲೋಕಸಭೆ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಜನರನ್ನು ಸೆಳೆಯಲು ಇದೇ ಕಾರ್ಡ್‌ ಬಳಸಿದ್ದರು. ಅವರ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಸಣ್ಣ ಕೊರಗು ಮೂಲ ನಿವಾಸಿಗಳಿಗಿದೆ.ಬಾಂಗ್ಲಾ ವಲಸಿಗರ ಸಮಸ್ಯೆಗೆ ದೊಡ್ಡ ಇತಿಹಾಸವಿದೆ. ಬ್ರಿಟಿಷ್‌ ವಸಾಹತು­ಶಾಹಿಗಳು ಮೊದಲಿಗೆ ಅಸ್ಸಾಂನಲ್ಲಿ ಚಹಾ ತೋಟ ಮಾಡಿದಾಗ, ಕೂಲಿ ಕೆಲಸಕ್ಕೆ ಬಾಂಗ್ಲಾದಿಂದ ಮುಸ್ಲಿಮರನ್ನು ಕರೆತಂದಿದ್ದಾರೆ. ಆಗಿನ್ನೂ ದೇಶ ಸ್ವಾತಂತ್ರ್ಯ­ಗೊಂಡಿರಲಿಲ್ಲ. ಭಾರತ, ಪಾಕಿಸ್ತಾನ ಪ್ರತ್ಯೇಕವಾಗಿರಲಿಲ್ಲ. 47ರ ದೇಶ ವಿಭಜನೆ ಬಳಿಕವೂ ಪೂರ್ವ ಪಾಕಿಸ್ತಾನ­ದಿಂದ ವಲಸೆ ಮುಂದುವರಿದಿತ್ತು. 71ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾ ಬೇರೆಯಾದ ನಂತರವೂ ಅಸ್ಸಾಂಗೆ ಜನ ಬರುವುದು ನಿರಂತರವಾಗಿ ಮುಂದುವರಿದಿದೆ.ಅಸ್ಸಾಮಿನಲ್ಲಿ ಸ್ಥಳೀಯ ಬುಡಕಟ್ಟುಗಳು ಮತ್ತು ವಲಸಿಗರ ನಡುವೆ ತಿಕ್ಕಾಟ ನಡೆಯುತ್ತಿದೆ. ಭೂಮಿ ಮೇಲಿನ ಒಡೆತನ. ಭಾಷೆ– ಸಂಸ್ಕೃತಿ ಉಳಿಸಿಕೊಳ್ಳಲು ಜನ ಆರಂಭಿಸಿರುವ ಹೋರಾಟವು ಕ್ರಮೇಣ ಮತೀಯವಾದದ ರೂಪ ಪಡೆದಿದೆ. ‘ಅಕ್ರಮವಾಗಿ ನುಸುಳಿರುವ ಮುಸ್ಲಿಮರು ಭೂಮಿ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ನಮ್ಮ ಭಾಷೆ– ಸಂಸ್ಕೃತಿ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂಬ ಭಾವನೆ ಸ್ಥಳೀಯರಲ್ಲಿದೆ. ಹಿಂದೆ ಇದೇ ಕಾರಣಕ್ಕೆ ಬೋಡೊ ಚಳವಳಿ ಹುಟ್ಟಿಕೊಂಡಿದ್ದು. ಅನಂತರ ಬೋಡೊ ಕೌನ್ಸಿಲ್‌ ಸ್ಥಾಪನೆಯಾಗಿದ್ದು.ವಿಧಾನಸಭೆ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಅಧಿಕಾರಕ್ಕೆ ಬರಬಹುದೆಂಬ ನಿರೀಕ್ಷೆ ಬಿಜೆಪಿಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 14 ಸ್ಥಾನಗಳಲ್ಲಿ ಏಳನ್ನು ಗೆದ್ದುಕೊಂಡಿರುವುದು ಅದರ ವಿಶ್ವಾಸ ಹೆಚ್ಚಿಸಿದೆ. ಶೇ. 36.86 ರಷ್ಟು ಮತಗಳನ್ನು ಪಕ್ಷ ಪಡೆದಿದೆ.2011ರಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಶೇ. 29.90ರಷ್ಟು ಮತಗಳು ದೊರೆತರೂ ಸಿಕ್ಕಿದ್ದು ಮಾತ್ರ ಮೂರು ಸ್ಥಾನ. ಹೆಚ್ಚೂಕಡಿಮೆ ಶೇ.15ರಷ್ಟು ಮತಗಳನ್ನು ಗಳಿಸಿರುವ ಪ್ರಖ್ಯಾತ ಸುಗಂಧ ವ್ಯಾಪಾರಿ ಬದ್ರುದ್ದೀನ್‌ ಅಜ್ಮಲ್‌ ಅವರ ‘ಅಖಿಲ ಭಾರತ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ’ (ಎಐಯುಡಿಎಫ್‌) ಕ್ಕೂ ಮೂರು ಸ್ಥಾನ ಲಭಿಸಿವೆ.2011ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಬಲ ಲೋಕಸಭೆ ಚುನಾವಣೆಯಲ್ಲಿ ಮೂರು ಪಟ್ಟು ಹೆಚ್ಚಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದಿದ್ದು ಶೇ.11.47ರಷ್ಟು ಮತಗಳು. ಗೆದ್ದಿರುವ ಸ್ಥಾನಗಳು 5. ಅಲ್ಲದೆ, ಎಜಿಪಿ ಹಾಗೂ ‘ಬೋಡೊ ಪೀಪಲ್ಸ್‌ ಫ್ರಂಟ್‌’ (ಬಿಪಿಎಫ್‌) ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಆ ಮತಗಳೂ ಬಿಜೆಪಿಗೆ ಸುಲಭವಾಗಿ ವರ್ಗಾವಣೆ ಆಗಲಿವೆ. ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಶಕ್ತಿ ಕಡಿಮೆ ಆಗಿರುವುದು ಸ್ಪಷ್ಟವಾಗುತ್ತದೆ. 2011ರ ಚುನಾವಣೆಯಲ್ಲಿ ಈ ಪಕ್ಷ ಶೇ. 39.39ರಷ್ಟು ಮತ ಪಡೆದಿತ್ತು. 126 ಸದಸ್ಯ ಬಲದ ವಿಧಾನಸಭೆಯಲ್ಲಿ 78 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ.ಕಾಂಗ್ರೆಸ್‌ ಹಾಗೂ ಎಐಯುಡಿಎಫ್‌ ನಡುವೆ ಹೊಂದಾಣಿಕೆ ಏರ್ಪಡದಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.  ಕಾಂಗ್ರೆಸ್‌ ಪಕ್ಷ ಬದ್ರುದ್ದೀನ್‌ ಅವರ ಪಕ್ಷದ ಜತೆ ಚುನಾವಣಾ ಒಪ್ಪಂದ ಮಾಡಿಕೊಂಡಿದ್ದರೆ ಹೆಚ್ಚು ಲಾಭವಾಗುತಿತ್ತು. ಜಮ್ಮು– ಕಾಶ್ಮೀರ ಬಿಟ್ಟರೆ ಅಸ್ಸಾಂ ಅತ್ಯಧಿಕ ಮುಸ್ಲಿಂ ಮತದಾರರಿರುವ ರಾಜ್ಯ. ಒಟ್ಟು ಜನಸಂಖ್ಯೆಯಲ್ಲಿ ಶೇ.35ರಷ್ಟು ಮುಸ್ಲಿಮರು.

ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅಜ್ಮಲ್‌ ಬದ್ರುದ್ದೀನ್‌ ಪ್ರಭಾವಿ ನಾಯಕರು. ಕಾಂಗ್ರೆಸ್‌ ಅದನ್ನು ಬಳಸಿಕೊಳ್ಳಲಿಲ್ಲ. ಕಾಂಗ್ರೆಸ್‌ ಜತೆ ಹೊಂದಾಣಿಕೆಗೆ ಅಜ್ಮಲ್‌ ಸಿದ್ಧರಿದ್ದರು. ಆದರೆ, ಮುಖ್ಯಮಂತ್ರಿ ತರುಣ್‌ ಗೊಗೊಯ್‌ ಒಪ್ಪಲಿಲ್ಲ. ಅಂತಿಮವಾಗಿ ಪಕ್ಷದ ವರಿಷ್ಠರು ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿದರು. ಇದರಿಂದ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.ಬಿಜೆಪಿಯ ನಾಯಕ ಸರ್ಬಾನಂದ ಸೋನೆವಾಲ್‌ 2011ರವರೆಗೂ ಎಜಿಪಿಯಲ್ಲಿ ಇದ್ದವರು. ಮುಖ್ಯಮಂತ್ರಿ ತರುಣ್‌ ಗೊಗೊಯ್‌ ಅವರಿಗೆ ಆಪ್ತರಾಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಹಿಮಂತ್‌ ಬಿಸ್ವಾ ಶರ್ಮ ಕಳೆದ ವರ್ಷ ಬಿಜೆಪಿ ಸೇರಿದ್ದಾರೆ. ಪ್ರಚಾರದ ಹೊಣೆ ಅವರಿಗೆ ವಹಿಸಲಾಗಿದೆ.ಅವರ ಹಿಂದೆಯೇ 9 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ಬೆಳವಣಿಗೆಯಿಂದ ಬಿಜೆಪಿಗೆ ಲಾಭವಾಗಿದ್ದರೂ, ಆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ಭವಿಷ್ಯದ ಮೇಲೆ      ಪರಿಣಾಮ ಬೀರುವಷ್ಟು ಅದು ಜೋರಾಗಿಲ್ಲ. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡು ವರ್ಷದ ಸಾಧನೆಯನ್ನು ಜನರು ವಿಶ್ಲೇಷಣೆ ಮಾಡುತ್ತಿದ್ದಾರೆ.ಲೋಕಸಭೆ ಚುನಾವಣೆ ಸಮಯದಲ್ಲಿ ಕೆಲವು ಬುಡಕಟ್ಟುಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದರು. ಅದು ಇನ್ನೂ ಈಡೇರಿಲ್ಲ ಎಂಬ ಕೊರಗಿದೆ. ಹೊಸದಾಗಿ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ಕೊಡುವ ಮೂಲಕ ಬಿಜೆಪಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.ಕಾಂಗ್ರೆಸ್‌ ರಾಜ್ಯದಲ್ಲಿ ಹದಿನೈದು ವರ್ಷಗಳಿಂದ ಅಧಿಕಾರದಲ್ಲಿರುವುದರಿಂದ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಇದ್ದೇ ಇದೆ. ಗೊಗೊಯ್‌ ಮೂರನೇ ಸಲ ಮುಖ್ಯಮಂತ್ರಿ ಆಗಿದ್ದರೂ ಅವರ       ವರ್ಚಸ್ಸು– ಜನಪ್ರಿಯತೆ ಎಳ್ಳಷ್ಟೂ ಕಡಿಮೆ ಆಗಿಲ್ಲ. ಅಲ್ಲದೆ, ಕೆಲವು ಪ್ರಭಾವಿ ನಾಯಕರೂ ಕಾಂಗ್ರೆಸ್‌ ಬೆಂಬಲಕ್ಕಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ದೂರುಗಳಿವೆ.ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿ ಮರ ಮತಗಳು ಕಾಂಗ್ರೆಸ್‌ ಹಾಗೂ ಎಐಯುಡಿಎಫ್‌ ಮಧ್ಯೆ ಹಂಚಿಕೆಯಾ ಗುವ ಸಾಧ್ಯತೆಯಿದೆ. ಯಾವ ಪ್ರಮಾ ಣದಲ್ಲಿ ಹಂಚಿಕೆಯಾಗಲಿದೆ. ಅಕ್ರಮ ಮುಸ್ಲಿಂ ವಲಸಿಗರನ್ನು ಪತ್ತೆ ಹಚ್ಚಿ ವಾಪಸ್‌ ಕಳುಹಿಸುವ ಬಿಜೆಪಿ ಭರವಸೆ ಎಷ್ಟರ ಮಟ್ಟಿಗೆ ಹಿಂದೂ ಮತಗಳನ್ನು ಒಗ್ಗೂಡಸಲಿದೆ ಎನ್ನುವುದರ ಮೇಲೆ ಎರಡೂ ಪ್ರಮುಖ ಪಕ್ಷಗಳ ರಾಜ ಕೀಯ ಭವಿಷ್ಯ ತೀರ್ಮಾನವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.