ಸೋಮವಾರ, ಜನವರಿ 20, 2020
17 °C
ಮಿದುಮಾತು ಹೆಣ್ಣೊಬ್ಬಳ ಒಡಲಾಳದ ದನಿ

ಅಹಂಕಾರ ಕಳದ ಮ್ಯಾಲೆ

ಮೃದುಲಾ Updated:

ಅಕ್ಷರ ಗಾತ್ರ : | |

ಅಹಂಕಾರ ಕಳದ ಮ್ಯಾಲೆ

ಹೂವರಳುವ ಹೊತ್ತದು. ಅತ್ತಾಗ ರಾತ್ರಿ ಅಲ್ಲ, ಇತ್ತಾಗ ಬೆಳಕೂ ಅಲ್ಲ. ಕಡು ಬೂದು ಬಣ್ಣದ ಆಕಾಶ. ಇಡೀ ವಾತಾವರಣ ಶಾಂತ... ಶಾಂತ. ಅಲ್ಲಿ ಏನರೆ ಕೇಳ್ತಿತ್ತಂದ್ರ ಅದು ನನ್ನ ಉಸಿರು ಮಾತ್ರ. ಚಳಿಗಾಲದ ಈ ಬ್ರಾಹ್ಮೀ ಸಮಯದೊಳಗ ಒಂಥರಾ ನಶಾ ಇರ್‍ತದ. ಅದೇ ಹೊತ್ತನಾಗ ಮನಸು ಸುಮ್ನ ನರಳ್ತದ. ಬಿಸೀ ಕಣ್ಣೀರು, ಕುಕ್ಕರ್ ಸೀಟಿ ಹೊಡಿಯೂಕಿತ ಮೊದ್ಲ ಹನಿ ಒಸರುಹಂಗ ಗಲ್ಲಕ್ಕ ಇಳೀತಾವ. ಥಂಡಿಗಾಳಿಗೆ ಒಡದ ಗಲ್ಲದ ಮ್ಯಾಲೆ, ಈ ಉಪ್ಪುಪ್ಪು ಬಿಸಿನೀರು ಇಳೀತಿದ್ರ, ಮನಸಿನ ಯಾವ ನೋವಾದ್ರೂ ಸರಿ, ನಿವಾಳಿಸಿ ಒಗೀಬೇಕು.ಆ ಹೊತ್ತಿನಾಗ ತಣ್ಣಗ ಕೊರಿಯೂ ಕಿಡಕಿ ಕಂಬಿ ಹಿಡ್ಕೊಂಡು ನಮ್ಮೊಳಗ ನಮ್ಮನ್ನು ಹುಡುಕೂದಂದ್ರ ಒಂಥರಾ ಸಮಾಧಾನ. ಮನಿ ಮುಂದಿನ ಓಕ್ ಮರದಿಂದ ಯಾವುದೋ ಹಕ್ಕಿ ಒಂದೆರಡು ಸಲ ಕೂಗ್ತಿತ್ತು. ಅವಾಗಷ್ಟೆ ಲಕ್ಷ್ಯ ಆ ಕಡೆ ಹೋಗಿದ್ದು. ಮತ್ತೇನಂದ್ರ ಏನೂ ಗೊತ್ತಾಗದ ಹಂಗ ಆ ಮರದೊಳಗ ಮರ ಆಗಿದ್ದೆ. ಥಂಡಿ ಸಾವಕಾಶಗೆ ನನ್ನ ಹೊರಗನ್ನು ಮರಗಟ್ಟಿಸ್ತಿತ್ತು. ನನ್ನೊಳಗಿನ ತಾಪ ಮಾತ್ರ, ಲಾವಾದ್ಹಂಗ ಕುದೀತಿತ್ತು. ಇವೆರಡೂ ವ್ಯತಿರಿಕ್ತದ ನಡು, ನಡಕ ಹುಟ್ಟಸೂಹಂಗ ನಿಂತಿದ್ದೆ. ಇಷ್ಟಕ್ಕೂ ಅದೇನು, ಯಾಕ ನನಗ ಕಾಡ್ತದ ಅನ್ನೂದೇ ತಿಳೀವಲ್ದಾಗಿತ್ತು. ಏನೋ ಕಡೀಮೈತಿ. ಏನು ಅಂತ ಗೊತ್ತಿಲ್ಲ. ಹಿಂಗ ಅಮ್ಮಗ ಹೇಳ್ದಾಗ, ಅಮ್ಮ ನಕ್ಕಿದ್ಲು. ಉಂಡು ತಿಂದು ಗಂಡನ್ನ ಬೇಡಿದ್ರಂತ. ಏನೂ ಚಿಂತಿಲ್ಲಂದ್ರ ಇಂಥಾವ ಕಾಡ್ತಾವ ಅಂದ್ಲು. ಹಂಗಾರ ಏನರೆ ಚಿಂತಿ ಮಾಡಾಕ ಬೇಕೇನು? ನಾ ಮತ್ತು ಪ್ರಶ್ನೆಯಾಗಿದ್ದೆ. ನಮ್ಮಮ್ಮನ ಮುಂದ ಬರೇ ಪ್ರಶ್ನೆಗಳನ್ನೇ ಇಟ್ಕೊಂಡು ನಿಂದ್ರೂದು ಒಂಥರಾ ರೂಢಿ ಆಗೇದ.ಚಿಂತಿ ಅಂದ್ರ, ಚಿಂತಿ... ಇಲ್ಲಾಂದ್ರ ವಿಚಾರ ಅಂತ್ಹೇಳಿ ಅಮ್ಮನೂ ಸುಮ್ನಾಗಿದ್ಲು. ಇನ್ನ ಅಮ್ಮನ್ನ ಏನೂ ಕೆದಕಾಕ ಹೋಗಲಿಲ್ಲ. ಆದ್ರ ದೊಡ್ಡಮ್ಮನ ಹತ್ರ ಎಲ್ಲಾದಕ್ಕೂ ಉತ್ರ ಸಿಗ್ತಾವ ಅಂತ ಗೊತ್ತಿತ್ತು. ನನ್ನ ದೊಡ್ಡಮ್ಮ ಒಂಥರಾ ಅನುಭವ ಮತ್ತ ಅನುಭಾವದ ಕಣಜ ಇದ್ಹಂಗ. ಖರೇನೆ ದೊಡ್ಡಮ್ಮನೇ ಅಕಿ. ಅನುಮಾನ, ಅವಮಾನ ಎಲ್ಲಾ ನುಂಗಕೊಂಡು ಜೀವನಪ್ರೀತಿಯಿಂದ ನಳನಳಿಸೂ ಜೀವ ಅದು. ಜಗಳಗಳ ವಿಷಯ ಬಂದಾಗ ನಾವ್ಯಾಕ ಸೋಲಬೇಕು? ನಾವೆಲ್ಲಿ ತಪ್ಪದೀವಿ? ಅನ್ನೂ ಪ್ರಶ್ನೆ ನನ್ನದಾದ್ರ, ಜಿದ್ದಿಗಿ ಬಿದ್ದು ಸಾಧಸೂದರೆ ಏನೈತಿ ಅನ್ನೂದೊಂದೆ ನಿನ್ನ ತಂತ್ರ ಮಾಡ್ಕೊ. ಶಾಂತಿ ಮಂತ್ರ ಅಂದ್ರ ಅದೇನೆ. ಖರೇ ಇರಲಿ ಬಿಡಲಿ, ನಮಗಿಷ್ಟ ಆಗಲಿ ಬಿಡಲಿ, ಇಬ್ಬರ ನಡುವಿನ ಸಮಾಧಾನ, ಪ್ರೀತಿ ಕಾಯಂ ಆಗಿರಬೇಕು ಅಂತ ಬಯಸಿದ್ರ ಸೋಲಬೇಕು. ಸೋತು ಗೆದೀಬೇಕು ಅಂತ ಹೇಳಿದ್ಲು.ಅಲ್ಲಿಗೆ ನನ್ನ ಜಿದ್ದಿಗೆ ಬೀಳುವ, ಏನಿದ್ರೂ ಖರೆವಸೆ ಮಾಡೂ ಹಟ, ಛಲ ಕಡಿಮಿ ಆಗಿತ್ತು. ನಾ ಖರೆ ಅನ್ನೂದು ನನಗ ಗೊತ್ತಿದ್ರ ಸಾಕು. ಉಳದೋರ್‍ದು ತೊಗೊಂಡು ಮಾಡೂದೇನು? ಇಷ್ಟಕ್ಕೂ ಮನೀಯೊಳಗಿನ ಶಾಂತಿ ಸಮಾಧಾನ ನಮ್ಮಿಂದ ಕಾಯಂ ಆಗ್ತದ. ಉಳದೋರಿಂದ ಅಲ್ಲ. ಆದ್ರ ಮನೀಒಳಗೇ ಹೊತ್ತಿ ಉರೀತಿದ್ರ ಮಾಡೂದೇನು? ಇಂಥಾ ಪ್ರಶ್ನೆ ಒಂದಲ್ಲ, ಒಂದು ಸಲೆ ನಮ್ಮ ಮುಂದ ಬಂದು ನಿಂತಿರ್‍ತದ.ಇಂಥದ್ದೇ ಪ್ರಶ್ನೆ ಅವೊತ್ತು ರಾತ್ರಿ, ನನ್ನ ಮನಸು ಕದಡೂ ಹಂಗ ಮಾಡಿದ್ದು, ನಮ್ಮೂರ ಹುಡುಗಿ ಸುದ್ದಿ. ಪ್ರೀತಿಸಿ, ಮದಿವಿ ಆಗಿ ಛಂದಗೆ ಸಂಸಾರ ಮಾಡ್ಕೊಂಡು ಇದ್ದೋವ್ರು, ನಾಕು ಮಂದಿ ಹೌದು ಅನ್ನೂಹಂಗ ಇದ್ದೋರು. ‘ಇಲ್ಲಕ್ಕ, ಇನ್ನ ಅವನ ಜೊತಿಗೆ ಬದುಕೂದು ಅಸಾಧ್ಯ’ ಅಂದಿದ್ಲು. ಮೊದಲ ಸಲ ಬಹುವಚನದಿಂದ ಏಕವಚನಕ್ಕ ಇಳಿದಿತ್ತು. ಇಲ್ಲಾಂದ್ರ ನಮ್ಮೋರು, ನಮ್ಮೋರು ಅಂತಿದ್ದ ಹುಡುಗಿ ಅಂವಾ, ಅವನ ಕೂಡ ಅಂದಿದ್ದೇ ಮನಸು ಛಳಕ್ ಅಂದಿತ್ತು. ಇಷ್ಟ ದೊಡ್ಡ ಕಂದರ? ಅದ್ಹೆಂಗ ಅವರಿಬ್ಬರ ನಡುವಿನ ನಮ್ಮ ಅನ್ನೂದು ನುಂಗಿ ಹಾಕ್ತು? ನಮ್ಮ ಜೋಡಿ, ಗುಬ್ಬಿಮನಿ ಮಾಡ್ಕೊಂಡು ಆಡಿದ್ದು ಹುಡುಗಿ, ಉಸುಕನಾಗ ಕಾಲು ಹುದುಗಿಸಿ, ಗೂಡು ಕಟ್ಟುಮುಂದ ಸಣ್ಣ ಬಿರಕ ಬಂದ್ರೂ ಬಿಕ್ಕಳಿಸೂ ಹುಡುಗಿ, ತನ್ನ ಮನೀಮುರಿಯೂ ಮಾತು ಅಂದ್ರ ಎಲ್ಲಿ ಏನು ತಪ್ಪೇದ ಅಂತ

ಕೆದಕಾಕ ಕುಂತಿದ್ದೆ.ನಾ ಅಂದ್ರ ಒಟ್ಟಾ ಪ್ರೀತಿ ಇಲ್ಲ. ಗೌರವ ಅಂತೂ ಇಲ್ಲವೇ ಇಲ್ಲ. ಎಲ್ಲಾರ ಮುಂದೂ ಅಸಹ್ಯ ಮಾಡ್ತಾರ. ಹುಚ್ಚಿ ಅದಿ ನೀ ಅಂತಾರ. ಒಂದಿನಾನೂ ಹೊರಗ ಕರಕೊಂಡು ಹೋಗೂದಿಲ್ಲ. ಏನೂ ಕೊಡಸೂದಿಲ್ಲ. ಕೇಳಿದ್ರ, ನೀ ಗಳಸ್ತಿ, ನೀನ ತೊಗೊ ಅಂತಾರ. ಗಂಡ ಕೊಡಸ್ಲಿ ಅಂತ ಬಯಸೂದು ತಪ್ಪೇನು? ಎಷ್ಟಂತ ಸಣ್ಣ ಪುಟ್ಟ ವಿಷಯಕ್ಕ ಕೊರಗಲಿ? ಎಷ್ಟಂತ ಇಂಥಾವಕ್ಕ ಜಗಳಾಡೂನು? ಸಾಕಾಗೇತಿ.ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ನಿನ್ನ ಗಂಡನ ಜೊತಿಗೆ ಮಾತಾಡ್ತೀನಿ ಗಪ್ಪಿರು ಅಂತ ಹೇಳಿ ಅವನಿಗೆ ಕಿವಿಯಾಗಿದ್ದೆ.

ಅಂವಾ ‘ಏನು ಮಾಡಿದ್ರೂ ಸಮಾಧಾನ ಇಲ್ಲ. ಏನು ತಂದು ಕೊಟ್ರೂ ಅದಕ್ಕಿಂತ ಛೊಲೋ ಇರೂದರ ಬಗ್ಗೆ ಮಾತಾಡ್ತಾಳ. ಅಂದ್ರ ಛೊಲೊದು ತರಾಕ ನಿಂಗ ಆಗಾಂಗಿಲ್ಲ ಅನ್ನೂಹಂಗ ಹಂಗಸ್ತಾಳ ಅನ್ನಸ್ತದ. ಏನರೆ ಮಜಕೂರಿಗೆ ಹೇಳಿದ್ರೂ ಅಳಕೊಂತ ಕುಂದರ್‍ತಾಳ. ಅಪರೂಪಕ್ಕ ಜೊತಿಗೆ ಇರ್‍ತೀವಿ. ಒಟ್ಟಿಗೆ ಮನ್ಯಾಗ ಇರೂನು ಅಂದ್ರ, ಹೊರಗ ಸುತ್ತಬೇಕು ಅಂತಾಳ. ಭವಿಷ್ಯಕ್ಕ ಅಂತ ರೊಕ್ಕ ಕೂಡಿಟ್ರ, ಜಿಪುಣಶೆಟ್ಟಿ ಅಂತ ಆಡ್ಕೊಂತಾಳ. ನಂಗೂ ಸಾಕಾಗೇದ’ ಅಂತ ಅಂವಾನೂ ಉಸಿರು ಬಿಟ್ಟ.ಇಬ್ಬರೂ ಮಾತಾಡಾಕ ತಯಾರಿಲ್ಲ. ಕೇಳಾಕ ತಯಾರಿಲ್ಲ. ಕೂಡಿ ಇಷ್ಟು ದಿನಾ ಬದುಕೀವಿ. ತಿಳಕೋಳಾಕ ಆಗೂದಿಲ್ಲ ಅಂತ ವಾದಸ್ತಾರ. ಅಂವಾ ನನಗ ಬಿಟ್ಟು ಆರಾಮ ಇರೂದಾದ್ರ ಇರಲಿ ಅಂತ ಅಕಿನ್ನ ವಾದ. ಅಕಿ ನಾ ಇಲ್ದೇ ನೆಮ್ಮದಿಯಿಂದ ಬದುಕೂದಾದ್ರ ಎಲ್ಲರೆ ಇರಲಿ ಅಂತ ಅವನ ತ್ಯಾಗ. ಇಬ್ಬರೂ ಕೆಟ್ಟ ಖೋಡಿಗೋಳು. ತಮ್ಮದೇ ಆದ ವಿತಂಡವಾದ ಮುಂದಿಡತಿದ್ರು. ಆಯಿತು ಅಂದ್ವಿ. ಇಬ್ಬರಿಗೂ ಒಂದಷ್ಟು ದಿನ ದೂರ ಇದ್ದುಬಿಡ್ರಿ ಅಂತ ಹೇಳಿ ಸುಮ್ಮನಾದ್ವಿ.ನಮ್ಮ ಹುಡುಗಿ ಮೊದಲ ಒಂದಷ್ಟು ದಿನ, ಸುಮ್ನರೆ ಮದಿವಿ ಆಗ್ತೀವಿ. ನಮ್ಮ ಜೀವನಾ ನಾವು ಮಾಡಕೋಬಹುದು ಅಂತ ಹೇಳ್ತಿದ್ಲು. ಈ ಹುಡುಗ, ಮದಿವಿ ಆಗಿ ಸಂಸಾರ ಮಾಡೂಬದಲು ಸಂಶೋಧನೆ ಮಾಡಿದ್ರ ಡಾಕ್ಟರ್ ಆಗ್ತಿದ್ದೆ ಅಂತ ಹೇಳಕೊಂಡು ಅಡ್ಡಾಡತಿದ್ರು. ಈ ಮೆರವಣಿಗೆ ಒಂದಷ್ಟು ದಿನಾ ನಡೀತು. ಆಮ್ಯಾಲಿಂದು ಮಜಾ. ಸವಕಾಶ  ನಮ್ಮ ಹುಡುಗಿ ನನ್ನ ಗಂಡಗ ಇದಂದ್ರ ಭಾಳ ಸೇರ್‍ತಿತ್ತು ನೋಡು ಅಂದ್ಲು. ಬಂತು ಗಾಡಿ ಹಾದೀಗೆ ಅಂದ್ಲು ನಮ್ಮಮ್ಮ. ಅಲ್ಲಿಂದ ಹಂಗ ಹಲಬೂದು ಸುರು ಆತು. ಈ ಸೀರಿ ಅವರಿಗೆ ಭಾಳ ಸೇರಿತ್ತು ಅಂತ. ಆಮ್ಯಾಲೆ ಒಂದಿನ ಮೆಸೇಜು ಬಂತು ಅಂತ ಹಾರಾಡಿದ್ಲು. ತಾನೂ ಮೆಸೇಜು ಮಾಡಿದ್ಲು. ಮೆಸೇಜು ಹರದಾಡ್ತಿದ್ವು. ಫೋನು ಮಾಡಿದ್ರು. ಒಂದಿನಾ ಅವರೇ ಕುಂತು  ಮಾತಾಡಿದ್ರು. ಅತ್ರು. ಹಗುರಾದ್ರು. ಒಟ್ಟಾದ್ರು.ಬದುಕು ಹಂಗೇನೆ. ಒಟ್ಟುಗೂಡಿದ್ರು ಅಂತ ನಿಟ್ಟುಸಿರು ಬಿಟ್ಟಿದ್ವಿ. ಇಷ್ಟೆಲ್ಲ ಆಗಿದ್ದು ಆರು ತಿಂಗಳ ಸಮಯದೊಳಗ. ಅದಾದ ಮ್ಯಾಲೆ ಒಂದೆರಡು ತಿಂಗಳು ಕಳದಿರಬೇಕು. ಎಲ್ಲಾ ಛೊಲೊ ಐತಿ ಅನ್ನೂದ್ರೊಳಗ ಸುದ್ದಿ ಬಂದಿತ್ತು. ಇಬ್ಬರೂ ಮನಿ ಒಳಗ ಬೀಗ ಹಾಕ್ಕೊಂಡು ಹಗ್ಗಕ್ಕ ಗೋಣು ಒಡ್ಡಿದ್ರು. ಗೊತ್ತಾಗಿದ್ದು ಮೂರುದಿನಾ ಕಳದ ಮ್ಯಾಲೆ. ಯಾಕ, ಏನಾತು? ಏನು ಕಡಿಮಿ ಬಿತ್ತು? ಹೆಂಗರೆ ಆತು ಬದುಕಿದ್ರ ಸಾಕಿತ್ತು. ಉತ್ತರಾ ಹೇಳಾಕ ಅವರೇ ಬರಬೇಕು. ಆದ್ರ ಅವರಿಬ್ಬರೂ ಮಾತು ಬಿಟ್ಟಾರ. ಎಲ್ಲಾರ ಜೋಡೀನೂ.ಮನಸು ಭಾರ ಆಗಿತ್ತು. ಅವೊತ್ತು ಬ್ರಾಹ್ಮಿ ಗಳಗಿ ಕಳಿಯೂ ಮುಂದ ಸಣ್ಣಕ ಬೆಳಕು ಹರೀತಿತ್ತು. ಸಣ್ಣ ಸಣ್ಣ ಅಸಮಾಧಾನ ಬೆಳದು ನಮ್ಮನ್ನ ನುಂಗೂ ಬದಲು, ನಾವು ಅವನ್ನು ನುಂಗಬೇಕು. ಅವಕ್ಕ ಮೀರಿನೂ ಬದುಕು ಐತಿ. ಏನರೆ ಪಡೀಲೆಬೇಕು ಅಂತ

ಹಾತೊರಿಯುವ ಬದಲು ಕೊಡಾಕ ಸುರು ಮಾಡಬೇಕು. ಕೊಡೂದ್ರೊಳಗಿನ ಸುಖ ನೆಮ್ಮದಿ ನಮ್ಮೊಳಗ ಜೀವನಪ್ರೀತಿ ಮೂಡಸ್ತದ. ಹಂಚೂದ್ರೊಳಗ ಇರೂವ ಸಮಾಧಾನ ನಮ್ಮೊಳಗಿನ ಅಹಂಕಾರ ನುಂಗ್ತದ. ಅಹಂಕಾರ ಕಳದ ಮ್ಯಾಲೆ ನಮ್ಮ ಜೀವನ ಅರಳ್ತದ. ನರಳೂದೇನಿದ್ರೂ ಆರಾಮ ತಪ್ಪಿದಾಗಷ್ಟೆ.

 

ಪ್ರತಿಕ್ರಿಯಿಸಿ (+)