ಭಾನುವಾರ, ಜನವರಿ 26, 2020
24 °C

ಆಂಟಿಬಯಾಟಿಕ್ ಬಳಸುವ ಮುನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

“ಡಾಕ್ಟ್ರೆ ! ಎರಡು ದಿನದಿಂದ ನೆಗಡಿ, ತಲೆಯೆಲ್ಲಾ ಭಾರ, ಕೆಮ್ಮು ಬೇರೆ ಇದೆ. ಏನ್ ಮಾಡಲಿ?”   

“ಏನು ಬೇಡ, ತಾನಾಗಿ ಕಡಿಮೆ ಆಗುತ್ತೆ. ಬಿಸಿ ನೀರು ಆಹಾರ ಸೇವಿಸಿ. ಗಾಳೀಲಿ ಹೆಚ್ಚು ಓಡಾಡಬೇಡಿ. ವಾರದಲ್ಲಿ ಎಲ್ಲಾ ಸರಿ ಹೋಗುತ್ತೆ”

ಅಯ್ಯೋ !  ಹಾಗಂದ್ರೆ ಹೇಗೆ ? ಒಂದು ಕೆಲಸ ಮಾಡಿ. ಈ ಸಿರಪ್ ಮಾತ್ರೆ ಬೇಡ, ಒಳ್ಳೇ ಸ್ಟ್ರಾಂಗಾಗಿರೊ ಆಂಟಿಬಯಾಟಿಕ್ ಕೊಟ್ಬಿಡಿ. ನೆಗಡಿ ಎಲ್ಲಾ ಓಡಿ ಹೋಗುತ್ತೆ. ಅದೇ ಬೆಸ್ಟು”

ಇದು ವೈದ್ಯರ ಬಳಿ ಬರುವ ನೂರಕ್ಕೆ ಐವತ್ತರಷ್ಟು ರೋಗಿಗಳ ಬೇಡಿಕೆ !

ನೆನಪಿನಲ್ಲಿಡಬೇಕಾದ ಅಂಶಗಳು

ವೈರಾಣುಗಳಿಂದ ಬರುವ ಶೀತ, ಕೆಮ್ಮ, ಗಂಟಲುನೋವು, ಜ್ವರ ಇದಕ್ಕೆ ಆಂಟಿಬಯಾಟಿಕ್ ಬೇಡ. ವೈರಾಣುಗಳು ಇದರಿಂದ ನಾಶವಾಗುವುದಿಲ್ಲ. ಅನಗತ್ಯ ಬಳಕೆಯಿಂದ ರೋಗ ಗುಣವಾಗುವುದರ ಬದಲು ಬಿಗಡಾಯಿಸುತ್ತದೆ.

ಆಂಟಿಬಯಾಟಿಕ್ ಬೇಕೇ  ಬೇಡವೇ ಎಂಬ ನಿರ್ಧಾರ ಕೈಗೊಳ್ಳಬೇಕಾದದ್ದು ರೋಗಿಯಲ್ಲ, ವೈದ್ಯ. ರೋಗಲಕ್ಷಣಗಳು, ಸೋಂಕಿಗೆ ಕಾರಣಗಳೇನು, ಯಾವ ಆಂಟಿಬಯಾಟಿಕ್ ಯಾರಿಗೆ, ಯಾವ ಸೋಂಕಿಗೆ ಸೂಕ್ತ ಎಂಬುದನ್ನು ವೈದ್ಯರೇ ನಿರ್ಧರಿಸಲಿ.

ತಪ್ಪು ಆಂಟಿಬಯಾಟಿಕ್‌ನಿಂದ ಹಾನಿಯೇ ಹೆಚ್ಚು. ರೋಗಿ  `ಬೇಗ ಗುಣವಾಗಲಿ~  ಎಂಬ ಏಕೈಕ ಉದ್ದೇಶದಿಂದ  `ಆಂಟಿಬಯಾಟಿಕ್ ಹಾಕಿಬಿಡಿ~  ಎಂಬ ಒತ್ತಡವನ್ನು ವೈದ್ಯರ ಮೇಲೆ ಹೇರಬಾರದು. ಆದರೆ  ತನಗೆ ನೀಡಲಾಗುವ ಚಿಕಿತ್ಸೆಯ ಪ್ರತಿ ಹಂತದಲ್ಲೂ  ಎಲ್ಲಾ ವಿವರಗಳನ್ನು ತಿಳಿಯುವ ಮತ್ತು  ಅದನ್ನು ಸ್ವೀಕರಿಸುವ/ತಿರಸ್ಕರಿಸುವ ಹಕ್ಕು ರೋಗಿಗೆ ಇದೆ.

ಗರ್ಭಿಣಿ, ಹಾಲುಣಿಸುವ ತಾಯಿ. ಅಸ್ತಮ, ಲಿವರ್ ತೊಂದರೆಗಳಿಂದ ಬಳಲುತ್ತಿರುವವರು, ಯಾವುದೇ ರೀತಿ ಅಲರ್ಜಿ ಹೊಂದಿರುವವರು, ಇನ್ನಿತರ ಮಾತ್ರೆ ಸೇವಿಸುತ್ತಿರುವವರು ಮುಂಚಿತವಾಗಿ ವೈದ್ಯರಿಗೆ ಅದನ್ನು ತಿಳಿಸಬೇಕು. ಕೆಲವು ಆಂಟಿಬಯಾಟಿಕ್‌ಗಳು ನಿರ್ದಿಷ್ಟ ರೋಗ / ಪರಿಸ್ಥಿತಿಗಳಲ್ಲಿ ಪ್ರತಿಕೂಲ ಪರಿಣಾಮ ಮಾಡುತ್ತವೆ.

ಆಂಟಿಬಯಾಟಿಕ್‌ಗಳನ್ನು ಉಪಯೋಗಿಸುವಾಗ ಸರಿಯಾದ ಪ್ರಮಾಣದಲ್ಲಿ ಮಾತ್ರವಲ್ಲ. ಯಾವಾಗ ಹೇಗೆ ಸೇವಿಸಬೇಕು ಎಂಬುದು ತುಂಬಾ ಮುಖ್ಯ. ಕೆಲವನ್ನು ಬೆಳಿಗ್ಗೆ ಮುಂಚೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಮತ್ತೆ ಕೆಲವು ಮಧ್ಯಾಹ್ನ ಊಟದ ನಂತರ. ಎಷ್ಟೋ ಆಂಟಿಬಯಾಟಿಕ್‌ಗಳು ದಿನಕ್ಕೆ ಮೂರು ಬಾರಿಯಾದರೆ ಮತ್ತೊಂದಿಷ್ಟು ದಿನಕ್ಕೆರಡು ಬಾರಿ. ವೈದ್ಯರು ಇವೆಲ್ಲವನ್ನು ಚೀಟಿಯಲ್ಲಿ ಬರೆದಿದ್ದರೂ, ಕೇಳಿ ಮನದಟ್ಟು ಮಾಡಿಕೊಳ್ಳುವುದು ಸೂಕ್ತ.

ಆಂಟಿಬಯಾಟಿಕ್ ಸೇವಿಸುವಾಗ

ಸರಿಯಾದ ಜಾಗದಲ್ಲಿ ಕಾಪಿಡುವುದು ತುಂಬಾ ಅಗತ್ಯ. ಅಡುಗೆಮನೆಯಲ್ಲಿ ಒಲೆಯ ಹತ್ತಿರ, ನೀರು ಬೀಳುವ ಜಾಗ, ತೀರಾ ಬಿಸಿಲು ಬೀಳುವ ಕಡೆಯಲ್ಲಿ ಇಡಬಾರದು. ಗಾಳಿಯಾಡದ ಬಿಗಿ ಮುಚ್ಚಳವಿರುವ ಡಬ್ಬಿಯಲ್ಲಿ ಹಾಕಿ ಮಕ್ಕಳ ಕೈಗೆ ಸಿಗದಂತೆ ಎತ್ತರದ ಜಾಗದಲ್ಲಿಟ್ಟರೆ ಒಳ್ಳೆಯದು.  ಉಪಯೋಗಿಸುವ ಮುನ್ನ ಮಾತ್ರೆಯ ಕೊನೆಯ ದಿನಾಂಕ ಗಮನಿಸಿ (ಎಕ್ಸ್‌ಪೈರಿ ಡೇಟ್).

ಸಾಮಾನ್ಯವಾಗಿ ಆಂಟಿಬಯಾಟಿಕ್‌ಗಳನ್ನು ಐದರಿಂದ ಏಳು ದಿನಗಳ ಕಾಲ ನೀಡಲಾಗುತ್ತದೆ. ಔಷಧಿ ಸೇವನೆಯ ಎರಡು ದಿನಗಳಲ್ಲೇ ರೋಗ ಲಕ್ಷಣಗಳು ಕಡಿಮೆಯಾಗುತ್ತವೆ.  ಕಡಿಮೆ ಆಯ್ತು, ಇನ್ನೇಕೆ?  ಎಂದು ಈ ಔಷಧಿ ಅರ್ಧದಲ್ಲೇ ನಿಲ್ಲಿಸುವವರು ಅದೆಷ್ಟೋ ಜನ. ಹೀಗೆ ಮಾಡುವುದರಿಂದ ಸೋಂಕು ಉಂಟು ಮಾಡಿದ ಸೂಕ್ಷ್ಮಾಣುಜೀವಿಗಳು ದುರ್ಬಲವಾಗಿರುತ್ತವೆಯೇ ವಿನಃ ಸಂಪೂರ್ಣ ನಾಶವಾಗಿರುವುದಿಲ್ಲ. ಔಷಧಿ ಸೇವನೆ ನಿಲ್ಲಿಸಿದ ನಂತರ ಮತ್ತೆ ಚೇತರಿಸಿಕೊಂಡು ಬಲಿಷ್ಠವಾಗುತ್ತವೆ. ಎಷ್ಟೋ ಬಾರಿ ಈ ಔಷಧಿಗೆ ಪ್ರತಿರೋಧವನ್ನೂ ಬೆಳೆಸಿಕೊಳ್ಳುತ್ತವೆ. ಹೀಗಾಗಿ ಮುಂದಿನ ಬಾರಿ ಸೋಂಕಾದಾಗ ಚಿಕಿತ್ಸೆ ಕಷ್ಟ ಸಾಧ್ಯ. ಆದ್ದರಿಂದ ವೈದ್ಯರು ಹೇಳಿದಷ್ಟು ದಿನ ಔಷಧಿ ಸೇವನೆ ಕಡ್ಡಾಯ.

ಗೆಳೆಯರು-ಸಂಬಂಧಿಕರೊಂದಿಗೆ ಆಂಟಿಬಯಾಟಿಕ್‌ಗಳನ್ನು ಹಂಚಿಕೊಳ್ಳುವುದು ಖಂಡಿತಾ ತಪ್ಪು.   ಇಬ್ಬರಲ್ಲಿ  ರೋಗ ಲಕ್ಷಣಗಳು ಒಂದೇ ಆಗಿದ್ದರೂ ಕಾರಣಗಳು ಬೇರೆ ಆಗಿರಬಹುದು. ಒಬ್ಬರಿಗೆ ವೈರಾಣು ಇನ್ನೊಬ್ಬರಿಗೆ ಬ್ಯಾಕ್ಟೀರಿಯಾಗಳು ಕಾರಣ. ಬ್ಯಾಕ್ಟೀರಿಯಾಗಳಲ್ಲೇ ವಿವಿಧ ರೀತಿಗಳಿವೆ. ಯಾವುದಕ್ಕೆ ಆಂಟಿಬಯಾಟಿಕ್ ಬೇಕು, ಸೂಕ್ತವಾದ ಆಂಟಿಬಯಾಟಿಕ್ ಯಾವುದು ಇದೆಲ್ಲಾ ನಿರ್ಧಾರವಾಗುವುದು ವೈದ್ಯರಿಂದ.  

ಅಡ್ಡ ಪರಿಣಾಮ 

ಆಂಟಿಬಯಾಟಿಕ್‌ಗಳು ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು

ಹೊಟ್ಟೆನೋವು, ಭೇದಿ, ವಾಂತಿ.

ಉಸಿರಾಟದಲ್ಲಿ ಕಷ್ಟ

ತುಟಿ, ಮುಖ, ನಾಲಗೆ ದಪ್ಪಗಾಗುವುದು.

ಮೈ-ಕೈ ನವೆ, ಕಡಿತ

ನಾಲಗೆಯಲ್ಲಿ ಬಿಳಿ ಮಚ್ಚೆಗಳು

ಇವುಗಳಲ್ಲಿ ಯಾವುದೇ ತೊಂದರೆ ಕಂಡು ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಎದುರಾಗಬಹುದಾದ ತೊಂದರೆಗಳು- 

ದೇಹದ ಸಹಜ ರೋಗನಿರೋಧಕ ಶಕ್ತಿ ಕುಂಠಿತವಾಗಬಹುದು. 

ಅಲರ್ಜಿ ಕಾಣಿಸಿಕೊಳ್ಳಬಹುದು. 

ಔಷಧಿಗೆ ಬಲವಾದ ಪ್ರತಿರೋಧ ಬೆಳೆಯುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)