ಸೋಮವಾರ, ಮೇ 10, 2021
22 °C

ಆಂಧ್ರದಲ್ಲಿ ಕಾಂಗ್ರೆಸ್‌ಗೆ ಕಂಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಬಲವಾದ ಹೊಡೆತ ಬಿದ್ದಿದೆ. ಕಾಂಗ್ರೆಸ್‌ನ ಮೂವರು ಹಿರಿಯ ನಾಯಕರು ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್‌ಎಸ್) ಸೇರುವ ನಿರ್ಧಾರ ಪ್ರಕಟಿಸಿ, ಸೊರಗಿದ ಪಕ್ಷವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದಾರೆ.ತೆಲಂಗಾಣ ಜನರ ಭಾವನೆಗಳಿಗೆ ಪಕ್ಷದ ಹೈಕಮಾಂಡ್ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಸಂಸದರಾದ ಎಂ. ಜಗನ್ನಾಥಂ, ಜಿ.ವಿವೇಕಾನಂದ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಕೆ.ಕೇಶವ ರಾವ್ ಮಾತೃಪಕ್ಷದ ಜತೆ ಸಂಬಂಧ ಕಡಿದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ತೆಲಂಗಾಣ ಪ್ರಾಂತ್ಯದಲ್ಲಿ ತಕ್ಕಮಟ್ಟಿಗೆ ಜನಬೆಂಬಲ ಹೊಂದಿರುವ ಈ ಮುಖಂಡರ ನಿರ್ಧಾರದಿಂದ ಪಕ್ಷಕ್ಕೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಪಕ್ಷ ತೊರೆಯುವ ಪ್ರಕ್ರಿಯೆ ನಿತ್ಯ ನಿರಂತರ ಎಂಬಂತಾಗಿದೆ.ಅದನ್ನು ತಡೆಯುವ ಪ್ರಯತ್ನಗಳು ವಿಫಲವಾಗಿರುವುದು ಕಾಂಗ್ರೆಸ್ ನಾಯಕರನ್ನು ಚಿಂತೆಗೆ ಈಡುಮಾಡಿದೆ. ಒಂದೆಡೆ ಪ್ರತ್ಯೇಕ ತೆಲಂಗಾಣ ಹೋರಾಟ. ಮತ್ತೊಂದೆಡೆ ವೈ.ಎಸ್.ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ದಾಳಿ. ಈ ಎರಡರ ನಡುವೆ ಕಾಂಗ್ರೆಸ್ಸಿನದು ಅಡಕತ್ತರಿಗೆ ಸಿಲುಕಿದ ಅಡಿಕೆಯ ಸ್ಥಿತಿ.ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಜಗನ್ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಈ ನಡುವಣ ಅವಧಿಯಲ್ಲಿ ಜರುಗಿದ ಹಲವು ಉಪಚುನಾವಣೆಗಳಲ್ಲಿ ಅವರ ಪಕ್ಷ ಗೆಲುವು ಕಂಡಿದೆ. ಅನ್ಯಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರನ್ನು ನಿರಂತರವಾಗಿ ತನ್ನತ್ತ ಸೆಳೆಯುತ್ತಲೇ ಇದೆ. ಇದರಿಂದ ಉಳಿದ ಪಕ್ಷಗಳಿಗಿಂತ ಆಡಳಿತಾರೂಢ ಕಾಂಗ್ರೆಸ್ಸಿಗೇ ದೊಡ್ಡ ಮಟ್ಟದಲ್ಲಿ ಹಿನ್ನಡೆ ಆಗಿದೆ.ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸುರುಳಿಯೊಳಗೆ ಈಗಿನ ಸರ್ಕಾರದ ಸಚಿವರೂ ಸಿಲುಕಿ ಒದ್ಡಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಬಿತಾ ಇಂದ್ರಾರೆಡ್ಡಿ ಮತ್ತು ಡಿ. ಪ್ರಸಾದ ರಾವ್ ಅವರು ಸಚಿವ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಬೇಕಾಯಿತು. ಮತ್ತೊಬ್ಬ ಸಚಿವ ಡಿ.ಎಲ್.ರವೀಂದ್ರಾರೆಡ್ಡಿ ಅವರನ್ನು ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಅವರೇ ಸಂಪುಟದಿಂದ ಕೈಬಿಟ್ಟಿದ್ದಾರೆ. ಪಕ್ಷದಲ್ಲಿ ಅಂತಃಕಲಹ ಹೊಗೆಯಾಡುತ್ತಲೇ ಇದೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಕರೆದೊಯ್ಯುವ ಸಮರ್ಥ ನಾಯಕನ ಕೊರತೆ ಕಾಂಗ್ರೆಸ್ಸನ್ನು ಕಾಡುತ್ತಿದೆ. ಇದರ ಮಧ್ಯೆ, ಮತ್ತಷ್ಟು ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಇದೆ. ಹಾಗೂ ಹೀಗೂ ಜೀವ ಹಿಡಿದುಕೊಂಡಿರುವ ಕಿರಣ್ ಸರ್ಕಾರ ಈ ಎಲ್ಲ ಬೆಳವಣಿಗೆಗಳಿಂದ ಇನ್ನಷ್ಟು ಅಸ್ಥಿರತೆಯ ಭೀತಿ ಎದುರಿಸುತ್ತಿದೆ.ಕಳೆದ ಎರಡು ಚುನಾವಣೆಗಳಲ್ಲಿ ಆಂಧ್ರಪ್ರದೇಶ ಅತಿಹೆಚ್ಚು ಕಾಂಗ್ರೆಸ್ ಸಂಸದರನ್ನು ಲೋಕಸಭೆಗೆ ಕಳುಹಿಸಿದೆ. ರಾಜ್ಯದಲ್ಲಿ ಪಕ್ಷದ ಸ್ಥಿತಿ ಈಗ ಹೀನಾಯ ಹಂತ ತಲುಪಿದೆ. ಮುಂದಿನ ವರ್ಷ ಎದುರಾಗಲಿರುವ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ತಪ್ಪಿಸಿಕೊಳ್ಳಬೇಕಾದರೆ ಪಕ್ಷದ ಚೇತರಿಕೆಗೆ ದೃಢ ಕ್ರಮಗಳು ಅನಿವಾರ್ಯ. ದಕ್ಷಿಣದಲ್ಲಿ ಆಂಧ್ರ ಮತ್ತು ಕರ್ನಾಟಕದ ಮೇಲೆ ಕಾಂಗ್ರೆಸ್ ಹೆಚ್ಚು ಅವಲಂಬಿಸಿದೆ. ಆಂಧ್ರದ ರಾಜಕೀಯ ವಿದ್ಯಮಾನಗಳು ಈ ಕಾರಣದಿಂದ ಪಕ್ಷದ ವರಿಷ್ಠರನ್ನು ಸಹಜವಾಗಿಯೇ ಚಿಂತೆಗೆ ದೂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.